Asianet Suvarna News Asianet Suvarna News

ಮದುವೆಯಾದ ಮೇಲೆ ಹೇಗಿರಬಾರದೆಂದು ಉದಾಹರಣೆಯಾದ ಅಮ್ಮ!

ಭಾರತದ ಬಹುತೇಕ ತಾಯಂದಿರನ್ನು ತ್ಯಾಗಮಯಿ, ಕರುಣಾಮೂರ್ತಿ, ಸಹನೆಯ ಅಪರಾವತಾರ ಎಂದೆಲ್ಲ ಕೊಂಡಾಡಲಾಗುತ್ತದೆ. ಆದರೆ, ಕೇವಲ ಈ ಹೊಗಳಿಕೆಗಳಿಗಾಗಿ ಅವರೆಷ್ಟೊಂದನ್ನೆಲ್ಲ ಅನುಭವಿಸಬೇಕಾಗಿರುತ್ತದೆ ಎಂಬುದು ಅವರಿಗೆ ಮಾತ್ರ ಗೊತ್ತು. ಇಷ್ಟೆಲ್ಲ ಹೊಗಳಿಸಿಕೊಳ್ಳುವ ಹಿರಿ ವಯಸ್ಸಿನ ಪತ್ನಿಯರು, ಇಂದಿನ ಯುವತಿಯರಿಗೆ ಪತ್ನಿಯರು ಹೇಗಿರಬಾರದು ಎಂಬುದಕ್ಕೆ ಉದಾಹರಣೆಯಾಗಿ ನಿಲ್ಲುತ್ತಿದ್ದಾರೆ. ಅದನ್ನು ಈಗಿನ ಹೆಣ್ಣುಮಕ್ಕಳು ಅರ್ಥ ಮಾಡಿಕೊಳ್ಳುತ್ತಿದ್ದಾರೆ ಕೂಡಾ. 

Marriage and Family relationship value taught by mother to daughter
Author
Bangalore, First Published Oct 15, 2019, 2:37 PM IST

ಭಾರತದ ಮಧ್ಯಮವರ್ಗದ ಕುಟುಂಬಗಳಿಂದ ಬಂದ ಬಹುತೇಕ ಹುಡುಗಿಯರಿಗೆ ಮದುವೆ ಎಂದರೆ ಗೊತ್ತಿರುವುದು ಮದುವೆ ದಿನದ ಸಂಭ್ರಮವೊಂದೇ. ಅದರಾಚೆಗೆ ಅವರು ಕನಸು ಕಾಣುವುದೂ ಇಲ್ಲ, ಯೋಚಿಸುವುದೂ ಇಲ್ಲ.

ಬಹುತೇಕ ಯುವತಿಯರ ತಾಯಂದಿರು ದಾಂಪತ್ಯ ಜೀವನದ ಕುರಿತು ಎಲ್ಲವನ್ನೂ ಹೇಳುವುದಿಲ್ಲ. ಲೈಂಗಿಕ ವಿಷಯಗಳು ಬಿಡಿ, ಲಿಂಗ ಸಮಾನತೆ, ಮಗುವಿನ ಜವಾಬ್ದಾರಿ ಹಂಚಿಕೊಳ್ಳುವುದು, ಆರ್ಥಿಕ ಹೊರೆಯನ್ನು ಹಂಚಿಕೊಳ್ಳುವುದು ಮುಂತಾದ ಬಗ್ಗೆ ಕೂಡಾ ಅವರು ಬಾಯಿ ಬಿಚ್ಚುವುದಿಲ್ಲ. ಆದರೆ, ಬಹುತೇಕರ ಅಮ್ಮ ಇವುಗಳ ವಿಷಯದಲ್ಲಿ ಹೇಗಿರಬಾರದು ಎಂಬುದಕ್ಕೆ ಉದಾಹರಣೆಯಾಗಿ ನಿಲ್ಲುತ್ತಾರೆ ಎಂಬುದು ದುರದೃಷ್ಟಕರ. 

