ಆರ್‌ಜೆ ಮಹ್ವಾಶ್‌ ಅವರ ಹಳೆಯ ಸಂದರ್ಶನವೊಂದು ವೈರಲ್ ಆಗಿದ್ದು, ಗರ್ಭಿಣಿ ಪತ್ನಿಗೆ ಮೋಸ ಮಾಡಿದ ವ್ಯಕ್ತಿಯ ಬಗ್ಗೆ ಅವರು ನೀಡಿದ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಇದನ್ನು ಕ್ರಿಕೆಟಿಗ ಯುಜುವೇಂದ್ರ ಚಹಲ್‌ಗೆ ತಳುಕು ಹಾಕುತ್ತಿದ್ದಾರೆ, ಆದರೆ ಇದರ ಹಿಂದಿನ ಅಸಲಿ ಸತ್ಯ ಬೇರೆಯೇ ಇದೆ.

ಬೆಂಗಳೂರು(ನ.05): ಆರ್‌ಜೆ ಮಹ್ವಾಶ್‌ ಅವರ ಹಳೆಯ ಸಂದರ್ಶನವೊಂದು ಇದೀಗ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಗರ್ಭಿಣಿಯಾಗಿದ್ದ ಪತ್ನಿಗೆ ಮೋಸ ಮಾಡಿದ ವ್ಯಕ್ತಿಯೊಬ್ಬನ ಬಗ್ಗೆ ಅವರು ನೀಡಿದ್ದ ಹೇಳಿಕೆ ಚರ್ಚೆಗೆ ಕಾರಣವಾಗಿದ್ದು, ಕೆಲವರು ಈ ಕಾಮೆಂಟ್‌ ಅನ್ನು ಕ್ರಿಕೆಟಿಗ ಯುಜುವೇಂದ್ರ ಚಹಲ್‌ ಅವರಿಗೆ ತಳುಕು ಹಾಕುತ್ತಿದ್ದಾರೆ. ಆದರೆ ಇದರ ಹಿನ್ನೆಲೆ ಗಮನಿಸಿದ್ರೆ ಬೇರೆಯದ್ದೇ ವಿಚಾರ ಬೆಳಕಿಗೆ ಬಂದಿದೆ.

ಡ್ಯಾನ್ಸ್ ಕೊರಿಯೋಗ್ರಾಫರ್ ಧನಶ್ರೀ ವರ್ಮಾ ಅವರಿಂದ ವಿಚ್ಛೇದನ ಪಡೆದ ಬಳಿಕ ಯುಜುವೇಂದ್ರ ಚಹಲ್‌ ಜತೆ ಆರ್‌ಜೆ ಮಹ್ವಾಶ್‌ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವಂತಹ ಸುದ್ದಿ ವೈರಲ್ ಆಗಿತ್ತು. ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಬಹಿರಂಗವಾಗಿ ಯಾವುದೇ ಸ್ಪಷ್ಟನೆ ನೀಡಿಲ್ಲ. ಹೀಗಿರುವಾಗ ಮಹ್ವಾಶ್‌ ಅವರ ಹಳೆಯ ಸಂದರ್ಶನದ ತುಣುಕೊಂದು ಮತ್ತೆ ಮುನ್ನೆಲೆಗೆ ಬಂದಿದ್ದು, ಚರ್ಚೆಗೆ ಗ್ರಾಸವಾಗಿದೆ.

ಪಿಂಕ್‌ವಿಲ್ಲಾ ಜೊತೆಗಿನ ಸಂದರ್ಶನದ ಒಂದು ಭಾಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದರಲ್ಲಿ ಗರ್ಭಿಣಿ ಪತ್ನಿಗೆ ಮೋಸ ಮಾಡಿದ ವ್ಯಕ್ತಿಯೊಬ್ಬನ ಬಗ್ಗೆ ಮಹ್ವಾಶ್‌ ಖಾರವಾಗಿ ಮಾತನಾಡಿರುವುದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಚಹಲ್‌ ಮತ್ತು ಧನಶ್ರೀ ದಾಂಪತ್ಯದ ಬಗ್ಗೆ ಈ ಹಿಂದೆ ಹರಿದಾಡಿದ್ದ ವದಂತಿಗಳ ಹಿನ್ನೆಲೆಯಲ್ಲಿ, ಕೆಲವರು ಈ ಹೇಳಿಕೆಯನ್ನು ಚಹಲ್‌ ಅವರಿಗೇ ಸಂಬಂಧಿಸಿ ನೋಡುತ್ತಿದ್ದಾರೆ. ಹಾಗಾದರೆ, ಮಹ್ವಾಶ್‌ ನಿಜವಾಗಿಯೂ ಚಹಲ್‌ ವಿರುದ್ಧ ಆರೋಪ ಮಾಡಿದ್ರಾ ಎನ್ನುವುದನ್ನು ನೋಡೋಣ ಬನ್ನಿ.

