50 ವರ್ಷಗಳ ನಂತರ ಮತ್ತೆ ಭೇಟಿಯಾದ ವಿಜಯಪುರ ಸೈನಿಕ ಶಾಲೆಯ ವಿದ್ಯಾರ್ಥಿಗಳ ಅಪೂರ್ವ ಸಮ್ಮಿಲನದ ಕಥೆ

ಒಂದು ಅಪೂರ್ವ ಸಮ್ಮಿಲನ. 50 ವರ್ಷಗಳ ನಂತರ ಮತ್ತೆ ಭೇಟಿಯಾದ ವಿಜಾಪುರ ಸೈನಿಕ ಶಾಲೆಯ ವಿದ್ಯಾರ್ಥಿಗಳ ಅಪೂರ್ವ ಸಮ್ಮಿಲನದ ಕತೆ.

Vijayapura Sainik School students met after 50 years Sumangala s mummigatti vcs

ಸುಮಂಗಲಾ ಎಸ್‌. ಮುಮ್ಮಿಗಟ್ಟಿ

ಅಂದು ವಿಜಯಪುರದ ಸೈನಿಕ ಶಾಲೆಯಲ್ಲಿ ನಡುಹಗಲಿನಲ್ಲಿ ಕರಡಿ ಮಜಲಿನ ಕುಣಿತದ ಸದ್ದು ಅನುರಣಿಸುತ್ತಿತ್ತು. ಉರಿ ಬಿಸಿಲಿನಲ್ಲೂ ತಂಪಾದ ನೀಲವರ್ಣದ ಸೀರೆಯನ್ನುಟ್ಟನಾರಿಯರು ಟಾಂಗಾಗಳಲ್ಲಿ ಮುಖದ ತುಂಬ ನಗೆಯರಳಿಸಿ ಕುದುರೆಗಳ ಖರಪುಟದ ಸದ್ದಿನೊಂದಿಗೆ ಗುಂಪು ಗುಂಪಾಗಿ ಬಂದಿಳಿಯುತ್ತಿದ್ದರು. ನಂತರ ಅವರೊಂದಿಗೆ ಸೇರಿದ ನೀಲಿ ಕಪ್ಪು ಸೂಟುಧಾರಿಗಳೆಲ್ಲ ಒಂದಾಗಿ ಕರಡಿ ಮಜಲಿನೆಡೆಗೆ ಸಾಗಿದರು. ಅವರುಗಳಲ್ಲಿದ್ದ ಉತ್ಸಾಹಕ್ಕೆ ಎಣೆಯೇ ಇರಲಿಲ್ಲ. ಕರಡಿ ಮಜಲಿನ ಡೊಳ್ಳನ್ನು ತಮ್ಮ ಕೊರಳಿಗೆ ಹಾಕಿಕೊಂಡು ಬಾರಿಸುವವರು, ತಾಳದ ಲಯಕ್ಕೆ ನರ್ತಿಸುವವರೂ ಸೇರಿ ಅಲ್ಲೊಂದು ಸಂತಸದ ಲೋಕವೇ ಸೃಷ್ಟಿಯಾಗಿತ್ತು.