ಫ್ಲರ್ಟಿ ಭಾವನಿಂದ ಹಿಡಿದು ಸಿಡುಕ ಅಂಕಲ್‌ವರೆಗೆ ವಿವಾಹದಲ್ಲಿ ವಿಧವಿಧ ವ್ಯಕ್ತಿತ್ವ

1. ಆರ್ಥಿಕ ಸ್ವಾತಂತ್ರ್ಯ

ಮದುವೆಯಾದ ಕೂಡಲೇ ಕೆಲಸ ಬಿಟ್ಟ ಅಮ್ಮಂದಿರು ಆ ಬಳಿಕ ಸಣ್ಣ ಪುಟ್ಟ ಆಸೆ ಈಡೇರಿಸಲೂ ಪೈಸೆ ಪೈಸೆಯನ್ನು ತೆಗೆದು ಅಡಿಗೆಮನೆಗಳಲ್ಲಿ ಕೂಡಿಡಬೇಕಾಗುತ್ತದೆ. ಅಷ್ಟೇ ಅಲ್ಲ, ಗಂಡನ ಜೇಬಿನಿಂದ ಎಗರಿಸುವವರೂ ಸಾಕಷ್ಟಿದ್ದಾರೆ. ಇಲ್ಲವೇ ಪ್ರತಿ ವಸ್ತು ಬೇಕೆಂದರೂ ಅದನ್ನೂ ಕೇಳುವಾಗ ಸಂಕೋಚದ ಮುದ್ದೆಯಾಗಿ, ತಾನೇ ಪತಿಗೊಂದು ದೊಡ್ಡ ಹೊರೆಯಾಗಿದ್ದೇನೆ, ಮತ್ತಷ್ಟು ಹೊರೆ ಹೊರಿಸುವುದು ಹೇಗೆಂದೆಲ್ಲ ಯೋಚಿಸುವವರೇ ಹಲವರು.

ಅದೇ ಅವರು ಮದುವೆಯಾದ ಬಳಿಕವೂ ಕೆಲಸ ಬಿಡದಿದ್ದರೆ, ಆರ್ಥಿಕ ಸ್ವಾತಂತ್ರ್ಯವೊಂದೇ ಅಲ್ಲ, ಗಂಡನ ಖರ್ಚುಗಳನ್ನೂ ಹಂಚಿಕೊಂಡು ಹೆಮ್ಮೆ ಪಡಬಹುದಿತ್ತು. ಮಕ್ಕಳ ಬೇಕುಬೇಡಗಳಿಗೆಲ್ಲ ಆಸರೆಯಾಗಬಹುದಿತ್ತು. ಅಷ್ಟೇ ಅಲ್ಲ, ನಿವೃತ್ತಿಯ ನಂತರವೂ ತಮ್ಮ ಸ್ವಾವಲಂಬಿ ಜೀವನದ ಯೋಜನೆ ರೂಪಿಸಿಕೊಂಡು ಮಕ್ಕಳಿಗೆ ಮಾದರಿಯಾಗಬಹುದಿತ್ತು. 

ಇಡೀ ಜಗತ್ತೇ ಮೆಚ್ಚಿದರೂ ಪತ್ನಿ ಮೆಚ್ಚದ ಪತಿ ಇವರು!

2. ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ

ಗಂಡ ಹಣ ಸಂಪಾದಿಸುತ್ತಾನೆಂಬ ಒಂದೇ ಕಾರಣಕ್ಕೆ ಮನೆಯ ಅಷ್ಟೂ ಜವಾಬ್ದಾರಿ ಜೊತೆಗೆ ಮಕ್ಕಳೆರಡರ ಅಷ್ಟೂ ಕೆಲಸಗಳನ್ನೂ ಗಳಿಗೆಯೂ ವಿಶ್ರಾಂತಿ ಇಲ್ಲದೆ ಮಾಡುತ್ತಾರೆ ಅಮ್ಮಂದಿರು. ಅಷ್ಟೇ ಅಲ್ಲ, ಗಂಡನ ಶೂ ಬಿಚ್ಚುವುದರಿಂದ ಹಿಡಿದು ಎಲ್ಲವನ್ನೂ ಕೈಗೆ ಹಿಡಿಸುವ ಮಟ್ಟಿಗೆ ಸೇವೆಯಲ್ಲಿ ತೊಡಗಿ ತಮ್ಮನ್ನು ತಾವು ಡಿಗ್ರೇಡ್ ಮಾಡಿಕೊಳ್ಳುತ್ತಾರೆ. ಆದರೆ, ಉದ್ಯೋಗ ಮಾಡುತ್ತಿರಲೀ, ಇಲ್ಲದಿರಲೀ, ಮಕ್ಕಳ ಜವಾಬ್ದಾರಿ ಪತ್ನಿಯಷ್ಟೇ ಪತಿಗೂ ಇದೆ.

