- Home
- Entertainment
- Sandalwood
- Meghana Raj's Marriage: ಮೇಘನಾ ರಾಜ್ ಮದುವೆಯ ಬಿಗ್ ಅಪ್ಡೇಟ್ ಕೊಟ್ಟ ಅಪ್ಪ ಸುಂದರ್ ರಾಜ್
Meghana Raj's Marriage: ಮೇಘನಾ ರಾಜ್ ಮದುವೆಯ ಬಿಗ್ ಅಪ್ಡೇಟ್ ಕೊಟ್ಟ ಅಪ್ಪ ಸುಂದರ್ ರಾಜ್
ನಟಿ ಮೇಘನಾ ರಾಜ್ ಅವರ ಎರಡನೇ ಮದುವೆಯ ಬಗ್ಗೆ ಅವರ ತಂದೆ ಸುಂದರ್ ರಾಜ್ ಮಾತನಾಡಿದ್ದಾರೆ. ಮಗಳ ಬದುಕಿನ ನಿರ್ಧಾರ ಅವಳದ್ದೇ ಎಂದಿರುವ ಅವರು, ಪ್ರತಿಯೊಬ್ಬರಿಗೂ ಸಹಬಾಳ್ವೆ ಅಗತ್ಯ ಎಂದು ಹೇಳಿದ್ದಾರೆ. ಮದುವೆಯ ಬಗ್ಗೆ ಅವರು ಹೇಳಿದ್ದೇನು?

ಮೇಘನಾ ರಾಜ್ ನೋವಿನ ಜೀವನ
ನಟಿ ಮೇಘನಾ ರಾಜ್ ಸದ್ಯ ಮಗನ ಆರೈಕೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಜೊತೆಗೆ ಚಿತ್ರದಲ್ಲಿಯೂ ಆ್ಯಕ್ಟೀವ್ ಆಗಿದ್ದಾರೆ. ಮಗ ರಾಯನ್ ಸರ್ಜಾ ಹೊಟ್ಟೆಯಲ್ಲಿ ಇರುವಾಗಲೇ ಮೇಘನಾ ಅವರು ಪತಿ ಚಿರು ಸರ್ಜಾ ಅವರನ್ನು ಕಳೆದುಕೊಂಡಿರುವುದು ಎಲ್ಲರಿಗೂ ತಿಳಿದದ್ದೇ. ಅವರು ಅಗಲಿದ ಮೇಲೆ ಕುಟುಂಬಕ್ಕೆ ಬೆಳಕಾಗಿ ಬಂದಿದ್ದು ರಾಯನ್. ಮೇಘನಾ ಹೊಟ್ಟೆಯಲ್ಲಿ ಚಿರು ಹುಟ್ಟಿ ಬರಬೇಕು ಎಂಬ ಅಸಂಖ್ಯ ಅಭಿಮಾನಿಗಳ ಆಸೆ ಈಡೇರಿತ್ತು. 2020ರ ಜೂನ್ನಲ್ಲಿ ಚಿರು ಅವರು ನಿಧನರಾದರು. ಅಂದಿನಿಂದ ಇಂದಿನವರೆಗೂ ಮೇಘನಾ ರಾಜ್ ಇನ್ನೊಂದು ಮದುವೆಯಾಗಬೇಕು ಎನ್ನುವುದು ಅವರ ಬಹುತೇಕ ಅಭಿಮಾನಿಗಳ ಮಾತು.
ಅಪ್ಪ ಹೇಳಿದ್ದೇನು?
