ಹಾಸ್ಟೆಲ್‌ನಲ್ಲೂ ಇರ್ತಾರೆ ಈ 7 ವಿಧದ ಹುಡುಗಿಯರು!
ಬಿಗ್ ಬಾಸ್ ಮನೆಯಂತೆ ಕಾಣುವ ಲೇಡಿಸ್ ಹಾಸ್ಟೆಲ್ ಅಳಿಸುತ್ತದೆ, ನಗಿಸುತ್ತದೆ, ಖುಷಿ ಕೊಡುತ್ತದೆ, ಬೆಚ್ಚಿಬೀಳಿಸುತ್ತದೆ, ಕಟ್ಟಕಡೆಗೆ ನೆನಪಿನ ಮೂಟೆಯನ್ನು ಹೆಗಲ ಮೇಲಿಟ್ಟು ಕಳುಹಿಸುತ್ತದೆ. ಆ ಮೂಟೆ ಜೀವನ ಪೂರ್ತಿ ಜೊತೆ ಇರುತ್ತದೆ. ಅದಕ್ಕೆ ಪುರಾವೆ ಹಾಸ್ಟೆಲ್ ಅನ್ನು ತುಂಬಾ ಇಷ್ಟ ಪಡುವ ಕಾಲೇಜು ಹುಡುಗಿ ಬರೆದ ಗಂಭೀರವಾದ ತಮಾಷೆ ಬರಹ.
ದುರ್ಗಾ ಭಟ್ ಬೊಳ್ಳುರೋಡಿ
ತೃತೀಯ ಬಿಎ, ಆಳ್ವಾಸ್ ಕಾಲೇಜು, ಮೂಡಿಬಿದಿರೆ
ಸಾಮಾನ್ಯವಾಗಿ ಹಾಸ್ಟೆಲ್ ಎಂದೊಡನೆ ಮೂಗು ಮುರಿಯುವ ಜನರೆಡೆಯಲ್ಲಿ ನಾನೊಬ್ಬಳು ವಿಚಿತ್ರ ಹಾಸ್ಟೆಲ್ ಪ್ರೇಮಿಯಿದ್ದೆ..! ನನಗಂತು ಬಹಳ ವರ್ಷಗಳಿಂದ ಹಾಸ್ಟೆಲ್‌ನಲ್ಲಿದ್ದುಕೊಂಡು ಶಿಕ್ಷಣ ಪಡೆಯಬೇಕೆಂಬ ಬಹುದೊಡ್ಡ ಕನಸಿತ್ತು. ಬಹುಶಃ ಸಿನಿಮಾಗಳಲ್ಲಿ ಬರುವ ಹಾಸ್ಟೆಲ್ ಜೀವನ ನೋಡಿಯೋ ಅಥವಾ ಹಾಸ್ಟೆಲಿನಿಂದ ಮನೆಗೆ ಬರುವಾಗ ಸಿಗುತ್ತಿದ್ದ ವಿಶೇಷ ಆತಿಥ್ಯವೋ ಏನೋ ಇದೊಂದು ಕನಸಾಗಿಯೇ ಇತ್ತು.
ಕೋಪದಿಂದ ಸಿಡುಕಿ, ಮತ್ತೊಂದು ಕ್ಷಣ ಅಮ್ಮಾ ಅಂದರೆ ಮುಗುಳ್ನಗುತ್ತಾಳೆ!
