Asianet Suvarna News Asianet Suvarna News

ಬದುಕಿನ ಇಳಿಸಂಜೆಗೆ ರೆಡಿನಾ? ನೆಮ್ಮದಿಯ ನಿವೃತ್ತಿ ಜೀವನಕ್ಕೆ ತಯಾರಿ ಹೀಗಿರಲಿ

ಬದುಕಿನಲ್ಲಿ ಯಾರೂ ಇಷ್ಟಪಡದ ಘಟ್ಟವೆಂದರೆ ಅದು ಮುಪ್ಪು. ದೇಹದಲ್ಲಿ ಶಕ್ತಿಯಿರುವ ತನಕ ನಿತ್ಯದ ಬದುಕಿನೊಂದಿಗೆ ಗುದ್ದಾಡುವ ನಾವು, ವೃದ್ಧಾಪ್ಯದ ಬಗ್ಗೆ ಅಪ್ಪಿತಪ್ಪಿಯೂ ಯೋಚಿಸುವುದಿಲ್ಲ. ಆದರೆ, ಬದುಕಿನ ಇಳಿಸಂಜೆಯನ್ನು ನೆಮ್ಮದಿಯಿಂದ ಕಳೆಯಲು ದೇಹದಲ್ಲಿ ಶಕ್ತಿಯಿರುವಾಗಲೇ ಒಂದಿಷ್ಟು ನಡೆಸುವುದು ಅಗತ್ಯ.

Precautions you should take for a happy retirement life
Author
Bangalore, First Published Feb 1, 2020, 12:49 PM IST

ಹಸಿರೆಲೆ ಹಣ್ಣಾಗಲೇಬೇಕು,ಅದೇ ರೀತಿ ಹುಟ್ಟಿದ ಪ್ರತಿ ಮನುಷ್ಯನೂ ವೃದ್ಧಾಪ್ಯವನ್ನು ಅನುಭವಿಸಲೇಬೇಕು. ಆದರೆ, ವೃದ್ಧಾಪ್ಯ ಎಂದ ತಕ್ಷಣ ಮನಸ್ಸಲ್ಲಿ ಅವ್ಯಕ್ತ ಭಯ ಹುಟ್ಟಿಕೊಳ್ಳುತ್ತದೆ. ಈ ಸಮಯದಲ್ಲಿ ಕಾಡುವ ಬಹುಮುಖ್ಯ ಸಮಸ್ಯೆಗಳೆಂದರೆ ಹಣಕಾಸು ಹಾಗೂ ಆರೋಗ್ಯ.ಜೊತೆಗೆ ಭಾವನಾತ್ಮಕ ಏರಿಳಿತಗಳು ಕೂಡ ಇದ್ದೇಇರುತ್ತವೆ. ಇಳಿ ವಯಸ್ಸಿನಲ್ಲಿ ಯಾರಿಗೂ ಹೊರೆಯಾಗದಂತೆ ನೆಮ್ಮದಿಯ ಕ್ಷಣಗಳನ್ನು ಕಳೆಯಬೇಕೆಂದರೆ ಮಾನಸಿಕವಾಗಿ, ಆರ್ಥಿಕವಾಗಿ ಸಾಕಷ್ಟು ಸಿದ್ಧತೆ ಮಾಡಿಕೊಳ್ಳುವುದು ಅತ್ಯಗತ್ಯ. ಬೆಂಕಿ ಬಿದ್ದ ಮೇಲೆ ಬಾವಿ ತೋಡುವುದು ಎಂಬಂತೆ 60 ವರ್ಷ ದಾಟಿದ ಬಳಿಕ ವೃದ್ಧಾಪ್ಯದ ಸಿದ್ಧತೆ ನಡೆಸುವ ಬದಲು ನಡುವಯಸ್ಸಿನಲ್ಲೇ ತಯಾರಿ ಪ್ರಾರಂಭಿಸಿದರೆ ಇಳಿಸಂಜೆಯನ್ನು ಮಧುರವಾಗಿ ಕಳೆಯಬಹುದು.

