ಎನ್ಡಿಟಿವಿ ಶೃಂಗಸಭೆಯಲ್ಲಿ ಜೀರೋಧಾ ಸಹಸಂಸ್ಥಾಪಕ ನಿಖಿಲ್ ಕಾಮತ್ ತಮ್ಮ ಮದುವೆ ಮತ್ತು ಭವಿಷ್ಯದ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ತಮಗೆ ಸ್ವಾತಂತ್ರ್ಯ ಮತ್ತು ನೆಮ್ಮದಿ ಮುಖ್ಯವಾಗಿದ್ದು, ಭವಿಷ್ಯದ ಬಗ್ಗೆ ಯಾವುದೇ ಖಚಿತತೆ ಇಲ್ಲ ಎಂದಿದ್ದಾರೆ.
ನವದೆಹಲಿ (ಅ.22): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಂತೆ ನೀವು ಕೂಡ ಮದುವೆ ಮತ್ತು ಮಕ್ಕಳಿಲ್ಲದ ಜೀವನವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೀರಾ? - 'ಎನ್ಡಿಟಿವಿ ವರ್ಲ್ಡ್ ಸಮ್ಮಿಟ್ 2026'ರಲ್ಲಿ ಎನ್ಡಿಟಿವಿಯ ಸಿಇಒ ರಾಹುಲ್ ಕನ್ವಲ್ ಅವರು ಕೇಳಿದ ಪ್ರಶ್ನೆಗೆ ಜೀರೋಧಾ (Zerodha) ಸಹಸಂಸ್ಥಾಪಕ ನಿಖಿಲ್ ಕಾಮತ್ ಅವರು ಯಾವುದೇ ಖಚಿತ ಉತ್ತರ ನೀಡಲು ನಿರಾಕರಿಸಿದ್ದಾರೆ. ಐದು ವರ್ಷಗಳ ನಂತರದ ಮಾತಿರಲಿ, ಇನ್ನು ಆರೇ ತಿಂಗಳಲ್ಲಿ ನನಗೆ ಏನು ಬೇಕು ಎಂಬುದೇ ನನಗೆ ತಿಳಿದಿಲ್ಲ ಎಂದಿರುವ ಕಾಮತ್, ಪ್ರಸ್ತುತ ತಮಗೆ ಯಾವುದು ಆದ್ಯತೆ ಎಂಬುದನ್ನು ಮಾತ್ರ ಸ್ಪಷ್ಟಪಡಿಸಿದ್ದಾರೆ.
"ನಾನು ನನ್ನ ಸ್ವಾತಂತ್ರ್ಯ ಮತ್ತು ಮನಸ್ಸಿನ ಶಾಂತಿಗಾಗಿ ಆದ್ಯತೆ ನೀಡುತ್ತಿದ್ದೇನೆ (Optimising for freedom and peace of mind)" ಎಂದು ಹೇಳಿದ ಕಾಮತ್, ವಿವಿಧ ವಿಷಯಗಳಲ್ಲಿ ತೊಡಗಿಸಿಕೊಳ್ಳಲು ಹಾಗೂ ಪ್ರತಿಯೊಂದು ಸಾಧ್ಯತೆಗಳಿಗೆ ಮುಕ್ತವಾಗಿರಲು ಸಮಯವಿರುವ ಜೀವನವನ್ನು ವಿವರಿಸಿದರು.
ಖಚಿತತೆ ಇಲ್ಲದ ಜನರೇ ನನಗೆ ಆಕರ್ಷಕ
ತಮ್ಮ ಬದುಕಿನ ಅನಿಶ್ಚಿತತೆಯು ತಮ್ಮನ್ನು ಎಂದಿಗೂ ಕಂಗಾಲುಗೊಳಿಸುವುದಿಲ್ಲ; ಬದಲಿಗೆ ಎಲ್ಲವೂ 'ಖಚಿತ' ಎನ್ನುವ ಮನಸ್ಥಿತಿಯೇ ತಮ್ಮನ್ನು ಹೆಚ್ಚು ಚಿಂತೆಗೀಡುಮಾಡುತ್ತದೆ ಎಂದ ಕಾಮತ್, ಯಾವ ಜನರು ಯಾವುದೇ ವಿಷಯದಲ್ಲಿ 'ಖಚಿತತೆ' ಹೊಂದಿರುವುದಿಲ್ಲವೋ ಅಂತಹ ಜನರೇ ನನಗೆ ಹೆಚ್ಚು ಆಕರ್ಷಕವಾಗಿ ಕಾಣುತ್ತಾರೆ ಎಂದು ಹೇಳಿದರು.
