Asianet Suvarna News Asianet Suvarna News

ಉದ್ಯೋಗಸ್ಥ ದಂಪತಿಗೆ ಲಾಕ್‍ಡೌನ್ ಚಾಲೆಂಜ್ ಏನ್ ಗೊತ್ತಾ?

ಲಾಕ್‍ಡೌನ್ ಪರಿಣಾಮವಾಗಿ ಪತಿ-ಪತ್ನಿ ಇಬ್ಬರೂ ಮನೆಯಿಂದಲೇ ಆಫೀಸ್ ಕೆಲಸ ಮಾಡುತ್ತಿದ್ದಾರೆ. ಈ ಅವಧಿಯಲ್ಲಿ ಒಂದಿಷ್ಟು ಹೊಸ ಸವಾಲುಗಳು ಎದುರಾಗಿವೆ. ಅವೆಲ್ಲವನ್ನೂ ಇಬ್ಬರು ಒಟ್ಟಿಗೆ ನಿಭಾಯಿಸಿದ್ರೆ ಇಬ್ಬರ ನಡುವಿನ ಪ್ರೀತಿ, ನಂಬಿಕೆ ಮತ್ತಷ್ಟು ಹೆಚ್ಚುತ್ತೆ.

Tips to deal with husband and wife relationship during quarantine
Author
Bangalore, First Published May 1, 2020, 4:36 PM IST

ಲಾಕ್‍ಡೌನ್ ಪರಿಣಾಮವಾಗಿ ಉದ್ಯೋಗಸ್ಥ ದಂಪತಿ ಮನೆಯಲ್ಲೇ ಇರುವ ಕಾರಣ ಒಟ್ಟಿಗೆ ಕಳೆಯಲು ಸಾಕಷ್ಟು ಸಮಯ ಸಿಗುತ್ತಿದೆ. ಹಾಗಂತ ಕ್ವಾರಂಟೈನ್ ಅವಧಿ ಪತಿ-ಪತ್ನಿಗೆ ಹನಿಮೂನ್ ಅವಧಿ ಎಂದು ಭಾವಿಸಿಕೊಳ್ಳಬೇಕಿಲ್ಲ. ಇದೊಂಥರ ಹೊಸ ಬದುಕು. ಇಷ್ಟು ವರ್ಷ ಅನುಸರಿಸುತ್ತಿದ್ದ ಜೀವನಶೈಲಿಗೆ ತದ್ವಿರುದ್ಧವಾದದ್ದು. ಹೀಗಾಗಿ ಈ ಅವಧಿಯಲ್ಲಿ ಸಂಬಂಧಗಳ ನಿರ್ವಹಣೆಯಲ್ಲಿ ಅದರಲ್ಲೂ ಪತಿ-ಪತ್ನಿ ವಿಷಯಕ್ಕೆ ಬಂದ್ರೆ ಹೊಸ ಸವಾಲುಗಳಿವೆ. ಮನೆಗೆಲಸ, ಮಕ್ಕಳನ್ನು ಮ್ಯಾನೇಜ್ ಮಾಡುವ ಜೊತೆಗೆ ಆಫೀಸ್ ಕೆಲಸಗಳು..ಇವೆಲ್ಲವನ್ನೂ ಬ್ಯಾಲೆನ್ಸ್ ಮಾಡಲು ಇಬ್ಬರೂ ಒಬ್ಬರಿಗೊಬ್ಬರು ಹೆಗಲು ನೀಡಬೇಕಾದ ಅನಿವಾರ್ಯತೆ ಈಗ ಮುಂಚೆಗಿಂತ ಹೆಚ್ಚಿದೆ. ಹಾಗಾದ್ರೆ ಬದಲಾದ ಜೀವನಶೈಲಿಯಲ್ಲಿ ಪತಿ-ಪತ್ನಿ ಮುಂದಿರುವ ಸವಾಲುಗಳೇನು? ಅವುಗಳನ್ನು ನಿಭಾಯಿಸೋದು ಹೇಗೆ?

