ಗುಜರಾತಿನ ಖಾನ್ಪುರದ ಮೇಘರಾಜ್ ತನ್ನ ಪೂರ್ವಜರಂತೆ ಇಬ್ಬರು ಮಹಿಳೆಯರಾದ ಕಾಜಲ್ ಮತ್ತು ರೇಖಾಳನ್ನು ವಿವಾಹವಾಗುತ್ತಿದ್ದಾರೆ. ಒಂದು ದಶಕಕ್ಕೂ ಹೆಚ್ಚು ಕಾಲ ಲಿವ್ ಇನ್ ನಲ್ಲಿದ್ದ ಮೂವರು, ಮೂರು ಮಕ್ಕಳೊಂದಿಗೆ ಜಂಟಿ ಕುಟುಂಬ ನಡೆಸುತ್ತಿದ್ದಾರೆ. ಕುಟುಂಬದ ಸಂಪ್ರದಾಯ ಮತ್ತು ಪರಸ್ಪರ ಒಪ್ಪಿಗೆಯಿಂದ ಈ ಬಹುಪತ್ನಿತ್ವ ನಡೆಯುತ್ತಿದೆ.

ಪೂರ್ವಜರು ನಡೆದ ದಾರಿಯಲ್ಲೇ ನಡೆದು, ಅವರು ಪಾಲಿಸಿಕೊಂಡು ಬಂದ ಪದ್ಧತಿಯನ್ನು ಅನುಸರಿಸೋದು ಕಿರಿಯರ ಜವಾಬ್ದಾರಿ. ಪೂಜೆ, ಹಬ್ಬಗಳನ್ನು ಹಿಂದಿನಿಂದ ನಡೆದು ಬಂದಂತೆ ಈಗ್ಲೂ ಮುಂದುವರೆಸಿಕೊಂಡು ಬಂದ ಕುಟುಂಬ ಸಾಕಷ್ಟಿದೆ. ಆದ್ರೆ ಇಲ್ಲೊಂದು ಸಂಪ್ರದಾಯ ಅಚ್ಚರಿ ಮೂಡಿಸಿದೆ. ಮೇಘರಾಜ್ ಎಂಬುವವರು ಇಬ್ಬರು ಹುಡುಗಿಯರನ್ನು ಮದುವೆ ಆಗಿ ಸಂಸಾರ ನಡೆಸೋದು ಮಾತ್ರವಲ್ಲ ತನ್ನ ಪೂರ್ವಜರ ಸಂಪ್ರದಾಯವನ್ನು ಉಳಿಸಿಕೊಂಡು ಬರಲು ಮುಂದಾಗಿದ್ದಾರೆ. ಅಪ್ಪ, ಅಜ್ಜನಂತೆ ಮೇಘರಾಜ್ ಎರಡು ಮದುವೆಯಾಗ್ತಿದ್ದಾರೆ.

ಗುಜರಾತ್ (Gujarat)ನ ನವಸಾರಿ ಜಿಲ್ಲೆಯ ಖಾನ್ಪುರ (Khanpur) ಎಂಬ ಸಣ್ಣ ಪಟ್ಟಣದ ಕುಟುಂಬವೊಂದು ಈ ವಿಷ್ಯದಲ್ಲಿ ಗಮನ ಸೆಳೆದಿದೆ. ಇಲ್ಲಿನ 36 ವರ್ಷದ ಮೇಘರಾಜ್ ದೇಶಮುಖ್ ಇಬ್ಬರನ್ನು ಮದುವೆಯಾಗಿ ಮೂವರಾಗಿ ಒಟ್ಟಿಗೆ ವಾಸಿಸುವ ವಿಶಿಷ್ಟ ಕುಟುಂಬ ಸಂಪ್ರದಾಯದ ಮುಂದುವರಿಸಲು ಮುಂದಾಗಿದ್ದಾರೆ. ಮೇಘರಾಜ್, ತಂದೆ ರಾಮ್ ಮತ್ತು ಅಜ್ಜ ನೇವಲ್ ಅವರ ದಾರಿ ತುಳಿದಿದ್ದಾರೆ. ಅವರ ತಂದೆ ರಾಮ್, ವನಿತಾ ಮತ್ತು ಚಂದಾಳನ್ನು ಮದುವೆಯಾಗಿದ್ದಾರೆ. ಅಜ್ಜ ನವಲ್, ಸುಕ್ರಿ ಮತ್ತು ಕಾಮು ಅವರನ್ನು ವಿವಾಹವಾಗಿದ್ದಾರೆ.