ಚಿರು ನಿಧನರಾಗಿ ಆರು ವರ್ಷವಾಗುತ್ತಾ ಬಂದರೂ, ಮೇಘನಾ ಇದುವರೆಗೆ ತಮ್ಮ ಮತ್ತೊಂದು ಮದುವೆಯ ಬಗ್ಗೆ ಏನೂ ಹೇಳಿರಲಿಲ್ಲ. ಇದೀಗ ಅವರ ತಂದೆ, ಸ್ಯಾಂಡಲ್ವುಡ್ ಹಿರಿಯ ನಟ ಸುಂದರ್ ರಾಜ್ ಅವರು ಮಗಳು ಮದುವೆಯ ಬಗ್ಗೆ ಮಾತನಾಡಿದ್ದಾರೆ. ಆಯ್ಕೆ ಅವರದ್ದು. ಬದುಕು ನಡೆಸುವವರು ಅವರದ್ದು. ಆದ್ದರಿಂದ ಆಕೆಯ ನಿರ್ಧಾರವೇ ನಮ್ಮ ನಿರ್ಧಾರ ಎಂದಿದ್ದಾರೆ. ಸಮಾಜಕ್ಕೆ ನಾವು ಮಾದರಿಯಾಗಿ ಬದುಕಬೇಕು. ಯಾರೂ ನಮ್ಮ ಬಗ್ಗೆ ತಪ್ಪಾಗಿ ಮಾತನಾಡಬಾರದು. ಇದರ ನಡುವೆಯೇ ಸುಂದರ ಬದುಕಿನ ಆಯ್ಕೆಯನ್ನೂ ಮಾಡಿಕೊಳ್ಳಬೇಕು ಎಂದಿದ್ದಾರೆ.
ಸೂರ್ಯ-ಚಂದ್ರರ ಸಂಬಂಧ
ಪ್ರತಿಯೊಬ್ಬರಿಗೂ ಗಂಡಿಗೂ ಒಬ್ಬ ಹೆಣ್ಣು ಬೇಕು, ಹಾಗೆಯೇ ಹೆಣ್ಣಿಗೆ ಒಬ್ಬ ಗಂಡು ಬೇಕು. ಹಾಗೆಂದು ಇದು ದೈಹಿಕ ಸಂಬಂಧಕ್ಕೆ ಸೀಮಿತವಲ್ಲ. ಗಂಡ ಮತ್ತು ಹೆಣ್ಣಿನದ್ದು ಮಾನಸಿಕ ದೇವಸ್ಥಾನದ ಸಂಬಂಧವದು. ಆ ಒಂದು ಭಾವನೆಯಲ್ಲಿ ಬದುಕಬೇಕು. ಸಹಬಾಳ್ವೆ ಇರಬೇಕು. ಕೈಹಿಡಿದು ನಡೆಯಬೇಕು. ಗಂಡು ಮತ್ತು ಹೆಣ್ಣು ಎನ್ನುವುದು ದೈವ ನಿಯಮ, ಅದು ಪ್ರಕೃತಿ ನಿಯಮ. ಯಾರು ಒಬ್ಬರ ಮನಸ್ಸನ್ನು ನೋಯಿಸದೇ ಬದುಕಬೇಕು ಎನ್ನುವ ಮೂಲಕ ತಮ್ಮ ಮಗಳ ಬಾಳಿನಲ್ಲಿ ಮತ್ತೊಂದು ಜೀವ ಬರಲಿ ಎನ್ನುವ ಆಶಯವನ್ನು ಅಪ್ಪನಾಗಿ ಸುಂದರರಾಜ್ ಬಯಸುತ್ತಿದ್ದಾರೆ.
ನಟಿ ಏನು ಹೇಳಿದ್ರು?
ತಮ್ಮ ಮದುವೆ ಕುರಿತು ಹರಡಿದ್ದ ಗಾಸಿಪ್ಗಳಿಗೆ ನೋವಿನಿಂದ ಮೇಘನಾ ರಾಜ್ (Meghana Raj's 2nd marriage) ಈ ಹಿಂದೆ ಉತ್ತರ ಕೊಟ್ಟಿದ್ದು ಇದೆ. ಪ್ರೀತಿ ಕಂಡುಕೊಳ್ಳುವ ಬಗ್ಗೆ ಸದ್ಯ ಏನೂ ಮನಸ್ಸಿನಲ್ಲಿ ಇಲ್ಲ. ಬಹುಶಃ ಅದು ಮುಂದೆ ಬಂದರೂ ಬರಬಹುದು ಎಂದಿದ್ದರು. ಈ ಬಗ್ಗೆ ತುಂಬಾ ಮಂದಿ ನನ್ನ ಬಳಿ ಮಾತನಾಡುತ್ತಾರೆ. ಮತ್ತೊಂದು ಮದುವೆಯ ವಿಷಯದ ಬಗ್ಗೆ ಪ್ರಸ್ತಾಪ ಮಾಡುತ್ತಾರೆ. ಆದರೆ ಸದ್ಯ ಇನ್ನೊಂದು ಲವ್ ಬಗ್ಗೆ ನಾನು ಮಾನಸಿಕವಾಗಿ ರೆಡಿಯಾಗಿಲ್ಲ. ಹಾಗೆಂದು ಅದು ಆಗುವುದೇ ಇಲ್ಲವೆಂದೇನಲ್ಲ. ಮುಂದೊಮ್ಮೆ ಏನಾದರೂ ಈ ರೀತಿ ಚಾನ್ಸ್ ಬಂದರೆ, ಆ ಕ್ಷಣದಲ್ಲಿ ಏನು ನಿರ್ಧಾರ ಮಾಡಬೇಕು ಎನ್ನುವುದನ್ನು ಯೋಚನೆ ಮಾಡುತ್ತೇನೆ ಎನ್ನುವ ಮೂಲಕ, ಇನ್ನೊಂದು ಮದುವೆಯಾಗುವ ಸೂಚನೆ ಕೊಟ್ಟಿದ್ದಾರೆ.
