ಜೀವನದ ಸ್ವಾರಸ್ಯವಿರುವುದೇ ಅಪಾಯವನ್ನು ತಪ್ಪಿಸಿಕೊಳ್ಳುವುದು ಹಾಗೂ ಎದುರಿಸುವುದರಲ್ಲಿ. ಅದು ರೋಡಿನ ಮಧ್ಯದಲ್ಲಿರುವ ಹಂಪ್‌ ಆದರೆ ನಿಧಾನವಾಗಿ ಬ್ರೇಕ್‌ ಹಾಕಿ ಹಾರಿಸಿಕೊಂಡು ಹೋಗಬಹುದು. ದೊಡ್ಡ ಬಂಡೆಯೋ, ಗುಡ್ಡ, ಬೆಟ್ಟವಾದರೆ ಅವುಗಳ ಅಕ್ಕಪಕ್ಕದಿಂದಲೇ ದಾರಿ ಮಾಡಿಕೊಂಡು ಅವುಗಳ ಇರುವಿಕೆಗೂ ಧಕ್ಕೆ ಮಾಡದಂತೆ ಮುಂದೆ ಹೋಗಬೇಕು.

ಬಿರುಕು ಬಿಟ್ಟ ಸಂಬಂಧಗಳನ್ನು ನಿಭಾಯಿಸೋದು ಹೇಗೆ? ಇಲ್ಲಿವೆ ಟಿಪ್ಸ್

ಅದು ಬಿಟ್ಟು ಹಂಪ್‌ಗಳಂತೆ ಇವುಗಳನ್ನೂ ಹಾರಿಸಿಕೊಂಡು ಹೋಗುತ್ತೇನೆ ಎಂದು ತಿಳಿಯುವುದು ತಲೆ ಗಟ್ಟಿಇದೆ ಎಂದು ಬಂಡೆಗೆ ಜಜ್ಜಿಕೊಂಡಂತೆ ಕೇವಲ ಮೂರ್ಖತನವಾಗುತ್ತದೆ. ಇಂತಹವುಗಳು ಬರೀ ತೆರೆಯ ಮೇಲಿನ ಸಿನಿಮಾಗಳಲ್ಲಷ್ಟೇ ಸಾಧ್ಯ ಹೊರತು ನಿಜ ಜೀವನದಲ್ಲಲ್ಲ ಎಂಬ ಅರಿವು ಸದಾ ಇರಲೇಬೇಕು.

ಹೀಗೆ ಜೀವನದಲ್ಲೂ ದಿನನಿತ್ಯ ಬಸ್ಸು, ಪಾರ್ಕ್, ಮಾರ್ಕೆಟ್‌, ಆಫೀಸ್‌, ಮನೆ ಸೇರಿದಂತೆ ಹಲವೆಡೆ ಅದೆಷ್ಟೋ ವ್ಯಕ್ತಿಗಳು ಎದುರಾಗುತ್ತಲೇ ಇರುತ್ತಾರೆ. ಕೆಲವರು ಕೆಲವು ಕೆಲಸಗಳ ಬಗ್ಗೆ ಅರಿವಿಲ್ಲದೇ ನಮ್ಮನ್ನು ಆಶ್ರಯಿಸುತ್ತಾರೆ. ಅಂತಹವರಿಗೆ ಆ ಕೆಲಸದ ಬಗೆಗೆ ನಮಗೆ ತಿಳಿದಷ್ಟುಅವರಿಗರ್ಥವಾಗುವಂತೆ ಹೇಳಿ ಮುನ್ನಡೆಯಬಹುದು. ಇಂತಹವರು ನಮ್ಮ ನಿರಂತರ ಕೆಲಸಕ್ಕೆ ಸ್ವಲ್ಪ ಅಡ್ಡಿ ಎನಿಸಿದರೂ ರೋಡಿನ ಹಂಪ್‌ನಂತೆ ಕೆಲ ಸೆಕೆಂಡ್‌ಗಳು ಬ್ರೇಕ್‌ ಹಾಕಿ ಸಮಾಧಾನಪಡಿಸಿ ಮುಂದೆ ಹೋಗಬಹುದು.