ಇವರಾರೂ ನವಯುವಕರಲ್ಲ, ಅದೀಗ ಶಾಲೆಯನ್ನು ಸೇರಿದ ಅಥವಾ ಮುಗಿಸಿದ ಹುಡುಗರೂ ಅಲ್ಲ. ಅವರೆಲ್ಲ ಐವತ್ತು ವರ್ಷಗಳ ಹಿಂದೆ ಬಿಜಾಪುರದ ಸೈನಿಕ ಶಾಲೆಗೆ ಪೋಷಕರ ಕೈ ಹಿಡಿದು ಬೆರಗುಗಣ್ಣುಗಳಿಂದ ಸುತ್ತೆಲ್ಲ ನೋಡುತ್ತಾ ಬಂದವರು. ಈಗ ಅರವತ್ತರ ಅಂಚಿನಲ್ಲಿರುವವರು. ಅವರಲ್ಲಿ ಹಿರಿಯ ರಕ್ಷಣಾ ಅಧಿಕಾರಿಗಳು, ಆಡಳಿತಾಧಿಕಾರಿಗಳು, ಖ್ಯಾತ ವೈದ್ಯರು, ವಿವಿಧ ಮಾಧ್ಯಮದಲ್ಲಿರುವವರು, ಪ್ರಾಧ್ಯಾಪಕರು, ವ್ಯಾಪಾರೋದ್ಯಮಿಗಳು, ಶಿಕ್ಷಕರು ದೇಶ, ವಿದೇಶಗಳಲ್ಲಿರುವವರು ಸೇರಿದ್ದರು. ತಾವು ಸೈನಿಕ ಶಾಲೆಯನ್ನು 1972ರಲ್ಲಿ ಸೇರಿದ ಕುರುಹಾಗಿ, ಸುವರ್ಣ ಮಹೋತ್ಸವ ಆಚರಿಸಲು ಅಲ್ಲಿ ಸೇರಿದ್ದರು. ತಮ್ಮ ವಯಸ್ಸನ್ನು ಮರೆತು ಈಗ ಹದಿಹರೆಯದವರಾಗಿ ಹೋಗಿದ್ದರು. ಅವರೊಂದಿಗೆ ಬಂದ ಅವರ ಕುಟಂಬಗಳೂ ಇದನ್ನು ಕಣ್ಣು ತುಂಬಿಕೊಳ್ಳುತ್ತಿದ್ದರು. ಮಕ್ಕಳೊಂದಿಗೆ ಎಳೆಯ ಮೊಮ್ಮಕ್ಕಳೂ ಅಲ್ಲಿದ್ದರು. ಮಧ್ಯೆ ಮಧ್ಯೆ ‘ಅಜೀತ್‌ ಹೈ ಅಭೀತ ಹೈ’ ಎಂಬ ಘೋಷಣೆಯೂ ಇತ್ತು.

ಅಳೆಯುವವರ ಕಥೆ ಬೆಳಕಿಗೆ ತರುತ್ತಿರುವೆ : ಗಜಾನನ ಶರ್ಮಾ

ಅವರನ್ನೆಲ್ಲಾ ಶಾಲೆಯ ಈಗಿನ ಪ್ರಾಂಶುಪಾಲರಾದ ಗ್ರೂಪ್‌ ಲೀಡರ್‌ ಪ್ರತಿಭಾ ಬಿಷ್ಟಸ್ವಾಗತಿಸಿದರು. ಈ ಶಾಲೆಯ ಮೊದಲ ಮಹಿಳಾ ಪ್ರಾಂಶುಪಾಲರು ಈಕೆ. ಮಿಲಿಟರಿ ವೇಷದಲ್ಲಿದ್ದ ಆಕೆ ಮೊಗದಲ್ಲಿ ನಗೆಯರಳಿಸಿಕೊಂಡು ಬಂದಾಗ, ಅಲ್ಲಿದ್ದ ಮಹಿಳೆಯರಲ್ಲಿ ಮತ್ತೊಮ್ಮೆ ಉತ್ಸಾಹದ ಕೇಕೆ. ಕೆಲ ನಿಮಿಷಗಳ ಮಾತುಕತೆಯ ನಂತರ ಫೋಟೋ ಸೆಶನ್‌. ಅದೊಂದು ಸಂಭ್ರಮದ ಕ್ಷಣ.