1.ಉತ್ತಮ ಬ್ಯಾಂಕ್ ಬ್ಯಾಲೆನ್ಸ್: ನಿವೃತ್ತಿ ಬಳಿಕ ನಿಮ್ಮ ಜೀವನ ಉತ್ತಮವಾಗಿರಬೇಕೆಂದರೆ ಬ್ಯಾಂಕ್ ಬ್ಯಾಲೆನ್ಸ್ ಚೆನ್ನಾಗಿರುವುದು ಅಗತ್ಯ.‘ತಲೆಯಲ್ಲಿ ಬೆಳ್ಳಿ ಕೂದಲು ಹೊಳೆಯುವಾಗ ಜೇಬಿನಲ್ಲಿ ಬಂಗಾರದ ನಾಣ್ಯಗಳು ಝುಣಗುಡಬೇಕು’ ಎಂಬ ಮಾತಿನಂತೆ ಇಳಿ ವಯಸ್ಸು ಪ್ರಾರಂಭವಾಗುವಾಗ ನಿಮ್ಮ ಕೈಯಲ್ಲಿ ಹಣವಿರಬೇಕು. ಆದಕಾರಣ ಮೊದಲ ಸಂಬಳ ಪಡೆಯುವ ದಿನದಿಂದಲೇ ನಿವೃತ್ತಿ ಬದುಕಿಗೆಂದು ಒಂದಿಷ್ಟು ಹಣವನ್ನು ಉಳಿತಾಯ ಅಥವಾ ಹೂಡಿಕೆ ಮಾಡುವ ಪ್ರವೃತ್ತಿ ಬೆಳೆಸಿಕೊಂಡರೆ ವೃದ್ಧಾಪ್ಯದಲ್ಲಿ ಯಾರಿಗೂ ಹೊರೆಯಾಗದೆ ಆರ್ಥಿಕ ಸ್ವಾವಲಂಬನೆಯ ಜೀವನ ನಡೆಸಬಹುದು. ಉದ್ಯೋಗದ ಆರಂಭಿಕ ದಿನಗಳಲ್ಲಿ ಸಾಧ್ಯವಾಗದಿದ್ದರೂ ನಡುವಯಸ್ಸಿನಲ್ಲಿ 60ರ ನಂತರದ ಬದುಕಿಗೆಂದು ಒಂದಿಷ್ಟು ಹಣವನ್ನು ಹೂಡಿಕೆ ಮಾಡಲು ಮರೆಯಬೇಡಿ.

ಮಕ್ಕಳಿಗಾಗಿ ಮೀಸಲಿಡುವ ಹಿರಿಜೀವಗಳ ಕೊನೆಗಾಲದಲ್ಲಿ ನಾವೆಷ್ಟುಆಸರೆಯಾಗುತ್ತೇವೆ?

2.ವಿವಾಹವಾದ ಮಕ್ಕಳೊಂದಿಗೆ ನೆಲೆಸಬೇಡಿ: ವೃದ್ಧಾಪ್ಯದಲ್ಲಿ ಮನಸ್ಸಿನ ನೆಮ್ಮದಿ ಹಾಳಾಗಬಾರದು ಎಂಬ ಬಯಕೆ ನಿಮಗಿದ್ದರೆ ಮದುವೆಯಾದ ಮಕ್ಕಳೊಂದಿಗೆ ನೆಲೆಸಬೇಡಿ.ಅವರ ಮನೆಗೆ ಹತ್ತಿರವೇ ಬೇರೆ ಮನೆಯೊಂದನ್ನು ನೋಡಿ ಅಲ್ಲಿಗೆ ಶಿಫ್ಟ್ ಆಗಿ ಅಥವಾ ಅವರ ಪಕ್ಕದ ಮನೆಯಲ್ಲೇ ನೆಲೆಸಿ ತೊಂದರೆಯಿಲ್ಲ,ಆದರೆ ಅವರೊಂದಿಗೆ ಮಾತ್ರ ಬೇಡ.ಹೆತ್ತವರು ಎಂಬ ಕಾರಣಕ್ಕೆ ಮಕ್ಕಳ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸಬೇಡಿ, ಹಾಗೆಯೇ ಅವರು ಕೂಡ ನಿಮ್ಮ ಸ್ವಾತಂತ್ರ್ಯಕ್ಕೆ ಧಕ್ಕೆಯುಂಟು ಮಾಡದಂತೆ ಎಚ್ಚರ ವಹಿಸಿ. ಮಕ್ಕಳಿಗೆ ಅನವಶ್ಯಕವಾಗಿ ಸಲಹೆಗಳನ್ನು ನೀಡಲು ಹೋಗಬೇಡಿ. ಅವರಾಗಿಯೇ ನಿಮ್ಮ ಬಳಿ ಸಲಹೆ ಕೇಳಿದರೆ ಖಂಡಿತವಾಗಿಯೂ ಮಾರ್ಗದರ್ಶನ ನೀಡಿ.

