ಇಂದು ವಿಶ್ವ ಬೈಸಿಕಲ್‌ ದಿನ. ಸೈಕಲ್‌ ಅಂದ್ರೆ ಅದೇನೋ ರೋಮಾಂಚನ. ನಮ್ಮ ಮೊದಮೊದಲ ವಾಹನವೇ ಬೈಸಿಕಲ್‌. ತುಳಿಯುತ್ತಾ ಹೋಗುತ್ತಿದ್ದರೆ ನಾನೇ ರಾಜ/ರಾಣಿ ಎಂಬ ಭಾವನೆ ಕೊಟ್ಟ ನಮ್ಮದೇ ವಾಹನ. 

ಮೊದಲ ಬಾರಿ ಸೈಕಲ್‌ ಕಲಿಯೋಕೆ ಹೋಗಿ ಪೆಡಲ್‌ ತುಳಿಯೋಕೆ ಆಗದೆ ಭಡಾಲ್ಲನೆ ಬಿದ್ದದ್ದು. ಸೈಕಲ್ ಹೇಳಿಕೊಡೋ ಅಣ್ಣ ಪೆಡಲ್‌ ತುಳಿಯೋಕೆ ಕಲಿಸಿ, ಇಳಿಜಾರಿನಲ್ಲಿ ಬ್ರೇಕ್‌ ಹಿಡಕೋಬೇಕು ಅಂತ ಕಲಿಸಿಕೊಡದೆ ಸೈಕಲ್‌ ಭಯಂಕರ ವೇಗದಲ್ಲಿ ಹೋಗಿ ಟೆಲಿಫೋನ್‌ ಕಂಬಕ್ಕೆ ಗುದ್ದಿ ಮುಖ ಮೂಗು ಚಪ್ಪಟೆಯಾಗಿದ್ದು, ಇತ್ಯಾದಿ. ಸೈಕಲ್‌ ಅಂದ್ರೆ ರೊಮ್ಯಾಂಟಿಕ್‌ ನೆನಪುಗಳು ಕಡಿಮೆ ಏನಲ್ಲ. ಹಳ್ಳೀಯ ಹುಡುಗಿಯರು ಸ್ವಲ್ಪ ಶ್ರೀಮಂತರಾದ್ರೆ ಬೈಸಿಕಲ್‌ ಮೇಲೆ ಬರೋರು. ಬಡ ಮನೆಯ ಹುಡುಗರು ಆ ಸೈಕಲ್‌ ನಾನು ತುಳಿದ್ರೆ ಹ್ಯಾಗಿರುತ್ತೆ, ನನ್ನ ಎರಡೂ ಕೈಗಳ ನಡುವೆ ಆ ಹುಡುಗಿ ಕೂತಿದ್ರೆ ಎಷ್ಟು ಚೆನ್ನಾಗಿರುತ್ತಲ್ಲ ಅಂತೆಲ್ಲ ಕನಸು ಕಾಣೋರು.


