ಮದುವೆನಾ? ಲೀವಿಂಗ್ ರಿಲೇಶನ್‌ಷಿಪ್ಪಾ? ಗೊಂದಲಕ್ಕೆ ಉತ್ತರ ಇಲ್ಲಿದೆಯಪ್ಪಾ!
ನಾನು ಮತ್ತೆ ಮದುವೆಯಾಗಲೇ ಅಥವಾ ಒಂಟಿಯಾಗಿಯೇ ಮುಂದುವರಿಯಲಾ. ನನಗೆ ಸಂಬಂಧಗಳ ಬಗ್ಗೆಯೇ ಜಿಗುಪ್ಸೆ ಬಂದಿದೆ. ಇನ್ನೊಂದು ಮದುವೆಯಾಗಿ ಆ ಮನೆಗೆ ಅವರ ಬಂಧುಗಳಿಗೆ ಹೊಂದಿಕೊಳ್ಳೋದಕ್ಕಿಂತ ಲಿವ್ ಇನ್ ನಂಥಾ ಸಂಬಂಧಗಳು ಹೆಚ್ಚು ಫ್ಲೆಕ್ಸಿಬಲ್ ಅನಿಸುತ್ತವೆ. ದಯವಿಟ್ಟು ಈ ಬಗ್ಗೆ ಗೈಡ್ ಮಾಡಿ.
ಪ್ರಶ್ನೆ: ನಾನೊಬ್ಬ ಡಿವೋರ್ಸಿ. ಗಂಡ ಪ್ರತಿಯೊಂದರಲ್ಲೂ ಅವಮಾನಿಸುತ್ತಿದ್ದ. ನನ್ನ ಅಭಿಪ್ರಾಯಗಳಿಗೆ ಬೆಲೆಯೇ ಕೊಡುತ್ತಿರಲಿಲ್ಲ. ಅವನ ಜೊತೆಗೆ ಇರುವುದು ಒಂದು ಹಂತದ ಬಳಿಕ ಬಹಳ ಕಷ್ವವಾಯಿತು. ನಾನು ಸಾಂಪ್ರದಾಯಿಕ ಫ್ಯಾಮಿಲಿಯಿಂದ ಬಂದವಳು. ನನ್ನ ಈ ನಿರ್ಧಾರಕ್ಕೆ ಮನೆಯವರ ವಿರೋಧ ಬಂತು. ನಾನು ಗಂಡನನ್ನು ಬಿಟ್ಟು ಬಂದರೆ ನಮ್ಮ ಮನೆಗೆ ಬರುವ ಹಾಗಿಲ್ಲ ಅಂತ ಅವರು ಹೇಳಿದರು. ನಾನು ಖಾಸಗಿ ಕಂಪೆನಿಯಲ್ಲಿ ಉದ್ಯೋಗಿ. ಹಾಗಾಗಿ ಅವರ ಮಾತಿಗೆ ಬೆಲೆ ಕೊಡಲಿಲ್ಲ. ಪಿಜಿ ಹುಡುಕಿ ಒಬ್ಬಳೇ ಬದುಕುತ್ತಿದ್ದೇನೆ. ಆದರೆ ಈಗೀಗ ಒಂಥರಾ ಭಯ, ಭವಿಷ್ಯದಲ್ಲಿ ಏನಾಗಬಹುದೋ ಅನ್ನುವ ಆತಂಕ ಶುರುವಾಗಿದೆ. ನಾನು ಡಿವೋರ್ಸಿ ಅನ್ನೋದು ಗೊತ್ತಾದ ಮೇಲೆ ಆಫೀಸ್ ನ ಪುರುಷ ಉದ್ಯೋಗಿಗಳು ಹೆಚ್ಚು ಸಲಿಗೆಯಿಂದ ವರ್ತಿಸುತ್ತಿದ್ದಂತೆ ತೋರುತ್ತದೆ. ನಾನು ಮತ್ತೆ ಮದುವೆಯಾಗಲೇ ಅಥವಾ ಒಂಟಿಯಾಗಿಯೇ ಮುಂದುವರಿಯಲಾ. ನನಗೆ ಸಂಬಂಧಗಳ ಬಗ್ಗೆಯೇ ಜಿಗುಪ್ಸೆ ಬಂದಿದೆ. ಇನ್ನೊಂದು ಮದುವೆಯಾಗಿ ಆ ಮನೆಗೆ ಅವರ ಬಂಧುಗಳಿಗೆ ಹೊಂದಿಕೊಳ್ಳೋದಕ್ಕಿಂತ ಲಿವ್ ಇನ್ ನಂಥಾ ಸಂಬಂಧಗಳು ಹೆಚ್ಚು ಫ್ಲೆಕ್ಸಿಬಲ್ ಅನಿಸುತ್ತವೆ. ದಯವಿಟ್ಟು ಈ ಬಗ್ಗೆ ಗೈಡ್ ಮಾಡಿ.