ಅಪ್ಪನ ಬಗ್ಗೆ ಮಗ
“ನನ್ನ ರಾಯನ್‌ಗೆ ಅಪ್ಪ ಇದ್ದಾರೆ, ರಾಯನ್‌ಗೆ ಚಿರಂಜೀವಿ ಸರ್ಜಾನೇ ಅಪ್ಪ. ನನಗೆ ಎರಡನೇ ಮದುವೆ ಬಗ್ಗೆ ಯೋಚನೆ ಬಂದಿಲ್ಲ ಅಂತ ಹೇಳಿದ್ದರೆ ಅದು ಸುಳ್ಳು ಆಗುವುದು. ನನ್ನ ಮಗನನ್ನು ನೋಡಿದಾಗ, ಅವನು ಪ್ರತೀ ದಿನವೂ ಅಪ್ಪನ ಬಗ್ಗೆ ಮಾತನಾಡುತ್ತಾನೆ. ಅಪ್ಪ ಅಂದ್ರೆ ಚಿರು ಅಂತ ಅವನಿಗೆ ಗೊತ್ತಿದೆ. ಚಿರು ಹಾಡುಗಳನ್ನು ನೋಡುತ್ತಾನೆ. ಆದರೆ ಫಿಸಿಕಲ್ ಆಗಿ ಚಿರಂಜೀವಿ ಸರ್ಜಾರನ್ನು, ಮಗ ನೋಡಿಲ್ಲ. ಆದ್ರೆ ಅಪ್ಪ ಎನ್ನೋರು ಇದ್ದಾರೆ ಅನ್ನೋದು ಅವನಿಗೆ ಗೊತ್ತಿದೆ. ಆದರೆ ರಾಯನ್‌ಗೆ ಫಿಸಿಕಲ್ ಆಗಿ ತಂದೆ ಫಿಗರ್ ಇದ್ದರೆ ಚೆನ್ನ ಅಂತ ಕೆಲ ಬಾರಿ ಅನಿಸುತ್ತದೆ” ಎಂದಿದ್ದರು.
ಸದ್ಯ ಐಡಿಯಾ ಇಲ್ಲ
“ನನ್ನ ಜೀವನಕ್ಕೆ ಸಂಗಾತಿಯಾಗಿ ಯಾರು ಬರಬಹುದು ಅಂತ ಐಡಿಯಾ ಇಲ್ಲ. ನನ್ನ ಲೈಫ್‌ನಲ್ಲಿ ಯಾರು ಬರಬೇಕು ಅಂತ, ಯಾರು ಬಂದ್ರೆ ಸರಿ ಅಂತ ಚಿರುಗೆ ಅನಿಸಿದ್ರೆ, ಅದು ನನ್ನ ಜೀವನಕ್ಕೆ ಒಳ್ಳೆಯ ನಿರ್ಧಾರ ಅಂತ ಅನಿಸಿದ್ರೆ ಅದು ನಿಜವಾಗಿಯೂ ಆಗುತ್ತದೆ” ಎಂದು ಅವರು ಹೇಳಿದ್ದರು. ಅಂದಹಾಗೆ ನಟಿ ಪ್ರಮೀಳಾ ಜೋಶಾಯ್, ಸುಂದರ್ ರಾಜ್ ದಂಪತಿ ಕೂಡ ಮಗಳಿಗೆ ಇನ್ನೊಂದು ಮದುವೆ ಆಗಬೇಕು, ಅವಳಿಗೆ ಸಂಗಾತಿ ಬೇಕು ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

