Asianet Suvarna News Asianet Suvarna News

ಅಜ್ಜ ಹೋದ ನಂತರ ಅಟ್ಟ ಸೇರಿದ ರೇಡಿಯೋ!

ಕಾಲ ಕಳೆದು ಅಜ್ಜ ತೀರಿ ಹೋದ ಮೇಲೆ ಕೆಲ ದಿನಗಳ ಕಾಲ ಅಪ್ಪ ಬೆಳಿಗ್ಗೆ ಎದ್ದು ಭಕ್ತಿಗೀತೆಗಳನ್ನು ಇಡುತ್ತಿದ್ದರು. ಈಗಂತೂ ರೇಡಿಯೋ ಕೇಳುವ ಜಮಾನವೇ ಹೊರಟು  ಹೋಗಿದೆ. ಈಗ ಏನಿದ್ದರೂ ಹೊಸ ಯುಗ ಟಿವಿ ಮತ್ತು ಮೊಬೈಲ್ ಆಳ್ವಿಕೆಯ ಯುಗ.

this is how television takes over Radio
Author
Bangalore, First Published Nov 7, 2019, 12:38 PM IST

ಸಂಜೆಯ ಹೊತ್ತು ಸುತ್ತಲೂ ಕಗ್ಗತ್ತಲು. ಮನೆ ಮಂದಿ ಎಲ್ಲಾ ಒಟ್ಟಿಗೆ ಕುಳಿತು ಟಿವಿ ನೋಡುವ ಸಮಯ. ಆದರೆ ಕರೆಂಟ್ ಇಲ್ಲ, ಮೊಬೈಲ್‌ನಲ್ಲಿ ಚಾರ್ಚ್ ಕೂಡ ಇಲ್ಲ. ಹೊರಗಡೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆ. ಆದ್ದರಿಂದ ಅಪ್ಪನೂ ಪೇಟೆ ಕಡೆಗೆ ಹೋಗದೇ ಮನೆಯಲ್ಲೇ ಇದ್ದರು. ಎಲ್ಲರಿಗೂ ತುಂಬಾ ಬೋರಾಗುತ್ತಿದ್ದರಿಂದ, ಅಪ್ಪನಿಗೆ ಅಜ್ಜನ ಜೀವಾಳವಾದ ಹಳೇ ರೇಡಿಯೋದ ನೆನಪಾಯಿತು. ಅದು ಕಿಂಚಿತ್ತು ಹಾಳಾಗಿದ್ದರಿಂದ ಅದನ್ನು ಸರಿಪಡಿಸಿ, ಆನ್ ಮಾಡಿದರು. ಅದರಲ್ಲಿ ಬರುತ್ತಿದ್ದ ಚಿತ್ರಗೀತೆಗಳನ್ನು ಕೇಳಲಾರಂಭಿಸಿದೆವು. ರೇಡಿಯೋವನ್ನು ಆಲಿಸುತ್ತಾ ಅಜ್ಜನ ನೆನಪು ಗಾಢವಾಗಿ ಕಾಡುತ್ತಿತ್ತು.

ತಪ್ಪು ನಿಂದಲ್ಲ! ಹಾಸ್ಟೆಲಿನ ಬೆಸ್ಟ್‌ ಸಿಂಗರ್‌ ಬರೆದ ಸ್ನೇಹ ನಿವೇದನೆ

ಅಜ್ಜನಿಗೂ ರೇಡಿಯೋಗೂ ಅವಿನಾಭಾವ ನಂಟು. ಒಂದು ದಿನ ಊಟವನ್ನು ತ್ಯಜಿಸಿ ನಿದ್ರಿಸುತ್ತಾರೆ ವಿನಃ ರೇಡಿಯೋ ಕೇಳಿಸಿಕೊಳ್ಳದೇ ಇರಲು ಸಾಧ್ಯವಿರಲಿಲ್ಲ. ಪ್ರತೀದಿನ ಬೆಳಿಗ್ಗೆ ರೇಡಿಯೋ ಆನ್ ಮಾಡುವುದರ  ಮೂಲಕ ಅಜ್ಜನ ದಿನಚರಿ ಆರಂಭವಾದರೆ, ರಾತ್ರಿ ಮಲಗುವ ತನಕ ಎಲ್ಲಾ ಕಾರ್ಯಕ್ರಮಗಳನ್ನು ಕೇಳಿಯೇ ಮಲಗುವ ಪದ್ಧತಿ. ಕೆಲವೊಮ್ಮೆ ಅಜ್ಜ ಮಲಗಿ ನಿದ್ರಾ ಲೋಕಕ್ಕೆ ಜಾರಿದರೂ ರೇಡಿಯೋ ಮಾತ್ರ ಆನ್ ಇರುತ್ತಿತ್ತು. ನಮ್ಮ ಮನೆಯಲ್ಲಿ ದೂರದರ್ಶನ ಬಂದಿರುವುದು ಇತ್ತೀಚೆಗೆ ಆದ್ದರಿಂದ ನಮಗೂ ರೇಡಿಯೋ ಕೇಳುವ ಹುಚ್ಚು ಇತ್ತು. ಯಾವಾಗಲೂ ಎಫ್.ಎಮ್ ಸ್ಟೇಶನ್ ಕೇಳುವ ನಾವು  ಮತ್ತು ಆಕಾಶವಾಣಿ ಕೇಳುವ ಅಜ್ಜನ ನಡುವೆ ಜಗಳ ಕಾಯಂ ಆಗಿ ಹೋಗಿತ್ತು.