ಗರ್ಭಿಣಿ ಪತ್ನಿಗೆ ಮೋಸ ಮಾಡಿದ ವ್ಯಕ್ತಿ ಬಗ್ಗೆ ಆರ್‌ಜೆ ಮಹ್ವಾಶ್‌ ಹೇಳಿದ್ದೇನು?

ವೈರಲ್‌ ಆಗಿರುವ ಸಂದರ್ಶನದ ತುಣುಕಿನಲ್ಲಿ, ಗರ್ಭಿಣಿಯಾಗಿದ್ದ ಪತ್ನಿಗೆ ಮೋಸ ಮಾಡಿ ಬಳಿಕ ವಿಚ್ಛೇದನ ಪಡೆದಿದ್ದಾನೆ ಎನ್ನಲಾದ ವ್ಯಕ್ತಿಯ ಬಗ್ಗೆ ಆರ್‌ಜೆ ಮಹ್ವಾಶ್‌ ಮಾತನಾಡಿದ್ದಾರೆ. "ಓ ದೇವರೇ, ದೇವರು ನಿಮ್ಮನ್ನು ಯಾವ ವಿಷಯದಿಂದ ರಕ್ಷಿಸುತ್ತಾನೋ... ಈ ವ್ಯಕ್ತಿ ತನ್ನ ಗರ್ಭಿಣಿ ಪತ್ನಿಗೆ ಮೋಸ ಮಾಡಿದ್ದರಿಂದ ವಿಚ್ಛೇದನ ಪಡೆದಿದ್ದಾನೆ. ಒಮ್ಮೆ ಮೋಸ ಮಾಡಿದವನು ಯಾವಾಗಲೂ ಮೋಸ ಮಾಡುತ್ತಾನೆ. ಅದನ್ನು ಯಾವುದರಿಂದಲೂ ಬದಲಾಯಿಸಲು ಸಾಧ್ಯವಿಲ್ಲ" ಎಂದು ಅವರು ಹೇಳಿದ್ದಾರೆ.

ಈ ಹೇಳಿಕೆ ವೈರಲ್‌ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಶುರುವಾಗಿದೆ. ಕೆಲವರು ಮಹ್ವಾಶ್‌ ಅವರು ಚಹಲ್‌ ಮತ್ತು ಧನಶ್ರೀ ಅವರ ಹಿಂದಿನ ದಾಂಪತ್ಯ ಜೀವನದ ಬಗ್ಗೆಯೇ ಮಾತನಾಡಿದ್ದಾರೆ ಎಂದು ಊಹಿಸಿದ್ದಾರೆ. ಆದರೆ, ಸಂದರ್ಶನದ ಸಂಪೂರ್ಣ ಸಂದರ್ಭವನ್ನು ಗಮನಿಸದೆ ಹರಿದಾಡುತ್ತಿರುವ ತುಣುಕಿನಿಂದ ಈ ಊಹಾಪೋಹಗಳು ಹುಟ್ಟಿಕೊಂಡಿರುವಂತೆ ಕಾಣುತ್ತದೆ.

