ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ಬಿಡುಗಡೆ ವೇಳೆ ರಾಹುಲ್ ಗಾಂಧಿ ತಮ್ಮ ಪೋಷಕರ ಅಪಾರ ಪ್ರೀತಿಯ ಬಾಲ್ಯದ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಊಟದ ಸಮಯದಲ್ಲಿ ಅಮ್ಮ ಅಪ್ಪನ ಮಡಿಲಲ್ಲಿ ಕುಳಿತುಕೊಳ್ಳುತ್ತಿದ್ದ ಅಚ್ಚರಿಯ ಸಂಗತಿಯನ್ನು ಅವರು ಸ್ಮರಿಸಿದ್ದಾರೆ.

ದೆಹಲಿ: ಸೋನಿಯಾ ಗಾಂಧಿಯವರ ಆತ್ಮಚರಿತ್ರೆ "ಬಿಲಾಂಗಿಂಗ್: ಎ ಜರ್ನಿ ಆಫ್ ಲವ್" ನ ಹಲವಾರು ಪ್ರತಿಗಳು ಇದಾಗಲೇ ಮಾರಾಟವಾಗಿವೆ. ಹಲವು ಕಾಂಗ್ರೆಸ್​ ನಾಯಕರು ಈ ಪುಸ್ತಕವನ್ನು ಕೈಯಲ್ಲಿ ಹಿಡಿದು ಓದುವ ರೀತಿಯಲ್ಲಿ ಫೋಟೋಗಳನ್ನು ಶೇರ್​ ಮಾಡಿಕೊಳ್ಳುತ್ತಿದ್ದಾರೆ. ಇದರ ಅಧಿಕೃತ ಬಿಡುಗಡೆ ಇದೀಗ ಆಗಿದ್ದು, ಈ ಸಮಯದಲ್ಲಿ, ಸಂಸದ ರಾಹುಲ್​ ಗಾಂಧಿ ಅವರು ಅಪ್ಪ-ಅಮ್ಮನ ನಡುವೆ ಇರುವ ಅದಮ್ಯ ಪ್ರೀತಿಯ ಬಗ್ಗೆ ಮೆಲುಕು ಹಾಕಿದ್ದಾರೆ. ಆ ಸಂದರ್ಭದಲ್ಲಿ ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ಅಪ್ಪ ರಾಜೀವ್​ ಗಾಂಧಿ ಮತ್ತು ಅಮ್ಮ ಸೋನಿಯಾ ಒಮ್ಮೆ ಮಾತ್ರ ಜಗಳ ಮಾಡಿದ್ದು ನೆನಪಿದೆ ನನಗೆ. ಅದನ್ನು ಬಿಟ್ಟು ಅವರು ಯಾವತ್ತಿಗೂ ಜಗಳವಾಡುತ್ತಿರಲಿಲ್ಲ. ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತಿದ್ದರು. ಮಧ್ಯಾಹ್ನ ಅಥವಾ ರಾತ್ರಿ ಊಟದ ಸಮಯದಲ್ಲಿ "ಅಮ್ಮ" ಯಾವಾಗಲೂ ಅಪ್ಪನ ಮಡಿಲಲ್ಲಿ ಕುಳಿತುಕೊಳ್ಳುತ್ತಿದ್ದರು. ಅಷ್ಟು ಪ್ರೀತಿ ಇಬ್ಬರ ನಡುವೆ ಇತ್ತು ಎಂದು ಹೇಳಿದ್ದಾರೆ. ಏನೇ ಕೆಲಸವಿದ್ದರೂ ಅಪ್ಪ ಪ್ರತಿದಿನ ಊಟದ ಸಮಯದಲ್ಲಿ ಅಪ್ಪ ಮನೆಯಲ್ಲಿರುತ್ತಿದ್ದರು. ಅಮ್ಮ ಅಪ್ಪನ ಮಡಿಲಲ್ಲಿ ಕುಳಿತುಕೊಳ್ಳುತ್ತಿದ್ದರು ಎಂದು ಅವರು ನೆನಪಿಸಿಕೊಂಡರು.