ಸಮಾಧಾನ: ನಿಮ್ಮಲ್ಲಿ ವಿಪರೀತ ಗೊಂದಲಗಳಿದ್ದ ಹಾಗೆ ಕಾಣುತ್ತಿದೆ. ನಿಮ್ಮ ವಯಸ್ಸನ್ನೂ ನೀವು ಸ್ಪಷ್ಟವಾಗಿ ನಮೂದಿಸಿಲ್ಲ. ಒಲ್ಲದ ಗಂಡನ ಜೊತೆಗೆ ನೋವು ತಿನ್ನುತ್ತಾ ಸುಮ್ಮನೇ ಅಡ್ಜೆಸ್ಟ್ ಮಾಡಿಕೊಂಡು ಬದುಕೋದರಲ್ಲಿ ಅರ್ಥವಿಲ್ಲ ಅಂತ ಆ ಸಂಬಂಧದಿಂದ ಹೊರಬಂದಿರಿ ಅನ್ನುವುದು ಸ್ಪಷ್ಟ. ಆದರೆ ಅದೊಂದೇ ಕಾರಣವಾಗಿತ್ತಾ ಅನ್ನುವುದು ಸ್ಪಷ್ಟವಾಗಿಲ್ಲ. ಅದೊಂದೇ ಕಾರಣ ಆದರೂ ನೀವು ಮಾಡಿದ್ದರಲ್ಲಿ ತಪ್ಪಿಲ್ಲ. ಆತ್ಮ ಗೌರವವಿಲ್ಲದೇ ಬಹಳ ಕಾಲ ಇನ್ನೊಬ್ಬರ ಜೊತೆಗೆ ಬದುಕೋದು ಕಷ್ಟ. ಅಷ್ಟಕ್ಕೂ ನಾವು ಮದುವೆ ಆಗೋದು ಯಾಕೆ ಹೇಳಿ, ಬರೀ ಬಯಕೆಗಳನ್ನು ತೀರಿಸಿಕೊಳ್ಳಲೋ, ಮಕ್ಕಳನ್ನು ಮಾಡಿಕೊಳ್ಳಲೋ ಮಾತ್ರ ಅಲ್ಲವಲ್ಲ. ಜೀವನಕ್ಕೊಬ್ಬ ಸಂಗಾತಿ ಬೇಕು. ಒಂಟಿ ಜೀವನಕ್ಕೆ ಪಾರ್ಟನರ್ ಬೇಕು. ಆಗ ಬದುಕಿಗೆ ಒಂದು ಅರ್ಥ ಬರುತ್ತದೆ. ಪ್ರೀತಿ, ಭದ್ರತೆ ಒದಗುತ್ತದೆ. ಆದರೆ ಇವ್ಯಾವುವೂ ಇಲ್ಲದೇ ಕೇವಲ ಸಮಾಜದ ಕಣ್ಣಿನಲ್ಲಿ ಒಳ್ಳೆಯವರು ಅನಿಸಿಕೊಳ್ಳಲು ಒಂದು ಉಸಿರುಗಟ್ಟಿಸುವ ಸಂಬಂಧದಲ್ಲಿ ಮುಂದುವರಿಯುವುದರಲ್ಲಿ ಅರ್ಥ ಇಲ್ಲ.