ಏಕೆಂದರೆ ಆಕೆ ಮಾಡುವ ರಜೆಯಿಲ್ಲದ ಕೆಲಸ ಸುಲಭದ್ದಲ್ಲ. ಇಬ್ಬರೂ ಹಂಚಿಕೊಂಡು ಕೆಲಸ ಮಾಡುವುದರಿಂದ ಸುಲಭವಾಗುವ ಜೊತೆಗೆ ಇಬ್ಬರಿಗೂ ಅದರ ಕಷ್ಟನಷ್ಟಗಳ ಅರಿವಾಗುತ್ತದೆ. ಗಂಡಹೆಂಡತಿಯ ನಡುವೆ ಉತ್ತಮ ಬಾಂದವ್ಯ ಬೆಳೆಯುತ್ತದೆ. ಇಬ್ಬರೂ ದುಡಿಯುತ್ತಿದ್ದಾಗ ಮನೆಗೆಲಸವನ್ನೂ ಹಂಚಿಕೊಳ್ಳಬಹುದು. ಇದರಿಂದ ಪತಿಪತ್ನಿ ಇಬ್ಬರೂ ಗೆಳೆಯರಂತಿರುವ ಜೊತೆಗೆ ಮಕ್ಕಳೂ ಅಪ್ಪಅಮ್ಮ ಇಬ್ಬರ ಸಮಯವನ್ನೂ ಪಡೆದುಕೊಳ್ಳುತ್ತವೆ. 

ಇದು ಸಂಸಾರಸ್ಥರಿಗಾಗಿ ಮಾತ್ರ! ನೀವಿದನ್ನು ಓದಲೇಬೇಕು!

3. ಮದುವೆ ಹೊರತಾದ ಸಪೋರ್ಟ್ ಸಿಸ್ಟಂ

ಮದುವೆಯಾದ ಮೇಲೆ ಬಹುತೇಕ ಹೆಂಗಸರು ಮನೆ ಗಂಡ ಮಕ್ಕಳು ಎಂದು ಅಷ್ಟರಲ್ಲೇ ಮುಳುಗಿ ಹೋಗುತ್ತಾರೆ. ಇದರಿಂದ ಕಷ್ಟಕಾಲದಲ್ಲಿ ಅವರಿಗೆ ಯಾರೂ ಇಲ್ಲ ಎನಿಸಿ ದುಃಖ ಹೆಚ್ಚುತ್ತದೆ. ಆದರೆ, ಮದುವೆಯಾದ ಬಳಿಕವೂ ಕಷ್ಟವಾದರೂ ಕುಟುಂಬ, ನೆಂಟರಿಷ್ಟರು, ಸ್ನೇಹಿತರೊಂದಿಗೆ ಸಂಬಂಧ ನಿರ್ವಹಿಸಿಕೊಂಡು ಬಂದರೆ ಅದು ಮನಸ್ಸಿಗೆ ಮುದ ನೀಡುವುದಷ್ಟೇ ಅಲ್ಲ, ಕಷ್ಟದ ಸಂದರ್ಭದಲ್ಲಿ ಧೈರ್ಯಕ್ಕಿರುತ್ತಾರೆ. 

