ಕೇರಳದ ಕಾಸರಗೋಡಿನ ಶಾಲೆಯ ಶಿಕ್ಷಕಿ ನವ್ಯಶ್ರೀ, ತಮ್ಮ 32 ವಿದ್ಯಾರ್ಥಿಗಳ ಧ್ವನಿ ಆಲಿಸಿ ಹೆಸರನ್ನು ಗುರುತಿಸುವ ವಿಡಿಯೋ ವೈರಲ್ ಆಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯು "ಟೀಚರ್, ಟೀಚರ್" ಎಂದು ಕರೆದಾಗ, ನವ್ಯಶ್ರೀ ನಿಖರವಾಗಿ ಅವರ ಹೆಸರನ್ನು ಹೇಳುತ್ತಾರೆ. ಈ ವಿಡಿಯೋ ಗುರು-ಶಿಷ್ಯರ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ. ಇಂತಹ ಶಿಕ್ಷಕರು ಮಕ್ಕಳ ಭವಿಷ್ಯ ರೂಪಿಸುವಲ್ಲಿ ಸಹಕಾರಿಯಾಗುತ್ತಾರೆ ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಾರತೀಯ ಸಂಪ್ರದಾಯದಲ್ಲಿ ಗುರುವಿಗೆ ಅತ್ಯಂತ ಉನ್ನತ ಸ್ಥಾನವನ್ನು ನೀಡಲಾಗಿದೆ. ಗುರುವಿನ ಮೇಲೆ ಅದೆಷ್ಟೋ ಗಾದೆಮಾತುಗಳೇ ಹುಟ್ಟುಕೊಂಡಿವೆ. ಗುರುವಿಗೆ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂದು ಪುರಂದರದಾಸರೇ ಹೇಳಿದ್ದಾರೆ. ಗುರುವನ್ನು ದೇವರಿಗೆ ಹೋಲಿಕೆ ಮಾಡಿ ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ... ಎಂದೂ ಹೇಳಲಾಗಿದೆ. ಗುರು-ಶಿಷ್ಯರ ಇಂಥ ಪವಿತ್ರ ಸಂಬಂಧ ನಶಿಸಿ ಹೋಗುತ್ತಿರುವ ಇಂದಿನ ದಿನಗಳಲ್ಲಿ ಇವರ ನವಿರಾದ ಸಂಬಂಧಗಳ ಅಲ್ಲಲ್ಲಿ ಇನ್ನೂ ಜೀವಂತವಾಗಿರುವುದೂ ಅಷ್ಟೇ ಸತ್ಯ. ಯಾವುದಾದರೂ ಶಿಕ್ಷಕರು ಒಂದು ಕಡೆಯಿಂದ ಇನ್ನೊಂದು ಕಡೆ ವರ್ಗವಾಗುವ ಸಂದರ್ಭದಲ್ಲಿ, ಇಲ್ಲವೇ ಕೆಲಸ ಬಿಟ್ಟು ಹೋದಾಗ ಮಕ್ಕಳು ಅವರನ್ನು ತಬ್ಬಿ ಅಳುವ ದೃಶ್ಯಗಳು ಕೂಡ ನಮ್ಮ ಕಣ್ಣೆದುರೇ ಇವೆ. ಕೆಲವು ಇಂಥ ಘಟನೆಗಳು ಬೆಳಕಿಗೆ ಬಂದರೆ, ಮತ್ತೆ ಕೆಲವು ತೆರೆಮರೆಯಲ್ಲಿಯೇ ನಡೆಯುತ್ತವೆ.
ಇದೀಗ ಕೇರಳದ ವಿಡಿಯೋ ಒಂದು ವೈರಲ್ ಆಗಿದ್ದು, ಇದನ್ನು ನೋಡಿದವರು ಇದು ಕೇವಲ ಗುರು-ಶಿಷ್ಯರ ಸಂಬಂಧವಲ್ಲ, ಅದಕ್ಕಿಂತಲೂ ಮಿಗಿಲಾದ ಹೃದಯ ಸಂಬಂಧ ಎನ್ನುತ್ತಿದ್ದಾರೆ. ಅದಕ್ಕೆ ಕಾರಣವೂ ಇದೆ. ಇಂದು ಎಷ್ಟೋ ಶಿಕ್ಷಕರಿಗೆ ತಮ್ಮ ತರಗತಿಯಲ್ಲಿ ಎಷ್ಟು ಮಕ್ಕಳು ಇದ್ದಾರೆ ಎಂದು ಹೇಳುವುದೇ ಕಷ್ಟವಾಗಿದೆ. ಮತ್ತೆ ಕೆಲವರಿಗೆ ಅವರ ಹೆಸರು ಕೂಡ ನೆನಪು ಉಳಿಯಲಿಕ್ಕಿಲ್ಲ. ಆದರೆ ಈ ಟೀಚರ್ ಮಾತ್ರ ಮುಖ ನೋಡದೇ, ಕೇವಲ ದನಿಯನ್ನು ಗುರುತಿಸುವ ಮೂಲಕ ತಮ್ಮ ವಿದ್ಯಾರ್ಥಿ- ವಿದ್ಯಾರ್ಥಿನಿಯರನ್ನು ಗುರುತಿಸುತ್ತಾರೆ ಎಂದರೆ ಸ್ವಲ್ಪ ನಂಬುವುದು ಕಷ್ಟ ಎನ್ನಿಸುತ್ತದೆ ಅಲ್ಲವೆ?
