ರೇಣುಕಾಸ್ವಾಮಿ ಕೊ*ಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಮತ್ತು ನಟಿ ಪವಿತ್ರಾ ಗೌಡ ನಡುವಿನ ರಹಸ್ಯ ಸಂಭಾಷಣೆಯೊಂದು ಕೋರ್ಟ್ ವಿಡಿಯೋ ಕಾನ್ಫರೆನ್ಸ್ ವೇಳೆ ಎಲ್ಲರ ಎದುರು ಬಯಲಾದ ಬೆನ್ನಲ್ಲೇ ವಿಜಯಲಕ್ಷ್ಮಿ ದರ್ಶನ್ ಅವರು ಪೋಸ್ಟ್ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ಏನಿದೆ ಅದರಲ್ಲಿ ನೋಡಿ
ಬೆಂಗಳೂರು: ರೇಣುಕಾಸ್ವಾಮಿ ಕೊ*ಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಮತ್ತು ನಟಿ ಪವಿತ್ರಾ ಗೌಡ ನಡುವಿನ ರಹಸ್ಯ ಸಂಭಾಷಣೆಯೊಂದು ಕೋರ್ಟ್ ವಿಡಿಯೋ ಕಾನ್ಫರೆನ್ಸ್ (Video Conference) ವೇಳೆ ಬಹಿರಂಗವಾಗಿ ತಲ್ಲಣ ಉಂಟಾಗಿರುವುದು ಗೊತ್ತೇ ಇದೆ. ವಿಚಾರಣೆಯ ಸಂದರ್ಭದಲ್ಲಿ ನಡುವೆ ಸಂಪರ್ಕ ಕಡಿತಗೊಂಡಿದೆ ಎಂದು ಭಾವಿಸಿ ಇಬ್ಬರೂ ಪರಸ್ಪರ ಮಾತನಾಡಿಕೊಂಡಿದ್ದು, ಆ ಮಾತುಗಳು ಎಲ್ಲರಿಗೂ ಕೇಳಿಸಿವೆ. ಈ ವೇಳೆ 'ಇನ್ನು ಕೇವಲ 4 ರಿಂದ 5 ತಿಂಗಳು ಸಹಿಸಿಕೊ, ಹೈಕೋರ್ಟ್ನಲ್ಲಿ ಜಡ್ಜ್ ಬದಲಾಗುತ್ತಾರೆ' ಎಂದು ದರ್ಶನ್ ಹೇಳಿದ್ದು, ಇದೀಗ ಸಿಕ್ಕಾಪಟ್ಟೆ ಚರ್ಚೆಗೂ ಗ್ರಾಸವಾಗಿದೆ. ವಿಜಯಲಕ್ಷ್ಮಿ ಬರ್ತ್ಡೇ ಸಂದರ್ಭದಲ್ಲಿ ಈ ರೀತಿ ನಡೆದಿದ್ದು ಇನ್ನೂ ಶಾಕಿಂಗ್ ಆಗಿತ್ತು.ಈ ಎಲ್ಲ ಬೆಳವಣಿಗೆ ಮಧ್ಯೆ ವಿಜಯಲಕ್ಷ್ಮಿ ಯಾವಾಗ ಪ್ರತಿಕ್ರಿಯಿಸ್ತಾರೆ ಎಂದು ಎಲ್ಲರೂ ಕಾಯುತ್ತಿದ್ದರು.