ಹೊಂದಾಣಿಕೆ ಅಸ್ತ್ರ ಬತ್ತಳಿಕೆಯಲ್ಲಿದ್ರೆ ಲೈಫ್‍ನಲ್ಲಿ ನೋ ವರಿಸ್

ಒತ್ತಡಗಳ ಬಗ್ಗೆ ಮುಕ್ತವಾಗಿ ಹಂಚಿಕೊಳ್ಳಿ

ಎಲ್ಲರ ಬದುಕಿನ ಮೇಲೂ ಕೊರೋನಾ ವೈರಸ್ ಪ್ರಭಾವ ಬೀರಿದೆ. ಈ ಮಹಾಮಾರಿಯಿಂದ ನೇರವಾಗಿ ತೊಂದರೆಗೊಳಗಾದವರಿಗಿಂತ ಪರೋಕ್ಷವಾಗಿ ಸಂಕಷ್ಟ ಎದುರಿಸಿದವರೇ ಹೆಚ್ಚು. ಕೆಲವರಿಗೆ ಮಾಡಲು ಏನೂ ಕೆಲಸವಿಲ್ಲದೆ ಭವಿಷ್ಯವೇ ಅನಿಶ್ಚಿತತೆಯಲ್ಲಿ ತೇಲಾಡುತ್ತಿದೆ. ಇನ್ನೂ ಕೆಲವರಿಗೆ ಮುಂದೆ ಉದ್ಯೋಗಕ್ಕೆ ಸಂಬಂಧಿಸಿ ತೊಂದರೆ ಎದುರಾಗಬಹುದೆಂಬ ಭಯ ಕಾಡುತ್ತಿರಬಹುದು. ಇವೆಲ್ಲವೂ ಸಹಜವಾಗಿ ಒತ್ತಡ ಸೃಷ್ಟಿಸುತ್ತವೆ. ಪತಿ-ಪತ್ನಿ ಪರಸ್ಪರ ಒಬ್ಬರ ಒತ್ತಡವನ್ನು ಇನ್ನೊಬ್ಬರು ಅರಿತುಕೊಂಡಾಗ ಮಾತ್ರ ಸಂಬಂಧದಲ್ಲಿ ಭಿನ್ನಾಭಿಪ್ರಾಯ, ಜಗಳ, ಕೋಪ ಇರುವುದಿಲ್ಲ. ಆದ್ರೆ ಒತ್ತಡವನ್ನು ಅರಿಯಲು ವಿಫಲರಾದ್ರೆ ಅದೇ ದೊಡ್ಡ ಸಂಘರ್ಷಕ್ಕೆ ಕಾರಣವಾಗಬಲ್ಲದು. ಹೀಗಾಗಿ ಇಬ್ಬರಿಗೂ ಇರುವ ಒತ್ತಡಗಳನ್ನು ಪರಸ್ಪರ ಹಂಚಿಕೊಳ್ಳಿ, ಕಷ್ಟದ ದಿನಗಳಲ್ಲಿ ಒಬ್ಬರಿಗೊಬ್ಬರು ಹೆಗಲು ನೀಡುವ ವಾಗ್ದಾನ ನೀಡಿ. ಎಲ್ಲಕ್ಕಿಂತ ಹೆಚ್ಚಾಗಿ ಈಗಿನ ಸಮಯ ಶಾಶ್ವತವಲ್ಲ, ಅದಕ್ಕೂ ಒಂದು ಕೊನೆಯಿದೆ ಎಂಬುದನ್ನು ಮನವರಿಕೆ ಮಾಡಿಸಿ.