ಲಿವ್ ಇನ್ (Live in) ನಲ್ಲಿದ್ದ ಮೇಘರಾಜ್ : ಮೇಘರಾಜ್ 16 ವರ್ಷಗಳಿಂದ ಕಾಜಲ್ ಜೊತೆ ಮತ್ತು 13 ವರ್ಷಗಳಿಂದ ರೇಖಾ ಜೊತೆ ವಾಸಿಸುತ್ತಿದ್ದಾರೆ. ಈ ಮೂವರೂ ಒಂದು ದಶಕಕ್ಕೂ ಹೆಚ್ಚು ಕಾಲ ಒಂದೇ ಮನೆ ಮತ್ತು ವ್ಯವಹಾರವನ್ನು ಹಂಚಿಕೊಂಡಿದ್ದಾರೆ. ಈಗ ಮೇಘರಾಜ್ ಇಬ್ಬರು ಮಹಿಳೆಯರ ಜೊತೆ ಮದುವೆ ಆಗ್ತಿದ್ದಾರೆ. 2,500 ಅತಿಥಿಗಳ ಸಮ್ಮುಖದಲ್ಲಿ ಮೇಘರಾಜ್ ಮದುವೆ ಆಗ್ತಿದ್ದಾರೆ. ಇಂದು ಮೇಘರಾಜ್ ಮದುವೆ ನಡೆಯಲಿದೆ. ಅವರ ಮಂಗಳಪತ್ರ ವೈರಲ್ ಆದ್ಮೇಲೆ ಮೇಘರಾಜ್ ಕುಟುಂಬದ ಸಂಪ್ರದಾಯ ಸುದ್ದಿಗೆ ಬಂದಿದೆ. 

ಮೇಘರಾಜ್ ಗೆ ಮೂವರು ಮಕ್ಕಳು. ಕಾಜಲ್ ಗೆ ಇಬ್ಬರು ಮಕ್ಕಳು ಮತ್ತು ರೇಖಾಗೆ ಒಬ್ಬ ಮಗನಿದ್ದಾನೆ. ರೇಖಾ ಸ್ನೇಹಿತೆಯಾಗಿದ್ದರು. ಆದ್ರೆ ಕಾಜಲ್ ರನ್ನು ಮೇಘರಾಜ್ ಪ್ರೀತಿ ಮಾಡ್ತಿದ್ದರು. ನಾನು ರೇಖಾ ಸ್ನೇಹಿತನಾಗಿದ್ದೆ. ಆದರೆ ನಾನು ಕಾಜಲ್ಳನ್ನೂ ಪ್ರೀತಿಸುತ್ತಿದ್ದೆ. ಇದನ್ನು ನಾನು ಅವರಿಬ್ಬರಿಗೂ ಸ್ಪಷ್ಟವಾಗಿ ಹೇಳಿದ್ದೆ. ಅವರು ಸಹೋದರಿಯರಂತೆ ಬದುಕಲು ಒಪ್ಪಿಕೊಂಡರು ಎಂದು ಮೇಘರಾಜ್ ಹೇಳಿದ್ದಾರೆ. 

