Asianet Suvarna News

ಚಿರತೆ ಮತ್ತು ಹಸು ಜೊತೆ ಜೊತೆಯಲಿ: ಗುಜರಾತ್‌ನಲ್ಲೊಂದು ಅಪರೂಪದ ಘಟನೆ

ಚಿರತೆ ಮತ್ತು ದನ ಒಂದೇ ಕಡೆ ಕುಳಿತಿರ್ತವೆ; ಆಟ ಆಡ್ತವೆ; ಮುದ್ದು ಮಾಡ್ತವೆ. ಚಿರತೆ ಹಸುವಿಗೆ ಏನೂ ಅಪಾಯ ಮಾಡೊಲ್ಲ. ಹೀಗೆಲ್ಲ ಹೇಳಿದರೆ ಸುಮ್ನೆ ಕತೆ ಅಂತ ನೀವು ಹೇಳ್ತೀರೇನೋ. ಆದ್ರೆ ಇದು ನಿಜ. ಗುಜರಾತ್‌ನ ವಡೋದರಾ ಜಿಲ್ಲೆಯ ಅಂತೋಲಿ ಎಂಬ ಹಳ್ಳಿಯಲ್ಲಿ ನಡೆದ ಘಟನೆಯಿದು.

The strange bond between leopard and cow
Author
Bengaluru, First Published May 9, 2020, 3:27 PM IST
  • Facebook
  • Twitter
  • Whatsapp

ಚಿರತೆ ಮತ್ತು ದನ ಒಂದೇ ಕಡೆ ಕುಳಿತಿರ್ತವೆ; ಆಟ ಆಡ್ತವೆ; ಮುದ್ದು ಮಾಡ್ತವೆ. ಚಿರತೆ ಹಸುವಿಗೆ ಏನೂ ಅಪಾಯ ಮಾಡೊಲ್ಲ. ಹೀಗೆಲ್ಲ ಹೇಳಿದರೆ ಸುಮ್ನೆ ಕತೆ ಅಂತ ನೀವು ಹೇಳ್ತೀರೇನೋ. ಆದ್ರೆ ಇದು ನಿಜ. ಗುಜರಾತ್‌ನ ವಡೋದರಾ ಜಿಲ್ಲೆಯ ಅಂತೋಲಿ ಎಂಬ ಹಳ್ಳಿಯಲ್ಲಿ ನಡೆದ ಘಟನೆಯಿದು.

ಆ ಹಳ್ಳಿಯ ಸುತ್ತಮುತ್ತ ಸುಮಾರು ಚಿರತೆಗಳಿದ್ದವು. ಒಂದು ಚಿರತೆಯಂತೂ ತುಂಬ ಕಾಟ ಕೊಡುತ್ತಿತ್ತು. ಊರಿನ ಜನ ಅರಣ್ಯಾಧಿಕಾರಿಗಳಿಗೆ ದೂರಿದರು. ಅವರು ಪಂಜರ ತಂದು, ಆ ಚಿರತೆಯನ್ನು ಹಿಡಿದು, ದೂರದ ಕಾಡಿಗೆ ಸಾಗಿಸಿದರು. ಅದೊಂದು ಹೆಣ್ಣು ಚಿರತೆ. ಈ ಸಂದರ್ಭದಲ್ಲಿ ಅದರ ಮರಿಯೊಂದು ಇಲ್ಲಿ ಉಳಿದು ಹೋಗಿರಬೇಕು.

ಕೆಲವು ಕಾಲದ ಬಳಿಕ ಊರಿನ ಸುತ್ತಮುತ್ತ ಮರಿ ಗಂಡು ಚಿರತೆಯೊಂದರ ಹೆಜ್ಜೆ ಗುರುತು ಕಾಣಲಾರಂಭಿಸಿದವು. ಆಶ್ಚರ್ಯ ಅಂದರೆ ಅದು ಯಾವ ಪ್ರಾಣಿಯನ್ನೂ ಹೊತ್ತೊಯ್ಯುತ್ತಿರಲಿಲ್ಲ. ಹೆಚ್ಚಾಗಿ ಒಂದೇ ದನದ ಕೊಟ್ಟಿಗೆಯ ಸುತ್ತಮುತ್ತ ಅದರ ಹೆಜ್ಜೆಗಳು ಕಂಡು ಬರುತ್ತಿದ್ದವು. ಅದ್ಯಾಕೆ ಅಂತ ರಾತ್ರಿ ಕಾದು ಕುಳಿತು ನೋಡಿದವರಿಗೆ ಅಚ್ಚರಿ ಕಾದಿತ್ತು.

