ಗಂಡ ಮಾಡಿದರೂ ಅತ್ಯಾಚಾರ ಅನ್ನೋದು ಅತ್ಯಾಚಾರವೇ; ಗುಜರಾತ್ ಹೈಕೋರ್ಟ್ ತೀರ್ಪು
ಭಾರತದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ಮೌನವನ್ನು ಮುರಿಯುವ ಅಗತ್ಯವಿದೆ. ಅತ್ಯಾಚಾರ ಅನ್ನೋದು ಗಂಡ ಮಾಡಿದರೂ ಅತ್ಯಾಚಾರ ಎಂದೇ ಕರೆಸಿಕೊಳ್ಳುತ್ತದೆ ಎಂದು ಗುಜರಾತ್ ಹೈಕೋರ್ಟ್ ಆದೇಶ ನೀಡಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಅಹಮದಾಬಾದ್: ಭಾರತದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ಮೌನವನ್ನು ಮುರಿಯುವ ಅಗತ್ಯವಿದೆ. ಅತ್ಯಾಚಾರ ಅನ್ನೋದು ಗಂಡ ಮಾಡಿದರೂ ಅತ್ಯಾಚಾರ ಎಂದೇ ಕರೆಸಿಕೊಳ್ಳುತ್ತದೆ ಎಂದು ಗುಜರಾತ್ ಹೈಕೋರ್ಟ್ ಉಲ್ಲೇಖಿಸಿದೆ. ಇತ್ತೀಚೆಗೆ ಹೊರಡಿಸಿದ ಆದೇಶದಲ್ಲಿ, ನ್ಯಾಯಮೂರ್ತಿ ದಿವ್ಯೇಶ್ ಜೋಶಿ ಅವರು, ಭಾರತದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ನೈಜ ಘಟನೆಗಳು ಬಹುಶಃ ಡೇಟಾ ಸೂಚಿಸುವುದಕ್ಕಿಂತ ಹೆಚ್ಚಾಗಿವೆ. ಮಹಿಳೆಯರು ಪ್ರತಿ ದಿನ ಇದನ್ನು ಎದುರಿಸುತ್ತಲೇ ಇರುತ್ತಾರೆ. ಕೆಲವೊಬ್ಬರು ತಮ್ಮ ಗಂಡದಿರಿಂದಲೇ ಅತ್ಯಾಚಾರಕ್ಕೆ ಒಳಗಾಗುತ್ತಾರೆ ಎಂದು ತಿಳಿಸಿದ್ದಾರೆ.
ಸಮಾಜದಲ್ಲಿ ಮಹಿಳೆಯನ್ನು (Woman) ಹಿಂಬಾಲಿಸುವುದು, ಮೌಖಿಕ ಮತ್ತು ದೈಹಿಕವಾಗಿ ದಬ್ಬಾಳಿಕೆ ಮತ್ತು ಕಿರುಕುಳದಂತಹ ಕೆಲವು ನಡವಳಿಕೆಗಳನ್ನು ಸಣ್ಣ ಮಟ್ಟದ ಅಪರಾಧಗಳೆಂದು ಗುರುತಿಸಲ್ಪಟ್ಟಿದೆ. ಇದು ಸಾಮಾನ್ಯ ಘಟನೆಯೆಂಬಂತೆ ಪರಿಗಣಿಸಲ್ಪಟ್ಟಿದೆ. ಆದರೆ ವಾಸ್ತವದಲ್ಲಿ ಹೀಗಾಗಬಾರದು. ಇಂಥಾ ಘಟನೆಗಳು ಸಹ ಹಿಂಸೆಗೆ ಸಮವಾಗಿದೆ ಎಂದು ಕೋರ್ಟ್ ತಿಳಿಸಿದೆ. ಲೈಂಗಿಕ ಅಪರಾಧವನ್ನು ಕ್ಷಮಿಸುವ ವರ್ತನೆಗಳು (Behaviour) ನೊಂದವರ ಮೇಲೆ ಶಾಶ್ವತ ಪರಿಣಾಮವನ್ನು ಬೀರುತ್ತದೆ ಎಂದು ಕೋರ್ಟ್ ಹೇಳಿದೆ.