ಸಂಬಂಧಕ್ಕೆ ಹೊಸ ಭಾಷ್ಯ ಬರೆಯಿರಿ

ಎಲ್ಲರ ದಾಂಪತ್ಯವೂ ಹೊಂದಾಣಿಕೆ, ಪ್ರೀತಿ ಹಾಗೂ ನಂಬಿಕೆಗಳನ್ನು ಒಳಗೊಂಡಿರೋದಿಲ್ಲ. ಅಂಥ ದಂಪತಿ ನಡುವೆ ಈ ಸಮಯದಲ್ಲಿ ಇನ್ನಷ್ಟು ಭಿನ್ನಾಭಿಪ್ರಾಯಗಳು, ಗಲಾಟೆಗಳು ಹುಟ್ಟಿಕೊಳ್ಳಬಹುದು. ಇಂಥ ದಂಪತಿ ಕ್ವಾರಂಟೈನ್ ಅವಧಿಯಲ್ಲಿ ಒಬ್ಬರನ್ನೊಬ್ಬರು ಅರಿಯಲು, ಕಷ್ಟ-ಸುಖಗಳಿಗೆ ಸ್ಪಂದಿಸಲು ಪ್ರಯತ್ನಿಸುವ ಮೂಲಕ ಸಂಬಂಧಕ್ಕೆ ಹೊಸ ಭಾಷ್ಯ ಬರೆಯಲು ಪ್ರಯತ್ನಿಸಬಹುದು. ಹಳೆಯ ನೆನಪುಗಳನ್ನು ಮೆಲುಕು ಹಾಕೋದು, ಇಬ್ಬರು ಜೊತೆಯಾಗಿ ಟಿವಿ ನೋಡೋದು, ಅಡುಗೆ ಮಾಡೋದು ಸೇರಿದಂತೆ ಒಂದಿಷ್ಟು ಸಮಯ ಜೊತೆಯಾಗಿ ಕಳೆಯಲು ಪ್ರಯತ್ನಿಸುವ ಮೂಲಕ ಬಿರುಕುಗಳಿಗೆ ತೇಪೆ ಹಚ್ಚಲು ಪ್ರಯತ್ನಿಸಬಹುದು.

ಡಿಸೆಂಬರ್‌ವರೆಗೆ ವೃದ್ಧರನ್ನು ಮನೆಯಿಂದ ಹೊರ ಬಿಡಬೇಡಿ!

ಖಾಸಗಿತನಕ್ಕೆ ಅಡ್ಡಿ ಪಡಿಸಬೇಡಿ

ಪ್ರತಿಯೊಬ್ಬರಿಗೂ ಒಂದಿಷ್ಟು ಖಾಸಗಿ ಸಮಯದ ಅಗತ್ಯವಿರುತ್ತೆ. ಅದನ್ನು ಗಂಡ-ಹೆಂಡ್ತಿ ಪರಸ್ಪರ ಅರಿತುಕೊಳ್ಳಬೇಕು. ಅದು ಆಫೀಸ್‍ಗೆ ಸಂಬಂಧಿಸಿದ ವಿಷಯವಾಗಿರಬಹುದು ಅಥವಾ ಖಾಸಗಿ ವಿಚಾರವೇ ಇರಬಹುದು. ಅದನ್ನು ನಿರ್ವಹಿಸಲು ಅವರಿಗೆ ಅಡ್ಡಿ ಮಾಡಬೇಡಿ. 

