Asianet Suvarna News Asianet Suvarna News

ಹಿತಶತ್ರು ಮೊಬೈಲ್ ಫೋನ್: ಮಕ್ಕಳ ಕ್ರಿಯಾಶೀಲತೆಯೇ ಮಾಯ!

* ಆಧುನಿಕ ಯುಗದಲ್ಲಿ ಮೊಬೈಲ್‌ಫೋನ್ ಬಳಕೆ ಮಾಡದಿರುವ ಜನರ ಸಂಖ್ಯೆ ತುಂಬಾ ಕಡಿಮೆ

* ಮೊಬೈಲ್ ಇಲ್ಲದ ಮನೆಗಳೇ ಇಲ್ಲ ಎನ್ನುವಂತಹ ಪರಿಸ್ಥಿತಿ

* ಮೊಬೈಲ್‌ ಫೋನ್‌ನಿಂದ ಮಕ್ಕಳ ಕ್ರಿಯಾಶೀಲತೆಯೇ ಮಾಯ

Mobile phone The biggest enemy of Mankind pod
Author
Bangalore, First Published Apr 19, 2022, 5:04 PM IST

ಪ್ರೀತಿ ಹಡಪದ, ಎಸ್ ಡಿ ಎಂ ಕಾಲೇಜು, ಉಜಿರೆ

ಆಧುನಿಕ ಯುಗದಲ್ಲಿ ಮೊಬೈಲ್‌ಫೋನ್ ಬಳಕೆ ಮಾಡದಿರುವ ಜನರ ಸಂಖ್ಯೆ ತುಂಬಾ ಕಡಿಮೆ. ಇದಕ್ಕೆ ಅನ್ವಯವಾಗುವಂತೆ (ಅಂದು)' ಸಾವಿಲ್ಲದ ಮನೆಯಿಂದ ಸಾಸಿವೆ ತಾ, (ಇಂದು) ಮೊಬೈಲ್ ಇಲ್ಲದ ಮನೆಯಿಂದ ಹುಡುಗಿ ತಾ’ ಎಂಬ ಮಾಡರ್ನ್ ಯುಗದ ಗಾದೆಗಳೂ ಹುಟ್ಟಿಕೊಂಡಿವೆ. ಅಂದರೆ ಮೊಬೈಲ್ ಇಲ್ಲದ ಮನೆಗಳೇ ಇಲ್ಲ. ಇದರ ಬಳಕೆಯೂ ಮಿತಿಮೀರಿದೆ ಅದರಲ್ಲೂ ಸೆಲ್ಫೀ, ರೀಲ್ಸ್ ಯುವಜನತೆಯಲ್ಲಿ ಪ್ರವೃತ್ತಿಯಾಗಿ ಬೆಳೆಯುತ್ತಿದೆ. 

ಕೋವಿಡ್ ರೂಪಾಂತರಿಗಳು ಬಂದಾಗಿನಿಂದಂತೂ ಚಿಕ್ಕ ಮಕ್ಕಳೂ ಇದರ ದಾಸರಾಗಿರುವುದನ್ನು ಕಾಣಬಹುದು. ಇದು ಆನ್ಲೈನ್ ತರಗತಿಗಳಿಗೆ ಅನುಕೂಲವಾದರೆ ಇನ್ನೂ ಕೆಲವುಕಡೆ ಮಕ್ಕಳು ಫೇಸ್ಬುಕ್, ಇನ್ಸ್ಟಾಗ್ರಾಮ್ ಮುಂತಾದ ಸಾಮಾಜಿಕ ಜಾಲತಾಣಗಳು ಅಲ್ಲದೆ ಪಬ್ಜಿಗಳಂತ ಗೇಮ್‌ಗಳ ಚಟಕ್ಕೆ ಬಲಿಯಾಗುತ್ತಿರುವುದು ವಿಷಾದವೇ ಸರಿ. ಇದೇ ಕಾರಣದಿಂದಾಗಿ ಮಕ್ಕಳಲ್ಲಿ ಕೌಶಲ್ಯತೆ ಕಡಿಮೆಯಾಗಿ ಉತ್ಸುಕತೆ ಕುಗ್ಗುತ್ತಿದೆ.
ಬಾಲ್ಯದಲ್ಲಿ ಆಡಿದ ಆಟ-ತುಂಟಾಟಗಳು, ಹೊಸ ಆಟಗಳ ಸಂಶೋಧನೆ, ಶಾಲೆ ಬಿಟ್ಟು ಮನೆಗೆ ಬರುವ ದಾರಿಯಲ್ಲಿ ಸಿಗುವ ಗೂಡಂಗಡಿಗಳ ಭೇಟಿ, ಕದ್ದು ತಿಂದ ಮಾವಿನ ಹಣ್ಣುಗಳು ಹೀಗೇ ಹಲವಾರು ಮರೆಯಲಾಗದ ನೆನಪುಗಳು. ಆದರೆ ಮೊಬೈಲ್ ಫೋನ್ ಮಕ್ಕಳಲ್ಲಿ ಈ ರೀತಿಯ ಬಾಲ್ಯವನ್ನು ಕಸಿದುಕೊಳ್ಳುತ್ತಿದೆ. 