ಅದೇ ಸಂದರ್ಶನದ ಮತ್ತೊಂದು ಭಾಗದಲ್ಲಿ ಮಹ್ವಾಶ್‌ ತಮಗೆ 19 ವರ್ಷ ವಯಸ್ಸಾಗಿದ್ದಾಗಿನ ಪ್ರೇಮ ಸಂಬಂಧದ ಅನುಭವದ ಬಗ್ಗೆ ಮಾತನಾಡಿದ್ದಾರೆ. ತಾವು ಅಲಿಗಢ್‌ನಲ್ಲಿ ವಾಸಿಸುತ್ತಿದ್ದಾಗ ಫೇಸ್‌ಬುಕ್‌ ಮೂಲಕ ವ್ಯಕ್ತಿಯೊಬ್ಬರ ಪರಿಚಯವಾಗಿತ್ತು. ಆ ವ್ಯಕ್ತಿಯೂ ಅದೇ ಊರಿನವರಾಗಿದ್ದರು ಎಂದು ಅವರು ವಿವರಿಸಿದ್ದಾರೆ. ಈ ಅಂಶ ಇಲ್ಲಿ ಮುಖ್ಯವಾಗುತ್ತದೆ. ಏಕೆಂದರೆ, ಮಹ್ವಾಶ್‌ ತಮ್ಮ ಹಿಂದಿನ ವೈಯಕ್ತಿಕ ಸಂಬಂಧದ ಅನುಭವವನ್ನು ಹಂಚಿಕೊಂಡಿರುವುದು ಸಂದರ್ಶನದ ಮತ್ತೊಂದು ಭಾಗದಿಂದ ತಿಳಿದುಬರುತ್ತದೆ. ವೈರಲ್‌ ಆಗಿರುವ ಹೇಳಿಕೆಯೊಂದರಿಂದ ಅವರು ಚಹಲ್‌ ಬಗ್ಗೆಯೇ ಮಾತನಾಡಿದ್ದಾರೆ ಅಥವಾ ಅವರ ದಾಂಪತ್ಯದ ಬಗ್ಗೆ ಆರೋಪ ಮಾಡಿದ್ದಾರೆ ಎಂದು ನಿರ್ಧರಿಸಲು ಸಾಧ್ಯವಿಲ್ಲ.

ಚಹಲ್‌-ಧನಶ್ರೀ ಹೆಸರು ಈ ವೈರಲ್‌ ವಿಡಿಯೊದಲ್ಲಿ ತಳುಕು ಹಾಕಲು ಕಾರಣವೇನು?

ಚಹಲ್‌ ಮತ್ತು ಧನಶ್ರೀ ಅವರ ವಿಚ್ಛೇದನದ ಸುತ್ತಲಿನ ಬೆಳವಣಿಗೆಗಳು ಹಾಗೂ ಆ ಬಳಿಕ ಮಹ್ವಾಶ್‌ ಅವರೊಂದಿಗೆ ಚಹಲ್‌ ಹೆಸರು ಕೇಳಿಬಂದಿದ್ದೇ ಈ ಊಹಾಪೋಹಗಳಿಗೆ ಪ್ರಮುಖ ಕಾರಣವಾಗಿದೆ. 2020ರಲ್ಲಿ ಕೋವಿಡ್‌ ಲಾಕ್‌ಡೌನ್‌ ಸಂದರ್ಭದಲ್ಲಿ ಚಹಲ್‌ ಅವರು ಧನಶ್ರೀ ಅವರ ಆನ್‌ಲೈನ್‌ ನೃತ್ಯ ತರಗತಿಗೆ ಸೇರಿದ್ದರು. ಈ ಮೂಲಕ ಇಬ್ಬರ ಪರಿಚಯವಾಗಿತ್ತು. ಬಳಿಕ ಸ್ನೇಹ ಪ್ರೀತಿಗೆ ತಿರುಗಿದ್ದು, 2020ರ ಡಿಸೆಂಬರ್‌ನಲ್ಲಿ ಗುರುಗ್ರಾಮ್‌ನಲ್ಲಿ ಸಾಂಪ್ರದಾಯಿಕ ಸಮಾರಂಭದಲ್ಲಿ ಇಬ್ಬರೂ ವಿವಾಹವಾಗಿದ್ದರು.

ಆದರೆ, 2024ರಲ್ಲಿ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂಬ ವದಂತಿಗಳು ಹರಿದಾಡಲಾರಂಭಿಸಿದವು. 2025ರ ಫೆಬ್ರವರಿಯಲ್ಲಿ ಚಹಲ್‌ ಮತ್ತು ಧನಶ್ರೀ ಬಾಂದ್ರಾ ಕೌಟುಂಬಿಕ ನ್ಯಾಯಾಲಯದ ಹೊರಗೆ ಕಾಣಿಸಿಕೊಂಡಿದ್ದರು. ಇಬ್ಬರೂ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು ಎನ್ನಲಾಗಿತ್ತು. ಬಳಿಕ ನ್ಯಾಯಾಲಯದಿಂದ ಅವರ ವಿಚ್ಛೇದನ ಅಧಿಕೃತಗೊಂಡಿತ್ತು. ಇದಾದ ನಂತರ ಚಹಲ್‌ ಹೆಸರು ಆರ್‌ಜೆ ಮಹ್ವಾಶ್‌ ಅವರೊಂದಿಗೆ ತಳುಕು ಹಾಕಿಕೊಂಡಿತ್ತು. ಆದರೆ, ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಸಾರ್ವಜನಿಕವಾಗಿ ಯಾವುದೇ ದೃಢೀಕರಣ ನೀಡಿಲ್ಲ.