ಕರ್ನಾಟಕದಲ್ಲಿ ಹೆಚ್ಚಿದ ಮಹಿಳಾ ದೌರ್ಜನ್ಯ, ಕೊಲೆ ಪ್ರಕರಣ: ಬೆಂಗಳೂರು ನಂ. 3
ಗಂಡ, ಮಾವನಿಂದ ಅತ್ಯಾಚಾರಕ್ಕೊಳಗಾದ ಮಹಿಳೆ, ಅತ್ತೆಯಿಂದಲೇ ಕುಮ್ಮಕ್ಕು
ತನ್ನ ಸೊಸೆ (Daughter in law)ಯನ್ನು ಕ್ರೌರ್ಯ ಮತ್ತು ಕ್ರಿಮಿನಲ್ ಬೆದರಿಕೆಗೆ ಒಳಪಡಿಸಿದ್ದಕ್ಕಾಗಿ ಬಂಧನಕ್ಕೊಳಗಾದ ಮಹಿಳೆಯ ಸಾಮಾನ್ಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದಾಗ ನ್ಯಾಯಾಲಯವು ಈ ಅವಲೋಕನಗಳನ್ನು ಮಾಡಿದೆ. ಈ ಮಹಿಳೆ ತನ್ನ ಪತಿ ಮತ್ತು ಮಗನಿಂದ ಸೊಸೆಯ ಮೇಲೆ ಅತ್ಯಾಚಾರ (Rape) ಮಾಡಿಸಿ ಆ ವೀಡಿಯೋವನ್ನು ಅಶ್ಲೀಲ ಸೈಟ್‌ಗಳಲ್ಲಿ ಪೋಸ್ಟ್ ಮಾಡಿ ಹಣ ಸಂಪಾದಿಸಲು ಮುಂದಾಗಿದ್ದಳು.
'ಸಾಮಾನ್ಯವಾಗಿ ಇಂಥಾ ಪ್ರಕರಣಗಳಲ್ಲಿ ಮಹಿಳೆಯ ಗಂಡನೇ ಹೀಗೆ ಅತ್ಯಾಚಾರ ಮಾಡಿದಾಗ ಆತನಿಗೆ ವಿನಾಯಿತಿ ನೀಡಲಾಗುತ್ತದೆ. ಆದರೆ ಅತ್ಯಾಚಾರವೆಂಬುದು ತಾಳಿ ಕಟ್ಟಿದ ಗಂಡ ಮಾಡಿದರೂ ಅದು ಅತ್ಯಾಚಾರವೆಂದೇ ಪರಿಗಣಿಸಲಾಗುತ್ತದೆ. ಅದನ್ನು ರೇಪ್ ಎಂದೇ ಹೇಳಲಾಗುತ್ತದೆ' ಎಂದು ನ್ಯಾಯಾಲಯ ಹೇಳಿದೆ.
38ರ ಯುವತಿಗೆ ಮತ್ತಿನೌಷಧಿ ನೀಡಿ ರೇಪ್: 72 ವರ್ಷದ ನಿವೃತ್ತ ಐಎಎಸ್ ಅಧಿಕಾರಿ ವಿರುದ್ಧ ಕೇಸ್
'ಭಾರತದಲ್ಲಿ ಮಹಿಳೆಯ ಹಿಂಸಾಚಾರವು ಆಕೆಯ ಮೌನದಲ್ಲಿಯೇ ಮುಚ್ಚಿಹೋಗಿದೆ. ಮಹಿಳೆಯರು ಬಡತನ, ಪುರುಷನ ಮೇಲಿರುವ ಆರ್ಥಿಕ ಅವಲಂಬನೆ, ಸಾಮಾಜಿಕ ಒತ್ತಡ, ಬಹಿಷ್ಕಾರದ ಭಯದಿಂದಾಗಿ ಈ ಬಗ್ಗೆ ಮಾತನಾಡುತ್ತಿಲ್ಲ. ಆದ್ದರಿಂದ, ಭಾರತದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ನೈಜ ಘಟನೆಗಳು ಬಹುಶಃ ದತ್ತಾಂಶ ಸೂಚಿಸುವುದಕ್ಕಿಂತ ಹೆಚ್ಚಿನದಾಗಿದೆ. ಮಹಿಳೆಯರು ಲೈಂಗಿಕ ಕಿರುಕುಳವನ್ನು ಅನುಭವಿಸುತ್ತಲೇ ಇರುತ್ತಾರೆ. ಇದನ್ನು ಪ್ರತಿಭಟಿಸದ ಕಾರಣ ಅವರು ಹಿಂಸೆಗೆ ಒಳಗಾಗುವ ಪರಿಸರದಲ್ಲಿ ಉಳಿಯಬೇಕಾಗುತ್ತದೆ' ಕೋರ್ಟ್ ತಿಳಿಸಿದೆ.