ಮೊಸಳೆ, ಹೈನಾ, ಹಾವು ಸತ್ತರೆ ಅವರು ಸೆಕ್ಸ್‌ಗೆ ಹೇಳಬೇಕು ಗುಡ್‌ ಬೈ

ತ್ರಿ ಸುಮಾರು ಒಂಬತ್ತೂವರೆ, ಹತ್ತು ಗಂಟೆಯ ಅವಧಿಯಲ್ಲಿ ಈ ಚಿರತೆ ಮರಿ, ಕೊಟ್ಟಿಗೆ ಹತ್ತಿರದ ಹೊಲ ಗದ್ದೆಗಳಿಂದ ಮೆಲ್ಲಗೆ ಎಚ್ಚರಿಕೆಯಿಂದ ಬರುತ್ತಿತ್ತು. ಸುತ್ತಮುತ್ತ ಯಾರೂ ಇಲ್ಲ ಎಂಬುದನ್ನು ಖಚಿತ ಪಡಿಸಿಕೊಂಡು, ನಂತರ ಕೊಟ್ಟಿಗೆಯಲ್ಲಿದ್ದ ಒಂದು ಹಸುವಿನ ಬಳಿಗೆ ಬರುತ್ತಿತ್ತು. ಹಸು ಆತಂಕಗೊಳ್ಳುತ್ತಿರಲಿಲ್ಲ. ಬದಲಾಗಿ ಚಿರತೆಯ ಹಣೆಗೆ ಹಣೆ ತಾಗಿಸಿ ಅದನ್ನು ಸ್ವಾಗತಿಸುತ್ತಿತ್ತು. ನಂತರ ಅವು ಅಕ್ಕಪಕ್ಕದಲ್ಲಿ ಬಹಳ ಹೊತ್ತು ಸುಮ್ಮನೆ ಮಲಗಿರುತ್ತಿದ್ದವು. ಕೆಲವೊಮ್ಮೆ ಆಟವಾಡುತ್ತಿದ್ದವು. ಹಸು ಚಿರತೆಯ ಹಣೆ, ಕುತ್ತಿಗೆ ನೆಕ್ಕುತ್ತಿತ್ತು. ಆಗ ಚಿರತೆ ಹಿತವಾಗಿ ಗುರುಗುಟ್ಟುತ್ತಿತ್ತು. ಆದರೆ ಅದೇ ಕೊಟ್ಟಿಗೆಯಲ್ಲಿ ಇನ್ನೆರಡು ಎತ್ತುಗಳು ಇದ್ದವು. ಅವುಗಳಿಗೆ ಮಾತ್ರ ಚಿರತೆಯ ಆಗಮನ ಹಿತವಾಗುತ್ತಿರಲಿಲ್ಲ. ಅವು ಚಿರತೆ ಬಂದ ಮೇಲಿನಿಂದ ಹೋಗುವ ವರೆಗೂ ಅಲರ್ಟ್ ಆಗಿರುತ್ತಿದ್ದವು. ಇದು ಪ್ರತಿ ರಾತ್ರಿ ನಡೆಯುತ್ತಿತ್ತು.

 

 

ಊರಿನವರಿಗೆ ಇದು ಅಭ್ಯಾಸವಾಯಿತು. ಅರಣ್ಯ ಇಲಾಖೆಯವರಿಗೆ, ವನ್ಯಜೀವಿ ಛಾಯಾಗ್ರಾಹಕರಿಗೆ ಕೂಡ ಸುದ್ದಿ ತಿಳಿಯಿತು. ಎಲ್ಲರೂ ಅಂತೋಲಿ ಗ್ರಾಮಕ್ಕೆ ಧಾವಿಸತೊಡಗಿದರು. ರಾತ್ರಿ ಕೊಟ್ಟಿಗೆ ಪಕ್ಕದಲ್ಲಿದ್ದ ಒಂದು ಗುಡಿಸಲಿನಲ್ಲಿ ಕಾದು ಕುಳಿತು ಅದರ ಫೋಟೋ ತೆಗೆದುಕೊಂಡರು. ಕೆಲವೊಮ್ಮೆ ಅನುಮಾನ ಮೂಡಿದರೆ ಚಿರತೆ ಬರುತ್ತಲೇ ಇರಲಿಲ್ಲ. ಇದು ಹಲವು ತಿಂಗಳ ಕಾಲ ಹೀಗೇ ನಡೆಯಿತು. ಹಸು ಚಿರತೆಯ ಬೇಟೆ ಪ್ರಾಣಿಯಾಗಿದ್ದರೂ ಅದು ಯಾಕೆ ಹಸುವಿನ ಜೊತೆ ಆತ್ಮೀಯತೆ ಬೆಳೆಸಿಕೊಂಡಿತು ಅನ್ನುವುದು ಇನ್ನೂ ನಿಗೂಢವಾಗಿಯೇ ಇದೆ. ಬಹುಶಃ ಚಿರತೆ ಮರಿಯಾಗಿದ್ದಾಗ ಅದರ ತಾಯಿಯ ಸಹವಾಸ ತಪ್ಪಿರಬೇಕು. ಆಗ ಅದು ಹಸುವಿನ ಸಂಪರ್ಕಕ್ಕೆ ಹೇಗೋ ಬಂದಿರಬಹುದು. ಹಾಗೆ ಬಾಂಧವ್ಯ ಬೆಳೆದಿರಬಹುದು ಅನ್ನುತ್ತಾರೆ ತಜ್ಞರು. 

ಒಂದು ವರ್ಷದ ನಂತರ ಚಿರತೆ ಭೇಟಿ ವಿರಳವಾಯಿತು. ನಂತರ ಅದರ ಜೊತೆಗೆ ಇನ್ನೊಂದು ಹೆಣ್ಣು ಚಿರತೆ ಸೇರಿಕೊಂಡಿತು. ಅಂದಿನಿಂದ ಅದು ಹಸುವಿನ ಬಳಿಗೆ ಬರಲಿಲ್ಲ. ಆದರೆ ಆ ಕೊಟ್ಟಿಗೆಯಲ್ಲಿ ಹಸುವೂ ಸೇರಿದಂತೆ ಯಾವ ಪ್ರಾಣಿಗೂ ಮುಂದೆ ಏನೂ ಅಪಾಯವಾಗಲಿಲ್ಲ.

ಎಲ್ಲವೂ ಸರಿ ಹೊದ್ಮೇಲೆ ನಾವು ಊಹಿಸದ ಕಡೆಯಿಂದ ಚಿಗುರಲಿದೆಯಾ ಬದುಕು? 

ಇದೊಂದು ವಿಚಿತ್ರ, ಅಸಹಜ ಪ್ರಕರಣ. ಆದರೆ ಅಸಂಭಾವ್ಯ ಏನಲ್ಲ. ಕೆಲವೊಮ್ಮೆ ಋಷ್ಯಾಶ್ರಮಗಳಲ್ಲಿ ಹುಲಿ- ಹಸು ಅನ್ಯೋನ್ಯವಾಗಿದ್ದವು ಎಂಬ ಕತೆಗಳನ್ನು ನಾವು ಕೇಳಿದ್ದೇವಲ್ಲ?

ಪ್ರಸ್ತುತ ಕೆಲವು ಫೋಟೋಗ್ರಾಫರ್‌ಗಳು ಈ ಚಿರತೆ ಫೋಟೊ ಟ್ವಿಟರ್‌ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಹೀಗೆ ಅದು ವೈರಲ್ ಆಗಿದೆ.

Follow Us:
Download App:
  • android
  • ios