4. ಗಂಡನೊಂದಿಗೆ ಜಗಳ

ಗಂಡಹೆಂಡತಿ ನಡುವೆ ಜಗಳ ಬಂದಾಗಲೆಲ್ಲ ಭಾರತೀಯ ತಾಯಂದಿರು ತಾವು ಕಣ್ಣೀರಾಗಿ ತಪ್ಪಿಲ್ಲದಿದ್ದರೂ ಒಪ್ಪಿಕೊಂಡು ಬಾಯಿ ಮುಚ್ಚುಕೊಳ್ಳುವುದೇ ಹೆಚ್ಚು. ಇದರಿಂದ ಆತ್ಮಾಭಿಮಾನಕ್ಕೆ ಪದೇ ಪದೆ ಪೆಟ್ಟು ಕೊಟ್ಟುಕೊಳ್ಳುತ್ತಾರೆ. ಆದರೆ, ಇಬ್ಬರು ಜೊತೆಗಿರಬೇಕೆಂದರೆ ಆಗಾಗ ವಾದ ವಿವಾದಗಳಾಗುತ್ತವೆ, ಜಗಳ, ವಿರೋಧಗಳಿರುತ್ತವೆ. ಪರವಾಗಿಲ್ಲ, ಹಾಗೆಂದ ಮಾತ್ರಕ್ಕೆ ಇಬ್ಬರೂ ವಿಚ್ಚೇದನ ಪಡೆಯಬೇಕೆಂದೇನಿಲ್ಲ. ಅಮ್ಮಮಗಳು ಜಗಳವಾಡುವುದಿಲ್ಲವೇ ? ಹಾಗೆಯೇ ಇದೂ. ಜಗಳವಾದ ಬಳಿಕ ಹೇಗೆ ವರ್ತಿಸುತ್ತೇವೆ, ಹೇಗೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತೇವೆ ಎಂಬುದು ಮುಖ್ಯ. ಎಲ್ಲ ವಿರೋಧಗಳು ಕೂಡಾ ಆರೋಗ್ಯಕರ ಚರ್ಚೆಯಿಂದ ಪರಿಹಾರವಾಗಬಲ್ಲವು. ಅದೇ ಮದುವೆಯನ್ನು ಗಟ್ಟಿಗೊಳಿಸುವುದು. ಇದೇಕೆ ಅಮ್ಮಂದಿರಿಗೆ ಅರ್ಥವಾಗಲಿಲ್ಲವೋ? 

ಇಡೀ ಜಗತ್ತೇ ಮೆಚ್ಚಿದರೂ ಪತ್ನಿ ಮೆಚ್ಚದ ಪತಿ ಇವರು!

5. ನೋ ಎಂದೊಡನೆ ನೋವಾಗುವುದಿಲ್ಲ

ಅತ್ಯುತ್ತಮ ಪತ್ನಿ, ಸೊಸೆ ಎನಿಸಿಕೊಳ್ಳಬೇಕೆಂದರೆ ಯಾವ ಮಾತಿಗೂ ಇಲ್ಲವೆನ್ನಬಾರದು ಎಂಬುದೊಂದು ಹೇರಿಕೆ ಹೇಳದೆಯೇ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇದರಿಂದ ತಾಯಂದಿರು ಅದೆಷ್ಟನ್ನು ಅನುಭವಿಸಿದ್ದಾರೋ ಅವರಿಗೇ ಗೊತ್ತು. ಈ ಒತ್ತಡಗಳಿಗೆ ಮಣಿಯದೆ ಇಷ್ಟವಾಗದ್ದಕ್ಕೆ ನೋ ಎನ್ನುವುದು ಕಲಿಯುವುದರಿಂದ ಇನ್ನೊಬ್ಬರಿಗೆ ಸ್ವಲ್ಪ ಬೇಜಾರಾಗಬಹುದು. ಆದರೆ, ನಮಗೆ ನಾವೇ ಮೋಸ ಮಾಡಿಕೊಂಡಂತಂತೂ ಆಗುವುದಿಲ್ಲ. ನಿಧಾನವಾಗಿ ಅವರೂ ನಮ್ಮ ಇಷ್ಟಕಷ್ಟಗಳಿಗೆ ಬೆಲೆ ಕೊಡಲು ಕಲಿಯುತ್ತಾರೆ. 

Follow Us:
Download App:
  • android
  • ios