ಜೀವನವೇ ಸಾಕು ಅನಿಸ್ತಿದೆಯಾ? ಇದರಿಂದ ಹೊರಬರೋಕೆ ದಾರಿ ಇದೆ
ಆದರೆ ಇದನ್ನೇ ಆಫೀಸ್ ನ ಪುರುಷ ಉದ್ಯೋಗಿಗಳು ದುರ್ಬಳಕೆ ಮಾಡಿಕೊಳ್ಳುತ್ತಿದ್ದೀರಿ ಅಂದಿರಿ. ಆದರೆ ನಿಮ್ಮ ಅನುಮತಿ ಇಲ್ಲದೇ ಅವರೇನು ಮಾಡುವುದೂ ಸಾಧ್ಯವಿಲ್ಲ. ನೀವು ಸ್ಟ್ರಿಕ್ಟ್ ಆಗಿ ಇದ್ದರೆ, ನಿಮ್ಮ ಪಾಡಿಗೆ ನೀವು ಕೆಲಸ ಮಾಡುತ್ತಾ ಇದ್ದರೆ ಯಾರು ಏನು ಮಾಡಲೂ ಸಾಧ್ಯ ಇಲ್ಲ. ನೀವು ಮಾನಸಿಕವಾಗಿ ಇನ್ನೂ ದೃಢತೆ ಬೆಳೆಸಿಕೊಳ್ಳಬೇಕು. ಅವರ ಆ ಬಗೆಯ ವರ್ತನೆಗೆ ಕಟುವಾಗಿ ಪ್ರತಿಕ್ರಿಯಿಸಿ. ಕ್ರಮೇಣ ನಿರ್ಲಕ್ಷ್ಯ ಮಾಡುತ್ತಾ ಬನ್ನಿ. ನೀವು ಸ್ಟ್ರಾಂಗ್ ಆಗಿದ್ದರೆ ಯಾರಿಂದ ಏನು ಮಾಡಲೂ ಸಾಧ್ಯ ಇಲ್ಲ. ಆ ಬಗ್ಗೆ ಭಯ ಬೇಡ.ಬೆಳಗ್ಗೆ ಸ್ವಲ್ಪ ಬೇಗ ಎದ್ದು ಧ್ಯಾನ, ಪ್ರಾಣಾಯಾಮ ಮಾಡಿ. ಪಾರ್ಕ್ ನಲ್ಲೊಂದು ವಾಕ್ ಮಾಡಿ. ವೀಕೆಂಡ್ ನಲ್ಲಿ ಒಂದಿಷ್ಟು ಜಾಗಗಳಿಗೆ ಹೋಗಿ ಎನ್ ಜಾಯ್ ಮಾಡಿ. ಮನಸ್ಸು ರಿಫ್ರೆಶ್ ಆಗುತ್ತೆ. ಒಂಟಿತನ ಅನ್ನೋದು ಖಂಡಿತಾ ಶಿಕ್ಷೆ ಅಲ್ಲ. ನೀವು ಮನಸ್ಸು ಮಾಡಿದರೆ ನೀವು ಈಗ ಇರುವ ಸ್ಥಿತಿಯಲ್ಲೇ ಬದುಕನ್ನೂ ಎನ್ ಜಾಯ್ ಮಾಡಬಹುದು.
ಡೌನ್ ಸಿಂಡ್ರೋಮ್ ಮಗು ತೋರಿಸೋ ಪ್ರೀತಿ ಮುಂದೆ ಬೇರೇನೂ ಇಲ್ಲ!
