Love Tips: ನಿಮಗೊಪ್ಪುವ ಸಂಗಾತಿ ಆಯ್ಕೆ ಹೇಗೆ?
ಯಾರಾದರೂ ನಮ್ಮನ್ನು ಸುಲಭವಾಗಿ ಆಕರ್ಷಿಸಿಬಿಡಬಹುದು. ಆದರೆ, ಅವರಲ್ಲಿ ನೈಜ ಪ್ರೀತಿ ಸಿಗುವ ಭರವಸೆ ಇರುವುದಿಲ್ಲ. ನಿಮ್ಮ ಸಂಬಂಧ ಶಾಶ್ವತವಾಗಿರಬೇಕು ಎಂದಾದರೆ ಸರಿಯಾದ ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ಳುವುದು ಮುಖ್ಯ. ಅದಕ್ಕಾಗಿ ಹೀಗ್ಮಾಡಿ.
ಪ್ರೀತಿ-ಪ್ರೇಮ (Love) ಸುತ್ತಾಡಿದ ಕೆಲವೇ ದಿನಗಳಲ್ಲಿ “ತಪ್ಪು ವ್ಯಕ್ತಿಯನ್ನು ಆಯ್ಕೆ ಮಾಡಿಕೊಂಡೆ’ ಎನ್ನುವ ಭಾವನೆ ಹಲವರಲ್ಲಿ ಮೂಡುತ್ತದೆ. ಆದರೆ, ಅದೇನೋ ನೈತಿಕ ಮೌಲ್ಯಕ್ಕೆ ಕಟ್ಟುಬಿದ್ದು ಅವರೊಂದಿಗೆ ಸಂಬಂಧ ಮುಂದುವರಿಸುವವರಿದ್ದಾರೆ. ಹಾಗೆಯೇ ಸಂಬಂಧವನ್ನು ಕಡಿದುಕೊಳ್ಳುವವರೂ ಇದ್ದಾರೆ. ಆದರೆ, ಇವೆರಡೂ ಕಷ್ಟಕರ ಸಂಗತಿಗಳೇ ಸರಿ. ದೂರವಾಗುವುದು ಒಂದು ರೀತಿಯ ಕಷ್ಟವಾದರೆ ಸಹಿಸಿಕೊಳ್ಳುವುದು ಮತ್ತೂ ಕಷ್ಟವಾಗಿಬಿಡುತ್ತದೆ. ಹೀಗಾಗಿ, ಆಯ್ಕೆ (Choose) ಮಾಡಿಕೊಳ್ಳುವಾಗಲೇ ಸರಿಯಾದ ವ್ಯಕ್ತಿಯನ್ನು (Right Person) ಆಯ್ಕೆ ಮಾಡಿಕೊಳ್ಳಬೇಕು.
ಸಂಬಂಧವನ್ನು ಶಾಶ್ವತವಾಗಿ ಮುಂದುವರಿಸುವ ಇಚ್ಛೆಯುಳ್ಳವರು, ಪ್ರೀತಿ-ಪ್ರಣಯದ ಹಂತ ದಾಟಿ ವೈವಾಹಿಕ ಜೀವನಕ್ಕೂ ಕಾಲಿರಿಸಲು ಬಯಸುವವರು ತಮ್ಮ ಮನಸ್ಥಿತಿಗೆ ತಕ್ಕನಾದ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವುದು ಮುಖ್ಯ. ಏಕಾಏಕಿ ಆಕರ್ಷಣೆಗೆ (Attraction) ಬೀಳದೆ, ಬಿದ್ದರೂ ಅವರೊಂದಿಗೆ ಹೆಚ್ಚು ಒಡನಾಟ ಮಾಡದೆ ಅವರು ನಮಗೆ ಸರಿಹೊಂದುತ್ತಾರಾ ಎಂದು ವಿವೇಚಿಸಿಯೇ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ. ಅದಕ್ಕಾಗಿ ಕೇವಲ ಭಾವನೆಗಳ ಮೊರೆ ಹೋಗಬಾರದು. ಕೆಲವು ವಿಚಾರಗಳನ್ನು ಮನದಲ್ಲಿಟ್ಟುಕೊಂಡು ಪರೀಕ್ಷಿಸಬೇಕು.
ಈ ರಾಶಿಯವರ ಸಂಗಾತಿ ಸಿಕ್ಕಿದರೆ ಸಿಟ್ಟು ಮೂಗಿನ ಮೇಲಿರುತ್ತೆ
• ಸ್ಪಷ್ಟವಾದ ಮಿತಿ/ಗಡಿ (Boundary) ಇರಲಿ, ಅವರು ಹೇಗೆ ಪ್ರತಿಕ್ರಿಯಿಸುತ್ತಾರೆ ನೋಡಿ.
