ಸಚಿನ್- ಅಂಜಲಿ, ಪ್ರಿಯಾಂಕಾ ಛೋಪ್ರಾ- ನಿಕ್ ಜೋನಾಸ್, ಐಶ್ವರ್ಯಾ ರೈ- ಅಭಿಷೇಕ್ ಬಚ್ಚನ್, ಅರ್ಜುನ್ ಕಪೂರ್- ಮಲೈಕಾ ಅರೋರಾ ಹೀಗೆ ಯುವಕರು ತಮಗಿಂತ ಹಿರಿಯ ಯುವತಿಯರನ್ನು ವಿವಾಹವಾದ ಅನೇಕ ಉದಾಹರಣೆಗಳು ಸೆಲೆಬ್ರಿಟಿಗಳಲ್ಲಿ ಸಿಗುತ್ತದೆ. ಕೇವಲ ಸೆಲೆಬ್ರಿಟಿಗಳಲ್ಲಷ್ಟೇ ಅಲ್ಲ, ಈಗೀಗ ಸಮಾಜದ ಸಾಮಾನ್ಯರಲ್ಲಿ ಕೂಡಾ ತಮ್ಮದೇ ವಯಸ್ಸಿನ ಇಲ್ಲವೇ ಕೆಲ ವರ್ಷಗಳಿಗೆ ದೊಡ್ಡವಳಾದವಳನ್ನು ಪತ್ನಿಯಾಗಿ ಬಯಸುವ ಯುವಕರ ಸಂಖ್ಯೆ ಬೆಳೆಯುತ್ತಿದೆ. 

ತಮಗಿಂತ ವಯಸ್ಸಿನಲ್ಲಿ ದೊಡ್ಡವಳತ್ತ ಆಕರ್ಷಿತರಾಗಲು ಕಾರಣಗಳಿವೆ ಎಂದು ಬಹಳಷ್ಟು ಯುವಕರು ಒಪ್ಪಿಕೊಳ್ಳುತ್ತಾರೆ. ಹಾಗಿದ್ದರೆ ಏನು ಆ ಕಾರಣಗಳು?

ಬ್ರೇಕಪ್‌ಗೆ ಕೂಡಾ ಸುಖಾಂತ್ಯ ನೀಡಬಹುದು!

ಪ್ರಬುದ್ಧತೆ
ಹುಡುಗಿಯರು ಕ್ಷಣ ಚಿತ್ತ ಕ್ಷಣ ಪಿತ್ತ ಎಂಬಂತೆ ಇರುತ್ತಾರೆ. ಅದಕ್ಕೇ ಅವರನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟ ಎಂದು ಬಹಳಷ್ಟು ಯುವಕರು ಹೇಳುವುದು. ಆದರೆ, ವಯಸ್ಸು ಹೆಚ್ಚಾದಂತೆಲ್ಲ ಅನುಭವಗಳು ಹೆಚ್ಚುತ್ತವೆ, ಅನುಭವಗಳು ವ್ಯಕ್ತಿಯನ್ನು ಹೆಚ್ಚು ಪಕ್ವಗೊಳಿಸುತ್ತವೆ. ಹಾಗಾಗಿ, ಸ್ವಲ್ಪ ವಯಸ್ಸು ಹೆಚ್ಚಾದ ಮೇಲೆ ಮಹಿಳೆಯು ಚೆಲ್ಲುಚೆಲ್ಲಾಗಿರದೆ ಪ್ರಬುದ್ಧತೆಯಿಂದ, ಬ್ಯಾಲೆನ್ಸ್ಡ್ ಆಗಿ ವರ್ತಿಸಬಲ್ಲಳು. ಚಂಚಲತೆ ಕಡಿಮೆಯಾಗಿರುತ್ತದೆ. 