ಇನ್ನು ಮರು ಮದುವೆಯ ಬಗ್ಗೆ ಹೇಳಿದಿರಿ. ಅಲ್ಲೂ ನಿಮಗೆ ಸ್ವಲ್ಪ ಅಡ್ಜೆಸ್ಟ್ ಮೆಂಟ್ ಸಮಸ್ಯೆ ಬರಬಹುದು. ಅವರ ಫ್ಯಾಮಿಲಿಗೆ ಅಡ್ಜೆಸ್ಟ್ ಆಗಬೇಕಾಗಬಹುದು. ಇದಕ್ಕೆ ಒಂದಿಷ್ಟು ಸಮಯ ಹಿಡಿಯಬಹುದು. ಅಷ್ಟು ಕಾಲ ಕಾದು ಸಂಸಾರ ನಿರ್ವಹಿಸುವ ತಾಳ್ಮೆ ಬೆಳೆಸಿಕೊಳ್ಳಬೇಕು. ಒಂದಿಷ್ಟು ಕುಹಕದ ಮಾತುಗಳು ಕೇಳಿ ಬರಬಹುದು. ಬೇಕಾದ್ದನ್ನಷ್ಟೇ ಸ್ವೀಕರಿಸಿ ಉಳಿದದ್ದನ್ನು ನಿರ್ಲಕ್ಷಿಸುತ್ತಾ ಬಂದರೆ ಮದುವೆ ಆದರೂ ಚೆನ್ನಾಗಿಯೇ ಬದುಕಬಹುದು. ಆದರೆ ಮದುವೆ ಆಗುವ ಮೊದಲು ಆ ವ್ಕಕ್ತಿಯ ಸ್ವಭಾವ, ಆಸಕ್ತಿಗಳು, ಕುಟುಂಬದ ಹಿನ್ನೆಲೆ ತಿಳಿದುಕೊಂಡು ನಿಮಗೆ ಸರಿಯಾಗುತ್ತೆ ಅನ್ನೋದಾದರೆ ಮಾತ್ರ ಮುಂದುವರಿಯಿರಿ. ಇದು ನಿಮ್ಮ ಅಭದ್ರತೆ ನೀಗಿಸುತ್ತದೆ. ಒಬ್ಬ ಒಳ್ಳೆಯ ವ್ಯಕ್ತಿತ್ವದ ನಿಮ್ಮನ್ನು ಅರ್ಥ ಮಾಡಿಕೊಳ್ಳುವ ವ್ಯಕ್ತಿ ಸಿಕ್ಕಿದ್ದರೆ ಮದುವೆ ಆಗಬಹುದು. ನಿಮ್ಮ ಕಷ್ಟ ಸುಖಗಳಲ್ಲಿ ಜೊತೆಯಾಗುತ್ತದೆ.
ಲಿವ್ ಇನ್ ಸಂಬಂಧದಲ್ಲಿ ಭದ್ರತೆ ಇರೋದಿಲ್ಲ. ಯಾವ ಟೈಮ್ ನಲ್ಲಿ ಬೇಕಿದ್ದರೂ ಸಂಬಂಧ ಕಡಿದು ಹೋಗಬಹುದು, ಇದಕ್ಕೆ ವಿಶ್ವಾಸಾರ್ಹತೆ ಕಡಿಮೆ. ಆದರೂ ನಿಮಗೊಬ್ಬ ಯೋಗ್ಯ ಪಾರ್ಟನರ್ ಸಿಕ್ಕಿದರೆ ಈ ಎಲ್ಲ ಅನಿಶ್ಚಿತತೆಗಳ ನಡುವೆ ಮುಂದುವರಿಯಬಹುದು.ಇಷ್ಟೆಲ್ಲ ಸಾಧ್ಯಾಸಾಧ್ಯತೆಗಳಿವೆ. ಈ ಎಲ್ಲ ರೀತಿಯಲ್ಲೂ ಯೋಚಿಸಿ. ನಿಮ್ಮ ಆಪ್ತರ ಜೊತೆಗೂ ಚರ್ಚಿಸಿ. ಆಪ್ತ ಸಲಹೆಗಾರರ ಬಳಿ ಮಾತನಾಡಿ. ಆದರೆ ಇವೆಲ್ಲಕ್ಕಿಂತ ಮೊದಲು ನಿಮ್ಮ ಗೊಂದಲ ಬಗೆಹರಿಸಿ. ಇಲ್ಲಿ ಮೂರೂ ಆಯ್ಕೆಗಳೂ ನಿಮ್ಮ ಮುಂದಿವೆ. ಆ ಆಯ್ಕೆಯನ್ನು ನೀವೇ ಮಾಡಬೇಕು. ಇನ್ನೊಬ್ಬರು ಅದನ್ನು ಸೂಚಿಸಲು ಸಾಧ್ಯವಿಲ್ಲ. ನಿಮಗೆ ಸಲಹೆ ಕೊಡಬಹುದಷ್ಟೇ.