ಸುಷ್ಮಸಿಂಧು

ನಾವು ನಿರಂತರ ಪ್ರಪಂಚದ ಗತಿಯೊಡನೆ ಹೆಜ್ಜೆ ಹಾಕುವುದರಲ್ಲಿ ನಿರತರು. ಪ್ರಾಕ್ಟಿಕಲ್‌ ಆಗಿದ್ದರಷ್ಟೇ ಇಲ್ಲಿ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂಬ ಧೋರಣೆಯ ನಡುವೆ ನಮ್ಮೆಲ್ಲಾ ಭಾವಗಳೂ ಮುರುಟಿ ಗಂಟಾಗಿ ಹೋಗಿವೆ. ಜೀವಕ್ಕೆ ಹತ್ತಿರವೆನಿಸುವ, ಜೀವನಕ್ಕೂ ಅರ್ಥ ಕಟ್ಟಿಕೊಡುವ ಭಾವನೆಗಳ ಲೋಕದಲ್ಲಿ ವಿಹರಿಸುವುದೇ ಅನರ್ಥ, ಭಾವುಕರಾಗಿರುವುದೇ ಬಲಹೀನತೆ ಎನ್ನುವಂತಾಗಿದೆ.

ಸುಮ್ಮನೆ ಬದುಕಲು ಅಸಾಧ್ಯ

ಯಾಂತ್ರಿಕವಾಗಿ ಹೇಗೋ ಹಾಗೆ ಇದ್ದು ಬಿಡಲುಬಾರದು. ಬದುಕಿನ ಸವಾಲುಗಳನ್ನು ಎದುರಿಸಿಕೊಂಡು ಸದಾ ಹೋರಾಡಬೇಕಾದ ಅನಿವಾರ್ಯತೆಗಳು ಇರುತ್ತವಾದರೂ ಹೋರಾಟದಲ್ಲೂ ನಮ್ಮೊಳಗಿನ ಭಾವಗಳೂ ತಾಕಲಾಟಕ್ಕೆ ಸಿಲುಕಿರುತ್ತವೆಂಬುದು ಸತ್ಯ. ಏನನ್ನೂ ಭಾವಿಸದೆ, ಯಾವುದನ್ನೂ ಅನುಭವಿಸದೇ, ಅನುಭಾವಿಸದೇ, ವ್ಯಕ್ತಪಡಿಸದೇ ಇರುವ ಜೀವವೆಂಬುದಿಲ್ಲ. ನಾವೆಷ್ಟೇ ವಾಸ್ತವದಲ್ಲಿರುವವರು, ಬಂದುದನ್ನು ಬಂದಂತೆ ಸ್ವೀಕರಿಸುವವರು ಎಂದು ಪ್ರತಿಪಾದಿಸಿದರೂ ಆ ಪ್ರತಿಪಾದನೆಯ ಹಿಂದೆ ಇರುವುದೂ ತಾನು ಹಾಗೆ ಹೀಗೆ ಎಂದು ಭಾವಿಸಿಕೊಂಡಿರುವ ಭಾವಗಳ ಗುಚ್ಛವೆ!

ಮೂರರಲ್ಲಿ ಒಬ್ಬ ಸಂಗಾತಿಗೆ ಆರ್ಥಿಕ ದ್ರೋಹ ಮಾಡ್ತಾರಂತೆ!

ಭಾವನೆಗಳ ಭಯ

ಭಾವನೆಗಳ ಜಗತ್ತಿಗೆ ನಮ್ಮನ್ನು ನಾವು ಒಡ್ಡಿಕೊಳ್ಳದಿರಲು ಕಾರಣ ಅದರೊಳಗೆ ಕಳೆದುಹೋಗಿ ಬಿಡುವ ಭಯ. ವಾಸ್ತವದ, ಇಲ್ಲಿನ ಸವಾಲುಗಳನ್ನು ಎದುರಿಸಲು ಎಲ್ಲಿ ಅಸಮರ್ಥರಾಗುವೆವೋ ಎಂಬ ಆತಂಕ, ಪ್ರಪಂಚದ ಕಣ್ಣಲ್ಲಿ ದುರ್ಬಲರಾಗಿ ಕಾಣಿಸಿಕೊಳ್ಳಬಹುದೆಂಬ ಅಂಜಿಕೆ. ನಮ್ಮೊಳಗೆ ಭಾವಗಳನ್ನು ಮಥಿಸಲು ಬಿಟ್ಟು, ಆದ ಕಳವಳಗಳನ್ನು ಅಪ್ಪಿಕೊಂಡೂ ಧೈರ್ಯವಾಗಿ ಕಾಣಿಸಿಕೊಳ್ಳುವುದು ಸವಾಲು ಎನಿಸಿಬಿಡುವುದು ನಿಜ. ಆದರೆ ಉಪಚರಿಸದೇ ಬಿಟ್ಟಗಾಯ ತಾನಾಗೇ ಮಾಯದೇ ಉಲ್ಬಣಗೊಂಡು ಬಿಡುವಂತೆ ಸರಿಯಾಗಿ ಉಪಚರಿಸಲ್ಪಡದ ಭಾವಗಳೂ ಬಾತುಕೊಂಡು ಸಮಸ್ಯಾತ್ಮಕವಾಗಿ ಬಿಡಬಲ್ಲವು. ಅದರ ವೇದನೆ ಒಳಪ್ರಪಂಚವನ್ನೆಲ್ಲ ವ್ಯಾಪಿಸಿ ಒಂದಲ್ಲ ಒಂದು ದಿನ ಹೊರ ಪ್ರಪಂಚಕ್ಕೆ ದಾಳಿ ಮಾಡಿ ಆಕ್ರಮಿಸುವುದು ಖಚಿತ!

