Asianet Suvarna News Asianet Suvarna News

Relationship Tips : ಪತ್ನಿ – ಪಾಲಕರ ಮಧ್ಯೆ ಸುಸ್ತಾಗಿರುವ ಗಂಡಸರಿಗೆ ಕಿವಿ ಮಾತು

ಬಹುತೇಕ ಕುಟುಂಬಗಳಲ್ಲಿ ಅತ್ತೆ – ಸೊಸೆ ಮಧ್ಯೆ ಶುರುವಾಗುವ ಗಲಾಟೆ ವಿಚ್ಛೇದನದಲ್ಲಿ ಅಂತ್ಯವಾಗುತ್ತದೆ. ಪಾಲಕರು ಹಾಗೂ ಪತ್ನಿ ಜಗಳ ಕೇಳಿ ಪತಿ ಬೇಸತ್ತಿರುತ್ತಾನೆ. ಇದ್ರಿಂದ ಹೊರಗೆ ಬರೋದು ಹೇಗೆ ಎಂಬ ಪ್ರಶ್ನೆ ಆತನನ್ನು ಕಾಡ್ತಿರುತ್ತದೆ. ಅದಕ್ಕೆ ಉತ್ತರ ಇಲ್ಲಿದೆ. 
 

Relationship Tips How To Handle Wife And Parents
Author
First Published May 9, 2023, 5:53 PM IST

ಮದುವೆ ಕೇವಲ ಇಬ್ಬರ ಮಧ್ಯೆ ಆಗುವಂತಹದ್ದಲ್ಲ. ಮದುವೆ ಎರಡು ಕುಟುಂಬಗಳ ಮಧ್ಯೆ ಆಗುವ ಹೊಸ ಸಂಬಂಧ. ಮದುವೆ ನಂತ್ರ ಮಹಿಳೆಯಾದವಳು ಹೊಸ ಪರಿಸರಕ್ಕೆ ಹೊಂದಿಕೊಳ್ಳಬೇಕು ನಿಜ. ಹಾಗೆಯೇ ವಿವಾಹ ಬಂಧನಕ್ಕೆ ಒಳಗಾದ ಹುಡುಗ ಕೂಡ ಜೀವನದಲ್ಲಿ ಸಾಕಷ್ಟು ಬದಲಾವಣೆ ಕಾಣ್ತಾನೆ. ಸಂಸಾರದಲ್ಲಿ ಸುಖ ಸಿಗ್ಬೇಕೆಂದ್ರೆ ಪತಿ ಪತ್ನಿ ನಡುವಿನ ಪ್ರೀತಿ ಇದ್ರೆ ಸಾಕಾಗೋದಿಲ್ಲ. ಸಂಸಾರದಲ್ಲಿ ಒಂದಿಷ್ಟು ರಾಜಿ ಮಾಡಿಕೊಳ್ಳುವ ತಿಳುವಳಿಕೆ ಮತ್ತು ಧೈರ್ಯ ಎರಡೂ ಅಗತ್ಯವಾಗುತ್ತದೆ. ಸಂಸಾರ ಅಂದ್ರೆ ಕೇವಲ ಪತಿ – ಪತ್ನಿಯಾಗಿರೋದಿಲ್ಲ. ಹುಡುಗನ ತಂದೆ – ತಾಯಿ ಸೇರಿದಂತೆ ಆತನ ಸಂಪೂರ್ಣ ಕುಟುಂಬ ಇಲ್ಲಿರುತ್ತದೆ.

ಹುಟ್ಟಿ ಬೆಳೆದ ಮನೆ (Home) ಯನ್ನು ಬಿಟ್ಟು ಬೇರೆ ಮನೆಗೆ ಬಂದ ಪತ್ನಿ ಹಾಗೂ ಈಗಾಗಲೇ ಜೊತೆಗಿರುವ ತಂದೆ- ತಾಯಿ, ಇವರಿಬ್ಬರಲ್ಲಿ ಯಾರನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಪ್ರಶ್ನೆ ಹುಡುಗನನ್ನು ಕಾಡೋದು ಸಾಮಾನ್ಯ. ಕೆಲವರು ಸದಾ ಪತ್ನಿ (Wife) ಪರವಹಿಸಿ ತಂದೆ – ತಾಯಿಯನ್ನು ದೂರ ಮಾಡ್ತಾರೆ. ಮತ್ತೆ ಕೆಲವರು ಪತ್ನಿಯನ್ನು ದೂರವಿಟ್ಟು ದಾಂಪತ್ಯ ಮುರಿದುಬೀಳಲು ಕಾರಣವಾಗ್ತಾರೆ. ಮತ್ತೆ ಕೆಲವರಿಗೆ ಎರಡನ್ನೂ ಸಂಭಾಳಿಸುವ ಆಸೆಯಿದ್ರೂ ಅದ್ರ ಬಗ್ಗೆ ಜ್ಞಾನವಿಲ್ಲದೆ ಇಬ್ಬರ ಮಧ್ಯೆ ಸಿಕ್ಕಿ ಪರದಾಡ್ತಾರೆ. ಸಂಸಾರ ಸರಿದೂಗಿಸಿಕೊಂಡು ಹೋಗ್ಬೇಕೆಂದ್ರೆ ಪತಿಯಾದವನು ಏನೆಲ್ಲ ಮಾಡ್ಬೇಕು ಎಂಬುದನ್ನು ನಾವಿಂದು ಹೇಳ್ತೇವೆ.

