ಅಗಲಿದ ಮಗನ ಆಸೆ ಈಡೇರಿಸಲು ಮಾಡೆಲ್ ಆಗಿ ರಾಂಪ್ ವಾಕ್ ಮಾಡಿದ ಅಪ್ಪ

ತಮ್ಮ ಮಗನ ಅಕಾಲಿಕ ಮರಣದ ನಂತರ, ನವೀನ್ ಕಾಂಬೋಜಿ ಅವರು ತಮ್ಮ ಮಗನ ಕನಸನ್ನು ನನಸಾಗಿಸಲು 53ರ ಹರೆಯದಲ್ಲಿ ಮಾಡೆಲಿಂಗ್ ಲೋಕಕ್ಕೆ ಪ್ರವೇಶಿಸಿದರು. ಮಗ ಕರಣ್ ಫುಟ್ಬಾಲ್ ಆಟಗಾರ ಮತ್ತು ಮಾಡೆಲ್ ಆಗಬೇಕೆಂದು ಬಯಸಿದ್ದ, ಆದರೆ ಅಪಘಾತದಲ್ಲಿ ಸಾವಿಗೀಡಾದ. ಈ ನೋವಿನ ನಡುವೆಯೂ ತಂದೆ ನವೀನ್ ಅವರು ಮಗನ ಮಾಡೆಲಿಂಗ್ ಕನಸನ್ನು ನನಸಾಗಿಸಲು ರ‍್ಯಾಂಪ್ ವಾಕ್ ಮಾಡಿದರು.

viral video Father Walks the Ramp to Fulfill deceased Sons Dream

ಸಾಮಾನ್ಯವಾಗಿ ಪೋಷಕರು ತಮ್ಮ ಜೀವನದಲ್ಲಿ ಈಡೇರದ ಸೆ ಕನಸುಗಳನ್ನು ತಮ್ಮ ಮಕ್ಕಳ ಮೂಲಕ ಈಡೇರಿಸಿಕೊಳ್ಳಲು ಯತ್ನಿಸುತ್ತಾರೆ. ಇದಕ್ಕಾಗಿ ಅವರು ತಮಗೆ ಸಿಗದ ಅವಕಾಶಗಳನ್ನೆಲ್ಲಾ ಮಕ್ಕಳಿಗೆ ಮಾಡಿಕೊಟ್ಟು ತಮ್ಮ ಕನಸು ನನಸಾಗುವುದನ್ನು ನೋಡುವುದಕ್ಕೆ ಕಾತುರರಾಗಿರುತ್ತಾರೆ. ಮಕ್ಕಳ ಮೂಲಕ ತಮ್ಮ ಸಾಧನೆಯ ಕನಸನ್ನು ಈಡೇರಿಸಿಕೊಂಡ ಹಲವು ಪೋಷಕರನ್ನು ನೀವು ನೋಡಿರಬಹುದು. ಆದರೆ ಇಲ್ಲೊಂದು ಕಡೆ ಅಗಲಿದ ಮಗನ ಕನಸನ್ನು ಈಡೇರಿಸುವುದಕ್ಕಾಗಿ ಅಪ್ಪನೋರ್ವ ತಮ್ಮ 53ರ ಇಳಿವಯಸ್ಸಿನಲ್ಲಿ ಮಾಡೆಲ್ ಆಗಿದ್ದು, ಅವರ ಈ ಸೋಲು ಬೇಸರದ ನಡುವೆಯೂ ಮಗನ ಆಸೆ ಈಡೇರಿಸಲು ಪಣ ತೊಟ್ಟು ತೋರಿದ ಧೈರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. 