ಮಧ್ಯರಾತ್ರಿ ನಗುವವರು
ಅನಿವಾರ್ಯ ಕಾರಣಗಳಿಂದ ಪದವಿ ಶಿಕ್ಷಣದ ಕೊನೆಯ ವರ್ಷ ಹಾಸ್ಟೆಲ್ ಸೇರಬೇಕಾದ ಸೌಭಾಗ್ಯ ನನ್ನದಾಯಿತು. ಹಾಸ್ಟೆಲಿನಲ್ಲಿ ವಿಚಿತ್ರ ಜೀವಿಗಳಿರುವುದು ಕೇಳಲ್ಪಟ್ಟಿದ್ದೆ. ಆದರೆ ಅಲ್ಲಿ ಹೋಗಿಯೇ ಅವುಗಳ ಪರಿಚಯ ಸಾಧ್ಯವಾದದ್ದು. ಹಾಸ್ಟೆಲಿನಲ್ಲಿನ ಮೊದಲ ದಿನ ಬಹಳ ಉತ್ಸುಕಳಾಗಿದ್ದ ನನಗೆ ಆ ರಾತ್ರಿ ಸ್ಥಳ ಬದಲಾದ್ದರಿಂದ ಕೊಂಚ ನಿದ್ದೆ ಬರುವುದು ತಡವಾಯಿತು. ಆಚೀಚೆ ಹೊರಳುತ್ತಿದ್ದ ನನಗೆ ಪಕ್ಕದ ಹಾಸಿಗೆಯಿಂದ ಹಿ..ಹಿ..ಹಿ.. ಎನ್ನುವ ನಗು ಮಾತ್ರ ಕೇಳಿಸುತ್ತಿತ್ತು. ಅದೇನೆಂದು ಸೂಕ್ಷ್ಮವಾಗಿ ಗಮನಿಸಿದಾಗ ಆ ನಡು ರಾತ್ರಿಯಲ್ಲಿ ನನ್ನ ರೂಂಮೇಟ್ ಗಳಿಬ್ಬರು ಮೊಬೈಲ್‌ನೊಳಗೆ ಮುಳುಗಿ ಹೋಗಿದ್ದು ಕಂಡು ಬಂತು. ಆ ರಾತ್ರಿ ಅವರ ನಗೆ ಸದ್ದಿಗೆ ನಿದ್ದೆಯೆ ಇಲ್ಲದಾಯಿತು.
ಹೊತ್ತಲ್ಲದ ಹೊತ್ತಲ್ಲಿ ಬಟ್ಟೆ ಒಗೆಯುವವರು
ಇದಾಗಿ ಒಂದು ದಿನ ರಾತ್ರಿ ನೀರು ಕುಡಿಯಲೆಂದು ಎದ್ದು ವಾಟರ್ ಫಿಲ್ಟರ್ ಕಡೆಗೆ ಹೋದಾಗ ಸಮಯ ಸುಮಾರು ಎರಡು ಗಂಟೆಯಷ್ಟಿರಬಹುದು, ನಿಶ್ಶಬ್ದವಾಗಿದ್ದ ಅಲ್ಲಿ ಅದೇನೋ ಪಟಪಟ ಸದ್ದಾಯಿತೆಂದು ನೋಡಿದರೆ ಯಾರೋ ಒಬ್ಬಳು ಆ ಮಧ್ಯರಾತ್ರಿಯಲ್ಲಿ ಬಟ್ಟೆ ಒಗೆಯುತ್ತಿದ್ದಳು. ಇದರಿಂದ ನಾನು ತಿಳಿದುಕೊಂಡದ್ದು ಏನೆಂದರೆ ಹಾಸ್ಟೆಲ್ ಜೀವಿಗಳೆಲ್ಲಾ ನಿಶಾಚಾರಿಗಳು. ರಾತ್ರಿಯೆಲ್ಲಾ ಎಚ್ಚರವಿದ್ದು ಹಗಲು ಗಡದ್ದಾಗಿ ಗೊರಕೆ ಹೊಡೆಯುವವರು.
ಅಪ್ಪ ಕೊಟ್ಟಎರಡು ರುಪಾಯಿ ಬದುಕು ಬೆಳಗಿಸಿತು!