3.ಆರೋಗ್ಯದ ಕಡೆಗೆ ಗಮನ ನೀಡಿ: ವಯಸ್ಸಾಗುತ್ತಿದ್ದಂತೆ ಆರೋಗ್ಯ ಕೈಕೊಡಲು ಪ್ರಾರಂಭಿಸುತ್ತದೆ. ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುತ್ತಿರಿ. ಯೋಗ, ಧ್ಯಾನ ಮತ್ತು ವಾಕಿಂಗ್ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಉತ್ತಮವಾಗಿಡಲು ನೆರವು ನೀಡುತ್ತವೆ. ಪ್ರತಿದಿನ ಇಂಥ ಚಟುವಟಿಕೆಗಳಿಗೆ ಒಂದಿಷ್ಟು ಸಮಯ ಮೀಸಲಿಡಿ.ನಿಮ್ಮ ವೈದ್ಯರೊಂದಿಗೆ ಉತ್ತಮ ಸಂಬಂಧವಿಟ್ಟುಕೊಳ್ಳುವ ಜೊತೆಗೆ ಆಗಾಗ ಅವರನ್ನು ಭೇಟಿಯಾಗಿ ಸೂಕ್ತ, ಸಲಹೆ ಸೂಚನೆಗಳನ್ನು ಪಡೆಯಿರಿ.

4.ಸಂಗಾತಿಗೆ ಭರಪೂರ ಪ್ರೀತಿ ಕೊಡಿ: ಮುಪ್ಪು ಆವರಿಸುತ್ತಿದ್ದಂತೆ ಸಂಗಾತಿಯ ಅಗತ್ಯ ಹಿಂದೆಂದಿಗಿಂತ ಹೆಚ್ಚಿರುತ್ತದೆ. ಪತಿ-ಪತ್ನಿ ಪರಸ್ಪರ ಒಬ್ಬರಿಗೊಬ್ಬರು ಊರುಗೋಲಾಗುವ ಸಮಯವಿದು. ನಿಮ್ಮ ಸಂಗಾತಿಯನ್ನು ಮನಪೂರ್ವಕವಾಗಿ ಪ್ರೀತಿಸಿ. ಅವರೊಂದಿಗೆ ನಯವಾಗಿ ಮಾತನಾಡಿ.ಇಬ್ಬರು ಜೊತೆಯಾಗಿ ಪ್ರವಾಸಕ್ಕೆ ತೆರಳಿ. ಆಗಾಗ ಸಿನಿಮಾ ನೋಡಲು ಹೋಗಿ. ಪತಿಯು ಪತ್ನಿಗೆ ಉಳಿತಾಯ ಮತ್ತು ಹೂಡಿಕೆ ಬಗ್ಗೆ ಮಾಹಿತಿ ನೀಡುವ ಜೊತೆಗೆ ಬ್ಯಾಂಕ್ ವ್ಯವಹಾರಗಳನ್ನು ಕಲಿಸಬೇಕು. ಅದೇರೀತಿ ಪತ್ನಿ ಅಡುಗೆ ಮತ್ತು ಮನೆ ನಿರ್ವಹಣೆ ಬಗ್ಗೆ ಪತಿಗೆ ತರಬೇತಿ ನೀಡಬೇಕು.ಇದರಿಂದ ಭವಿಷ್ಯದಲ್ಲಿ ಒಬ್ಬರನ್ನೊಬ್ಬರು ಅಗಲಿದರೂ ಜೀವನ ನಿರ್ವಹಣೆಗೆ ಯಾವುದೇ ತೊಂದರೆಯಿಲ್ಲದಂತೆ ಒಂಟಿಯಾಗಿ ಎಲ್ಲವನ್ನೂ ನಿರ್ವಹಿಸಲು ಸಾಧ್ಯವಾಗುತ್ತದೆ.