ಸಾಕಷ್ಟು ಜನರು ಯಾವುದೋ ಒಂದು ನಂಬಿಕೆಗೆ ಕಟ್ಟುಬಿದ್ದು, ಅದಕ್ಕೆ ಭಾವನಾತ್ಮಕವಾಗಿ ಅಂಟಿಕೊಳ್ಳುತ್ತಾರೆ. ಇದರಿಂದಾಗಿ ತಮ್ಮ ನಿರ್ಧಾರ ಅಥವಾ ಅಭಿಪ್ರಾಯವನ್ನು ಬದಲಾಯಿಸಿಕೊಳ್ಳುವುದು ಅವರಿಗೆ ಅತ್ಯಂತ ಕಷ್ಟವಾಗುತ್ತದೆ. ಅಲ್ಲಿ ಅವರ 'ಅಹಂ' (Ego) ಅಡ್ಡಬರುತ್ತದೆ. "ನಾನು ಸಾಧ್ಯವಾದಷ್ಟು ಕಾಲ ಆ ಕಟ್ಟುನಿಟ್ಟಾದ ಖಚಿತತೆಯ ವಿರುದ್ಧ ಹೋರಾಡುತ್ತಿದ್ದೇನೆ" ಎಂದು ತಿಳಿಸಿದರು. ಅವರ ಈ ಉತ್ತರವು ಅವರ ಭವಿಷ್ಯದ ಮದುವೆ ಮತ್ತು ಮಕ್ಕಳ ವಿಷಯವನ್ನು ಸಂಪೂರ್ಣವಾಗಿ ನಿರಾಕರಿಸದೆಯೇ, ಸಾಂಪ್ರದಾಯಿಕ ಕೌಟುಂಬಿಕ ಜೀವನಕ್ಕೂ ಬಾಗಿಲು ಮುಚ್ಚದೆ ಮುಕ್ತವಾಗಿಟ್ಟಿದೆ.
ಚೀನಾ ಅಭಿವೃದ್ಧಿ ಮಾದರಿ ಮತ್ತು 'ಸಿಇಒ' ಆಗಬೇಕಿರುವ ಮುಖ್ಯಮಂತ್ರಿಗಳು
ತಮ್ಮ ವೈಯಕ್ತಿಕ ನಿರ್ಧಾರಗಳಲ್ಲಿ ತೋರಿಸಿದ ಮುಕ್ತ ಮನಸ್ಥಿತಿಯನ್ನೇ ಚೀನಾದ ಆರ್ಥಿಕತೆ ಕುರಿತು ಮಾತನಾಡುವಾಗಲೂ ಕಾಮತ್ ಪ್ರದರ್ಶಿಸಿದರು. ಚೀನಾ ತಾನು ಕಮ್ಯುನಿಸ್ಟ್ ಎಂದು ಹೇಳಿಕೊಳ್ಳುತ್ತಾ ಬಂಡವಾಳಶಾಹಿ (Capitalist) ಟ್ಯಾಗ್ ಅನ್ನು ನಿರಾಕರಿಸಬಹುದು, ಆದರೆ ಅಲ್ಲಿನ ಸ್ಥಳೀಯ ಸರ್ಕಾರಗಳು ಪಕ್ಕಾ ಉದ್ಯಮ ಸಂಸ್ಥೆಗಳಂತೆ ಸ್ಪರ್ಧಿಸುತ್ತವೆ ಎಂದು ಕಾಮತ್ ವಿಶ್ಲೇಷಿಸಿದರು. 'ಚೀನಾದಲ್ಲಿ ಪ್ರತಿಯೊಂದು ಪುರಸಭೆ ಅಥವಾ ಪ್ರಾಂತ್ಯದ ಮೇಯರ್, ಮತ್ತೊಂದು ಪ್ರಾಂತ್ಯದ ಜೊತೆಗೆ ತಾನೊಬ್ಬ ಬಂಡವಾಳಶಾಹಿ ಸಂಸ್ಥೆಯ ಮುಖ್ಯಸ್ಥ ಎಂಬಂತೆ ಸ್ಪರ್ಧಿಸುತ್ತಾನೆ' ಎಂದು ಅವರು ತಿಳಿಸಿದ್ದಾರೆ.
