Parenting Tips: ಮಕ್ಕಳನ್ನು ಹೇಗೆ ಬೆಳೆಸ್ಬೇಕು ? ಸುಧಾ ಮೂರ್ತಿ ಏನ್ ಹೇಳ್ತಾರೆ ಕೇಳಿ
ಇವತ್ತಿನ ಮಕ್ಕಳನ್ನು ನೀವು ನೋಡಿರಬಹುದು. ವಿಪರೀತ ಹಠ. ಹೇಳಿದ ಮಾತು ಒಂದನ್ನೂ ಕೇಳುವುದಿಲ್ಲ. ಶಿಸ್ತು (Discipline) ಅಂತೂ ಇಲ್ಲವೇ ಇಲ್ಲ. ಚಿಕ್ಕಂದಿನಲ್ಲೇ ಮಕ್ಕಳು (Children) ಹೀಗಿದ್ದಾಗ ದೊಡ್ಡವರಾದಾಗಲೂ ಸರಿ ಮಾಡುವುದು ಕಷ್ಟ. ಹಾಗಿದ್ರೆ ಮಕ್ಕಳನ್ನು ಹೇಗೆ ಬಳಸ್ಬೇಕು ? ಸುಧಾ ಮೂರ್ತಿ ಏನ್ ಹೇಳ್ತಾರೆ ಕೇಳಿ.
ಸುಧಾ ಮೂರ್ತಿ ಇಂದಿನ ಪೀಳಿಗೆಗೆ ಉಲ್ಲೇಖ ಪುಸ್ತಕ. ಅದು ಪೋಷಕರ ಸಲಹೆಯಾಗಿರಲಿ ಅಥವಾ ಜೀವನದ ಸಮಸ್ಯೆಗಳಿಗೆ ಉತ್ತರವಾಗಿರಲಿ. ಸಮಸ್ಯೆಯನ್ನು ಹೇಗೆ ಪರಿಹರಿಸುವುದು ಎಂಬುದನ್ನು ವಿವರಿಸುವ ವಿಶಿಷ್ಟ ವಿಧಾನವನ್ನು ಸುಧಾ ಮೂರ್ತಿ ಹೊಂದಿದ್ದಾರೆ. ಸುಧಾಮೂರ್ತಿಯವರ ಜೀವನ ಕಥೆ, ಜೀವಾನುಭವ ಜೀವನದೆಡೆಗಿನ ದೃಷ್ಟಿಕೋನವನ್ನು ಬದಲಾಯಿಸುತ್ತದೆ. 1950ರಲ್ಲಿ ಜನಿಸಿದ ಸುಧಾಮೂರ್ತಿಯವರು, ಇನ್ಫೋಸಿಸ್‌ನ ಸಹ ಸಂಸ್ಥಾಪಕರಾದ ಎನ್.ಆರ್ ನಾರಾಯಣ ಮೂರ್ತಿಯವರ ಪತ್ನಿ. ಇಂಜಿನಿಯರ್, ಸಮಾಜ ಸೇವಕರು, ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀಯನ್ನು ಪಡೆದಿದ್ದಾರೆ.
ಸುಧಾ ಮೂರ್ತಿ ಎರಡು ಮಕ್ಕಳಿಗೆ ತಾಯಿ. ಅವರು ಒಂದು ಕಡೆ ಸಾಂಪ್ರದಾಯಿಕತೆಯನ್ನು ಪೋಷಕರಲ್ಲಿ ಅಳವಡಿಸಲು ಬಯಸುತ್ತಾರೆ ಮತ್ತು ಮತ್ತೊಂದೆಡೆ ತಮ್ಮ ಮಕ್ಕಳು ಆಧುನಿಕತೆಗೆ ಸಮನಾಗಿರಬೇಕೆಂದು ಬಯಸುತ್ತಾರೆ. ಹಾಗಿದ್ರೆ ಮಕ್ಕಳು (Children) ಉತ್ತಮ ಪ್ರಜೆಯಾಗಲು ಅವರನ್ನು ಹೇಗೆ ಬೆಳೆಸಬೇಕು. ಸುಧಾಮೂರ್ತಿಯವರು ಏನ್ ಹೇಳ್ತಾರೆ ತಿಳಿಯೋಣ.