ಗಾಸಿಪ್‌ಗೆ ಬೈಬೈ
ಹೆಣ್ಣುಮಕ್ಕಳಿಗೆ ಗಾಸಿಪ್‌ನಲ್ಲಿ ಆಸಕ್ತಿ ಜಾಸ್ತಿ. ಆದರೆ, ಸ್ವಲ್ಪತಿಳಿವಳಿಕೆ ಹೆಚ್ಚಾದಂತೆಲ್ಲ ಗಾಸಿಪ್ ಮಾಡುವುದು ಕಡಿಮೆಯಾಗುತ್ತದೆ. ಅವರು ಟಾಕ್ಸಿಕ್ ವ್ಯಕ್ತಿಗಳಿಂದ ದೂರವುಳಿಯುವುದನ್ನು, ಅವರನ್ನು ನಿಭಾಯಿಸುವುದನ್ನು ಕಲಿತುಬಿಡುತ್ತಾರೆ. ಹಾಗಾಗಿ, ಅವರು ಗಾಸಿಪ್ ಮಾಡುತ್ತಾ ಸಮಯ ಹಾಳು ಮಾಡುವ ಬದಲಿಗೆ  ಮೆಚೂರ್ಡ್ ಆಗಿ ವರ್ತಿಸುತ್ತಾರೆ. ಈ ಗುಣ ಪುರುಷರನ್ನು ಆಕರ್ಷಿಸುತ್ತದೆ. 

ಆತ್ಮವಿಶ್ವಾಸ
ಸಣ್ಣ ವಯಸ್ಸಿನಲ್ಲಿ ಕೀಳರಿಮೆಗಳು, ಭಯ, ಅಂಜಿಕೆ ಎಲ್ಲವೂ ಜಾಸ್ತಿ. ಆದರೆ, ಪ್ರಬುದ್ಧತೆ ಸಾಧಿಸಿದಂತೆಲ್ಲ ಆ ಮಹಿಳೆಯಲ್ಲಿ ಆತ್ಮವಿಶ್ವಾಸ, ಸ್ವಾಭಿಮಾನ ಹೆಚ್ಚುತ್ತದೆ. ಆತ್ಮವಿಶ್ವಾಸ ಇರುವ ಮಹಿಳೆಯೆಡೆಗೆ ಆಕರ್ಷಣೆಯಾಗುವುದು ಸಹಜ. ಇವರು ಸುಮ್ಮನೆ ತಾವು ಹೇಳಿದ್ದೇ ಸರಿ ಎಂದು ಸಾಬೀತುಪಡಿಸಲು ವಾದ ಮಾಡುವವರಲ್ಲ. ಸರಿತಪ್ಪುಗಳನ್ನು ಯೋಚಿಸಬಲ್ಲವರು. ಕಷ್ಟದ ಸ್ಥಿತಿಯನ್ನು ನಿಭಾಯಿಸುವ ತಿಳಿವಳಿಕೆ ಪಡೆದವರು. 

ಲೈಂಗಿಕ ಪ್ರಬುದ್ಧತೆ
ವಯಸ್ಸಿನಲ್ಲಿ ತಮಗಿಂತ ದೊಡ್ಡವರನ್ನು ಪುರುಷರು ಇಷ್ಟ ಪಡಲು ಮತ್ತೊಂದು ಕಾರಣ ಅವರ ಲೈಂಗಿಕ ಪ್ರಬುದ್ಧತೆ. ಇವರು ಸಣ್ಣ ಹುಡುಗಿಯರಂತೆ ನಾಚಿಕೊಳ್ಳದೆ ತಾವೇನು ಬಯಸುತ್ತೇವೆ ಎಂಬುದನ್ನು ವಾಚ್ಯವಾಗಿ ಹೇಳುವ ಜೊತೆಗೆ, ಆತನ ಇಷ್ಟಕಷ್ಟಗಳನ್ನೂ ಸುಲಭವಾಗಿ ಅರ್ಥ ಮಾಡಿಕೊಳ್ಳಬಲ್ಲರು. ಹಾಗಾಗಿ, ಇವರೊಂದಿಗಿನ ಲೈಂಗಿಕ ಸಹಬಾಳ್ವೆ ಹೆಚ್ಚು ತೃಪ್ತಿ ಕೊಡುತ್ತದೆ. 