ಅಂದಹಾಗೆ ಅಗಲಿದ ಮಗನ ಕನಸನ್ನು ಈಡೇರಿಸುವುದಕ್ಕಾಗಿ 53ರಲ್ಲಿ ಫ್ಯಾಷನ್ ಲೋಕಕ್ಕೆ ಕಾಲಿರಿಸಿದವರೇ ನವೀನ್ ಕಾಂಬೋಜಿ, ಇವರ 18 ವರ್ಷದ ಪುತ್ರ ಕರಣ್‌ ಕಳೆದ ವರ್ಷದ ಹೋಳಿ ಸಮಯದಲ್ಲಿ ಅಪಘಾತದಲ್ಲಿ ಸಾವಿಗೀಡಾಗಿದ್ದ, ವೃತ್ತಿಪರ ಫುಟ್ಬಾಲರ್ ಆಗಬೇಕೆಂಬ ಕನಸು ಕಂಡಿದ್ದ ಆತ ಜೊತೆಗೆ ಫ್ಯಾಷನ್ ಮಾಡೆಲ್ ಆಗಬೇಕೆಂದು ಬಯಸಿದ್ದ. ಆದರೆ ಈ ಕನಸುಗಳೆಲ್ಲವೂ ಈಡೇರುವ ಮೊದಲೇ ಆತ ಈ ಪ್ರಪಂಚವನ್ನು ಅಗಲಿ ಹೋಗಿದ್ದ. ಹರೆಯದ ಮಗನನ್ನು ಕಳೆದುಕೊಂಡ ಪೋಷಕರಿಗೆ ಇದು ಅರಗಿಸಿಕೊಳ್ಳಲಾಗದ ನೋವೆನಿಸಿದರೂ, ಆತನ ಕನಸನ್ನು ಈಡೇರಿಸುವ ಸಲುವಾಗಿ ತಂದೆ ನವೀನ್ ಕಾಂಬೋಜಿ ಅವರು ತಾವೇ ಸ್ವತಃ ಮಾಡೆಲ್ ಆಗಲು ಬಯಸಿದರು, 53ರ ಹರೆಯದಲ್ಲಿ ಓರ್ವ ಫುಟ್ಬಾಲರ್‌ ಆಗುವುದು ಕನಸಿನ ಮಾತೇ ಎಂದು ಭಾವಿಸಿದ ಅವರು ಕನಿಷ್ಠ ಮಗನ ಒಂದು ಆಸೆಯನ್ನಾದರು ಈಡೇರಿಸೋಣ ಎಂದು ಫ್ಯಾಷನ್ ಮಾಡೆಲ್ ಆಗುವ ಧೈರ್ಯ ತೋರಿದರು. 

ಇವರ ಈ ಸಾಹಸಕ್ಕೆ ನೆರವಾದವರು ದಿನೇಶ್ ಮೋಹನ್, ಅವರು ತಮ್ಮ ಬ್ರಾಂಡ ಆದ DMASKಗೆ ಮಾಡೆಲ್ ಆಗಿ ಅವರನ್ನು ಆಯ್ಕೆ ಮಾಡುವ ಮೂಲಕ ಮಗನ ಕನಸನ್ನು ಈಡೇರಿಸುವ ಅವಕಾಶ ನೀಡಿದರು. ಅದರಂತೆ ಅವರು ಕಳೆದ ತಿಂಗಳು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ರಾಂಪ್ ಶೋದಲ್ಲಿ ಹೆಜ್ಜೆ ಹಾಕಿದ್ದು, ತಮ್ಮ  ಮಗನ ಕನಸನ್ನು ಈಡೇರಿಸುವ ಸಣ್ಣ ಪ್ರಯತ್ನ ಮಾಡಿದ್ದಾರೆ. ತಾವು ರಾಂಪ್ ಮೇಲೆ ಹೆಜ್ಜೆ ಹಾಕುತ್ತಿರುವ ದೃಶ್ಯವನ್ನು ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, 'ಇದು ನಿನಗಾಗಿ, ನನ್ನ ಮಗ, ನನ್ನ ಸ್ವರ್ಗದಲ್ಲಿರುವ ಸೂಪರ್‌ಸ್ಟಾರ್‌ಗಾಗಿ' ಎಂದು ಬರೆದುಕೊಂಡಿದ್ದಾರೆ. 