Relationship : ಇಷ್ಟು ಸಿಲ್ಲಿ ಸಿಲ್ಲಿ ವಿಷ್ಯಕ್ಕೂ ಡಿವೋರ್ಸ್ ಪಡೀತಾರ ಗಂಡ-ಹೆಂಡತಿ?

ತಂದೆ – ತಾಯಿ ಹಾಗೂ ಪತ್ನಿ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡುವ ಸಂದರ್ಭ ಬರೋದೇಕೆ? : ಇದು ಧಾವಂತದ ಜೀವನ. ಒತ್ತಡದಲ್ಲಿಯೇ ಜನರು ಬದುಕುತ್ತಿರುತ್ತಾರೆ. ಒಂದು ಕುಟುಂಬ (Family) ನಿರ್ವಹಣೆಗೆ ಪತಿ ಹಾಗೂ ಪತ್ನಿ ಇಬ್ಬರು ದುಡಿಯುವುದು ಅನಿವಾರ್ಯವಾಗುತ್ತದೆ. ಅನೇಕ ಬಾರಿ, ಮನೆ ಹಾಗೂ ಕೆಲಸ ಎರಡನ್ನೂ ನಿರ್ವಹಿಸುವುದು ಕಷ್ಟವಾಗುತ್ತದೆ. ಕೆಲಸ ಮುಗಿಸಿ ಮನೆಗೆ ಬಂದ ಮಹಿಳೆಗೆ ಅತ್ತೆ ಅಥವಾ ಮಾವನ ಕೆಲಸ ಕಾಟವನ್ನಿಸಲು ಶುರುವಾಗುತ್ತದೆ. ನಿಧಾನವಾಗಿ ಅವರ ಮಧ್ಯೆ ಗಲಾಟೆ ಆರಂಭವಾಗುತ್ತದೆ. ಈ ಜಗಳದಿಂದ ಹೊರಬರಲು ನಿರ್ಧರಿಸುವ ಪುರುಷ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬರ್ತಾನೆ.

ಯಾರು ಹೆಚ್ಚು ಮುಖ್ಯ? : ಎರಡು ಕಣ್ಣಲ್ಲಿ ಯಾವ ಕಣ್ಣು ಮುಖ್ಯ ಅಂದ್ರೆ ಹೇಳೋದು ಕಷ್ಟಸಾಧ್ಯ. ಪಾಲಕರು, ಪತ್ನಿ ವಿಷ್ಯ ಬಂದಾಗ್ಲೂ ಆಯ್ಕೆ ಕಷ್ಟವಾಗುತ್ತದೆ. ಯಾಕೆಂದ್ರೆ ತಂದೆ – ತಾಯಿ ಜನ್ಮಕೊಟ್ಟವರು. ಅವರಿಲ್ಲದೆ ಜೀವನದಲ್ಲಿ ನೀವು ಇಷ್ಟೊಂದು ಸಾಧಿಸಲು ಸಾಧ್ಯವಾಗ್ತಿರಲಿಲ್ಲ. ತಮ್ಮ ತ್ಯಾಗ ಹಾಗೂ ಆಶೀರ್ವಾದದಿಂದಲೇ ನೀವು ಜೀವನದಲ್ಲಿ ಯಶಸ್ಸು ಪಡೆಯಲು ಸಾಧ್ಯ. ವಯಸ್ಸಾದ ಪಾಲಕರನ್ನು ನೋಡಿಕೊಳ್ಳುವುದು ಮಕ್ಕಳ ಜವಾಬ್ದಾರಿ. ಹಾಗೆಯೇ ಪತ್ನಿ ಕೂಡ, ಜೀವನ ಪರ್ಯಂತ ನಿಮ್ಮ ಜೊತೆಗಿರಲು ಬಂದವಳು. ಆಕೆ ಪ್ರೀತಿಯಿಲ್ಲದೆ ನಿಮ್ಮ ಜೀವನ ಕಷ್ಟ. ನಿಮ್ಮ ಸಂತೋಷ, ದುಃಖದಲ್ಲಿ ಆಕೆ ಭಾಗಿಯಾಗ್ತಾಳೆ. ಹಾಗಿರುವಾಗ ಇಬ್ಬರಲ್ಲಿ ಒಬ್ಬರ ಆಯ್ಕೆ ಬದಲು ಇಬ್ಬರನ್ನು ಸಮಾನವಾಗಿ ನೋಡುವ ಸ್ವಭಾವ ಬೆಳೆಸಿಕೊಳ್ಳಬೇಕು.