50 ಅಮೇರಿಕನ್ ರಾಜ್ಯಗಳಲ್ಲಿ ವೈವಾಹಿಕ ಅತ್ಯಾಚಾರ ಕಾನೂನು ಬಾಹಿರ
50 ಅಮೇರಿಕನ್ ರಾಜ್ಯಗಳು, ಮೂರು ಆಸ್ಟ್ರೇಲಿಯಾದ ರಾಜ್ಯಗಳು, ನ್ಯೂಜಿಲೆಂಡ್, ಕೆನಡಾ, ಇಸ್ರೇಲ್, ಫ್ರಾನ್ಸ್, ಸ್ವೀಡನ್, ಡೆನ್ಮಾರ್ಕ್, ನಾರ್ವೆ, ಸೋವಿಯತ್ ಯೂನಿಯನ್, ಪೋಲೆಂಡ್ ಮತ್ತು ಜೆಕೊಸ್ಲೊವಾಕಿಯಾ ಮತ್ತು ಹಲವಾರು ಇತರ ದೇಶಗಳಲ್ಲಿ ವೈವಾಹಿಕ ಅತ್ಯಾಚಾರ ಕಾನೂನುಬಾಹಿರವಾಗಿದೆ ಎಂದು ಕೋರ್ಟ್ ಮಾಹಿತಿ ನೀಡಿದೆ.
ಅತ್ತೆ ಮೇಲೆ ರೇಪ್ ಕೇಸ್ ದಾಖಲಿಸಿದ ಸೊಸೆ: ವಿಚಾರಣೆಗೆ ಸುಪ್ರೀಂ ಸಮ್ಮತಿ
ಪ್ರಕರಣದ ವಿವರಗಳ ಪ್ರಕಾರ, ಸಂತ್ರಸ್ತೆಯ ಪತಿ, ಮಾವ ಮತ್ತು ಅತ್ತೆಯನ್ನು ರಾಜ್‌ಕೋಟ್ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 354 (ಎ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ ನಂತರ ಬಂಧಿಸಲಾಗಿದೆ. ಪ್ರಾಸಿಕ್ಯೂಷನ್ ಪ್ರಕಾರ, ಅರ್ಜಿದಾರರ ಮಗ, ತನ್ನ ಹಾಗೂ ಹೆಂಡತಿಯ ಖಾಸಗಿ ಕ್ಷಣಗಳ ನಗ್ನ ವೀಡಿಯೊಗಳನ್ನು ತನ್ನ ಮೊಬೈಲ್ ಫೋನ್‌ನಲ್ಲಿ ಚಿತ್ರೀಕರಿಸಿ ತನ್ನ ತಂದೆಗೆ ರವಾನಿಸಿದ್ದಾನೆ. ಸಂತ್ರಸ್ತೆಯ ಮಾವ ಕೂಡ ಆಕೆ ಒಂಟಿಯಾಗಿದ್ದಾಗ ಕಿರುಕುಳ ನೀಡಿದ್ದಾನೆ ಎಂದು ಪ್ರಾಸಿಕ್ಯೂಷನ್ ಆರೋಪಿಸಿದೆ. ಈ ಬಗ್ಗೆ ಮಹಿಳೆಯ ಅತ್ತೆಗೂ ತಿಳಿದಿತ್ತು. ಆದರೆ ಆಕೆ ಅಂಥಾ ಕೃತ್ಯವನ್ನು ತನ್ನ ಪತಿ ಮತ್ತು ಮಗ ಮಾಡದಂತೆ ತಡೆಯದೆ ಸುಮ್ಮನಿದ್ದಳು ಎಂಬುದನ್ನು ನ್ಯಾಯಾಲಯವು ಗಮನಿಸಿದೆ.