ನಂತರ ಬಸ್ಸುಗಳನ್ನೇರಿ ಸುಮಾರು ನಾಲ್ಕುನೂರು ಎಕರೆಗಳ ಶಾಲೆಯ ಕೆಲ ಭಾಗಗಳನ್ನಾದ್ರೂ ಮತ್ತೊಮ್ಮೆ ಮನದುಂಬಿಕೊಳ್ಳಲು ಹೊರಟರು. ಅಲ್ಲಿ ತಾವಿದ್ದ-ಚಾಲುಕ್ಯ, ಹೊಯ್ಸಳ, ಆದಿಲ್‌ ಶಾಹಿ, ವಿಜಯನಗರ, ಒಡೆಯರ್‌, ರಾಷ್ಟ್ರಕೂಟ ಹೌಸ್‌ಗಳನ್ನು ಹೊಕ್ಕು ತಾವು ಮಲಗುತ್ತಿದ್ದ, ಸ್ನಾನ ಮಾಡುತ್ತಿದ್ದ ಜಾಗಗಳಲ್ಲಿ ತಮ್ಮ ಬಾಲ್ಯದ ತುಂಟತನದ ನೆನಪುಗಳನ್ನು ಸ್ಮರಿಸಿಕೊಳ್ಳುತ್ತಿದ್ದರು. ಅವರ ಕಣ್ಣುಗಳಲ್ಲಿ ಅದೇ ಬಾಲ್ಯದ ಹೊಳಪಿತ್ತು. ಈಜು ಕೊಳ, ಕುದುರೆಯ ಲಾಯಗಳನ್ನು ನೋಡಿದರು. ಕೆಲವರು ಕುದುರೆಯನ್ನೇರಿ ಸಂಭ್ರಮಿಸಿದರು. ಶಾಲೆಯ ಹಾಕಿ ಗ್ರೌಂಡ್‌ನಲ್ಲಿ ಇವರ ಹಾಗೂ ಅಲ್ಲಿರುವ ವಿದ್ಯಾರ್ಥಿಗಳ ಸ್ನೇಹಪೂರ್ವಕ ಹಾಕಿ ಮ್ಯಾಚ್‌ ಇದ್ದಿದ್ದರಿಂದ ಹಾಕಿ ಗ್ರೌಂಡ್‌ನತ್ತ ತೆರಳಿದರು. 16-18ರ ಹುಡುಗರ ಜೊತೆಗೆ 60ರ ಹರೆಯದವರ ಮ್ಯಾಚ್‌ ನೋಡಲು ಸುಂದರವಾಗಿತ್ತು. ಇವರೂ ಒಮ್ಮೆ ಅಲ್ಲಿ ಆಡಿದವರಲ್ಲವೇ. ಹುಡುಗರ ಓಟದ ಚುರುಕು ಇರಲಿಲ್ಲವಾದರೂ ಉತ್ಸಾಹಕ್ಕೇನೂ ಕೊರತೆ ಇರಲಿಲ್ಲ. ಕೊನೆಗೆ ಆಟ 2-2 ಗೋಲ್‌ ಡ್ರಾದಲ್ಲಿ ಮುಕ್ತಾಯವಾದಾಗ ಎಲ್ಲೆಡೆ ‘ಹಿಪ್‌ಹಿಪ್‌ಹುರ್ರೇ’ ಕೂಗು ಕೇಳಿಬಂತು.

ತಮ್ಮ ನೆಚ್ಚಿನ ಶಾಲೆಗೆ ನೆನಪಿನ ಕಾಣಿಕೆಯನ್ನು ನೀಡಿದರು. ಮಿಲಿಟರಿಯಲ್ಲಿ ಸೇವೆ ಸಲ್ಲಿಸಿದವರು, ವಿದೇಶಗಳಲ್ಲಿ ಯಶಸ್ವೀ ಉದ್ಯಮಿಗಳಾದವರು ಹಾಗೂ ಇನ್ನೂ ಕೆಲವರು ತಮ್ಮ ಶಾಲೆಯ ದಿನಗಳ ಅನುಭವಗಳನ್ನು, ಜೀವನದಲ್ಲಿ ಮುಂದೆ ಸಾಗಲು ಬೇಕಾಗಿರುವ ಶಿಸ್ತನ್ನೂ ಅಲ್ಲಿದ್ದ ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ಸೈನಿಕ ಶಾಲೆಗೆ ಸೇರುವುದರ ಮೂಲ ಉದ್ದೇಶ, ರಕ್ಷಣಾ ದಳವನ್ನು ಸೇರುವುದಾಗಿದ್ದರೂ, ಅದು ಎಲ್ಲರಿಗೂ ಸಾಧ್ಯವಾಗದೆ ಇದ್ದಾಗ, ಬೇರೆಯ ಕ್ಷೇತ್ರಗಳಲ್ಲಿ ಯಶಸ್ಸು ಗಳಿಸಲು ಒಬ್ಬ ಉತ್ತಮ ನಾಗರೀಕರಾಗಲು ಶಾಲೆ ಹೇಗೆ ನೆರವಾಗುತ್ತದೆ ಎನ್ನುವ ಅವರ ಅನುಭವದ ಮಾತುಗಳು ವಿದ್ಯಾರ್ಥಿಗಳಲ್ಲಿ ಸ್ಫೂರ್ತಿಯನ್ನು ಮೂಡಿಸಿದ್ದು ಕಾಣಿಸುತ್ತಿತ್ತು.