ಧನಶ್ರೀ ರಿಯಾಲಿಟಿ ಶೋ ಹೇಳಿಕೆಯಿಂದ ಮತ್ತೆ ಚರ್ಚೆ

ಚಹಲ್‌ ಮತ್ತು ಧನಶ್ರೀ ಅವರ ದಾಂಪತ್ಯದಲ್ಲಿ ಏನಾಯಿತು ಎಂಬ ಪ್ರಶ್ನೆಗಳು ಇತ್ತೀಚೆಗೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದವು. ಧನಶ್ರೀ ಅವರು 'ರೈಸ್‌ ಆ್ಯಂಡ್‌ ಫಾಲ್‌' ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ನಟಿ ಕುಬ್ರಾ ಸೈತ್‌ ಅವರೊಂದಿಗೆ ಮಾತನಾಡುತ್ತಾ ತಮ್ಮ ವೈವಾಹಿಕ ಜೀವನದ ಬಗ್ಗೆ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದರು. ಈ ವೇಳೆ ಕುಬ್ರಾ ಸೈತ್‌, "ನಿಮ್ಮ ಸಂಬಂಧ ಮುಂದುವರಿಯಲು ಸಾಧ್ಯವಿಲ್ಲ, ಇದು ತಪ್ಪಾಯಿತು ಎಂದು ನಿಮಗೆ ಯಾವಾಗ ಅನಿಸಿತು?" ಎಂದು ಪ್ರಶ್ನಿಸಿದ್ದರು.

ಇದಕ್ಕೆ ಧನಶ್ರೀ ನೀಡಿದ ಉತ್ತರ ನಟಿಯನ್ನೇ ಅಚ್ಚರಿಗೊಳಿಸಿತ್ತು. "ಮೊದಲ ವರ್ಷದಲ್ಲೇ. ಎರಡನೇ ತಿಂಗಳಲ್ಲೇ ಅವರನ್ನು ರೆಡ್ ಹ್ಯಾಂಡ್‌ ಆಗಿ ಹಿಡಿದುಕೊಂಡೆ" ಎಂದು ಧನಶ್ರೀ ಉತ್ತರಿಸಿದ್ದರು.

ಧನಶ್ರೀ ಅವರ ಈ ಹೇಳಿಕೆ ಹೊರಬಿದ್ದ ಬಳಿಕ ಚಹಲ್‌-ಧನಶ್ರೀ ಸಂಬಂಧದ ಬಗ್ಗೆ ಮತ್ತೆ ಚರ್ಚೆಗಳು ಆರಂಭವಾಗಿದ್ದವು. ಆದರೆ, ಈ ಹೇಳಿಕೆಯಿಂದ ಚಹಲ್‌ ಅವರು ಧನಶ್ರೀ ಗರ್ಭಿಣಿಯಾಗಿದ್ದಾಗ ಅವರಿಗೆ ಮೋಸ ಮಾಡಿದ್ದಾರೆ ಎಂಬುದು ಸಾಬೀತಾಗುವುದಿಲ್ಲ. ಆರ್‌ಜೆ ಮಹ್ವಾಶ್‌ ಅವರ ವೈರಲ್‌ ಸಂದರ್ಶನವಾಗಲಿ ಅಥವಾ ರಿಯಾಲಿಟಿ ಶೋನಲ್ಲಿ ಧನಶ್ರೀ ನೀಡಿದ ಹೇಳಿಕೆಯಾಗಲಿ, ಈ ನಿರ್ದಿಷ್ಟ ಆರೋಪಕ್ಕೆ ಯಾವುದೇ ಸಾಕ್ಷ್ಯವಿಲ್ಲ. ಸದ್ಯಕ್ಕೆ ವೈರಲ್‌ ಸಂದರ್ಶನವು ಚಹಲ್‌ ಅವರ ಹಿಂದಿನ ದಾಂಪತ್ಯದೊಂದಿಗೆ ಮಹ್ವಾಶ್‌ ಹೇಳಿಕೆಯನ್ನು ಜೋಡಿಸಿ ಊಹಾಪೋಹಗಳಿಗೆ ಕಾರಣವಾಗಿದೆಯಷ್ಟೆ.