ಇಸ್ತ್ರಿ ಪೆಟ್ಟಿಗೆಯಲ್ಲಿ ಮ್ಯಾಗಿ ಬೇಯಿಸುವವರು
ಕಾಲೇಜು ಶುರುವಾಗುವುದು ಒಂಭತ್ತು ಗಂಟೆಗಾದರೂ ಇಲ್ಲಿಯವರು ಎದ್ದೇಳುವುದು ಮಾತ್ರ ಎಂಟೂವರೆಗೆ. ಇನ್ನು ಕೆಲವರಂತು ಎಂಟು ಐವತ್ತಕ್ಕೆದ್ದು ಬರುವವರೂ ಇದ್ದಾರೆ. ಇವರಿಗೆ ಊಟ ತಿಂಡಿಯ ಅಗತ್ಯವೇ ಇಲ್ಲ. ಇನ್ನು ಸಂಜೆ ಕಾಲೇಜಿನಿಂದ ಬಂದು ಸಮವಸತ್ರ ಬಿಚ್ಚುವ ಶಕ್ತಿ ಇಲ್ಲದೆ ಬೆಡ್ ದಾಸರಾಗುತ್ತಾರೆ. ಆದ್ರೂ ಕೆಲವು ಎಕ್ಸೆಪ್ಶನಲ್ ಕೇಸುಗಳು ಇವೆ. ರಾತ್ರಿ ಏಳು ಗಂಟೆಗೆ ಹಸಿವಾಗದಿದ್ದರೂ ಊಟ ಮಾಡಲೇ ಬೇಕಾದ ಅನಿವಾರ್ಯತೆ. ಇದಾಗಿ ಹತ್ತು ಮೂವತ್ತರ ತನಕ ಓದುವ ಸಮಯ(ಸ್ಟಡಿ ಅವರ್ಸ್). ಎಷ್ಟೇ ಸಹಿಸಿದರೂ ಮತ್ತೆ ಹತ್ತೂವರೆಗೆ ಹಸಿವೋ ಹಸಿವು. ಈ ಹಸಿವಿನ ಸಮಯದಲ್ಲೇ ಬೆಂಕಿನ ಇಲ್ಲದೆ ಅಡಿಗೆ ಮಾಡುವ ಖತರ್ನಾಕ್ ಆಲೋಚನೆಗಳು ಹೊಳೆಯುವುದು. ಇಸ್ತ್ರಿ ಪೆಟ್ಟಿಗೆಯಲ್ಲಿ ಮಾಡುವ ಮ್ಯಾಗಿ, ಸುಟ್ಟು ಕರಕಲಾದ ಚಪಾತಿಯೇ ಮೃಷ್ಟಾನ್ನಗಳು. ಆದಿತ್ಯವಾರ ಬೆಳಿಗ್ಗೆ ಮಾತ್ರ ಸೂರ್ಯ ವಂಶದವರು ಬೇಗನೆ ಎದ್ದು ಮಸಾಲದೋಸೆ ತಿನ್ನುತ್ತಾರೆ. ಏಕೆಂದರೆ ಸ್ವಲ್ಪ ವೆರೈಟಿಯಾಗಿ ಸಿಗುತಿದ್ದ ಬ್ರೇಕ್‌ಫಾಸ್ಟ್ ಅದೊಂದು ಮಾತ್ರ. ದೋಸೆ ತಿಂದು ಮತ್ತೆ ಚಂದ್ರ ಬರುವ ತನಕ ಮಲಗುವವರು ಇದ್ದರು.
ಹಾರರ್ ಸಿನಿಮಾ ನೋಡಿ ಹೆದರುವವರು
ಶನಿವಾರ ರಾತ್ರಿಯಾಯಿತೆಂದರೆ ಕೆಲವರಿಗೆ ಹಾರರ್ ಮೂವಿ ನೋಡುವ ಕೌತುಕ. ಇವರು ಸಿನಿಮಾ ನೋಡಲು ಕುಳಿತಾಗ ಮಾಡುವ ಶಬ್ದಗಳಿಂದ ಪಕ್ಕದ ರೂಮಿನವರಿಗೆ ಜಾಗರಣೆ ಗ್ಯಾರಂಟಿ. ಹಾಸ್ಟೆಲಿನಲ್ಲಿ ನನ್ನದೇ ಕ್ಲಾಸ್‌ಮೇಟ್ ಒಬ್ಬಳು ರಾತ್ರಿ ಸ್ಟಡಿ ಹವರ್‌ನಲ್ಲಿ ಅವಳ ಕೋಣೆಯೊಂದನ್ನು ಬಿಟ್ಟು ಮತ್ತೆಲ್ಲರ ಕೋಣೆಗೆ ಹೋಗಿ ಸರ್ವೆ ಮಾಡುವುದೇ ಅವಳ ಕೆಲಸ. ಎಕ್ಸಾಮ್ ಟೈಮಿನಲ್ಲಂತು ಪ್ರತಿಯೊಂದು ರೂಮಿಗೆ ಅವಳ ವಿಸಿಟ್ ಇದ್ದದ್ದೆ.