ಒಂದು ಮುತ್ತಿನ ಕತೆ ; ಅರ್ಧ ಮುಗಿದ ದಾರಿ

ಪೂಜೆ ಮಾಡುವಷ್ಟು ಸಮಯವನ್ನು ಬಿಟ್ಟರೆ ಉಳಿದೆಲ್ಲಾ ಸಮಯದಲ್ಲೂ ರೇಡಿಯೋ ಕಾರ್ಯಕ್ರಮಗಳು ಅಜ್ಜನ ಮನರಂಜನೆಯ ಒಂದು ಭಾಗವಾಗಿದ್ದವು. ಊಟವಾದ ಮೇಲೆ ನನಗೆ ನೀನು ಮಜ್ಜಿಗೆ ಬಡಿಸಲೇ ಇಲ್ಲವೆಂದು ಅಜ್ಜಿಯ ಬಳಿ ಜಗಳಾಡುವಷ್ಟರ ಮಟ್ಟಿಗೆ ರೇಡಿಯೋ ಕೇಳುವುದರಲ್ಲಿ ತಲ್ಲೀನರಾಗುತ್ತಿದ್ದರು. ಅಜ್ಜನಿಗೆ ನಡೆಯಲು ಅಸಾಧ್ಯವಾದ್ದರಿಂದ ಕ್ಷೌರ ಮಾಡಿಸಿಕೊಳ್ಳಲು ಕ್ಷೌರಿಕನ ಬಳಿ ಹೊಗಲು ಸಾಧ್ಯವಾಗುತ್ತಿರಲಿಲ್ಲ, ಆದ್ದರಿಂದ ತಮ್ಮನೇ ಕ್ಷೌರ ಮಾಡುತ್ತಿದ್ದ. ತಿಂಗಳಿಡೀ ಜಗಳಾಡುವ ತಮ್ಮ ಮತ್ತು ಅಜ್ಜ ಅದೊಂದು ದಿನ ಫುಲ್ ಕಾಂಪ್ರಮೈಸ್.

ನನಗಿಷ್ಟ ಬಂದ ಸ್ಟೇಶನ್ ಕೇಳುವ ಅವಕಾಶ ನೀಡಬೇಕೆಂದು ತಮ್ಮ ಶರತ್ತು ಹಾಕಿ ಕ್ಷೌರ ಮಾಡುತ್ತಿದ್ದ. ಕಾಲಕ್ರಮೇಣ ನಮ್ಮ ಮನೆಗೆ ಟಿವಿ ಬಂತು ನಾವೆಲ್ಲಾ ಟಿವಿ ಕಡೆ ತಿರುಗಿದೆವು, ಆದರೆ ಅಜ್ಜನ ರೇಡಿಯೋ ವ್ಯಾಮೋಹ ಮಾತ್ರ ಕಡಿಮೆಯಾಗಲಿಲ್ಲ. ಹೀಗೆ ಅಜ್ಜನೊಂದಿಗೆ ರೇಡಿಯೋಗಾಗಿ ಕಿತ್ತಾಡಿದ  ಅದೆಷ್ಟೋ ನೆನಪುಗಳು ಅವಿಸ್ಮರಣೀಯ. ಕಾಲ ಕಳೆದು ಅಜ್ಜ ತೀರಿ ಹೋದ ಮೇಲೆ ಕೆಲ ದಿನಗಳ ಕಾಲ ಅಪ್ಪ ಬೆಳಿಗ್ಗೆ ಎದ್ದು ಭಕ್ತಿಗೀತೆಗಳನ್ನು ಇಡುತ್ತಿದ್ದರು. ಈಗಂತೂ ರೇಡಿಯೋ ಕೇಳುವ ಜಮಾನವೇ ಹೊರಟು ಹೋಗಿದೆ. ಈಗ ಏನಿದ್ದರೂ ಹೊಸ ಯುಗ ಟಿವಿ ಮತ್ತು ಮೊಬೈಲ್ ಆಳ್ವಿಕೆಯ ಯುಗ. ಸದ್ಯದ ಮಟ್ಟಿಗೆ ಈಗ ರೇಡಿಯೋ ಕೂಡ ಅಟ್ಟ ಸೇರಿದೆ.

ಮಾಡರ್ನ್‌ ದೇವದಾಸನ ವಿಫಲ ಪ್ರೇಮ ಪ್ರಸಂಗ!

ಸ್ವಲ್ಪ ದಿನ ಕಳೆದರೆ ಅದು ಗುಜುರಿಯವರ ಪಾಲಾಗುವ ಸಾಧ್ಯತೆಯೂ ಇದೆ. ಮುಂದೊಂದು ದಿನ ಹೀಗೆ ಕರೆಂಟ್ ಹೋದಾಗ ಜನ, ರೇಡಿಯೋ ಎಂಬ ಒಬ್ಬ ರಾಜನಿದ್ದ, ಅವನು ನಮ್ಮನ್ನೆಲ್ಲಾ ಆಳುತ್ತಿದ್ದ  ಎಂದು ಮಾತನಾಡಬಹುದು. 

Follow Us:
Download App:
  • android
  • ios