ಇದೇ ಮಾದರಿಯನ್ನು ಭಾರತಕ್ಕೂ ಅನ್ವಯಿಸುವ ಸಾಧ್ಯತೆಯನ್ನು ತೇಲಿಬಿಟ್ಟ ಕಾಮತ್, "ಭಾರತದಲ್ಲಿ ಪ್ರತಿಯೊಂದು ರಾಜ್ಯದ ಮುಖ್ಯಮಂತ್ರಿಗಳು ಆಯಾ ರಾಜ್ಯದ ಸಿಇಒ (CEO) ಗಳಂತೆ ಕಾರ್ಯನಿರ್ವಹಿಸಬೇಕು. ತಮ್ಮ ರಾಜ್ಯಗಳ ಆರ್ಥಿಕತೆಯನ್ನು ವಿಸ್ತರಿಸಲು ಮತ್ತು ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ಅವರು ಸ್ಪರ್ಧಿಸಬೇಕು. ರಾಜ್ಯಗಳು ತಮ್ಮ ಆರ್ಥಿಕ ಬೆಳವಣಿಗೆಯ ಆರ್ಥಿಕ ಲಾಭವನ್ನು ತಾವೇ ಉಳಿಸಿಕೊಳ್ಳುವಂತಾದರೆ ಈ ಪ್ರೋತ್ಸಾಹ ಮತ್ತಷ್ಟು ಬಲಗೊಳ್ಳುತ್ತದೆ" ಎಂದು ಅಭಿಪ್ರಾಯಪಟ್ಟರು.
ಇದಕ್ಕೆ ಉದಾಹರಣೆಯಾಗಿ ಚೀನಾದ ಹೆಫೈ (Hefei) ನಗರವು 2008 ರಲ್ಲಿ ಡಿಸ್ಪ್ಲೇ ಪ್ಯಾನ್ ತಯಾರಕ ಕಂಪನಿಯಾದ 'ಬಿಒಇ ಟೆಕ್ನಾಲಜಿ'ಗೆ ತನ್ನ ವಾರ್ಷಿಕ ಆದಾಯದ ಹತ್ತನೇ ಒಂದು ಭಾಗ ಅಂದರೆ 500 ಮಿಲಿಯನ್ ಡಾಲರ್ ಹೂಡಿಕೆ ಮಾಡಿದ್ದನ್ನು ಉಲ್ಲೇಖಿಸಿತು. ಬಿಒಇ ಮುಂದೆ ವಿಶ್ವದ ಅತಿದೊಡ್ಡ ಡಿಸ್ಪ್ಲೇ ಪ್ಯಾನ್ ತಯಾರಕ ಸಂಸ್ಥೆಯಾಯಿತು. ಹಾಗೆಯೇ ಶಾಂಘೈ ನಗರವು ಟೆಸ್ಲಾ ಸಂಸ್ಥೆಗೆ ಕೇವಲ ಒಂದೇ ವರ್ಷದಲ್ಲಿ ಕಾರ್ಖಾನೆ ನಿರ್ಮಾಣದಿಂದ ಉತ್ಪಾದನೆ ಆರಂಭಿಸಲು ನೆರವಾಗಿತ್ತು. "ಯಾರು ಯಾವುದೇ ರಂಗದಲ್ಲಿ ಉತ್ತಮ ಕೆಲಸ ಮಾಡಿದ್ದಾರೋ ಅವರಿಂದ ನಾವು ಕಲಿಯಬೇಕು" ಎಂದು ಕಾಮತ್ ಹೇಳಿದ್ದಾರೆ..
ತಮ್ಮ ವೈಯಕ್ತಿಕ ಜೀವನದ ವಿಷಯಕ್ಕೆ ಬಂದಾಗ, ಅವರ ಬಳಿ ಯಾವುದೇ ನಿರ್ದಿಷ್ಟ ಬ್ಲೂಪ್ರಿಂಟ್ ಇರಲಿಲ್ಲ. ಮುಂದಿನ ಐದು ವರ್ಷಗಳು ಹೇಗಿರಬೇಕು ಎಂಬುದನ್ನು ಈಗಲೇ ನಿರ್ಧರಿಸುವುದಕ್ಕಿಂತ, ತಮ್ಮ ಸಮಯ ಮತ್ತು ಆಯ್ಕೆಗಳನ್ನು ಮುಕ್ತವಾಗಿಟ್ಟುಕೊಳ್ಳುವುದೇ ಪ್ರಮುಖವಾಗಿದೆ ಎಂದಿದ್ದಾರೆ.