ನಲ್ಮೇಯ ಮಾತಿಗೆ ಹಿರಿ ಹಿರಿ ಹಿಗ್ಗುವ ಹಿರಿಯರು

5.ಆಸ್ತಿ ಬಗ್ಗೆ ಎಚ್ಚರವಿರಲಿ: ನಿಮ್ಮ ಹಣ,ಸಂಪತ್ತಿನ ಬಗ್ಗೆ ಎಚ್ಚರಿಕೆ ಹೊಂದಿರಿ.ಇವು ನಿಮ್ಮ ಕೈತಪ್ಪಿ ಹೋಗದಂತೆ ಜಾಗ್ರತೆ ವಹಿಸಿ.ನಿಮಗೆ ಚಿರಪರಿಚಿತರಾಗಿರುವ ವ್ಯಕ್ತಿಗಳೇ ಮೋಸ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಬೀ ಕೇರ್ ಫುಲ್. ಅದೇ ರೀತಿ ಹೆಚ್ಚಿನ ಬಡ್ಡಿ ನೀಡುತ್ತಾರೆ ಎಂಬ ಕಾರಣಕ್ಕೆ ಗೊತ್ತು ಪರಿಚಯವಿಲ್ಲದ ಬ್ಯಾಂಕ್‍ನಲ್ಲಿ ಯಾವುದೇ ಕಾರಣಕ್ಕೂ ಹಣವಿಡಬೇಡಿ. ನಿಮ್ಮ ಬ್ಯಾಂಕ್ ಹಾಗೂ ಇತರ ಅಕೌಂಟ್‍ಗಳಿಗೆ ಪತಿ/ಪತ್ನಿ ಅಥವಾ ಮಕ್ಕಳನ್ನು ನ್ಯಾಮಿನೇಷನ್ ಮಾಡಲು ಮರೆಯಬೇಡಿ. ಹಾಗೆಯೇ ನೀವು ಬಡವರಾಗಿದ್ದರೂ ವಿಲ್ ಮಾಡಿಸಿಡಿ. 

6.ಉಡುಗೊರೆ ನೀಡಿ ಖುಷಿಪಡಿ: ನಿಮ್ಮ ಮಕ್ಕಳು,ಮೊಮ್ಮಕ್ಕಳು,ಸಂಬಂಧಿಕರು ಹಾಗೂ ಆತ್ಮೀಯರಿಗೆ ಹಬ್ಬ,ಬರ್ತ್‍ಡೇ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ಉಡುಗೊರೆ ನೀಡಲು ಮರೆಯಬೇಡಿ.ನೀವೇನೂ ದೊಡ್ಡ ಉಡುಗೊರೆ ನೀಡಬೇಕಾಗಿಲ್ಲ.ಪುಟ್ಟದಾದ ಗಿಫ್ಟ್ ನೀಡಿದರೂ ಸಾಕು ಅವರಿಗೆ ನಿಮ್ಮ ಬಗ್ಗೆ ಪ್ರೀತಿ, ಗೌರವ ಮೂಡುತ್ತದೆ.

7.ಡೈರಿ ನಿರ್ವಹಣೆ ಮಾಡಿ: ವಯಸ್ಸಾಗುತ್ತಿದ್ದಂತೆ ಸ್ಮರಣಶಕ್ತಿ ಕುಂದುತ್ತದೆ. ನಿಮ್ಮೆಲ್ಲ ಹಿತೈಷಿಗಳ ಫೋನ್ ನಂಬರ್‍ಗಳನ್ನು ಡೈರಿಯಲ್ಲಿ ಬರೆದಿಡಿ. ಜೊತೆಗೆ ಆತ್ಮೀಯರ ಹೆಸರುಗಳು ಹಾಗೂ ಅವರಿಗೆ ಸಂಬಂಧಿಸಿದ ಕಾರ್ಯಕ್ರಮಗಳ ಬಗ್ಗೆಯೂ ಡೈರಿಯಲ್ಲಿ ನಮೂದಿಸಿ.