ಎಷ್ಟೊಂದು ರೋಮಾಂಚನದ ಕನಸುಗಳು ಮತ್ತು ಕತೆಗಳು ಈ ಸೈಕಲ್‌ ಬಗ್ಗೆ. ಸೈಕಲ್ ತುಳೀತಾ ಪೇಪರ್‌ ಹಾಕಿ ಕಾಸು ಕೂಡಿಸಿ ಡಿಗ್ರಿ ಮುಗಿಸಿದವರು, ಕೆಲಸ ಹಿಡಿದವರು, ನಂತರ ಬೈಕ್ ಏರಿ ಹೋದರೂ ಸೈಕಲ್‌ ಮರೆಯುವುದಿಲ್ಲ. ಸೈಕಲ್‌ ಮೇಲೆ ಜೋಡಿಯಾಗಿ ಕುಕ್ಕರಹಳ್ಳಿ ಕೆರೆ ರಂಗನತಿಟ್ಟು ಸುತ್ತಾಡಿದೋರು ತಮ್ಮ ಮದುವೆಯ ಐವತ್ತನೇ ವಾರ್ಷಿಕೋತ್ಸವ ಮುಗಿಸಿದರೂ ಆ ಸೈಕಲ್ಲನ್ನೊಮ್ಮೆ ಮುಟ್ಟಿ ರೋಮಾಂಚನ ಅನುಭವಿಸದೆ ಇರಲಾರರು. ಹಳ್ಳಿಯ ಕೆಲವು ಶಿಕ್ಷಕರು ತಮ್ಮಿಂದ ಹತ್ತಾರು ಕಿಲೋಮೀಟರ್‌ ದೂರದ ಶಾಲೆಗೆ ಪ್ರತಿದಿನ ಹೋಗಿ ಬರೋಕೆ ಜೀವನಪೂರ್ತಿ ಸಹಾಯ ಮಾಡಿದ ಹಳೇ ಹರ್ಕ್ಯುಲಿಸ್‌ ಸೈಕಲ್ಲನ್ನು ಈಗಲೂ ಆಯಿಲ್‌ ಹಾಕಿ ಉಜ್ಜಿ ಚೆನ್ನಾಗಿ ಮಿರಮಿರ ಮಿಂಚುವಂತೆ ಇಟ್ಟಿರುವರು. ಮಗಳು ಶಾಲೆಗೆ ಹೋಗಿ ಬರುತ್ತಿದ್ದ ಸೈಕಲ್ಲನ್ನು ಹಳ್ಳಿಯ ವೃದ್ಧ ತಂದೆ ತಾಯಿ ಈಗಲೂ ಮಗಳು ಅಮೆರಿಕದಲ್ಲಿ ಸ್ಕೀಯಿಂಗ್‌ ಮಾಡುತ್ತಿರುವ ಸಂದರ್ಭದಲ್ಲೂ ಆಗಾಗ ಒರೆಸಿ ಕ್ಲೀನಾಗಿ ಇಟ್ಟಿದ್ದಾರೆ. ಮೊಮ್ಮಗ ಊರಿಗೆ ಬಂದಾಗ ಈ ಸೈಕಲ್ಲನ್ನು ಏರಿ ಜಾಲಿ ರೈಡ್‌ ಹೋದಾನು ಎಂಬುದು ಅವರ ಕನಸು.

ತಮ್ಮ ಡಿವೋರ್ಸ್‌ ಬಗ್ಗೆಯ ವದಂತಿಗೆ ಅಭಿಷೇಕ್‌ ಬಚ್ಚನ್‌ ಹೇಳಿದ್ದೇನು?


ಹೀಗೆಲ್ಲ ನೂರಾರು ಕನಸು ಕತೆ ಕಾತರ ಚಡಪಡಿಕೆ ಪ್ರೇಮ ವಿರಹಗಳಿಗೆ ಕಾರಣವಾಗಿರುವ ಬೈಸಿಕಲ್‌ ಎಂಬ ವಸ್ತು ಯಃಕಶ್ಚಿತ್ ಒಂದು ಸಾಧನವಲ್ಲ. ಅದರಲ್ಲಿ ಒಂದಷ್ಟು ಮಂದಿಯ ಜೀವವೇ ಇದೆ. ಬೇಕಿದ್ದರೆ ಸೈಕಲ್‌ ಮೇಲೆ ಪುಟ್ಟ ಬುಟ್ಟಿಯನ್ನಿಟ್ಟುಕೊಂಡು ಮಲ್ಲಿಗೆ ಕನಕಾಂಬರ ಮೊಲ್ಲೆ ಜಾಜಿ ಹೂಗಳನ್ನು ಮಾರುವ ಹೂವಪ್ಪನನ್ನು ಕೇಳಬಹುದು. ಒಂದಿಷ್ಟು ಸೀಬೆ ನೇರಳೆ ಹಣ್ಣುಗಳನ್ನು ಅದರಲ್ಲಿಟ್ಟುಕೊಂಡು ಮಾರಿ ಜೀವನ ಮಾಡುವ ಹಣ್ಣಪ್ಪನನ್ನು ಕೇಳಬಹುದು. ಮನೆಮನೆ ತಿರುಗಿ ಪೇಪರ್‌ ಹಾಕುವ, ಹಾಲು ಹಂಚುವ ಹಾಲೇಶನನ್ನು ವಿಚಾರಿಸಬಹುದು. ಹಳ್ಳಿಗಳಲ್ಲಿ ಸರಕಾರ ಕೊಡಿಸಿದ ಸೈಕಲ್ಲನ್ನೇರಿ ಶಾಲೆಗೆ ಹೋಗುವ ಹೆಣ್ಣುಮಕ್ಕಳನ್ನು ನೋಡಬಹುದು.