ಜಗಳಗಳು ಕಡಿಮೆ
ಸ್ವಲ್ಪ ಮೆಚುರಿಟಿ ಬಂದಿರುವ ಮಹಿಳೆ ಸಣ್ಣ ಹುಡುಗಿಯರಂತೆ ಸಣ್ಣ ಪುಟ್ಟದ್ದಕ್ಕೂ ಕೋಪಿಸಿಕೊಳ್ಳುವುದು, ತನ್ನನ್ನು ಹೆಚ್ಚು ಪ್ಯಾಂಪರ್ ಮಾಡಲಿ ಎಂದು ಬಯಸುವುದು ಕಡಿಮೆ. ಇವರು ಪಾರ್ಟ್ನರನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬಲ್ಲರು. ಅವರಿಗೆ ವೈಯಕ್ತಿಕ ಸಮಯ ನೀಡುವ ಅಗತ್ಯವನ್ನು ಮನಗಂಡು ಅದನ್ನು ನೀಡುವರು. ಹೀಗಾಗಿ ಸಂಬಂಧದಲ್ಲಿ ಜಗಳಕದನಗಳು ಕಡಿಮೆ ಇರುತ್ತವೆ. ಇನ್ನು ಸಣ್ಣ ವಯಸ್ಸಿನ ಹುಡುಗಿಯನ್ನು ವಿವಾಹವಾದಾಗ ಆಕೆ ಮಕ್ಕಳಂತೆ ಆಡುತ್ತಿರುತ್ತಾಳೆ, ಪತಿ ತನ್ನನ್ನು ಮಗುವಿನಂತೆ ನೋಡಿಕೊಳ್ಳಲಿ ಎಂದು ಬಯಸುತ್ತಾಳೆ. ಆದರೆ, ಮಹಿಳೆಯೇ ಪತಿಗಿಂತ ಹಿರಿಯಳಿದ್ದಾಗ ಆಕೆ ಆತನನ್ನು ಸಣ್ಣವನಂತೆ ಪ್ಯಾಂಪರ್ ಮಾಡಬಲ್ಲಳು. ಇದು ಆತನಿಗೆ ಖುಷಿ ಕೊಡುತ್ತದೆ. 

ಖರ್ಚುವೆಚ್ಚ ತಗ್ಗಿಸಿದ ವಿವಾಹದ ಹೊಸ ಟ್ರೆಂಡ್, ಮಧ್ಯಮ ವರ್ಗಕ್ಕಿದು ವರ!

ಭಾವನಾತ್ಮಕ ಪ್ರಬುದ್ಧತೆ
25-30 ವಯಸ್ಸು ದಾಟಿದ ಮಹಿಳೆಯರು ಎಮೋಶನಲಿ ಮೆಚ್ಯೂರ್ ಆಗಿರುತ್ತಾರೆ, ಸಂಬಂಧಗಳು ಸಂಕೀರ್ಣಗೊಂಡಾಗ ಹದಿಹರೆಯದವರಂತೆ ಡ್ರಾಮಾ ಹುಟ್ಟು ಹಾಕುವುದಿಲ್ಲ. ಬದಲಿಗೆ ಸಂದರ್ಭವನ್ನು ಅರ್ಥ ಮಾಡಿಕೊಂಡು ನಿಭಾಯಿಸುತ್ತಾರೆ. 

ಆರ್ಥಿಕ ಸಬಲತೆ
ಇವರು ಆರ್ಥಿಕವಾಗಿ ತಾವೂ ನೊಗ ಹೊತ್ತು ಪತಿಯ ಭಾರವನ್ನು ಕೊಂಚ ಮಟ್ಟಿಗೆ ಇಳಿಸಲು ಬಯಸುತ್ತಾರೆ. ಜೊತೆಗೆ ಅನಗತ್ಯ ಖರ್ಚುಗಳು ಯಾವುದೆಂದು  ಯೋಚಿಸುವ ಶಕ್ತಿ ಇರುತ್ತದೆ. ಇವೆಲ್ಲದರೊಡನೆ ಅವರು ಪತಿಯ ಯೋಚನೆಗಳಿಗೆ ಚಿಂತನೆಗಳಿಗೆ ಸಮಾನವಾಗಿ ಪ್ರತಿಕ್ರಿಯಿಸಬಲ್ಲರು. ಹೆಚ್ಚಿನ ಜ್ಞಾನವನ್ನು ಹಂಚಿಕೊಂಡು ಸಂಗಾತಿಯನ್ನು ಆಗಾಗ ಚಕಿತಗೊಳಿಸಬಲ್ಲರು.

ಸಂಬಂಧದಲ್ಲಿ ಇಬ್ಬರಲ್ಲೂ ಪ್ರಬುದ್ಧತೆ ಇದ್ದಾಗ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡು ಮುಂದೆ ಸಾಗುತ್ತಾರೆ. ಅವರಲ್ಲಿ ಜಗಳ ಕಡಿಮೆ, ಸಂತೋಷ ಹೆಚ್ಚು.