Parenting Tips: ಹೊಟ್ಟೆಕಿಚ್ಚು ಪಡುವ ಮಕ್ಕಳ ಪಾಲಕರಿಗೆ ಕಿವಿಮಾತು
ಸಂಬಂಧ ಉಸಿರುಗಟ್ಟಿಸದಂತಿರಲಿ
ಪ್ರತಿಯೊಂದು ಸಂಬಂಧದಂತೆಯೇ, ಮಕ್ಕಳು ಮತ್ತು ಪೋಷಕರ ನಡುವಿನ ಸಂಬಂಧ (Relationship)ದಲ್ಲಿ ಪರಸ್ಪರರ ಜಾಗವನ್ನು ಗೌರವಿಸಬೇಕು. ಹೀಗೆ ಮಾಡುವುದರಿಂದ ಅವರ ನಿರ್ಧಾರಗಳು, ಅವರ ಇಷ್ಟಗಳು ಮತ್ತು ಅವರ ಇಷ್ಟವಿಲ್ಲದಿರುವಿಕೆಗಳನ್ನು ಮರುಪರಿಶೀಲಿಸುವ ಅವಕಾಶವನ್ನು ನೀಡುತ್ತದೆ. ಸಂದರ್ಶನವೊಂದರಲ್ಲಿ ಸುಧಾ ಮೂರ್ತಿಯವರು ಹೇಳಿದಂತೆ, ನಿಮ್ಮ ಮಗುವಿಗೆ ಕೆಲವು ಪದಾರ್ಥಗಳನ್ನು ತಿನ್ನಲು ಇಷ್ಟವಿಲ್ಲದಿದ್ದರೆ, ಸ್ವಲ್ಪ ಸಮಯದವರೆಗೆ ಅವುಗಳನ್ನು ಹಾಗೇ ಬಿಡಿ. ಬಲವಂತವಾಗಿ ತಿನ್ನುವಂತೆ ಮಾಡಬೇಡಿ. ಅವರು ಬಯಸಿದಾಗ ಅದನ್ನು ತಿನ್ನಲು ಬಿಡಿ. ಅವರೇ ಯಾವಾಗ ತಿನ್ನಬೇಕೆಂದು ನಿರ್ಧರಿಸಲಿ. ಹೀಗೆ ಹವ್ಯಾಸ (Habit), ವಿದ್ಯಾಭ್ಯಾಸ, ಉದ್ಯೋಗ (Job) ಎಲ್ಲಾ ವಿಚಾರದಲ್ಲೂ ಅವರ ಆಯ್ಕೆಗೆ ಮೊದಲ ಆದ್ಯತೆಯಿರಲಿ.
ಮಕ್ಕಳ ಇಷ್ಟಗಳನ್ನು ಆಯ್ಕೆ ಮಾಡಲು ಬಿಡಿ
ಯಾವುದೇ ವಿಷಯಗಳನ್ನು ಅನುಸರಿಸಲು ಮಗುವನ್ನು ಒತ್ತಾಯಿಸಬೇಡಿ. ನಿಮ್ಮ ಅಭ್ಯಾಸಗಳನ್ನು ಮಕ್ಕಳು ಅನುಸರಿಸಬೇಕೆಂದು ಬಯಸಬೇಡಿ. ಅವರಿಗಿಷ್ಟವಾದ ಹವ್ಯಾಸ ಏನಿದೆಯೋ ಅದನ್ನೇ ಅನುಸರಿಸಲಿ. ಪೋಷಕರು ತಮ್ಮ ಅಭಿಪ್ರಾಯವನ್ನು ಮಕ್ಕಳ ಮೇಲೆ ಹೇರುವುದನ್ನು ಮಾಡಬಾರದು. ಇದರಿಂದ ಮಕ್ಕಳಲ್ಲಿರುವ ಪ್ರತಿಭೆಯನ್ನು ಚಿವುಟಿದಂತಾಗುತ್ತದೆ.
Parenting Tips: ಹದಿಹರೆಯದವರು ನಿಮ್ಮ ಮಾತು ಕೇಳಬೇಕು ಅಂದರೆ ಹೀಗೆ ಮಾಡಿ..
ಸರಳವಾಗಿ ಬದುಕಲು ಕಲಿಯಿರಿ
ಸರಳ ಜೀವನ (Life)ವು ಬದುಕಲು ಸುಲಭವಾದ ಮಾರ್ಗವಾಗಿದೆ. ಅದರಲ್ಲೂ ಸುಧಾಮೂರ್ತಿ ಸರಳವಾಗಿ ಬದುಕಿ ಬಾಳುತ್ತಿರುವವರು. ಅವರು ಅದೇ ಪಾಠವನ್ನು ಮಕ್ಕಳಿಗೆ ಕಲಿಸುವಂತೆ ಸೂಚಿಸುತ್ತಾರೆ. ಮನುಷ್ಯನದು ಮೂರು ದಿನದ ಜೀವನ. ಹೀಗಾಗಿ ಯಾರಿಗೂ ತೋರಿಸಿಕೊಳ್ಳಲು, ಅಂತಸ್ತಿನ ತೋರ್ಪಡಿಕೆಗಾಗಿ ಬದುಕಬೇಕಿಲ್ಲ. ನಮ್ಮ ಖುಷಿಗಾಗಿ ನಾವು ಜೀವನ ನಡೆಸಿದರೆ ಸಾಕು. ಅದು ಆಹಾರವಾಗಲೀ ಅಥವಾ ಉಡುಗೆಯಾಗಲೀ ಅಥವಾ ಮನೆಯ ಅಲಂಕಾರವಾಗಲಿ, ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷರು ಯಾವಾಗಲೂ ತಮ್ಮ ಜೀವನದಲ್ಲಿ ಸರಳ ಕ್ರಮವನ್ನು ಅನುಸರಿಸುತ್ತಾರೆ.