ಖರ್ಚುವೆಚ್ಚ ತಗ್ಗಿಸಿದ ವಿವಾಹದ ಹೊಸ ಟ್ರೆಂಡ್


ಸೈಕಲ್‌ ಎಂಬ ಪುಟ್ಟ ಸರಳ ಜೀವನಾವಶ್ಯಕ ವಸ್ತುವನ್ನು ಆಧರಿಸಿ ಎಷ್ಟೊಂದು ಸಿನೆಮಾಗಳು ಬಂದಿವೆ. ಬೈಸಿಕಲ್‌ ಥೀವ್ಸ್ ಎಂಬ ಇಟಾಲಿಯನ್‌ ಸಿನೆಮಾ, ವಿಶ್ವದ ಶ್ರೇಷ್ಟ ಸಿನಿಮಾಗಳಲ್ಲಿ ಒಂದು ಅಂತ ಪರಿಗಣಿತವಾಗಿದೆ. ಅದರಲ್ಲಿ ದಿನದ ತುತ್ತು ದುಡಿಯಲು ಸೈಕಲ್‌ ಅಗತ್ಯವಾಗಿರುವ ಅಪ್ಪ ಮತ್ತು ಅಪ್ಪನ ಸೈಕಲನ್ನು ಜೀವದಂತೆ ಪ್ರೀತಿಸುವ ಮಗ, ಸೈಕಲನ್ನು ಯಾರೋ ಕಳ್ಳ ಕದ್ದಾಗ ಚಡಪಡಿಸುವ ರೀತಿ, ಕಣ್ಣಲ್ಲಿ ನೀರು ತರಿಸುತ್ತದೆ. ಬಾಲಿವುಡ್‌ನ ಶೋಲೆ ಸಿನಿಮಾದಿಂದ ಇಂದಿನ ಜಬ್‌ ವಿ ಮೆಟ್, ಬರ್ಫಿ ಸಿನೆಮಾಗಳ ವರೆಗೆ ಹೀರೋ ಮತ್ತು ಹೀರೋಯಿನ್‌ ಸೈಕಲ್‌ ಮೇಲೆ ಪ್ರಯಾಣ ಹೋಗುತ್ತಾ ತಮ್ಮ ಜೀವನದ ಮಧುರ ಕ್ಷಣಗಳನ್ನು ಕಂಡುಕೊಳ್ಳುತ್ತಾರೆ. ನಮ್ಮದೇ ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಕಾದಂಬರಿಯನ್ನು ನೋಡಿದರೆ, ಕಳೆದ ಶತಮಾನದ ಮೊದಲ ದಶಕಗಳಲ್ಲಿ ನಮ್ಮೂರಿಗೆ ಮೊದಲ ಬಾರಿಗೆ ಬೈಸಿಕಲ್‌ ಬಂದಾಗ ಹಳ್ಳಿಯ ಜನ ಅದನ್ನು ಹೇಗೆ ಭಯ ಬೆರಗಿನಿಂದ ಸ್ವೀಕರಿಸಿದರು ಅಂತ ಚಿತ್ರಣ ಇದೆ. ಮಲೆನಾಡಿನ ಜನ ಬೈಸಿಕಲ್ಲನ್ನು "ಬೀಸೆಕಲ್ಲು' ಅಂತ ಕರೆಯುತ್ತಿದ್ದರಂತೆ!