ಹೆಂಗೆಂಗೋ ಹಣ್ಣು ತಿಂದರೆ ಕೆಡುತ್ತೆ ಆರೋಗ್ಯ...

ಇನ್ನು ಕೆಲವರು ತಮ್ಮ ಕೆಲಸವನ್ನು ತಾವೇ ಮಾಡುವಷ್ಟುಸಾಮರ್ಥ್ಯ ಹೊಂದಿದ್ದರೂ, ತಮ್ಮ ಸಾಮರ್ಥ್ಯದ ಅರಿವಿನ ಕೊರತೆಯಿಂದ ನಮ್ಮನ್ನು ಆಶ್ರಯಿಸುತ್ತಾರೆ. ಇಂತಹವರಿಗೆ ಅವರ ಸಮಸ್ಯೆ ಪರಿಹರಿಸುವ ಬದಲು ಅವರ ಸಾಮರ್ಥ್ಯದ ಬಗೆಗೆ ಅರಿವು ಮೂಡಿಸಿ ಅವರ ಕೆಲಸವನ್ನು ಅವರೇ ಮಾಡಿಕೊಳ್ಳುವಂತೆ ಮಾಡಬೇಕು. ಇಂತಹವರಿಗೆ ತಿಳಿಹೇಳುವಾಗ ‘ಅಬ್ಬಾ ಏನು ಕೊರೀತಾನಪ್ಪ ಇವನು’ ಎಂದು ಮೂದಲಿಸಬಹುದು. ಅವರ ಮೂದಲಿಕೆಗೆ ಕಿವಿ ಕೊಡಬೇಕೆಂದೇನಿಲ್ಲ. ಅವರ ಕೆಲಸ ಅವರು ಮಾಡಿಕೊಂಡರೆ ಸಾಕು.

ಇನ್ನೊಂದಿಷ್ಟುಮಂದಿ ತಮ್ಮ ಕೆಲಸ ಕಾರ್ಯಗಳ ಅರಿವಿದ್ದೂ, ಅವುಗಳನ್ನು ಮಾಡುವ ಸಾಮರ್ಥ್ಯವಿದ್ದರೂ ಬೇಜವಾಬ್ದಾರಿಯಿಂದಲೋ, ಸೋಮಾರಿತನದಿಂದಲೋ ಅವರ ಕೆಲಸವನ್ನು ನಮ್ಮ ಮೇಲೆ ಹೇರಬಹುದು. ಕೆಲವು ಕಚೇರಿಗಳಲ್ಲಿ ಇಂತಹವರು ಕಾಣಸಿಗುತ್ತಾರೆ. ಅವರ ಜವಾಬ್ದಾರಿಯನ್ನು ಇನ್ನೊಬ್ಬರ ಮೇಲೆ ಹೇರಲು ಕಾಯುತ್ತಲೇ ಇರುತ್ತಾರೆ. ಅಕಸ್ಮಾತ್‌ ನಾವು ಮಾಡಲಾಗದಿದ್ದರೆ ನಮ್ಮನ್ನು ಹಳಿಯಲೂ ಹಿಂದೆ ಮುಂದೆ ನೋಡುವುದಿಲ್ಲ. ದಿನವೂ ಇವರ ಮುಖ ನೋಡಲೇಬೇಕಾಗಿರುವುದರಿಂದ ನಮ್ಮ ಕೆಲಸ ಕಾರ್ಯಗಳಿಗೆ ಗುಡ್ಡಬೆಟ್ಟದಂತೆಯೋ, ಬಂಡೆಯೆತೆಯೋ ಅಡ್ಡಿಯಾಗಿರುತ್ತಾರೆ.