ಎರಡು ಜುಟ್ಟು ಒಟ್ಟಿಗೆ ಇರೋಕೆ ಸಾಧ್ಯವಿಲ್ಲ ಎನ್ನುವ ಮಾತಿದೆ. ಆದ್ರೆ ಒಂದೇ ವ್ಯಕ್ತಿಯ ಜೊತೆ ಒಟ್ಟಿಗೆ ಸುಖ ಸಂಸಾರ ನಡೆಸ್ತಿರುವ ಈ ಜೋಡಿ ಈ ಮಾತನ್ನು ಸುಳ್ಳು ಮಾಡಿದ್ದಾರೆ. ಕಾಜಲ್ ಹಾಗೂ ರೇಖಾ ಇಬ್ಬರೂ ಒಟ್ಟಿಗೆ ಪ್ರೀತಿಯಿಂದ, ಹೊಂದಾಣಿಕೆಯಿಂದ ಜೀವನ ನಡೆಸುತ್ತಿದ್ದಾರೆ. ಇಬ್ಬರೂ ಅಂಗಡಿಯನ್ನು ಮುನ್ನಡೆಸುತ್ತಿದ್ದಾರೆ. ಆರ್ಥಿಕ ಸ್ಥಿತಿ ಸಂಪ್ರದಾಯದಂತೆ ಮದುವೆ ಆಗಲು ಯೋಗ್ಯವಾಗಿರಲಿಲ್ಲ. ಹಾಗಾಗಿ ಆಗ ಮದುವೆ ಆಗಿರಲಿಲ್ಲ ಎಂದು ಮೇಘರಾಜ್ ಹೇಳಿದ್ದಾರೆ. ನಮ್ಮ ಕುಟುಂಬದಲ್ಲಿ ಇಬ್ಬರು ಮಹಿಳೆಯರನ್ನು ಮದುವೆಯಾಗುವುದು ಸಾಮಾನ್ಯ. ನನ್ನ ತಂದೆ ಮತ್ತು ನಾನು ಕೂಡ ಇಬ್ಬರು ಮಹಿಳೆಯರನ್ನು ಮದುವೆಯಾಗಿದ್ದೇವೆ. ನಾವು ಜಂಟಿ ಕುಟುಂಬದಲ್ಲಿ ಸಂತೋಷದಿಂದ ಬದುಕುತ್ತೇವೆ ಅಂತ ಮೇಘರಾಜ್ ತಂದೆ ಹೇಳಿದ್ದಾರೆ. 

ರೇಖಾ ಹಾಗೂ ಮೇಘರಾಜ್ ಜೊತೆ ನಾನು ಸಂತೋಷವಾಗಿದ್ದೇನೆ ಅಂತ ಕಾಜಲ್ ಹೇಳಿದ್ರೆ, ಮೇಘರಾಜ್ ಪ್ರೀತಿಗಿಂತ ಮತ್ತ್ಯಾವುದೂ ಮುಖ್ಯವಲ್ಲ. ನಾನು ಮತ್ತು ಕಾಜಲ್ ಇಬ್ಬರೂ ಕುಟುಂಬವನ್ನು ಪ್ರೀತಿಸುತ್ತೇವೆ ಎಂದು ರೇಖಾ ಹೇಳಿದ್ದಾರೆ. ಈ ರೀತಿಯ ಬಹುಪತ್ನಿತ್ವ ಈ ಪ್ರದೇಶದಲ್ಲಿ ನಡೆಯುತ್ತಿರುತ್ತದೆ. ಕೆಲವು ಪುರುಷರು ಔಪಚಾರಿಕ ವಿವಾಹಕ್ಕೆ ಮುಂಚೆಯೇ ಇಬ್ಬರು ಮಹಿಳೆಯರ ಜೊತೆ ಪ್ರೀತಿಯಿಂದ ವಾಸ ಶುರು ಮಾಡ್ತಾರೆ. ಕುಟುಂಬದ ಪ್ರೀತಿ ಮತ್ತು ಸಹಕಾರ ಕೂಡ ಅವರಿಗೆ ಸಿಕ್ಕಿರುತ್ತದೆ.