ಪತಿ ಪರಾರಿಯಾಗಿದ್ದು, ಪೊಲೀಸರು ನ್ಯಾಯ ಒದಗಿಸುತ್ತಿಲ್ಲ ಎಂದು ಆರೋಪಿಸಿ ಮಹಿಳೆಯೊಬ್ಬರು ಪಾವಗಡದಲ್ಲಿ ಮೊಬೈಲ್ ಟವರ್ ಏರಿ ಹೈಡ್ರಾಮಾ ನಡೆಸಿದ್ದಾರೆ. ಪ್ರೀತಿಸಿ ಮದುವೆಯಾಗಿದ್ದ ಪತಿ ನಾಪತ್ತೆಯಾದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಆಕೆಯನ್ನು ಮನವೊಲಿಸಿ ಕೆಳಗಿಳಿಸಿದ್ದಾರೆ.

ತುಮಕೂರು: ಪತಿ ಪರಾರಿಯಾಗಿದ್ದು ಪೊಲೀಸರು ನ್ಯಾಯ ಕೊಡಿಸುತ್ತಿಲ್ಲ ಎಂದು ಆರೋಪಿಸಿ ಮಹಿಳೆ ಪಾವಗಡ ಪಟ್ಟಣದ ಬಳ್ಳಾರಿ ರಸ್ತೆ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಆವರಣದಲ್ಲಿರುವ ಬಿಎಸ್ಎನ್ಎಲ್ ಮೊಬೈಲ್ ಟವರ್ ಏರಿ ಹೈಡ್ರಾಮಾ ನಡೆಸಿದ ಘಟನೆ ನಡೆದಿದೆ.

ಮಂಗಳವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಟವರ್ ಮೇಲೆ ಯುವತಿ ಕುಳಿತಿರುವುದನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ನೂರಾರು ಜನರು ಸ್ಥಳದಲ್ಲಿ ಜಮಾಯಿಸಿದ್ದರು. ಕೂಡಲೇ ಪಾವಗಡ ಪೊಲೀಸ್ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಸುರೇಶ್ ಮತ್ತು ಅಗ್ನಿಶಾಮಕ ಪ್ರಭಾರ ಠಾಣಾಧಿಕಾರಿ ವೆಂಕಟೇಶ್ ನಾಡಗೌಡ ನೇತೃತ್ವದಲ್ಲಿ ಸಿಬ್ಬಂದಿ ಸ್ಥಳಕ್ಕೆ ಬಂದು ಸುಮಾರು ಒಂದು ಗಂಟೆ ಮನವೊಲಿಸಿ ಕೆಳಗಿಳಿಸಿದ್ದಾರೆ.

ಪ್ರೀತಿ-ಮದುವೆ-ಪರಾರಿ ಕಥೆ

ಮಹಿಳೆ ಸಿಂಧು ಕೋಂ ಗಣೇಶ್ (20) ಆಂಧ್ರಪ್ರದೇಶದವರಾಗಿದ್ದು, ಸದ್ಯ ಬೆಂಗಳೂರಿನ ನಾಗಸಂದ್ರದಲ್ಲಿ ವಾಸ. ಈಕೆ ಪತಿ ಪಾವಗಡ ತಾಲೂಕು ದೊಡ್ಡೇನಹಳ್ಳಿಯ ಗಣೇಶ ಬಿನ್ ಓಬಳಯ್ಯ (22). ಸದ್ಯ ಬೆಂಗಳೂರಿನ ಮಾದನಾಯಕನಹಳ್ಳಿ ಕುವೆಂಪು ನಗರದಲ್ಲಿ ವಾಸವಾಗಿದ್ದಾನೆ.

ಇಬ್ಬರೂ ಒಂದು ವರ್ಷ ಪ್ರೀತಿಸಿ ಅ.6ರಂದು ಬೆಂಗಳೂರಿನ ನಾಗಸಂದ್ರದಲ್ಲಿ ಮದುವೆಯಾಗಿದ್ದಾರೆ. ಅ.18ರಂದು ಸಂಜೆ 5:10ಕ್ಕೆ ಪತಿ ಗಣೇಶ "10 ನಿಮಿಷದಲ್ಲಿ ಬರುತ್ತೇನೆ" ಎಂದು ಹೇಳಿ ಹೋದವನು ವಾಪಸ್ ಬಂದಿಲ್ಲ. ಈ ಬಗ್ಗೆ ಬೆಂಗಳೂರಿನ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೂ ಕ್ರಮ ವಹಿಸಿಲ್ಲ ಎಂದು ಸಿಂಧು ತಿಳಿಸಿದ್ದಾರೆ. ಸದ್ಯ ಸಿಂಧುಳನ್ನು ಅರಸೀಕೆರೆ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.