ಭಾವದ ಬಣ್ಣ

ಬರೀ ಪದಗಳು, ಮಾತುಗಳಷ್ಟೇ ನಮ್ಮೊಳಗಿನ ಅಭಿವ್ಯಕ್ತಿಯಲ್ಲ. ಭಾವಗಳೂ ಆಂತರ್ಯದ ಚಿತ್ತಾರವೇ. ಭಾವ ಪ್ರಪಂಚದೊಳಗೆ ನಮ್ಮೆಲ್ಲವನ್ನು ತೆರೆದಿಡುವುದೂ ಅಭಿವ್ಯಕ್ತಿಯೇ. ಒಂದೇ ಸನ್ನಿವೇಶವನ್ನು ಒಬ್ಬೊಬ್ಬ ವ್ಯಕ್ತಿಯೂ ಗ್ರಹಿಸುವ, ವಿಮರ್ಶಿಸುವ ರೀತಿ, ಅದರ ಆಳ, ಅಭಿವ್ಯಕ್ತಿ ಭಿನ್ನವಷ್ಟೇ. ವಿಚಾರಕ್ಕಂಟಿರುವ ಭಾವಗಳು ಕೆಲವರ ಹೃದಯದೊಳಗಿಳಿದು ಗಾಢವಾದರೆ ಇನ್ನುಳಿದವರೊಳಗೆ ವಿಚಾರವಷ್ಟೇ ಇಳಿದು ಭಾವನೆಗಳು ಬೀಡುಬಿಡದೇ ನಡೆದುಬಿಡುವವು. ಅದೇನಿದ್ದರೂ ಸ್ಮೃತಿಯಲ್ಲಿ ಎಲ್ಲ ಅನುಭವಗಳೂ ಭಾವಗಳ ಬಣ್ಣವ ಮೆತ್ತಿಕೊಂಡೇ ದಾಖಲಾಗುವವು, ಅಚ್ಚಳಿಯದ ನೆನಪುಗಳಾಗಿ ಉಳಿಯುವವೂ ಭಾವದ ರಂಗಿನಲ್ಲಿ ಮಿಂದ ಬದುಕಿನ ತುಣುಕುಗಳೇ.

ನಮ್ಮ ಸುತ್ತಲಿರೋರನ್ನು ಸಂತೋಷವಾಗಿಡುವುದು ಹೀಗೆ!

ಭಾವಿಸುವ ಶಕ್ತಿ

ಭಾವನೆಗಳನ್ನು ಸ್ವೀಕರಿಸುವ, ವ್ಯಕ್ತಪಡಿಸುವ ಪ್ರಕ್ರಿಯೆ ಬಹಳ ಶಕ್ತಿಯುತವಾದದ್ದು. ಕೆಲವೊಮ್ಮೆ ನಮಗಾದ ನೋವುಗಳು, ಆಘಾತಗಳನ್ನು ಒಪ್ಪಿಕೊಳ್ಳುವಲ್ಲಿಯೇ ನಾವು ವಿಫಲರಾಗಿಬಿಡುತ್ತೇವೆ. ನನಗೇನೂ ಅನಿಸಲಿಲ್ಲ, ಏನೂ ಆಗೇ ಇಲ್ಲ ಎಂಬ ಸಮಜಾಯಿಷಿ ಹೆಚ್ಚೆಂದರೆ ಹೊರಗಿನವರನ್ನು ಸಂತುಷ್ಟಗೊಳಿಸಬಹುದೇ ವಿನಃ ನಮ್ಮ ಅಂತರಂಗಕ್ಕೆ ಅಗತ್ಯವಿರುವ ಸಾಂತ್ವನ, ಸಮಾಧಾನಗಳನ್ನು ನೀಡಲಾರದು. ಕೋಪವಿರಲಿ, ವೇದನೆಯಿರಲಿ, ಹತಾಶೆ, ಅಪಮಾನಗಳೇ ಇರಲಿ ಇಲ್ಲವೇ ಪ್ರೀತಿ, ಸಂತಸವೇ ಆಗಿರಲಿ ನಮ್ಮ ಭಾವನೆಗಳನ್ನು ಸ್ವೀಕರಿಸಿ ನಮ್ಮೊಳಗೆ ಮಥಿಸುವುದನ್ನು ಹಾಗೂ ಅದನ್ನು ಸರಿಯಾದ ರೀತಿಯಲ್ಲಿ ತೋರ್ಪಡಿಸುವುದನ್ನು ಕಲಿತರೆ ಅದೆಷ್ಟೋ ಸಮಸ್ಯೆಗಳು ಬಗೆಹರಿದಂತೆ.