ಅವಳೇಕೆ ಎಲ್ಲವನ್ನೂ ಮರೆತಂತೆ ನಟಿಸುತ್ತಿದ್ದಾಳೆ?
ಹೆದರಿಸುವ ಪ್ರೇಮಿಗಳು
ಹಾಸ್ಟೆಲ್ ಮೆಟ್ಟಿಲುಗಳು ಪ್ರೇಮಿಗಳ ಸಂಗಮ ಸ್ಥಳವೆಂದರೆ ತಪ್ಪಾಗದು. ರಾತ್ರಿ ಹತ್ತೂವರೆಗೆ ಬೆಲ್ ಹೊಡೆದ ಕೂಡಲೇ ಪ್ರಿಯತಮೆಯರೆಲ್ಲಾ ಮೆಟ್ಟಿಲುಗಳ ತುದಿಯನ್ನು ಆಕ್ರಮಿಸಿಕೊಂಡಿರುತ್ತಾರೆ. ಪ್ರಿಯಕರನಿಗೂ ಕೇಳಿಸದಷ್ಟು ಮೆಲುದನಿಯಲ್ಲಿ ಇಯರ್ ಫೋನ್ ಕಿವಿಯೊಳಗೆ ತೂರಿಸಿಕೊಂಡು ನುಲಿಯುತ್ತಿರುತ್ತಾರೆ. ಅವರ ಸಲ್ಲಾಪಗಳಿಗೆ ಕಿವಿಕೊಟ್ಟರೆ ನಮ್ಮ ಕಿವಿಗಳಿಗಂತು ಬಹಳ ಇಂಪೂ. ಇವರು ತಮ್ಮದೇ ಲೋಕದಲ್ಲಿ ಮುಳುಗಿರುವಾಗ ಅವರ ಬದಿಯಲ್ಲಿ ಹೆಗ್ಗಣಗಳು ಓಡಿದರೂ ಅದರ ಪರಿವೇ ಇರುವುದಿಲ್ಲ ಇವರಿಗೆ. ಸ್ಟಡಿ ಅವರ್‌ನಲ್ಲಿ ಮೊಬೈಲ್ ಬಳಕೆ ನಿಷೇಧವಿದ್ದರೂ ವಾರ್ಡನ್ ಕಣ್ಣು ತಪ್ಪಿಸಿ ಒತ್ತುವ ನಿಸ್ಸೀಮರಿಗೇನು ಕಡಿಮೆ ಇರಲಿಲ್ಲ. ಕೆಲವರಂತೂ ಪುಸ್ತಕದ ಎಡೆಯಲ್ಲಿ, ಪ್ಯಾಂಟಿನ ಜೇಬಿನಲ್ಲಿ, ತಲೆದಿಂಬಿನ ಅಡಿಯಲ್ಲಿಟ್ಟು ಬಳಸಿದರೆ ಇನ್ನೂ ಕೆಲವರು ಕಪಾಟಿನೊಳಗೆ ತೂರಿಕೊಂಡು ಅದರೋಳಗೆ ಲೀಲಾಜಾಲವಾಗಿ ಬಳಸುತ್ತಿದ್ದರು. ಇವರು ಮೂರಡಿ ಏರುವ ಸಾಹಸ ಮಾಡಿದರೆ ವಾರ್ಡನ್ನುಗಳು ಎಷ್ಟೇ ಆದರು ನಮಗಿಂತ ಐದಾರು ವರ್ಷ ಮೊದಲು ಹುಟ್ಟಿದವರಲ್ಲವೇ ಹಾಗಾಗಿ ಕಳ್ಳರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬೀಳುತ್ತಿದ್ದರು. ಮೊಬೈಲ್ ಗಿಂತಲೂ ಹೆಚ್ಚು ಸೀಝ್ ಆಗುತಿದ್ದ ವಸ್ತುಗಳೆಂದರೆ ಕನ್ನಡಿ, ಬಾಚಣಿಕೆ, ಲಿಪ್ಸ್ಟಿಕ್, ನೈಲ್ ಪಾಲಿಶ್ ಇದಲ್ಲದೇ ಮನುಷ್ಯ ಗಾತ್ರದ ಟೆಡ್ಡಿ ಬೇರ್ ಗೊಂಬೆಗಳು.