ಹಿಂದೆಲ್ಲ ಮಕ್ಕಳು ತಮ್ಮ ಸಹಪಾಠಿ ಮತ್ತು ಸ್ನೇಹಿತರೊಂದಿಗೆ ಆಡುತ್ತಿದ್ದರು. ಪರಿಸರದಲ್ಲಿ ಸಿಗುವ ಗಿಡ-ಮರಗಳ ಎಲೆ, ಕೊಂಬೆಗಳಿಂದ ತಯಾರಿಸಿದ ವಸ್ತುಗಳೇ ಆಟಿಕೆಗಳಾಗುತ್ತಿದ್ದವು. ಅವೆಲ್ಲ ಕ್ರಿಯಾಶೀಲತೆಯಿಂದ ಕೂಡಿರುತ್ತಿತ್ತು. ಆದರೆ ಈಗ ಆಟಿಕೆಗಳೆಂದರೆ ಮಕ್ಕಳಲ್ಲಿನ ಕ್ರಿಯಾಶೀಲತೆಯನ್ನು ಹೊರಹಾಕಲು ಅವಕಾಶವನ್ನೇ ಕೊಡದ ರೀತಿಯಲ್ಲಿವೆ. ಅದರಲ್ಲೂ ಮೊಬೈಲ್ ಫೋನ್ ಈಗಿನ ಮಕ್ಕಳ ಪ್ರಮುಖ ಆಟಿಕೆಯಾಗಿದೆ. 
ಇನ್ನು ಭೌತಿಕ ತರಗತಿಗಳು ಆರಂಭವಾಗಿದ್ದರು ಮಕ್ಕಳಲ್ಲಿ ಮೊಬೈಲ್ ಧ್ಯಾನ ಕಡಿಮೆಯಾಗಿಲ್ಲ. ಭೌತಿಕವಾಗಿ ಮಕ್ಕಳು ತರಗತಿಯಲ್ಲಿದ್ದರೂ, ಮಾನಸಿಕವಾಗಿ ಮೊಬೈಲ್‌ಫೋನ್ ಕಡೆಗೆ ಚಿಂತಿಸುತ್ತಿರುತ್ತಾರೆ. “ಯಾವಾಗ ಮನೆಗೆ ಹೋಗಿ ಮೊಬೈಲ್ ಹಿಡಿದುಕೊಳ್ಳುತ್ತೇನೋ ನಾನು ಪೋಸ್ಟ್ ಮಾಡಿರುವ ರೀಲ್ಸ್, ಫೊಟೋಗಳಿಗೆ ಎಷ್ಟು ಲೈಕ್ಸ್ ಬಂದಿದೆಯೋ ನೋಡಬೇಕು” ಅನ್ನೋ ಕಾತುರದಲ್ಲಿರುತ್ತಾರೆ.

ಮನೆಗೆ ಬಂದ ಕೂಡಲೇ ಮೊಬೈಲ್ ಹಿಡಿದು ಇನ್ನೊಂದು ವೀಡಿಯೋ ಮಾಡಲು ತಯಾರಾಗುತ್ತಾರೆ. ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ, ರೀಲ್ಸ್ ಹಾಗೂ ಅದರಂತೆ ಬರುವ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿರುವ ವಿಡಿಯೋಗಳು ಲೀಲಾಜಾಲವಾಗಿ ಮಕ್ಕಳಲ್ಲಿ ಹಾಸುಹೊಕ್ಕಾಗುತ್ತಿವೆ. ತಮಾಷೆಗಾಗಿ ಮಾಡುವ ಪೋಸ್ಟ್ ಗಳು ಪ್ರವೃತ್ತಿಯಾಗುವಾಗ ಅದರ ಅರ್ಥವನ್ನೂ ತಿಳಿದುಕೊಳ್ಳದೆ ಮಕ್ಕಳು ಅವುಗಳನ್ನೇ ಅನುಸರಿಸುತ್ತಾ, ರೀಲ್ಸ್ ಮಾಡುವ ಭರದಲ್ಲಿ ತಮ್ಮ ಇತಿ-ಮಿತಿಗಳನ್ನೂ ಮರೆತಿರುತ್ತಾರೆ. ಇದನ್ನು ತಿಳಿಸಿ ಹೇಳುವಲ್ಲಿ ಪೋಷಕರೂ ವಿಫಲರಾಗಿದ್ದಾರೆ. ಇದು ಹೀಗೆ ಮುಂದುವರೆದರೆ ಮಕ್ಕಳ ಭವಿಷ್ಯದ ಮೇಲೆ ಖಂಡಿತವಾಗಿಯೂ ಒಂದು ಕೆಟ್ಟ ಪರಿಣಾಮ ಬೀರುತ್ತದೆ. 

