ಇನ್ನುಮುಂದೆ ಕಪಿಚೇಷ್ಟೆ ಮಾಡುವ ಯುವಕರಿಗೆ ಕೋತಿ, ಮಂಗ ಎಂದು ಹೇಳಬೇಡಿ. ಚೀನಾದಲ್ಲಿ ಯುವತಿಯರು 'ಮಂಕಿ ಟೈಪ್' ಪುರುಷರ ಕಡೆಗೆ ಆಕರ್ಷಿತರಾಗುತ್ತಿದ್ದಾರೆ, ಏಕೆಂದರೆ ಅವರು ಚೈತನ್ಯಶೀಲರು ಮತ್ತು ಆಶಾವಾದಿಗಳಾಗಿರುತ್ತಾರೆ.
ಸಾಮಾನ್ಯವಾಗಿ ಕಪಿಚೇಷ್ಟೆಗಳನ್ನು ಮಾಡುವಂತಹ ಯುವಕರಿಗೆ ಅಥವಾ ಮಕ್ಕಳಿಗೆ ಬೈಯುವಾಗ 'ಲೇ ಕೋತಿ, ಮಂಗ' ಎಂದು ಬೈಯವುದು ಕೂಡ ರೂಢಿ ಆಗಿದೆ. ಯಾರು ಬೈಯದಿದ್ದರೂ ಸರ್ಕಾರಿ ಶಾಲೆಯಲ್ಲಿ ಓದಿದವರಿಗೆ ಶಿಕ್ಷಕರು ಆದರೂ ಹೀಗೆ ಕರೆದಿರುತ್ತಾರೆ. ಆದರೆ, ಇನ್ನುಮುಂದೆ ಯುವಕರಿಗೆ ಕೋತಿ, ಮಂಗ ಎಂದು ಬೈಯುವಂತಿಲ್ಲ. ಕಾರಣ ಇಂತಹ ಕಪಿಚೇಷ್ಟೆ ಯುವಕರು ಚೀನಾದ ಯುವತಿಯರಿಗೆ ಭಾರೀ ಇಷ್ಟವಂತೆ..
ಹೌದು, ಚೀನಾದಲ್ಲಿ ಯುವಕ-ಯುವತಿಯರಿಗೆ ಮದುವೆಯಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ. ಚೀನಾದಲ್ಲಿ ಮಾತ್ರವಲ್ಲ, ಅನೇಕ ದೇಶಗಳಲ್ಲಿ ಇದೇ ಪರಿಸ್ಥಿತಿ ಇದೆ. ಆದರೆ, ಚೀನಾದಲ್ಲಿ ಡೇಟಿಂಗ್‌ನಲ್ಲಿ ಜನರಿಗೆ ಬಹಳ ಆಸಕ್ತಿಯಿದೆ. ಈಗ ಇಲ್ಲಿ ಮಹಿಳೆಯರು ಹೆಚ್ಚಾಗಿ ಆಕರ್ಷಿತರಾಗುವುದು 'ಮಂಕಿ ಟೈಪ್' ಪುರುಷರ ಕಡೆಗೆ. ಅಂದರೆ 'ಕುರಂಗನಂತೆ ವರ್ತಿಸುವ' ಯುವಕರ ಕಡೆಗೆ. ಫಿಟ್ ಆದ ದೇಹ ಮತ್ತು ಕುರಂಗನಂತ ದೊಡ್ಡ ಕಣ್ಣುಗಳಿರುವ ಪುರುಷ ಸೆಲೆಬ್ರಿಟಿಗಳ ಬಗ್ಗೆ ಹೇಳುವಾಗ 'ಮಂಕಿ ಟೈಪ್ ಮೆನ್' ಎಂಬ ಪದವನ್ನು ಮೊದಲ ಬಾರಿಗೆ ಬಳಸಲಾಯಿತಂತೆ. ಈ ಕಪಿಚೇಷ್ಟೆಯನ್ನು ಮಾಡಿಕೊಂಡಿರುವ ಗಂಡಸರು ಅಷ್ಟೊಂದು ಸೀರಿಯಸ್ ಆಗಿರುವುದಿಲ್ಲ. ಒಳ್ಳೆಯ ಹಾಸ್ಯ ಪ್ರಜ್ಞೆ ಇರುತ್ತದೆ. ಆದರೆ, ಅವರನ್ನು ನಂಬಬಹುದು ಎಂದು ಮಹಿಳೆಯರು ಅಭಿಪ್ರಾಯಪಡುತ್ತಾರೆ.
ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಪ್ರಕಾರ 'ಮಂಕಿ ಟೈಪ್' ಆಗಿರುವ ಪುರುಷರು ಹೆಚ್ಚು ಚೈತನ್ಯಶೀಲರಾಗಿರುವುದರಿಂದ ಮಹಿಳೆಯರು ಇವರನ್ನು ಪ್ರೀತಿಸಲು ಇಷ್ಟಪಡುತ್ತಾರಂತೆ. ಅದೇ ರೀತಿ, ಇವರು ಆಶಾವಾದಿಗಳಾಗಿರುತ್ತಾರೆ, ಏನಾದರೂ ಸಮಸ್ಯೆ ಬಂದರೆ ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. 'ಇಂಥವರ ಜೊತೆಗಿದ್ದರೆ ನಮಗೂ ಖುಷಿಯಾಗುತ್ತದೆ. ಹಾಗಾಗಿ ಇಂಥವರ ಜೊತೆ ಇರಲು ಇಷ್ಟಪಡುತ್ತೇವೆ' ಎಂದು ಕೆಲ ಯುವತಿಯರು ಹೇಳುತ್ತಾರೆ.
ಇದನ್ನೂ ಓದಿ: ಆಟೋಗಾಗಿ ಕಾಯುತ್ತಿದ್ದ ಯುವಕನನ್ನು ಆಟೋದೊಳಗೆ ಎಳೆದುಕೊಂಡ ಮಹಿಳೆ! ಮುಂದಾಗಿದ್ದು ಮಾನವೀಯತೆಗೆ ಸಾಕ್ಷಿ!
ಶಾಂಘೈನಿಂದ ಬಂದ 24 ವರ್ಷದ ಯುವತಿಯೊಬ್ಬಳು ಚೀನೀ ಮಾಧ್ಯಮವಾದ ಸಾನ್ಲಿಯನ್ ಲೈಫ್ ಲ್ಯಾಬ್‌ಗೆ ಹೇಳಿದ್ದು, 'ನನ್ನ ಬಾಯ್‌ಫ್ರೆಂಡ್ ಮಂಕಿ ಟೈಪ್ ವ್ಯಕ್ತಿ. ತಮಾಷೆಯಾಗಿರುತ್ತಾನೆ. ಆದರೆ, ಒಟ್ಟಿಗೆ ಫ್ಲಾಟ್‌ಗೆ ಹೋದಾಗ ಮನೆಯ ಕೆಲಸಗಳನ್ನು ಚೆನ್ನಾಗಿ ಮಾಡುತ್ತಾನೆ' ಎಂದಿದ್ದಾಳೆ. ಏನೇ ಆಗಲಿ, ಚೀನಾದ ಹುಡುಗಿಯರಿಗೆ ಸೀರಿಯಸ್ ಆಗಿ ಮಸಲ್ ತೋರಿಸಿಕೊಂಡು, ಬಡಾಯಿ ಕೊಚ್ಚಿಕೊಳ್ಳುವ ಪುರುಷರಿಗಿಂತ ತಮಾಷೆಯಾಗಿರುವ ಈ ಮಂಕಿ ಮ್ಯಾನ್ ಅಂದರೆ ಇಷ್ಟ ಎಂದು ವರದಿಗಳು ಹೇಳುತ್ತವೆ.