ಫೇಸ್ ವಾಶಲ್ಲೇ ಸ್ನಾನ ಮುಗಿಸುವವರು
ಹಾಸ್ಟೆಲ್ ಸೇರಿದ ಕೆಲವರಂತೂ ಎಷ್ಟು ಸೋಮಾರಿಗಳೆಂದರೆ ವಾರಗಟ್ಟಲೇ ಒಗೆಯುವ ಬಟ್ಟೆಗಳ ಸ್ಟಾಕ್ ಮಾಡಿ ಹಾಕಲು ಬಟ್ಟೆ ಇಲ್ಲದಾಗ ಲಾಂಡ್ರಿ ಅಂಗಡಿಯವರಂತೆ ಎಲ್ಲವನ್ನೂ ಒಮ್ಮೆಲೇ ಒಗೆಯಲು ಪ್ರಾರಂಭಿಸುತ್ತಾರೆ. ಇನ್ನೂ ಕೆಲವರೂ ಬೆಡ್ಡಿಂದ ಏಳಲು ಮನಸ್ಸಾಗದೆ ಸ್ನಾನ ಮಾಡದೇ ಫೇಸ್ ವಾಶ್ ದಾಸರಾಗಿರುತ್ತಾರೆ. ಇಲ್ಲಿರುವ ಕೆಲವರಿಗಂತು ಫೊಟೋ ಕ್ರೇಝ್ ಸಿಕ್ಕಾಪಟ್ಟೆ. ತಮ್ಮಲ್ಲಿರುವ ಚಂದ ಬಟ್ಟೆಯನ್ನು ಧರಿಸಿ ಅಂದದ ಫೋಟೋ ಕ್ಲಿಕ್ಕಿಸಿ ಜಾಲತಾಣಗಳಲ್ಲಿ ಪೋಸ್ಟ್ ಮಾಡುವುದರಲ್ಲಿ ಇವರ ದಿನ ಕಳೆಯುತ್ತದೆ.
ರೂಲ್ಸ್ ಬ್ರೇಕ್ ಮಾಡುವುದೇ ನಮ್ಮ ಕೆಲಸ!
ಫೀಲಿಂಗಲ್ಲೇ ಇದ್ದು ಗಾಬರಿಗೊಳಿಸುವವರು
ಇವರ ನಡುವೆ ಕೆಲವು ಭಗ್ನಪ್ರೇಮಿಗಳು ದುಃಖದ ಸ್ಟೇಟಸ್‌ಗಳನ್ನು ಅಪ್ಲೋಡ್ ಮಾಡಿಕೊಂಡು ಸದಾ ಅಳುಮುಂಜಿಗಳಂತೆ ಇರುತ್ತಾರೆ. ಏನೂ ಕೆಲಸವೇ ಇಲ್ಲದಿದ್ದಾಗ ಕ್ರಶ್‌ಗಳ ಕುರಿತ ಗಾಸಿಪ್‌ಗಳು, ಕೊರಿಯನ್ ಸೀರೀಸ್ ಕಥೆಗಳು, ಓಡಿ ಹೋದವರ ಪ್ರಸಂಗಳ ಹರಟೆ ಕಾರ್ಯಕ್ರಮಗಳು ನೆರವೇರುತ್ತವೆ. ಹಾಸ್ಟೆಲಿನಿಂದ ಮನೆಗೆ ಹೋಗಬೇಕಾದರೆ ಪಡುವ ಪರಿಪಾಟಗಳು ಹೇಳತೀರದು. ಕ್ಲಾಸ್ ಅಡ್ವೈಸರ್, ಡೀನ್‌ಗಳ ಕಣ್ಣು ಕೆಂಪಾಗಿ, ಎಸ್‌ಡಬ್ಲ್ಯುಗಳ ಕೋಪಕ್ಕೆ ಬಲಿಪಶುಗಳಾಗಿ ಲೀವ್ ಅಪ್ಲಿಕೇಶನ್ಗ್ ಸೈನ್ ಸಿಕ್ಕಿದರೆ ನಿಟ್ಟುಸಿರು ಬಿಟ್ಟಂತೆ. ಇಷ್ಟೆಲ್ಲಾ ಆಗಿ ಮನೆಗೆ ಹೋಗಿ ಬಂದವರ ರೂಮಿಗೆ ತಕ್ಷಣ ಒಂದು ದಂಡೇ ಧಾವಿಸಿ ಹೋಗುತ್ತದೆ.