ನನ್ನ ಪ್ರೀತಿಯ ಪುತ್ರ ಕರಣ್ 18ರ ಸಣ್ಣ ವಯಸ್ಸಿನಲ್ಲೇ ಅನಿರೀಕ್ಷಿತ ದುರಂತದಲ್ಲಿ ತೀರಿಕೊಂಡ, ಆತ ವೃತ್ತಿಪರ ಫುಟ್‌ಬಾಲ್‌ ಪ್ಲೇಯರ್ ಆಗಬೇಕೆಂದು ಬಯಸಿದ್ದ, ಜೊತೆಗೆ ಮಾಡೆಲ್ ಆಗಲು ಬಯಸಿದ್ದ, ನಾನು ಆತ ನಿಜವಾದ ಶೋ ಸ್ಟಾಪರ್ ಆಗಿ ಫ್ಯಾಷನ್ ಶೋಗಳಲ್ಲಿ ಮಿಂಚುವಂತಹ ಕನಸು ಕಾಣುತ್ತಿದೆ. ಆದರೆ ಕರಣ್ ನಮ್ಮನ್ನು ಅರ್ಧದಲ್ಲೇ ಬಿಟ್ಟು ಹೋದಾಗ ಇದಿನ್ನೂ ನಮ್ಮ ಜೀವನದಲ್ಲಿ ಅಸಾಧ್ಯ ಎಂದು ಭಾವಿಸಿದ್ದೆ. ಆದರೆ ಆಗಲೇ ಪವಾಡವೊಂದು ಸಂಭವಿಸಿತ್ತು ಎಂದು ಬರೆದ ನವೀನ್ ಕಂಬೋಜಿ  ಅವರು ತಮಗೆ ಮಾಡೆಲ್ ಆಗಿ ರಾಂಪ್ ಮೇಲೆ ಹೆಜ್ಜೆ ಹಾಕಲು ಅವಕಾಶ ನೀಡಿದ, ತಮ್ಮನ್ನು ತಿದ್ದಿ ತೀಡಿದ ದಿನೇಶ್ ಮೋಹನ್ ಅವರನ್ನು ಸ್ಮರಿಸಿದ್ದಾರೆ. 

ಹಾಗಂತ 53ರಲ್ಲಿ ಓರ್ವ ಫ್ಯಾಷನ್ ಮಾಡೆಲ್ ಆಗುವ ನವೀನ್ ಕಂಬೋಜಿ ಅವರ ಸಾಹಸ ಅಷ್ಟೊಂದು ಸುಲಭದ್ದೇನು ಆಗಿರಲಿಲ್ಲ, ಅವರು ಮಾನಸಿಕವಾಗಿ, ಭಾವನಾತ್ಮಕವಾಗಿ ದೈಹಿಕವಾಗಿ ಪರಿವರ್ತಿತರಾಗಬೇಕಿತ್ತು.  ಮಾಡೆಲ್ ಆಗುವ ಮೊದಲು ಅವರು ಬರೋಬ್ಬರಿ 100 ಕೇಜಿ ತೂಗುತ್ತಿದ್ದರು. ಆದರೆ ಮಗ ಕರಣ್ ಆಸೆಯನ್ನು ಈಡೇರಿಸುವುದೊಂದೆ ಅವರ ಗುರಿಯಾಗಿದ್ದರಿಂದ ಅವರು ಮಾಡೆಲ್ ಆಗುವಷ್ಟರ ಮಟ್ಟಿಗೆ ತೂಕ ಇಳಿಸಿಕೊಂಡು ಫಿಟ್ & ಫೈನ್ ಆದರು. ನನ್ನ ವಯಸ್ಸಿಗೆ ಫುಟ್ಬಾಲ್ ಪ್ಲೇಯರ್ ಆಗುವುದು ಔಟ್ ಆಫ್ ಸಿಲಬಸ್ ಆಗಿದ್ದರಿಂದ ನಾನು ಮಾಡೆಲ್ ಆಗಿ ರಾಂಪ್ ಮೇಲೆ ಹೆಜ್ಜೆ ಹಾಕುವ ಪ್ರಯತ್ನ ಮಾಡಿದೆ ಎಂದು ನವೀನ್ ಹೇಳಿಕೊಂಡಿದ್ದಾರೆ.  ಈ ಸ್ಟೋರಿ ಬಗ್ಗೆ ನಿಮಗೇನನಿಸ್ತಿದೆ ಕಾಮೆಂಟ್ ಮಾಡಿ. 

 

Latest Videos
Follow Us:
Download App:
  • android
  • ios