ಇಂತಹವರನ್ನು ನಯವಿನಯದಿಂದಲೇ ಮಾತನಾಡಿಸಿ, ಅವರ ಕೆಲಸವನ್ನು ನಮ್ಮ ಮೇಲೆ ಹೇರದಂತೆ ಅವರ ಜೊತೆಯಲ್ಲಿದ್ದುಕೊಂಡೇ ನಮ್ಮ ಕೆಲಸ, ಕಾರ್ಯವನ್ನೂ ನಿರ್ವಹಿಸಿಕೊಂಡು ಮುನ್ನಡೆಯಬೇಕು. ಗುಡ್ಡ, ಬೆಟ್ಟಬಂಡೆಗಳ ಬದಿಯಿಂದಲೇ ದಾರಿ ಮಾಡಿಕೊಂಡು ಆ ಬಂಡೆ ನಮ್ಮ ಮೇಲೆ ಬೀಳದಂತೆ ಉಪಾಯವಾಗಿ ಚಲಿಸಬೇಕು.

ಮತ್ತೆ ಕೆಲವರಿರುತ್ತಾರೆ ಏನಾದರೂ ಮಾಡಿ ನಮ್ಮನ್ನು ಸಿಕ್ಕಿಸಿಹಾಕಲೇಬೇಕು, ನೆಮ್ಮದಿಗೆ ಭಂಗ ತರಲೇಬೇಕು ಎಂದು ಪಣತೊಟ್ಟವರಂತೆ ವರ್ತಿಸುತ್ತಿರುತ್ತಾರೆ. ಇಂತವರೆದುರು ಬಹಳಷ್ಟುಎಚ್ಚರಿಕೆಯಿಂದ ವರ್ತಿಸಬೇಕು. ಕೆಲವೊಮ್ಮೆ ಅವರ ಗಾಳಕ್ಕೆ ಸಿಕ್ಕಂತೆ ನಟಿಸಿ, ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿ, ಅವರನ್ನು ಸಮಾಧಾನ ಪಡಿಸಿ ಮುಂದೆ ಹೋಗಬೇಕಾಗಬಹುದು. ನಮ್ಮ ಕೆಲಸ ಸುಸೂತ್ರವಾಗಲು ಅದು ಅನಿವಾರ್ಯವೂ ಆಗಿರುತ್ತೆ. ಅಂತಹವನ್ನು ಎದುರುಹಾಕಿಕೊಳ್ಳುವ ಬದಲು ಉಪಾಯದಿಂದಲೇ ಸಾಗ ಹಾಕಿ ಮುನ್ನಡೆಯಬೇಕು. ಇಲ್ಲದಿದ್ದರೆ ಬೀದಿಗೆ ಹೋಗುವ ಮಾರಿಯನ್ನು ಮನೆಗೆ ಕರೆತಂದಂತೆ ನಮ್ಮ ಕೆಲಸ ಕಾರ್ಯಗಳಿಗೆ ಸದಾ ವಿಘ್ನವನ್ನುಂಟು ಮಾಡುತ್ತಲೇ ಇರುತ್ತಾರೆ.

ಹೀಗೆ ನಮ್ಮ ದಿನ ನಿತ್ಯದ ಜೀವನದಲ್ಲಿ ಎದುರಾಗುವ ಅಪಾಯವನ್ನು, ಅಪಾಯಕಾರಿ ವ್ಯಕ್ತಿಗಳನ್ನು ತಪ್ಪಿಸಿಕೊಂಡೋ, ಎದುರಿಸಿಯೋ ಮುನ್ನಡೆಯುವುದರಲ್ಲಿಯೇ ಜೀವನದ ಸ್ವಾರಸ್ಯ ಅಡಗಿರುತ್ತದೆಯೇ ಹೊರತು ಖಿನ್ನರಾಗಿ ಕೆಲಸದಿಂದ ದೂರ ಓಡಿಹೋಗುವುದರಲ್ಲಲ್ಲ.

- ಸುಧೀಂದ್ರ ಜಮ್ಮಟಿಗೆ