ಕಾರಣ ಮನೆಯಿಂದ ತಂದ ತಿನಿಸುಗಳನ್ನು ತಿನ್ನಲು. ಇವೆಲ್ಲದರ ಮಧ್ಯೆ ನನಗಿಷ್ಟವಾದದ್ದು ಸಂಜೆ ಕಾಫಿ ಕಪ್ ಹಿಡಿದು ಮುಳುಗುವ ಸೂರ್ಯನನ್ನು ನೋಡುತ್ತಾ ಜಂಜಾಟಗಳನ್ನು ಮರೆಯುವುದು. ಹೀಗೇ ಮನೆಯ ವಾತಾವರಣ ಇಲ್ಲದಿದ್ದರೂ ಹಾಸ್ಟೆಲಿನಲ್ಲಿ ಕಠಿಣ ಶಿಸ್ತುಪಾಲನೆಯೆಡೆಯಲ್ಲಿ ಕೆಲವೊಂದು ಹಾಸ್ಯ ಘಟನೆಗಳು ಮೋಜಿನ ದಿನಗಳು ಮಾತ್ರ ಶಾಶ್ವತ ನೆನಪುಗಳು. ಅಕ್ಕರೆ ತೋರುವ ವಾರ್ಡನ್ನುಗಳು, ಮಾತಿಗೆ ಮುಂಚೆ ಹಾರಾಡುವ ವಾರ್ಡನ್ನುಗಳು, ಸೀಕ್ರೆಟ್ ಬರ್ತಡೇ ಪಾರ್ಟಿಗಳು, ಹಬ್ಬದಲ್ಲಿ ಮಾಡುತ್ತಿದ್ದ ದೇವರ ಪೂಜೆಗಳು, ಹಾರರ್ ಮೂವಿ ನೋಡಿದ ಖುಷಿಗಳು, ರೂಮಿನ ತುಂಬಾ ಸೊಳ್ಳೆ ಜಿರಳೆಗಳ ಗಾನ ಮಾಧುರ್ಯ, ಚಿಲ್ಲರೆ ಬಜೆಟ್ ತಿಂಡಿಗಳು, ಬಕೆಟ್ ಹಿಡಿದು ಬಾತ್‌ರೂಮ್ ಮುಂದೆ ಲೈನ್ ನಿಂತ ಕಷ್ಟಗಳು, ರೂಂಮೇಟ್ ಜೊತೆಗೆ ಕಿತ್ತಾಡಿದ ದಿನಗಳು, ಹೊದಿಕೆಯೊಳಗಿನ ಕಣ್ಣೀರು, ಎಲ್ಲರೂ ಸೇರಿ ಆಟಗಳನ್ನಾಡಿ ಪಾಠಗಳನ್ನು ಓದಿದ ಸುಂದರ ಘಳಿಗೆಗಳು ಮತ್ತೆ ಸಿಗಲಾರದು. ಏನೇ ಆದರೂ ಹಾಸ್ಟೆಲ್ ಲೈಫ್ ಸುಂದರ ನೆನಪುಗಳೊಂದಿಗೆ ಜೀವನ ಕೌಶಲ್ಯಗಳನ್ನು ಬೆಳೆಸುತ್ತದೆ.