Teenage pregnancy: ಹದಿಹರೆಯದ ಮಗಳು ಬಸುರಾದರೆ, ಪೋಷಕರು ಹೇಗೆ ರಿಯಾಕ್ಟ್ ಮಾಡಬೇಕು?

ಎಲರನ್ನೂ ಸಂತೋಷವಾಗಿಡೋದು ಹೇಗೆ? : ಇದು ಎಲ್ಲ ಪುರುಷರನ್ನು ಕಾಡುವ ಪ್ರಶ್ನೆ. ಕೆಲವೊಂದು ಸರಳ ವಿಧಾನದ ಮೂಲಕ ನೀವು ಇಬ್ಬರನ್ನು ಖುಷಿಗೊಳಿಸಬಹುದು. ಪತ್ನಿಗೆ ಯಾವುದಾದ್ರೂ ಗಿಫ್ಟ್ ತಂದ್ರೆ ಪಾಲಕರಿಗೂ ಸಣ್ಣ ಉಡುಗೊರೆ ತರಲು ಮರೆಯಬೇಡಿ. ಪತ್ನಿ ಜೊತೆ ಔಟಿಂಗ್ ಪ್ಲಾನ್ ಮಾಡಿದ್ದರೆ, ಸಮಯ ಸಿಕ್ಕಾಗ ಪಾಲಕರ ಜೊತೆ ಕೂಡ ನೀವು ಹೊರಗೆ ಹೋಗಿ ಬನ್ನಿ. ದಿನದಲ್ಲಿ ಒಂದಿಷ್ಟು ಸಮಯವನ್ನು ಅವರ ಜೊತೆ ಕಳೆಯುವ ಶಪಥ ಮಾಡಿ. ಇಬ್ಬರ ಜೊತೆಯೂ ಮಾತನಾಡಿ. ಅವರಿಗೆ ಅಗತ್ಯವಾಗಿದ್ದನ್ನು ನೀಡಿ.

ಪತ್ನಿ ಜೊತೆ ಮಾತನಾಡಿ : ನಿಮ್ಮ ಕೆಲಸ ಸಂಪೂರ್ಣ ಯಶಸ್ವಿಯಾಗ್ಬೇಕೆಂದ್ರೆ ಪತ್ನಿ ಬೆಂಬಲ ಅಗತ್ಯ. ಹಾಗಾಗಿ ಪತ್ನಿಯ ಜೊತೆ ಈ ಬಗ್ಗೆ ಮಾತನಾಡಿ. ನಿಮಗೆ ಪಾಲಕರು ಹಾಗೂ ಪತ್ನಿ ಏಕೆ ಮುಖ್ಯ, ಇಬ್ಬರ ಮಧ್ಯೆ ಹೊಂದಾಣಿಕೆ ಏಕೆ ಅಗತ್ಯ ಎಂಬುದನ್ನು ಅವರಿಗೆ ತಿಳಿಸಿ. ಸಂಸಾರದಲ್ಲಿ ಅಹಂಕಾರ ಬಂದ್ರೆ ಕುಟುಂಬ ಒಡೆದಂತೆ. ಯಾವ ಕುಟುಂಬದಲ್ಲಿ ಅವರವರ ಕೆಲಸವನ್ನು ಅವರು ಅಚ್ಚುಕಟ್ಟಾಗಿ ಮಾಡ್ತಾರೋ, ಅಹಂಕಾರವಿಲ್ಲದೆ ನಡೆದುಕೊಳ್ತಾರೋ ಅಲ್ಲಿ ಜಗಳಕ್ಕೆ ಅವಕಾಶವಿರೋದಿಲ್ಲ.
 

Follow Us:
Download App:
  • android
  • ios