ಹಿರಿಯ ನಟ ಅಶೋಕ್ ಹೆಗಡೆ ಅವರ ದಾಂಪತ್ಯ ಜೀವನ ಮತ್ತು ಮಕ್ಕಳ ಬಗ್ಗೆ ಅನುಭವಿಸಿದ ನೋವಿನ ಕಥೆ ಇದು. ಪತ್ನಿಯ ಅನಾರೋಗ್ಯದ ಕಾರಣದಿಂದ ಇಬ್ಬರು ಮಕ್ಕಳನ್ನು ಕಳೆದುಕೊಂಡ ದುರಂತವನ್ನು ಅವರು ಹಂಚಿಕೊಂಡಿದ್ದಾರೆ.
'ಮಕ್ಕಳಿರಲವ್ವಾ ಮನೆತುಂಬ' ಎನ್ನುವ ಮಾತಿದೆ. ಆದರೆ ಅದೆಷ್ಟೋ ಕುಟುಂಬಗಳಲ್ಲಿ ಒಂದು ಮಗುವನ್ನು ಕೂಡ ದೇವರು ಕರುಣಿಸುವುದೇ ಇಲ್ಲ. ಕೆಲವರಿಗೆ ಮಕ್ಕಳನ್ನು ಕೊಟ್ಟು ದೇವರು ಕಿತ್ತುಕೊಂಡು ಬಿಡುತ್ತಾನೆ. ಅಪ್ಪ-ಅಮ್ಮನಾಗುವ ಭಾಗ್ಯ ಅವರು ಪಡೆದು ಬಂದಿರುವುದಿಲ್ಲ. ಇದಕ್ಕೆ ಕಾರಣಗಳು ಏನೇ ಇರಬಹುದು. ಆದರೆ ಮದುವೆಯಾಗದಿದ್ದರೆ, ಇನ್ನೂ ಮದುವೆಯಾಗಿಲ್ವಾ ಎನ್ನುವವರು, ಮದುವೆಯಾದ ಮೇಲೆ ಇನ್ನೂ ಮಕ್ಕಳಾಗಿಲ್ವಾ ಎಂದು ಚುಚ್ಚುವವರಿಗೇನೂ ಕಮ್ಮಿ ಇಲ್ಲ. ಮಕ್ಕಳು ಏಕೆ ಆಗಿಲ್ಲ? ಇಷ್ಟು ವರ್ಷವಾಯ್ತಲ್ಲ ಮದುವೆಯಾಗಿ ಎಂದೆಲ್ಲಾ ಕೊಂಕು ಮಾತನಾಡುವವರಿಗೆ ಆ ಹೃದಯದಲ್ಲಿ ಅದೆಷ್ಟು ನೋವು ಅಡಗಿರುತ್ತದೆಯೋ ಗೊತ್ತೇ ಆಗುವುದಿಲ್ಲ. ಕೆಲವರು ಉದ್ದೇಶಪೂರ್ವಕವಾಗಿ ಮಕ್ಕಳನ್ನು ಮಾಡಿಕೊಳ್ಳುವುದಿಲ್ಲ ಎನ್ನುವುದು ಬೇರೆಯ ಮಾತು. ಆದರೆ ಅವೆಷ್ಟೋ ಕುಟುಂಬದಲ್ಲಿ ಆ ಭಾಗ್ಯ ಅವರ ಪಾಲಿಗೆ ಬಂದಿರುವುದಿಲ್ಲ, ಆದರೆ ಚುಚ್ಚಿ ಮಾತನಾಡಿ ಮನಸ್ಸನ್ನು ನೋಯಿಸುವ ವಿಕೃತ ಮನಸ್ಸುಗಳೂ ಒಂದೆಡೆಯಿದ್ದರೆ, ಮದುವೆಯಾದವರಿಗೆ ಏನೂ ಅರಿಯದೇ, ಮಕ್ಕಳೆಷ್ಟು ಎಂದು ಕೆಲವರು ಸಹಜವಾಗಿ ಕೇಳುವುದೂ ಇದೆ.