ಮಡುಗಟ್ಟಿದ ಭಾವಗಳು

ನಮ್ಮೊಳಗೆ ಇಳಿದ, ನಮ್ಮಲ್ಲೇ ಚಿಗುರಿದ ಭಾವಗಳು ನವಿರಾಗಿ ಸ್ಪರ್ಶಿಸುತ್ತವೆ, ತಳಮಳಿಸಿ ತಿಳಿ ಹೇಳುತ್ತವೆ, ಪೆಟ್ಟು ನೀಡಿ ಬುದ್ಧಿ ಹೇಳುತ್ತವೆ, ಹೊಸ ಬಂಧಗಳಿಗೆ ಆಹ್ವಾನ ನೀಡುತ್ತವೆ ಅಂತೆಯೇ ಬಂಧನವೆನಿಸಿದ ಬಂಧಗಳಿಂದ ದೂರವೇ ಉಳಿಯುವಂತೆ ಪ್ರೇರೇಪಿಸಿಬಿಡುತ್ತವೆ. ಅದೇನೇ ಇರಲಿ ಈ ಎಲ್ಲ ಸಾಧ್ಯತೆಗಳಿಗೆ ಪ್ರಜ್ಞಾಪೂರ್ವಕವಾಗಿ ತೆರೆದುಕೊಳ್ಳದಿದ್ದಲ್ಲಿ ಭಾವನೆಗಳು ಮನದಲ್ಲೇ ಜಡ್ಡು ಹಿಡಿದು ವೇದನೆಗಳಾಗಿ ಮಾರ್ಪಾಡಾಗುತ್ತವೆ. ಎಷ್ಟೋ ಬಾರಿ ಹಿಂಡಿಹಿಪ್ಪೆ ಮಾಡುವ ಮಾನಸಿಕ ಹಿಂಸೆ, ದೈಹಿಕ ನೋವು, ಅನಾರೋಗ್ಯ ಸಮಸ್ಯೆಗಳಿಗೆ ಮೂಲ ಕಾರಣ ಇಂತಹ ಬಗೆಹರಿಯದ ಭಾವನಾತ್ಮಕ ಸಮಸ್ಯೆಗಳೂ ಆಗಿರಲು ಸಾಧ್ಯ!

ಮೈ ಉರಿಸುವವರನ್ನು ಪ್ರೀತಿಸಲು ಈ ಕಾರಣ ಸಾಕು!

ಭಾವನೆ ಬಲಹೀನವಲ್ಲ!

ಭಾವಗಳ ಸಂವಹನಕ್ಕೆ ಚಿಕಿತ್ಸಕ ಗುಣವಿದೆ. ಹಂಚಿಕೊಂಡ ಬಹುಕಾಲದ ನೋವು, ಹೇಳಿಕೊಂಡ ಸಮಸ್ಯೆ, ತೆರೆದಿಟ್ಟಬಚ್ಚಿಟ್ಟವೇದನೆಗಳು ಮನವನ್ನು ಹಗುರಾಗಿಸುತ್ತವೆ, ಮನದಾಳವನ್ನು ಶುಚಿಯಾಗಿಸುತ್ತವೆ. ಭಾವಿಸುವುದು ಬಲಹೀನವಲ್ಲ. ಭಾವನೆಗಳನ್ನೇ ಅಲ್ಲಗಳೆಯುವುದು, ಭಾವಗಳನ್ನು ಸ್ವೀಕರಿಸಲಾಗದೇ ಬಲಹೀನತೆಗಳನ್ನು ಎದುರಿಸಲಾಗದೇ ಓಡುವುದು ನಿಜವಾದ ಬಲಹೀನತೆ! ಬದುಕು ಹೊಮ್ಮಿಸುವ ಭಾವನೆಗಳ ತರಂಗವನ್ನು ಅನುಭಾವಿಸುತ್ತಾ, ಇದೇಕೆ ನನ್ನನ್ನು ಮುತ್ತಿಕೊಂಡಿದೆ ಎಂದು ಪರಿಶೀಲಿಸುತ್ತಾ, ಭಾವಗಳನ್ನು ಪರಸ್ಪರ ಸಂವಹಿಸುತ್ತಾ ಅಂತೆಯೇ ನಮ್ಮವರ ಭಾವಗಳಿಗೂ ಸ್ಪಂದಿಸುತ್ತಾ ಜೀವಿಸಿದರೆ ಈ ಜೀವನ ಪಯಣ ತಂದಿಕ್ಕುವ ಭಾವನಾತ್ಮಕ ಬವಣೆಗಳಿಂದ ಮುಕ್ತರಾಗಿ ನೆಮ್ಮದಿಯ ಜೀವನ ನಮ್ಮದಾಗಿಸಿಕೊಳ್ಳಬಹುದು.