ಒಟ್ಟಿಗೆ ಆಫೀಸ್ ಕೆಲಸಕ್ಕೆ ಕುಳಿತುಕೊಳ್ಳಬೇಡಿ

ಒಬ್ಬರಿಗೇ ಕೂತು ಆಫೀಸ್ ಕೆಲಸ ಮಾಡೋದು ಬೋರ್ ಎನ್ನುವುದೇನು ನಿಜ. ಆದ್ರೆ ಬೋರ್ ಆಗುತ್ತೆ ಎನ್ನುವ ಕಾರಣಕ್ಕೆ ಇಬ್ಬರೂ ಒಟ್ಟಿಗೆ ಕೂತು ಕೆಲಸ ಮಾಡಬೇಡಿ. ಏಕೆಂದ್ರೆ ಫೋನ್ ಕಾಲ್, ವಿಡಿಯೋ ಕಾಲ್ ಹಾಗೂ ನಿರಂತರವಾಗಿ ಟೈಪ್ ಮಾಡುವ ಸದ್ದು ಇನ್ನೊಬ್ಬರ ಕೆಲಸಕ್ಕೆ ಭಂಗ ತರಬಹುದು. ಹೀಗಾಗಿ ಇಬ್ಬರೂ ಬೇರೆ ಬೇರೆ ರೂಮ್‍ಗಳಲ್ಲಿ ಕುಳಿತು ಕೆಲಸ ಮಾಡಿ. ಇದ್ರಿಂದ ಆಫೀಸ್‍ನಲ್ಲಿರುವಂತಹ ಭಾವನೆ ಮೂಡುತ್ತೆ. ಕೆಲಸದ ಮಧ್ಯೆ ಚಿಕ್ಕಪುಟ್ಟ ಬ್ರೇಕ್ ತೆಗೆದುಕೊಳ್ಳಿ ಹಾಗೂ ಈ ಸಮಯವನ್ನು ಇಬ್ಬರು ಒಟ್ಟಿಗೆ ಕಳೆಯಲು ಪ್ರಯತ್ನಿಸಿ.

ಗೆಳೆಯರ ರಿಯುನಿಯನ್‌ಗೆ ಅಡ್ಡಿಯಾಗದ ಲಾಕ್‌ಡೌನ್

ಸಣ್ಣಪುಟ್ಟ ಸಹಕಾರಕ್ಕೆ ಮೆಚ್ಚುಗೆ ಸೂಚಿಸಿ

ಅಡುಗೆ ಕೆಲಸದಲ್ಲಿ ನೆರವು ನೀಡಿದ ಪತಿಗೆ ಪತ್ನಿ ಒಂದು ಮೆಚ್ಚುಗೆ ನೋಟ ಬೀರಿದ್ರೆ ಆತನಿಗೆ  ಖುಷಿಯಾಗುತ್ತೆ. ಅದೇರೀತಿ ಆಫೀಸ್ ಕೆಲಸಗಳ ಹೊರೆ ಹೆಚ್ಚಿರುವಾಗ ಬಿಸಿ ಬಿಸಿ ಕಾಫಿ ಮಾಡಿ ಟೇಬಲ್ ಮೇಲಿಟ್ಟ ಪತ್ನಿಗೆ ಪತಿ ಥ್ಯಾಂಕ್ಸ್ ಹೇಳಿದ್ರೆ ಆಕೆಯ ಮೊಗದಲ್ಲೊಂದು ಮುಗುಳ್ನಗೆ ಮೂಡುತ್ತದೆ.

ವೇಳಾಪಟ್ಟಿ ಇರಲಿ

ದೈನಂದಿನ ಕೆಲಸಕ್ಕೆ ಸಂಬಂಧಿಸಿ ವೇಳಾಪಟ್ಟಿ ಸಿದ್ಧಪಡಿಸಿ, ಅದಕ್ಕನುಗುಣವಾಗಿ ಕೆಲಸ ಮಾಡಿ. ಬೆಳಗ್ಗೆ ಒಟ್ಟಿಗೆ ವ್ಯಾಯಾಮ ಮಾಡಿ. ಬ್ರೇಕ್‍ಫಾಸ್ಟ್, ಲಂಚ್ ಹಾಗೂ ಡಿನ್ನರ್ ಕೂಡ ಜೊತೆಯಾಗಿ ಮಾಡಲು ಸಾಧ್ಯವಾಗುವಂತೆ ಸಮಯ ನಿಗದಿಪಡಿಸಿಕೊಳ್ಳಿ. ವಾರದಲ್ಲಿ ಒಂದೆರಡು ಸಿನಿಮಾವನ್ನು ಜೊತೆಯಾಗಿ ನೋಡೋದಕ್ಕೂ ಪ್ಲ್ಯಾನ್ ಮಾಡಿಟ್ಟುಕೊಳ್ಳಿ. 

Follow Us:
Download App:
  • android
  • ios