ಇದೇನು ಕೈಬರಹವೋ, ಕಂಪ್ಯೂಟರ್ ಪ್ರಿಂಟೊ? ವಿಶ್ವದ ಸುಂದರ ಹ್ಯಾಂಡ್ರೈಟರ್ ಪ್ರಶಸ್ತಿಗೆ ಭಾಜನ ಈ ಬಾಲಕಿ!
ಅಪ್ಪ-ಅಮ್ಮ ಹಾಗೂ ತೀರಾ ಹತ್ತಿರದವರು ಮಾತ್ರ ತಮ್ಮ ಮನೆಯ ಮಕ್ಕಳ ದನಿಯನ್ನು ಗುರುತಿಸಲು ಶಕ್ಯರಾಗುತ್ತಾರೆ. ಅದೂ ಕೆಲವೇ ಮಕ್ಕಳು ಇರುವ ಸಂದರ್ಭದಲ್ಲಿ. ಆದರೆ ಈ ಶಿಕ್ಷಕಿ ಮಾತ್ರ ತಮ್ಮ ತರಗತಿಯ 32 ಮಕ್ಕಳ ಹೆಸರನ್ನು ಅವರ ದನಿಯಿಂದಲೇ ಗುರುತಿಸಿರುವ ವಿಡಿಯೋ ಇದಾಗಿದೆ. ಕಾಸರಗೋಡು ಜಿಲ್ಲೆಯ ಉದಿನೂರು ಸೆಂಟ್ರಲ್ ಎಯುಪಿ ಶಾಲೆಯ ಶಿಕ್ಷಕಿ ನವ್ಯಶ್ರೀ ಇವರು ಎನ್ನಲಾಗಿದೆ. ಒಂದು ಖುರ್ಚಿಯ ಮೇಲೆ ಕುಳಿದ ನವ್ಯಶ್ರೀ ಅವರ ಹಿಂದೆ, ಅವರ 32 ಮಕ್ಕಳು ನಿಂತಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ಒಬ್ಬೊಬ್ಬರಾಗಿ ಬರುವ ಈ ಮಕ್ಕಳು, ಟೀಚರೇ, ಟೀಚರೇ ಎಂದಷ್ಟೇ ಹೇಳಿದ್ದಾರೆ. ಆ ಒಂದು ದನಿಯಲ್ಲಿಯೇ ಎಲ್ಲರ ಹೆಸರುಗಳನ್ನೂ ಇವರು ಎಷ್ಟು ಸಲೀಸಾಗಿ ಹೇಳಿಬಿಟ್ಟಿದ್ದಾರೆ. ನಾಲ್ಕೈದು ವಿದ್ಯಾರ್ಥಿಗಳಿಗೆ ಮಾತ್ರ ಮತ್ತೊಮ್ಮೆ ಕರೆಯಿರಿ ಎಂದು ಹೇಳಿದ್ದಾರೆ. ಆದರೆ ಎರಡನೆಯ ಬಾರಿ ಟೀಚರೇ ಎನ್ನುವಾಗಲೇ ಅವರ ಹೆಸರನ್ನು ಕೂಡ ಕರೆಕ್ಟ್ ಆಗಿ ಗುರುತಿಸಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಪ್ರತಿ ಶಾಲೆಗಳಲ್ಲಿಯೂ ಇಂಥ ಗುರುವಿದ್ದರೆ ಮಕ್ಕಳ ಭವಿಷ್ಯ ಉತ್ತಮವಾಗಿ ರೂಪುಗೊಳ್ಳುವಲ್ಲಿ ಸಂಶಯವೇ ಇಲ್ಲ ಎನ್ನುತ್ತಿದ್ದಾರೆ. ದನಿ ಕೇಳಿ ಹೆಸರು ಹೇಳುವುದು ಎಂದರೆ, ಈ ಶಿಕ್ಷಕಿಗೆ ತಮ್ಮ ವಿದ್ಯಾರ್ಥಿಗಳ ಮೇಲೆ ಅದೆಷ್ಟು ಮಾತೃಪ್ರೇಮ ಇದೆ ಎನ್ನುವುದು ತೋರುತ್ತಿದೆ ಎಂದು ಹಲವರು ಹೇಳಿದ್ದಾರೆ.
