ತಂತ್ರಜ್ಞಾನದ ಮೇಲೆ ಅತಿಯಾದ ಅವಲಂಬನೆ ಒಳ್ಳೆಯದಲ್ಲ. ಇದು ಗಂಡ ಹೆಂಡತಿ ಸಂಬಂಧವನ್ನು ಮುರಿದು ಹಾಕಬಲ್ಲದು. ಸಂಸಾರದಲ್ಲಿ ಹುಳಿ ಹಿಂಡಬಹುದು. ಸಂಸಾರದ ನೆಮ್ಮದಿ ಹಾಳಾಗುವುದಂತೂ ಸತ್ಯ. 

ಗಡಿಯಾರ ಶಬ್ಧಮಾಡಿ ಗಂಟೆ ಒಂಬತ್ತು ಎಂದು ತಿಳಿಸಿತು. ಗಂಡ ಮಹಡಿಯಿಂದ ಇಳಿದು ಬರದ್ದನ್ನು ನೋಡಿ ಭಾಮಾಗೆ ಅಸಹನೆ. ಯಾವಾಗಲೂ ಫೋನಿನಲ್ಲಿ ಮಾತನಾಡುತ್ತಲೋ, ಮೇಸೇಜ್‌ ಮಾಡುತ್ತಲೋ ಇರ್ತಾನೆ. ನಾನ್ಯಾಕಾದ್ರೂ ಸುಮಾಳನ್ನು ಪರಿಚಯಿಸಿಕೊಟ್ಟೆನೋ ಏನೋ. ಯಾವಾಗಲೂ ಅವಳದೇ ಗುಣಗಾನ. ಏನೋ ನನ್ನ ಫ್ರೆಂಡ್‌, ಕಷ್ಟದಲ್ಲಿದ್ದಾಳೆ, ಸಹಾಯವಾಗಲೆಂದು ಪರಿಚಯಿಸಿದರೆ ಈಕೆ ಈಗ ನನ್ನ ಗಂಡನಿಗೇ ಅಂಟಿಕೊಂಡಂತಿದೆ. ಅವಳನ್ನು ಹಚ್ಚಿಕೊಂಡು ಮಿತಿಗಿಂತ ಹೆಚ್ಚು ಸಹಾಯ ಮಾಡುವುದು ಬೇಡ ಎಂದರೆ ನಿನಗೆ ಸಂಶಯ ಜಾಸ್ತಿ ಎಂದು ಬಿಡುತ್ತಾರೆ.

ಇದು ಸಂಸಾರಸ್ಥರಿಗಾಗಿ ಮಾತ್ರ! ನೀವಿದನ್ನು ಓದಲೇಬೇಕು!

ಅವಳಿಗೇ ನೇರವಾಗಿ ಹೇಳಿ ಬಿಡೋಣವೆಂದರೆ, ಏನೆಂದು ಹೇಳುವುದು? ನನ್ನ ಕರ್ಮ, ಹೇಗಾದ್ರೂ ಮಾಡಿ ನನ್ನ ಗಂಡನಿಂದ ಅವಳನ್ನು ದೂರಮಾಡಬೇಕು ಎಂದುಕೊಂಡಳು. ಆ ಯೋಚನೆಗಳಲ್ಲಿ ಮೊಬೈಲ್‌ ಕೈಗೆತ್ತಿಕೊಂಡು ಗಂಡನ ವಾಟ್ಸಾಪ್‌ ನೋಡಿದಳು. ಆನ್‌ ಲೈನ್‌ ಎಂದು ತೋರಿಸುತ್ತಿತ್ತು. ಗೆಳತಿ ಸುಮಾಳ ಹೆಸರನ್ನೂ ಹುಡುಕಿದಳು. ಅವಳದೂ ಆನ್‌ಲೈನ್‌ ಎಂದು ತೋರಿಸುತ್ತಿತ್ತು. ಓಹ್‌ ಇಬ್ಬರೂ ಚಾಟ್‌ ಮಾಡ್ತಿರಬೇಕೆನಿಸಿತು. ಆ ಆಲೋಚನೆಯಿಂದಲೇ ಕುದ್ದು ಹೋದಳು.

ಐದು ನಿಮಿಷ ಬಿಟ್ಟು ಮತ್ತೆ ಮೊಬೈಲ್‌ ಕಡೆ ನೋಡಿದಳು. ಇನ್ನೂ ಎರಡೂ ಕಡೆ ಆನ್‌ ಲೈನ್‌ ಎಂದು ತೋರಿಸುತ್ತಿತ್ತು. ತಕ್ಷಣವೇ ಮೇಲೆ ಹೋಗಿ ಗಂಡನ ಕೈಯಿಂದ ಮೊಬೈಲ್‌ ಕಿತ್ತು ದೂರ ಬಿಸಾಡಬೇಕೆನಿಸಿತು. ಗೆಳತಿಗೇ ಫೋನ್‌ ಮಾಡಿ ಬೈದು ಬಿಡೋಣವೆಂದು ಫೋನ್‌ ಕೈಗೆತ್ತಿಕೊಂಡಳು. ಕಾಲ್‌ ಮಾಡಲಾಗದೇ ಫೋನ್‌ನ್ನು ಸೋಫಾದ ಮೇಲೆ ಎಸೆದಳು. ಕಾಲ್‌ ಮಾಡಿದ್ದರೆ ಅವಳಿಗೆ ಗೆಳತಿಯ ಮಗ ಉತ್ತರಿಸಿರುತ್ತಿದ್ದ. ಕಾರಣ ತಾಯಿಯ ಪೋನನ್ನು ಗಂಟೆಯಿಂದ ಅವನೇ ಬಳಸುತ್ತಿದ್ದ. ಇತ್ತ ತನ್ನ ಮರುದಿನದ ಕಾರ್ಯಕ್ರಮದ ಕುರಿತು ಸಂಬಂಧಪಟ್ಟವರಿಗೆಲ್ಲ ಸಂದೇಶ ಕಳಿಸಿ ಪತಿ ಕೆಳಗೆ ಬಂದ. ಹಸಿವೆಯಾಗ್ತಿದೆ ಕಣೇ ಊಟ ಮಾಡೋಣ ಎಂದ. ಅವನೆಡೆ ನೋಡದೆ, ನನ್ನದು ಊಟವಾಯ್ತು ನೀವು ಮಾಡಿ ಎಂದು ಟಿವಿ ನೋಡುತ್ತಾ ಕುಳಿತಳು.