ನೀವು ಅವರಿಗಿಂತ ಬೆಟರ್ ಆಗಬೇಕಾ? ಇದು ಮೈಂಡ್ ಗೇಮ್!


ಅವೆಲ್ಲ ಸದ್ಯಕ್ಕೆ ಹಾಗಿರಲಿ. ಈಗಿನ ಪರಿಸ್ಥಿತಿ ನೋಡೋಣ. ಜಗತ್ತು ಮತ್ತೆ ಬೈಸಿಕಲ್‌ ಕಡೆಗೆ ಆಸೆಯಿಂದ ನೋಡುತ್ತಿದೆ. ಬೈಕು ಕಾರುಗಳಿಗೆ ಹಾಕುವ ಪೆಟ್ರೋಲು ದುಬಾರಿಯಾಗಿದೆ. ಒಬ್ಬ ದುಡಿದದ್ದು ಕುಟುಂಬದ ಊಟಕ್ಕೆ ಸಾಕಾಗದು ಎಂಬ ಪರಿಸ್ಥಿತಿ ಇದೆ. ಕೊರೊನಾ ವೈರಸ್‌ ಬಂದು, ಸಾರ್ವಜನಿಕ ಸಾರಿಗೆಯಲ್ಲಿ ಹೋಗಲು ಜನ ಹಿಂದೇಟು ಹಾಕುತ್ತಿದ್ದಾರೆ. ಎಲ್ಲರೂ ವೈಯಕ್ತಿಕ ಸಾರಿಗೆಯ ಕಡೆಗೆ ಗಮನ ಹರಿಸಿದ್ದಾರೆ. ಆದರೆ ಎಲ್ಲರ ಬಳಿಯೂ ಬೈಕು ಕಾರು ಇಲ್ಲವಲ್ಲ. ಆದ್ದರಿಂಧ ಕೆಳವರ್ಗದವರು, ಮಧ್ಯಮ ವರ್ಗದವರು ಸೈಕಲ್‌ನಲ್ಲಿ ಆಫೀಸ್‌ಗೆ ಹೋಗಿ ಬರಬಹುದು ಎಂದು ಯೋಚಿಸುತ್ತಿದ್ದಾರೆ. ಪ್ರತಿ ತಿಂಗಳು ಲಕ್ಷಾಂತರ ಗಳಿಸುವ ಟೆಕ್ಕಿಗಳು ಕೂಡ, ಆರೋಗ್ಯದ ಕಾರಣದಿಂದ ಸೈಕಲ್‌ ತುಳಿಯುತ್ತಿದ್ದಾರೆ. ಪ್ರತಿದಿನ ಸೈಕಲ್‌ನಲ್ಲಿ ಕಚೇರಿಗೆ ಹೋಗಿ ಬರುವ ಸಾವಿರಾರು ಟೆಕಿಗಳನ್ನು ಬೆಂಗಳೂರಿನಲ್ಲಿ ಕಾಣಬಹುದು. ಪೆಟ್ರೋಲಿಗೆ ದುಡ್ಡು ಹಾಕಿ ಹಣವೂ ದಂಡ, ಅದರಿಂದ ಹೊರಬರುವ ಹೊಗೆಯಿಂದ ಆರೋಗ್ಯವೂ ಹಾಳು, ಬದಲಾಗಿ ಮುಂಜಾನೆ ಮತ್ತು ಸಂಜೆ ಸೈಕಲ್‌ ತುಳಿದರೆ ಆರೋಗ್ಯವೂ ಚೆನ್ನಾಗಿರುತ್ತದೆ ಎಂಬುದು ಎಲ್ಲರ ಕಾಳಜಿ. ಈ ಕಾಳಜಿ ಎಲ್ಲರಿಗೂ ಹಬ್ಬಿದಾಗ ನಮ್ಮ ವಾತಾವರಣ ಮತ್ತಷ್ಟು ಆರೋಗ್ಯಕಾರಿಯಾಗಬಹುದು, ನಮ್ಮ ದೇಹಗಳೂ ಆರೋಗ್ಯವತ ಆಗಬಹುದು.