ಮಕ್ಕಳಿಲ್ವಾ ಅಥವಾ ಎಷ್ಟು ಮಕ್ಕಳು ಎಂದು ಯಾವುದೇ ಕಾರಣಕ್ಕೆ ಕೇಳಿರಲಿ, ಅಂಥವರಿಗೆ ಹಿರಿಯ ನಟ ಅಶೋಕ್ ಹೆಗಡೆ ಅವರ ಮಾತು ಒಂದೇ. ಅದು ನಮ್ಮಿಬ್ಬರ ಮಕ್ಕಳೂ ಹರಿಶ್ಚಂದ್ರ ಘಾಟ್ನ ಸ್ಮಶಾನದಲ್ಲಿ ಮಲಗಿದ್ದಾರೆ ಎನ್ನುವುದು! ಅದೆಷ್ಟು ನೋವು, ಅದೆಷ್ಟು ವೇತನೆ ಆ ಮಾತುಗಳಲ್ಲಿ! ತಮ್ಮ ಮಕ್ಕಳ ಬಗ್ಗೆ ನಟ ನೀಡಿರುವ ಸಂದರ್ಶನ ಇದೀಗ ಮತ್ತೆ ವೈರಲ್ ಆಗುತ್ತಿದೆ.
ಅಂದಹಾಗೆ ನಟ ಅಶೋಕ್ ಹೆಗಡೆ ಸಿನಿಮಾ ವೀಕ್ಷಕರಿಗೆ ತುಂಬಾ ಚಿರಪರಿಚಿತ. ಅದರಲ್ಲಿಯೂ ಈಗ ಅವರು ಸೀರಿಯಲ್ಗಳಲ್ಲಿ ನಟಿಸುವ ಮೂಲಕ ಮನೆ ಮಾತಾದವರು. ʻಕುಲವಧುʼ ಧಾರಾವಾಹಿಯಲ್ಲಿ ಅಪ್ಪನ ಪಾತ್ರದಲ್ಲಿ ನಟಿಸಿದ್ದ ಅಶೋಕ್ ಅವರಿಗೆ ಆ ಪಾತ್ರ ದೊಡ್ಡ ಖ್ಯಾತಿ ತಂದು ಕೊಟ್ಟಿತು. ಮಾಯಾಮೃಗ' ಧಾರಾವಾಹಿಯಿಂದ ಆರಂಭಿಸಿ 'ಕುಲವಧು', 'ಸೇವಂತಿ', 'ಮುದ್ದು ಲಕ್ಷ್ಮಿ', 'ಕುಂಕುಮ ಭಾಗ್ಯ', 'ಮಂಗಳ ಗೌರಿ' ಮತ್ತು 'ದೃಷ್ಟಿಬೊಟ್ಟು' ಮುಂತಾದ ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. 'ಮಫ್ತಿ', 'ಓಲ್ಡ್ ಮಾಂಕ್', 'ಕಪಾಲ', 'ಮತ್ಸ್ಯಗಂಧ' ಮತ್ತು 'ಧರ್ಮಂ' ಸೇರಿದಂತೆ ಹಲವು ಚಿತ್ರಗಳಲ್ಲಿಯೂ ನಟಿಸಿದ್ದಾರೆ. ನಿರ್ದೇಶನದ ಅನುಭವ ಹೊಂದಿರುವ ಇವರು, ಪತ್ನಿ ಅನ್ಷು ಹೆಗ್ಡೆ ಅವರೊಂದಿಗೆ ಸೇರಿ ಯೂಟ್ಯೂಬ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವ್ಲಾಗ್ಗಳು ಹಾಗೂ ಕುಟುಂಬ ಸಂಬಂಧಿತ ಕಂಟೆಂಟ್ ಕ್ರಿಯೇಟರ್ ಆಗಿಯೂ ಕೆಲಸ ಮಾಡುತ್ತಿದ್ದಾರೆ.