ಇನ್ನು ನಮ್ಮೆಲ್ಲರಿಗೂ ತಿಳಿದಿರುವಂತೆ, ಹಿಂದೆಲ್ಲಾ ಯಾವುದೋ ಒಂದು ವಿಷಯದ ಬಗ್ಗೆ ತಿಳಿದುಕೊಳ್ಳಬೇಕಾದರೆ, ಎಲ್ಲರೂ ಪುಸ್ತಕಗಳ ಮೊರೆಹೋಗುತ್ತಿದ್ದರು, ಈಗ ಅದು ಕಡಿಮೆಯಾಗಿ, ಶಬ್ದಕೋಶವೇ ಕೈಲಿರುವಂತೆ ಮೊಬೈಲ್‌ನ ಮೊರೆಹೋಗುತ್ತಾರೆ. ವ್ಯತ್ಯಾಸವೆಂದರೆ ಪುಸ್ತಕ ಓದಿ ಮಾಹಿತಿ ಕಲೆ ಹಾಕುವವರು ಹುಡುಕಿದ ಪದದ ಜೊತೆಗೆ ಇನ್ನಷ್ಟು ವಿಚಾರಗಳನ್ನು ತಿಳಿದುಕೊಳ್ಳುತ್ತಿದ್ದರು. ಆದರೆ ಮೊಬೈಲ್‌ನಲ್ಲಿ ಹುಡುಕುವವರು ಕೇವಲ ಬೇಕಾಗಿರುವ ಪದದ ಅರ್ಥ ಮಾತ್ರ ತಿಳಿದುಕೊಳ್ಳುತ್ತಾರೆ. ಖಂಡಿತವಾಗಿಯೂ ಮಕ್ಕಳು ಯಾವುದು ಸುಲಭವೋ ಅದನ್ನೇ ಆಯ್ಕೆ ಮಾಡುತ್ತಾರೆ ಅರ್ಥಾತ್ ಈ ವಿಚಾರದಲ್ಲಿ ಮೊಬೈಲ್ ಫೋನ್ ಮಕ್ಕಳ ಆಯ್ಕೆಯಾಗಿರುತ್ತದೆ.

ಒಟ್ಟನಲ್ಲಿ ಇದು ಎಷ್ಟು ಉಪಕಾರಿಯೋ ಅಷ್ಟೇ ಅಪಾಯಕಾರಿ. ಎಲ್ಲಿ ಎಷ್ಟು ಬಳಸಬೇಕು ಎಂಬುದನ್ನು ತಿಳಿದುಕೊಂಡು ಮುಂದುವರಿಯುವುದು ಉತ್ತಮ. ಮಕ್ಕಳು ಮೊಬೈಲ್ ಫೋನ್ ಬದಲಾಗಿ ಅದರ ಹೊರತಾದ ಆಟಗಳನ್ನು ಆಡುವುದರಿಂದ ಹೆಚ್ಚು ಹೆಚ್ಚು ಕಲಿಯುತ್ತಾರೆ. ಅಲ್ಲದೇ ದೈಹಿಕ ಹಾಗೂ ಮಾನಸಿಕವಾಗಿಯೂ ಸಧೃಢರಾಗುತ್ತಾರೆ ಜೊತೆಗೆ ಕ್ರಿಯಾಶೀಲರೂ ಆಗುತ್ತಾರೆ. ಅದೆಷ್ಟೋ ಜನ ಇದನ್ನು ಒಳ್ಳೆಯ ಕಾರ್ಯಗಳಿಗೂ ಉಪಯೋಗಿಸಿಕೊಂಡರೆ ಇನ್ನೂ ಕೆಲವರು ಜನಪ್ರಿಯವಾಗಬೇಕೆಂಬ ಉದ್ದೇಶದಿಂದ ಅರ್ಥವಿಲ್ಲದ ವಿಡಿಯೋ, ವಿಚಾರಗಳನ್ನು ಜಾಲತಾಣಗಳಲ್ಲಿ ಹರಿಬಿಡುವುದನ್ನು ಕಾಣಬಹುದು. ಬೇಸರವೆಂದರೆ ಇಲ್ಲಿ ಯುವಜನತೆಯ ಪಾತ್ರವೇ ಹೆಚ್ಚಾಗಿದೆ. ಮೊಬೈಲ್‌ನಿಂದ ಎಷ್ಟು ಒಳ್ಳೆಯ ಅಂಶಗಳನ್ನು ಪಡೆದುಕೊಳ್ಳಬಹುದೋ ಅಷ್ಟೇ ಕೆಟ್ಟ ಅಂಶಗಳೂ ಇದರಲ್ಲಿ ಲಭ್ಯ. ಇದು ಒಂದಿಷ್ಟು ಒಳ್ಳೆಯ ಅಭ್ಯಾಸಗಳಿಗೆ ಚಾಲನೆ ನೀಡಿದರೆ ಕೆಲವೊಮ್ಮೆ ಕೆಟ್ಟ ಚಟಗಳಿಗೂ ಮುನ್ನುಡಿಯಾಗಬಹುದು. ಆದ್ದರಿಂದ ಇದರ ಬಳಕೆ ಮಿತಿಯಲ್ಲಿದ್ದರೆ ನಮಗೂ ಒಳಿತು ಇತರರಿಗೂ ಒಳಿತು.
                       -

Follow Us:
Download App:
  • android
  • ios