ಶೇರಿಂಗ್ ಈಸ್ ಕೇರಿಂಗ್
ಮಕ್ಕಳಿಗೆ ಕಲಿಸಿಕೊಡಬೇಕಾದ ಬಹುಮುಖ್ಯ ಗುಣಗಳಲ್ಲಿ ಇದು ಒಂದಾಗಿದೆ ಎಂದು ಸುಧಾಮೂರ್ತಿ ಹೇಳುತ್ತಾರೆ. ಇದಕ್ಕಾಗಿ ಅವರು ತಮ್ಮ ಜೀವನದಲ್ಲಿ ನಡೆದ ಘಟನೆಯನ್ನು ಉದಾಹರಣೆಯಾಗಿ ನೀಡುತ್ತಾರೆ. ಚಿಕ್ಕಂದಿನಲ್ಲಿ ಮಗ ತನ್ನ ಬರ್ತ್‌ಡೇ ಪಾರ್ಟಿಯನ್ನು ಆಯೋಜಿಸುವ ಬಗ್ಗೆ ಮಾತನಾಡುತ್ತಾನೆ. ಆದರೆ ಸುಧಾಮೂರ್ತಿಯವರು ಪಾರ್ಟಿಗೆ 50,000 ರೂಪಾಯಿಗಳನ್ನು ಖರ್ಚು ಮಾಡುವ ಬದಲು, ಕಡಿಮೆ ವೆಚ್ಚದಲ್ಲಿ ಸಣ್ಣ ಪಾರ್ಟಿಯನ್ನು ಆಯೋಜಿಸಲು ಸೂಚಿಸುತ್ತಾರೆ. ಉಳಿದ ಮೊತ್ತವನ್ನು ತಮ್ಮ ಚಾಲಕನ ಮಕ್ಕಳ ಶಿಕ್ಷಣಕ್ಕಾಗಿ ನೀಡುವಂತೆ ಹೇಳುತ್ತಾರೆ. ಮೊದಲು ಇದಕ್ಕೆ ಒಪ್ಪದ ಮಗ ನಂತರ ತಾಯಿಯ ಮಾತನ್ನು ಒಪ್ಪಿಕೊಂಡು ಅನುಸರಿಸುತ್ತಾನೆ. ಹೀಗೆ ದೊಡ್ಡವನಾದ ಬಳಿಕ, ಹಲವು ವರ್ಷಗಳ ನಂತರ, 2001ರಲ್ಲಿ ಭಾರತದಲ್ಲಿ ನಡೆದ ಸಂಸತ್ತಿನ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಸೈನಿಕರ ಕುಟುಂಬಗಳಿಗೆ ಸಹಾಯ ಮಾಡಲು ಹಣವನ್ನು ಬಳಸಲು ಹೇಳಿದರು..
ಮಕ್ಕಳ ಮೇಲೆ ಮಾತ್ರ ಗಮನ ಹರಿಸಬೇಡಿ
ಮಕ್ಕಳನ್ನು ಬೆಳೆಸುವ ರೀತಿಗೆ ಹೆಚ್ಚು ಮಹತ್ವ ನೀಡುವ ಅಗತ್ಯವಿದ್ದರೂ, ಅವರ ಮೇಲೆ ಒತ್ತಡ ಹೇರುವುದನ್ನು ಮಾಡಬಾರದು. ಇದು ಮಗುವಿನ ಸ್ವಂತ ಪ್ರತಿಭೆಯನ್ನು ಗಮನಿಸುವ ಸಾಮರ್ಥ್ಯವನ್ನು ನಿಗ್ರಹಿಸುತ್ತದೆ. ಸಂದರ್ಶನವೊಂದರಲ್ಲಿ ಸುಧಾಮೂರ್ತಿ, ಪೋಷಕರು (Parents)ಯಾವಾಗಲೂ ಮಕ್ಕಳ ಮೇಲೆ ಗಮನ ಕೇಂದ್ರೀಕರಿಸಬೇಡಿ ಎಂದು ಕಿವಿಮಾತು ಹೇಳಿದರು. ಮಕ್ಕಳಿಗೆ ಎಲ್ಲವನ್ನೂ ಪದೇ ಪದೇ ಹೇಳುವ ಬದಲು ಟಿವಿ ಅಥವಾ ಫೋನ್ ಸ್ವಿಚ್ ಆಫ್ ಮಾಡಿ ಮತ್ತು ನೀವೇ ಓದಲು ಕುಳಿತುಕೊಳ್ಳಿ. ಮಕ್ಕಳು ಇದನ್ನೇ ಅನುಸರಿಸುತ್ತಾರೆ. ನಿಮ್ಮ ಮಗುವಿಗೆ ಈಜು, ಪಿಯಾನೋ, ಭಾಷಣ, ಕ್ರಿಕೆಟ್, ಕಲೆ ಯಾವುದರಲ್ಲಿ ಆಸಕ್ತಿಯಿದೆಯೋ ಅದನ್ನು ಅವರೇ ಆಯ್ಕೆ ಮಾಡಿಕೊಳ್ಳಿ. ನೀವು ಅವರನ್ನು ನಿಮಗಿಷ್ಟವಾದ ಕ್ಲಾಸ್‌ಗೆ ಸೇರಿಸಲು ಹೋಗಬೇಡಿ.