ನಂತರ ಅವರೆಲ್ಲಾ ಉಪಾಹಾರ ಸೇವಿಸಿ ಮತ್ತೊಮ್ಮೆ ತಮ್ಮ ಗುರುಗಳನ್ನೂ, ಓದುವ ಕೊಠಡಿಯನ್ನು, ತಾವು ಮಾಡುತ್ತಿದ್ದ ಬಾಲ್ಯದ ತುಂಟಾಟವನ್ನು ನೆನೆಯುತ್ತಾ ಸಂಭ್ರಮಿಸಿದಾಗ ಕತ್ತಲಾಗಲು ಆರಂಭವಾಗಿತ್ತು. ಮನಸ್ಸಿಲ್ಲದ ಮನಸ್ಸಿನಿಂದ ಮತ್ತೆ ಬಸ್ಸುಗಳನ್ನೇರಿ ತಾವು ತಂಗಿದ್ದ ಸ್ಥಳಕ್ಕೆ ಹೊರಟರು.

ಇದೇಕೆ ಅಪೂರ್ವ?

ಬೇರೆಯ ಹಳೆಯ ವಿದ್ಯಾರ್ಥಿ ಸಮ್ಮಿಲನಗಳಿಗಿಂತ ಇದು ಭಿನ್ನವಾದದ್ದು. ಸುಮಾರು 7 ವರ್ಷಗಳವರೆಗೆ 24 ಗಂಟೆಗಳು ಜೊತೆಗಿದ್ದು ಬೆಳೆದ ಇವರು ಒಬ್ಬರನ್ನೊಬ್ಬರು ಚೆನ್ನಾಗಿ ಅರಿತಿರುತ್ತಾರೆ. ಯಾವುದೇ ಭೇದಭಾವಗಳ ಕಟ್ಟಿಲ್ಲದೆ ಸಹೋದರರಂತೆ ಬೆರೆಯುತ್ತಾರೆ. ಇಂಥ ಸಮ್ಮಿಲನಕ್ಕೆ ಬಂದಾಗ ಸಮಾಜಕ್ಕೆ ತಾವೇನು ಕಾಣಿಕೆಯನ್ನು ನೀಡಬಹುದು ಎಂದು ಚರ್ಚಿಸುತ್ತಾರೆ. ಸದ್ದಿಲ್ಲದೇ ಅದನ್ನು ಮಾಡಿಯೂ ಇರುತ್ತಾರೆ. ಅವಶ್ಯಕತೆ ಬಿದ್ದಾಗ ಒಬ್ಬರ ನೆರವಿಗೆ ಹೆಗಲು ಕೊಡುತ್ತಾರೆ. ದೇಶದ ಉತ್ತಮ ನಾಗರೀಕರಾಗಿ ಗಡಿಯಲ್ಲಿ, ಗಡಿಯೊಳಗೆ ಸೇವೆ ಸಲ್ಲಿಸುತ್ತಾರೆ. ಇದನ್ನು ವಿದ್ಯಾರ್ಥಿಗಳಲ್ಲಿ ಹುಟ್ಟುಹಾಕುವ ಶಾಲೆ, ಗುರುವೃಂದ ನಿಜಕ್ಕೂ ಧನ್ಯತೆ ಅನುಭವಿಸುವಂತೆ ಮಾಡುತ್ತಾರೆ. ಇದಲ್ಲವೇ ನಿಜವಾದ ಶಿಕ್ಷಣದ ಉದ್ದೇಶ? ಇದೀಗ ಮೊದಲ ಬಾರಿಗೆ ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೂ ಪ್ರವೇಶ ಕೊಡಲಾಗಿದೆ ಎನ್ನುವುದು ಸಂತಸದ ವಿಷಯ.

Latest Videos
Follow Us:
Download App:
  • android
  • ios