ದಾಂಪತ್ಯ ಜೀವನ- ನೋವಿನ ಪಯಣ
ಇವರು 1995ರಲ್ಲಿ ಅನ್ಷು ಹೆಗಡೆ ಅವರನ್ನು ವಿವಾಹವಾಗಿದ್ದಾರೆ. ಸಹಾಯಕ ನಿರ್ದೇಶಕರಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಅಶೋಕ್ ಹೆಗಡೆ, ಹಲವಾರು ಏಳು-ಬೀಳುಗಳನ್ನು ಕಂಡವರು. ಅದರಲ್ಲಿಯೂ ಮಕ್ಕಳ ವಿಷಯದಲ್ಲಿ ದಂಪತಿ ನೋವನ್ನೇ ಉಂಡವರು. ಮಕ್ಕಳ ಬಗ್ಗೆ ಕೇಳಿದ ಪ್ರಶ್ನೆಗೆ ನಟ, ನನಗೆ ಇಬ್ಬರು ಮಕ್ಕಳಿದ್ದರು. ಆದರೆ ಪತ್ನಿ ಗರ್ಭಿಣಿ ಇರುವಾಗ ಶುಗರ್ ಬಂದುಬಿಟ್ಟಿತ್ತು. ಎರಡೂ ಪ್ರೆಗ್ನೆನ್ಸಿಯಲ್ಲಿ ಅದೇ ರೀತಿ ಆಯಿತು. ಎರಡೂ ಮಕ್ಕಳು ತೀರಿಕೊಂಡರು. ಆಕೆಗೆ ಶುಗರ್ ಆರಂಭವಾಗಿದ್ದರಿಂದ, ಮಗುವಿಗೆ ಅಟ್ಯಾಕ್ ಆಗಿಹೋಯಿತು. ಈಗ ಇಬ್ಬರು ಮಕ್ಕಳು ಹರಿಶ್ಚಂದ್ರ ಘಾಟಲ್ಲಿ ಮಕ್ಕಳು ಮಲಗಿದ್ದಾರೆ. ಮಕ್ಕಳನ್ನು ಉಳಿಸಿಕೊಳ್ಳೋಕೆ ತುಂಬಾ ಪ್ರಯತ್ನ ಪಟ್ಟೆ ಆದ್ರೆ ಆಗಲಿಲ್ಲ. ಆ ಮಕ್ಕಳು ಏನು ತಪ್ಪು ಮಾಡಿಲ್ಲ, ಅದು ನರಕಕ್ಕಂತೂ ಹೋಗಲ್ಲ ಸ್ವರ್ಗಕ್ಕೆ ಹೋಗುತ್ತವೆ ಎಂದಿದ್ದಾರೆ. ಎರಡೂ ಮಕ್ಕಳು ಹೀಗೆಯೇ ಆಗಿದ್ದಕ್ಕೆ, ಮತ್ತೆ ಮಗು ಮಾಡಿಕೊಳ್ಳುವ ಧೈರ್ಯ ಬರಲಿಲ್ಲ. ನಾನು ನಿನಗೆ, ನೀನು ನನಗೆ ಎಂದು ಒಬ್ಬರನ್ನೊಬ್ಬರು ಅರಿತು ಬಾಳುತ್ತಿದ್ದೇವೆ ಎಂದು ನೋವಿನ ಪಯಣದ ಕುರಿತು ನಟ ಹೇಳಿಕೊಂಡಿದ್ದಾರೆ.
ಊಟಕ್ಕೂ ದುಡ್ಡು ಇರುತ್ತಿರಲಿಲ್ಲ
ಮದುವೆಯಾದ ಸಂದರ್ಭದಲ್ಲಿ ನಾನು ಅಸಿಸ್ಟೆಂಟ್ ಡೈರೆಕ್ಟರ್ ಆಗಿದ್ದೆ. ಊಟಕ್ಕೆ ದುಡ್ಡು ಇರದ ಟೈಮ್ ಅದು. ಆಗ ಮದುವೆಯಾಗಿತ್ತು. ಆದರೆ ಇಂಥ ಪರಿಸ್ಥಿತಿಯಲ್ಲಿಯೂ ಪತ್ನಿ ನನ್ನ ಬಿಟ್ಟು ಹೋಗಲಿಲ್ಲ. ಆಕೆಗೆ ಪ್ರೆಗ್ನೆನ್ಸಿಯಲ್ಲಿ ಈ ಸ್ಥಿತಿ ಬರಲು ಇದು ಕೂಡ ಕಾರಣ ಆಗಿರಬಹುದು. ನಾನು ಈಗ ಶೂಟಿಂಗ್ನಲ್ಲಿ ಬಿಜಿ ಇದ್ದರೆ ಅವಳು ಒಬ್ಬಳೇ ಮನೆಯಲ್ಲಿ ಇರಬೇಕು. ಪ್ರೆಗ್ನೆನ್ಸಿಯಲ್ಲಿ ಮತ್ತೆ ಎಡವಟ್ಟಾದರೆ ಎನ್ನುವ ಭಯ. ಆದ್ದರಿಂದ ಮತ್ತೆ ಮಗು ಬೇಡ ಎಂದು ಕುಳಿತು ನಿರ್ಧರಿಸಿದ್ದೇವೆ ಎಂದಿದ್ದಾರೆ ನಟ ಅಶೋಕ್.