8.ಹೋಟೆಲ್ ಫುಡ್‍ಗೆ ನೋ ಅನ್ನಿ: ಮನೆಯ ಆಹಾರವನ್ನೇ ಸೇವಿಸಿ. ಹೋಟೆಲ್ ಅಥವಾ ಹೊರಗಡೆಯ ಆಹಾರವನ್ನು ಆದಷ್ಟು ವರ್ಜಿಸಿ.ತಿನ್ನಲೇಬೇಕಾದ ಅನಿವಾರ್ಯತೆ ಎದುರಾದಾಗ ಆದಷ್ಟು ಕಡಿಮೆ ತಿನ್ನಿ.

ಜೀವನವೇ ಸಾಕು ಅನಿಸ್ತಿದೆಯಾ?

9.ಮನೆಕೆಲಸದವರ ಬಗ್ಗೆ ಎಚ್ಚರವಿರಲಿ: ಮನೆಕೆಲಸದವರಿಂದಲೇ ವೃದ್ಧರು ಮೋಸ ಹೋದ, ಜೀವಕ್ಕೇ ಅಪಾಯವಾದ ಅನೇಕ ಸುದ್ದಿಗಳನ್ನು ನೀವು ಮಾಧ್ಯಮಗಳಲ್ಲಿ ನೋಡಿರಬಹುದು.ಆದಕಾರಣ ಮನೆಕೆಲಸದವರ ಬಗ್ಗೆ ಸದಾ ಎಚ್ಚರಿಕೆ ವಹಿಸಿರಿ. ಮನೆಯಲ್ಲಿರುವ ಹಣ, ಒಡವೆಗಳ ಬಗ್ಗೆ ಯಾವುದೇ ಕಾರಣಕ್ಕೂ ಅವರಿಗೆ ಮಾಹಿತಿ ಸಿಗದಂತೆ ಎಚ್ಚರ ವಹಿಸಿ.

10.ಎಮರ್ಜೆನ್ಸಿ ವಸ್ತುಗಳು ಮನೆಯಲ್ಲಿರಲಿ: ಮನೆಯಲ್ಲಿ ವಾಕಿಂಗ್ ಸ್ಟಿಕ್, ಟಾರ್ಚ್, ವಿಶಲ್‍ಗಳನ್ನು ಇಟ್ಟಿರಿ. ತುರ್ತು ಸಂದರ್ಭಗಳಲ್ಲಿ ಇವು ಉಪಯೋಗಕ್ಕೆ ಬರುತ್ತವೆ. 

11.ವೃದ್ಧಾಶ್ರಮದ ಬಗ್ಗೆಯೂ ಪ್ಲ್ಯಾನ್ ಸಿದ್ಧವಿರಲಿ: ನಿಮ್ಮ ಮಕ್ಕಳು ದೂರದ ಊರಲ್ಲಿದ್ದರೆ ಅಥವಾ ಅವರು ನಿಮಗೆ ನೆರವಾಗುವ ಸೂಚನೆಗಳು ಇಲ್ಲವೆಂದರೆ ವೃದ್ಧಾಶ್ರಮದ ಮೊರೆ ಹೋಗುವುದು ಅನಿವಾರ್ಯ. ಹೀಗಾಗಿ ಯಾವ ವೃದ್ಧಾಶ್ರಮದಲ್ಲಿ ನೀವು ಇರಲು ಬಯಸುತ್ತೀರಿ ಎಂಬ ಬಗ್ಗೆ ಮೊದಲೇ ಯೋಚಿಸಿಟ್ಟುಕೊಳ್ಳಿ. ವಯಸ್ಸು 60 ದಾಟುತ್ತಿದ್ದಂತೆ ಬದುಕಿಗೆ ಯಾವಾಗ ಬೇಕಾದರೂ ಫುಲ್‍ಸ್ಟಾಪ್ ಬೀಳಬಹುದು. ಹೀಗಾಗಿ ಎಲ್ಲದಕ್ಕೂ ಸಿದ್ಧವಾಗಿರುವುದು ಅಗತ್ಯ. 

Follow Us:
Download App:
  • android
  • ios