ಇದೀಗ ಅವರು ತಮ್ಮ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿಕೊಂಡಿದ್ದು, ಇದು ಪರೋಕ್ಷವಾಗಿ ಇದೇ ಘಟನೆಗೆ ಸಂಬಂಧಿಸಿದ್ದು ಎನ್ನಲಾಗಿದೆ. ಅಷ್ಟಕ್ಕೂ ಇದರಲ್ಲಿ ವಿಜಯಲಕ್ಷ್ಮಿ (Vijayalakshmi Darshan) ಹೇಳಿರುವುದು ಏನೆಂದರೆ, 'ನಿಮಗೆ ದ್ರೋಹ ಬಗೆಯುವುದು ನಿಮ್ಮ ಶತ್ರುಗಳಲ್ಲ, ಬದಲಾಗಿ ನಿಮ್ಮ ಜೊತೆಯಲ್ಲಿ ಒಂದೇ ತಟ್ಟೆಯಲ್ಲಿ ಉಂಡವರು' ಎಂದಿದ್ದಾರೆ. ವಿಬೋಧ್ & ವಿನೀಶ್ ದರ್ಶನ್ ಎನ್ನುವ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ ವಿಡಿಯೋವನ್ನು ವಿಜಯಲಕ್ಷ್ಮಿ ಅವರು ತಮ್ಮ ಇನ್ಸ್ಟಾಗ್ರಾಂ ಸ್ಟೋರೀಸ್ನಲ್ಲಿ ಹಂಚಿಕೊಂಡಿದ್ದಾರೆ.
ಅಂದು ಆಗಿದ್ದೇನು?
ಪ್ರಕರಣದ ವಿಚಾರಣೆಗಾಗಿ ಜೈಲಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದ ಸಂದರ್ಭದಲ್ಲಿ ತಾಂತ್ರಿಕ ಕಾರಣದಿಂದ ಸಂಪರ್ಕ ಕಟ್ ಆಗಿತ್ತು. ಈ ವೇಳೆ ಹಾಲ್ನಲ್ಲಿದ್ದ ಉಳಿದ ಆರೋಪಿಗಳು ಹೊರಗೆ ಹೋಗಿದ್ದರು. ವಿಡಿಯೋ ಕಾನ್ಫರೆನ್ಸ್ ಕಟ್ ಆಗಿದೆ ಎಂದು ಭಾವಿಸಿದ ದರ್ಶನ್ ಮತ್ತು ಪವಿತ್ರಾ ಗೌಡ ಪರಸ್ಪರ ಯೋಗಕ್ಷೇಮ ವಿಚಾರಿಸಿಕೊಂಡಿದ್ದಾರೆ. ಆದರೆ, ಆಡಿಯೋ ಸಂಪರ್ಕ ಕಡಿತಗೊಳ್ಳದ ಕಾರಣ ಅವರ ಸಂಪೂರ್ಣ ಸಂಭಾಷಣೆ ದಾಖಲಾಗಿದೆ. ಆಗ ಇಬ್ಬರೂ ಪರಸ್ಪರ ಮಾತನಾಡಿಕೊಂಡಿದ್ದಾರೆ. ಊಟ ಆಯ್ತಾ...? ಹೇಗಿದೆ ಬೆನ್ನು ನೋವು...? ಫಿಸಿಯೋಥೆರಪಿ ಆಯ್ತಾ...? ಎಷ್ಟು ದಿನ ಮಾಡಿಸಬೇಕು ಎಂದೆಲ್ಲಾ ಪವಿತ್ರಾ ಕೇಳಿದಾಗ, ದರ್ಶನ್ ಅವರು ಇದಕ್ಕೆಲ್ಲಾ ಉತ್ತರ ಕೊಟ್ಟಿದ್ದಾರೆ.
ಇಬ್ಬರೂ ಹೀಗೆ ಜೈಲಿನ ಕಷ್ಟ ಮತ್ತು ಜಾಮೀನಿನ ನಿರೀಕ್ಷೆಯ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾಗ, ತಕ್ಷಣವೇ ವಿಡಿಯೋ ಕಾನ್ಫರೆನ್ಸ್ ಮರುಸಂಪರ್ಕಗೊಂಡಿದೆ. ವಿಡಿಯೋ ಆನ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ದರ್ಶನ್ ಮತ್ತು ಪವಿತ್ರಾ ಗೌಡ ತಕ್ಷಣವೇ ಮೌನಕ್ಕೆ ಶರಣಾದರು. ಸದ್ಯ ದರ್ಶನ್ ಅವರು ನೀಡಿರುವ ಈ '4-5 ತಿಂಗಳ' ಸುಳಿವು ಜಾಮೀನು ಪ್ರಕ್ರಿಯೆಯ ಕುರಿತೇ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಜೋರಾಗಿದೆ.















