ಪ್ರೀತಿಗೆ ಕಣ್ಣಿಲ್ಲ ಅಂತಾರೆ, ಆದರೆ ಈಗಿನ Gen Z ಹುಡುಗಿಯರಿಗೆ ಪ್ರೀತಿಗೆ 'ವಯಸ್ಸೇ ಇಲ್ಲ' ಅನ್ನೋ ಹಾಗಾಗಿದೆ. ತಮ್ಮ ವಯಸ್ಸಿನ ಹುಡುಗರನ್ನು ಬಿಟ್ಟು, ತಮಗಿಂತ ಹಿರಿಯರಾದ ಮಿಲೇನಿಯಲ್ ಹುಡುಗರ ಜೊತೆ ಡೇಟಿಂಗ್ ಮಾಡಲು ಇವರು ಹೆಚ್ಚು ಇಷ್ಟಪಡುತ್ತಿದ್ದಾರಂತೆ.

'ವಯಸ್ಸೆಲ್ಲಾ ಯಾರು ಕೇಳ್ತಾರೆ, ಮನಸ್ಸುಗಳು ಒಂದಾದ್ರೆ ಸಾಕು ಅಲ್ವಾ?' - ತಮ್ಮ ಬಾಯ್‌ಫ್ರೆಂಡ್ ವಯಸ್ಸಿನ ಬಗ್ಗೆ ಕೇಳುವವರಿಗೆ ಇಂದಿನ Gen Z ಹುಡುಗಿಯರು ಹೀಗೆಯೇ ಉತ್ತರ ಕೊಡಬಹುದು. ಹಳೆಯ ಕಾಲದ ಪ್ರೀತಿಯ ಕಲ್ಪನೆಗಳನ್ನೆಲ್ಲಾ ಬದಿಗಿಟ್ಟು, ಡೇಟಿಂಗ್ ಜಗತ್ತಿನಲ್ಲಿ ಹೊಸದೊಂದು ಟ್ರೆಂಡ್ ಶುರುವಾಗಿದೆ. ಅದೇ 'ಏಜ್ ಗ್ಯಾಪ್ ರಿಲೇಶನ್‌ಶಿಪ್', ಅಂದರೆ ವಯಸ್ಸಿನಲ್ಲಿ ಹೆಚ್ಚು ಅಂತರವಿರುವ ಸಂಬಂಧಗಳು. ಇದು ಈಗ ಯುವಜನರ ನಡುವೆ ಹಾಟ್ ಟಾಪಿಕ್ ಆಗಿದೆ.

ವರದಿಗಳ ಪ್ರಕಾರ, Gen Z (1997-2012ರ ನಡುವೆ ಜನಿಸಿದವರು) ಹುಡುಗಿಯರು ತಮ್ಮ ಪಾರ್ಟ್ನರ್‌ಗಳಾಗಿ ಮಿಲೇನಿಯಲ್ (1981-1996ರ ನಡುವೆ ಜನಿಸಿದವರು) ಪುರುಷರನ್ನೇ ಆಯ್ಕೆ ಮಾಡಿಕೊಳ್ಳಲು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರಂತೆ. ಈ ಟ್ರೆಂಡ್ ಹಿಂದೆ ಕೇವಲ ಕುತೂಹಲ ಮಾತ್ರವಲ್ಲ, ಕೆಲವು ಸ್ಪಷ್ಟ ಕಾರಣಗಳೂ ಇವೆ ಎಂದು ವರದಿಗಳು ಹೇಳುತ್ತಿವೆ.

ಮಿಲೇನಿಯಲ್ಸ್ ಯಾಕೆ ಇಷ್ಟವಾಗ್ತಾರೆ?

Gen Z ಹುಡುಗಿಯರು ತಮಗಿಂತ ಹಿರಿಯರಾದ ಮಿಲೇನಿಯಲ್ ಪುರುಷರನ್ನು ಇಷ್ಟಪಡಲು ಮುಖ್ಯವಾಗಿ ಮೂರು ಕಾರಣಗಳನ್ನು ತಜ್ಞರು ಗುರುತಿಸಿದ್ದಾರೆ:

1. ಭಾವನಾತ್ಮಕ ಪ್ರಬುದ್ಧತೆ (Emotional Maturity):

ತಮ್ಮ ವಯಸ್ಸಿನ ಹುಡುಗರಿಗಿಂತ ಮಿಲೇನಿಯಲ್ ಪುರುಷರು ಹೆಚ್ಚು ಎಮೋಷನಲಿ ಮೆಚ್ಯೂರ್ ಆಗಿರುತ್ತಾರೆ ಎಂದು Gen Z ಹುಡುಗಿಯರು ಭಾವಿಸುತ್ತಾರೆ. ಜೀವನದ ಅನುಭವದಿಂದ ಬಂದಿರುವ ಪಕ್ವತೆ ಮತ್ತು ಸಮಸ್ಯೆಗಳನ್ನು ನಿಭಾಯಿಸುವ ಅವರ ರೀತಿ, ಈ ಹುಡುಗಿಯರಿಗೆ ಹೆಚ್ಚು ಆಕರ್ಷಕವಾಗಿ ಕಾಣಿಸುತ್ತದೆಯಂತೆ.

2. 'ರೆಡ್ ಪಿಲ್' ಸಿದ್ಧಾಂತದ ಪ್ರಭಾವ ಕಡಿಮೆ:

ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಹಬ್ಬುತ್ತಿರುವ 'ರೆಡ್ ಪಿಲ್' ಅಥವಾ ತೀವ್ರ ಪುರುಷ ಪ್ರಧಾನ ಮನಸ್ಥಿತಿಯ ಪ್ರಭಾವ ಮಿಲೇನಿಯಲ್ಸ್​ನಲ್ಲಿ ಕಡಿಮೆ ಎಂದು ಯುವತಿಯರು ಭಾವಿಸಿದ್ದಾರೆ. Gen Z ಹುಡುಗರ ನಡುವೆ ಇಂತಹ ಆನ್‌ಲೈನ್ ಐಡಿಯಾಗಳು ಹೆಚ್ಚಾಗಿದ್ದರೆ, ಮಿಲೇನಿಯಲ್ಸ್ ಹೆಚ್ಚು 'ನಾರ್ಮಲ್' ಆಗಿ ವರ್ತಿಸುತ್ತಾರೆ ಎಂದು ವರದಿಗಳು ಹೇಳುತ್ತವೆ.

3. ಆರ್ಥಿಕ ಸ್ಥಿರತೆ (Financial Stability):

ಮಿಲೇನಿಯಲ್ಸ್ ಈಗಾಗಲೇ ತಮ್ಮ ಜೀವನದಲ್ಲಿ ಒಂದು ಹಂತಕ್ಕೆ ತಲುಪಿರುತ್ತಾರೆ ಮತ್ತು ಆರ್ಥಿಕವಾಗಿ ಸೆಟಲ್ ಆಗಿರುತ್ತಾರೆ. ಕೆರಿಯರ್ ಆರಂಭದಲ್ಲಿರುವ Gen Z ಹುಡುಗಿಯರಿಗೆ, ವಯಸ್ಸಿನಲ್ಲಿ ಹಿರಿಯರಾದ ಪಾರ್ಟ್ನರ್‌ಗಳಿಂದ ಇಂತಹ ಒಂದು ಭದ್ರತೆಯ ಭಾವನೆ ಸಿಗುತ್ತದೆ.

ಸವಾಲುಗಳು ಮತ್ತು ಅಭಿಪ್ರಾಯಗಳು

ವಯಸ್ಸಿನ ಅಂತರವಿರುವ ಸಂಬಂಧಗಳು ಈಗ ಮೊದಲಿನ ಹಾಗೆ 'ಟ್ಯಾಬೂ' ಏನಲ್ಲ. ಆದರೂ ಇದರಲ್ಲಿ ಕೆಲವು ಸವಾಲುಗಳಿವೆ ಎಂದು ವರದಿ ಎಚ್ಚರಿಸಿದೆ. ಮುಖ್ಯವಾಗಿ, ಎರಡು ತಲೆಮಾರುಗಳ ನಡುವಿನ ಆಸಕ್ತಿಗಳಲ್ಲಿನ ವ್ಯತ್ಯಾಸವೇ ದೊಡ್ಡ ಸಮಸ್ಯೆ. Gen Z ಹುಡುಗಿಯರು ಹೆಚ್ಚು ಸಮಯ ಫೋನ್ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಕಳೆದರೆ, ಮಿಲೇನಿಯಲ್ಸ್​ಗೆ ಬೇರೆ ರೀತಿಯ ಹವ್ಯಾಸಗಳಲ್ಲಿ ಆಸಕ್ತಿ ಇರುತ್ತದೆ. ಇದರಿಂದ ಮಾತುಕತೆಯಲ್ಲಿ ಗೊಂದಲಗಳು ಉಂಟಾಗಬಹುದು. ಮಕ್ಕಳು ಬೇಕೇ? ಮದುವೆ ಯಾವಾಗ? ಈ ಥರದ ವಿಷಯಗಳಲ್ಲಿ ಎರಡು ತಲೆಮಾರಿನವರಿಗೂ ಬೇರೆ ಬೇರೆ ಅಭಿಪ್ರಾಯಗಳಿರುತ್ತವೆ. ಮಿಲೇನಿಯಲ್ಸ್ ಸೆಟಲ್ ಆಗಲು ಬಯಸಿದರೆ, Gen Z ಹುಡುಗಿಯರು ಕೆರಿಯರ್ ಮೇಲೆ ಗಮನ ಹರಿಸಲು ಆದ್ಯತೆ ನೀಡುತ್ತಾರೆ.

ಡೇಟಿಂಗ್ ಅನ್ನೋದು ಪ್ರತಿಯೊಬ್ಬರ ವೈಯಕ್ತಿಕ ಆಯ್ಕೆ. ಆದರೆ, ಡೇಟಿಂಗ್ ಆ್ಯಪ್​ಗಳು ನೀಡುವ ವಯಸ್ಸಿನ ಮಿತಿಯನ್ನು ನೋಡದೆ, ಭಾವನಾತ್ಮಕ ಹೊಂದಾಣಿಕೆಗೆ ಹೆಚ್ಚು ಆದ್ಯತೆ ನೀಡಬೇಕು ಎಂದು ಮಾನಸಿಕ ಆರೋಗ್ಯ ತಜ್ಞರು ಹೇಳುತ್ತಾರೆ. 'ವಯಸ್ಸು ಕೇವಲ ಒಂದು ಸಂಖ್ಯೆ ಅಷ್ಟೇ, ಆದರೆ ಪಾರ್ಟ್ನರ್‌ಗಳ ನಡುವಿನ ಗೌರವ ಮತ್ತು ಸಮಾನತೆ ಯಾವುದೇ ವಯಸ್ಸಿನ ಅಂತರಕ್ಕಿಂತ ದೊಡ್ಡದು - ಇದು ಈ ಟ್ರೆಂಡ್ ಬಗ್ಗೆ ಕೇಳಿಬರುತ್ತಿರುವ ಸಾಮಾನ್ಯ ಅಭಿಪ್ರಾಯ. 

YouTube video player