ಸ್ನೇಹಿತರ ಮನೆಯಲ್ಲಿ ಹೀಗೆ ಮಾಡ್ತಿರಲಿಲ್ಲ

ಪತಿ-ಪತ್ನಿ ಎಂದ ಮೇಲೆ ಇದು ಸಾಮಾನ್ಯ ಘಟನೆ ಎಂದೇ ನಾನು ಅಂದುಕೊಂಡಿದ್ದೆ. ಎಲ್ಲರ ಮನೆಯಲ್ಲಿಯೂ ಪತಿಯ ಮಡಿಲಿನಲ್ಲಿ ಕುಳಿತೇ ಪತ್ನಿ ಊಟ ಮಾಡುತ್ತಾರೆ ಎಂದುಕೊಂಡಿದ್ದೆ. ಆದರೆ, ನಾನು ನನ್ನ ಸ್ನೇಹಿತರ ಮನೆಗಳಿಗೆ ಭೇಟಿ ನೀಡಿದಾಗ, ಅವರ ಹೆತ್ತವರು ಪರಸ್ಪರರ ಮಡಿಲಲ್ಲಿ ಕುಳಿತುಕೊಳ್ಳಲಿಲ್ಲ ಎಂದು ನಾನು ಗಮನಿಸಿದೆ. ಆಗ ನನಗೆ ಅಚ್ಚರಿಯಾಗುತ್ತಿತ್ತು ಎಂದಿದ್ದಾರೆ ರಾಹುಲ್​. ಹೀಗೆ ಬೇರೆಯವರ ಮನೆಯಲ್ಲಿ ನೋಡಿದಾಗಲೆಲ್ಲಾ, ನಾನು ನನ್ನ ಸ್ನೇಹಿತರನ್ನು ಕೇಳುತ್ತಿದ್ದೆ, "ಹೇ, ಏನಾಗುತ್ತಿದೆ? ನಿಮ್ಮ ತಾಯಿ ನಿಮ್ಮ ತಂದೆಯ ಮಡಿಲಲ್ಲಿ ಏಕೆ ಕುಳಿತುಕೊಳ್ಳುತ್ತಿಲ್ಲ?" ಎಂದು ಪ್ರಶ್ನಿಸುತ್ತಿದೆ ಎಂದಿದ್ದಾರೆ.

ಏತನ್ಮಧ್ಯೆ, ಸೋನಿಯಾ ಗಾಂಧಿ ತಮ್ಮ ಮಕ್ಕಳಾದ ರಾಹುಲ್ ಮತ್ತು ಪ್ರಿಯಾಂಕಾ ಅವರೊಂದಿಗೆ ಮೊನ್ನೆ ಭಾನುವಾರ ದೆಹಲಿಯ ಐಟಿಸಿ ಮೌರ್ಯದಲ್ಲಿ ತಮ್ಮ ಆತ್ಮಚರಿತ್ರೆ "ಬಿಲಾಂಗಿಂಗ್: ಎ ಜರ್ನಿ ಆಫ್ ಲವ್" ಅನ್ನು ಬಿಡುಗಡೆ ಮಾಡಿದರು. ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಮತ್ತು ಮಾಜಿ ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಸಹ ಉದ್ಘಾಟನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಕೂಡ ಉಪಸ್ಥಿತರಿದ್ದರು. ಹಾರ್ಪರ್‌ಕಾಲಿನ್ಸ್ ಇಂಡಿಯಾ ಪ್ರಕಟಿಸಿದ ಈ ಆತ್ಮಚರಿತ್ರೆ ನವೆಂಬರ್ 10 ರಿಂದ ಮಾರಾಟಕ್ಕೆ ಲಭ್ಯವಿದೆ.