ಬಹಳಷ್ಟು ಜನ ತಮ್ಮ ಪ್ರೀತಿಯಾಗಿ ತಮ್ಮ ಮೌಲ್ಯ(Ethics)ಗಳನ್ನು ದೂರ ಮಾಡಿಕೊಳ್ಳುತ್ತಾರೆ ಹಾಗೆಯೇ ಖಾಸಗಿತನ(Personal Space)ವನ್ನೂ ಮೀರುತ್ತಾರೆ. ಆದರೆ, ನೀವು ಹಾಗೆ ಮಾಡಬೇಡಿ. ನಿಮ್ಮಿಬ್ಬರ ನಡುವೆ ಸ್ಪಷ್ಟವಾದ ಮಿತಿ ಅಥವಾ ಗಡಿಯನ್ನು ಹಾಕಿ. ಅಂದರೆ, ಸಮಯದ ಹೊಂದಾಣಿಕೆಯಿಂದ ಹಿಡಿದು, ಫೋನ್ ಮಾಡುವ ಸಮಯ, ಮೆಸೇಜ್ ಮಾಡುವ ಕುರಿತು, ದೈಹಿಕ ಸಲುಗೆಯಿಂದ ದೂರವಿರುವ ಬಗ್ಗೆ ಸ್ಪಷ್ಟವಾದ ಮಾತುಗಳಲ್ಲಿ ತಿಳಿಸಿ. ನಿಮ್ಮ ಈ ನಿಯಮಗಳು ಅವರಿಗೆ ಅಚ್ಚರಿ ಎನಿಸಿದರೂ ಸರಿ. ತಿಳಿವಳಿಕೆಯುಳ್ಳ ಪ್ರಬುದ್ಧರಾದರೆ ನಿಮ್ಮ ತೀರ್ಮಾನಗಳನ್ನು ಗೌರವಿಸುತ್ತಾರೆ. ಆದರೆ, ಅಪ್ರಬುದ್ಧರು ನೀವು ನಿಮ್ಮ ಮೌಲ್ಯಗಳನ್ನು ದೂರವಿಡಲು ಒತ್ತಾಯ ಮಾಡುತ್ತಾರೆ.
• ನೀವು ಸಮಸ್ಯೆ(Crisis)ಯಲ್ಲಿರುವಾಗ ಅವರ ಪ್ರತಿಕ್ರಿಯೆ ಹೇಗೆ?
ಬದುಕೆಂದರೆ ಹೂವಿನ ಹಾಸಿಗೆಯಲ್ಲ. ಏನಾದರೊಂದು ಸವಾಲು (Challenges), ಸಮಸ್ಯೆಗಳು ಎದುರಾಗುತ್ತಲೇ ಇರುತ್ತವೆ. ಅವು ವೃತ್ತಿಪರ (Professional) ಅಥವಾ ಖಾಸಗಿ ಸಮಸ್ಯೆಯಾಗಿರಬಹುದು. ಅಂತಹ ಸಮಯದಲ್ಲಿ ಅವುಗಳಿಗೆ ನಿಮ್ಮ ಸಂಗಾತಿ ಹೇಗೆ ಪ್ರತಿಕ್ರಿಯೆ (React) ನೀಡುತ್ತಾರೆ ನೋಡಿ. ಉತ್ತಮ ಸಂಗಾತಿ ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ. ನೈತಿಕವಾಗಿ ನಿಮ್ಮ ಜತೆಗೆ ನಿಲ್ಲುತ್ತಾರೆ. ಆದರೆ, ಕೆಲವರು ನಿಮ್ಮ ಫೋನ್ ಕಾಲ್ ಗಳನ್ನು ಅವಾಯ್ಡ್ ಮಾಡಬಹುದು, ಬಿಕ್ಕಟ್ಟಿನ ಸಮಯದಲ್ಲಿ ನಿಮ್ಮೊಂದಿಗೆ ಇರದೆ ತಮಗೆ ಬೇಕಾದಾಗ ಮಾತ್ರ ನಿಮ್ಮನ್ನು ಮಾತನಾಡಿಸಬಹುದು. ಅಂಥವರನ್ನು ನೀವೂ ದೂರವಿಡುವುದೇ ಕ್ಷೇಮ.
ಒಬ್ಬರಿಗೊಬ್ಬರು ಮಾತನಾಡಿಕೊಳ್ಳೋಲ್ಲ ಅಂದ್ರೆ ದಾಂಪತ್ಯ ಹದಗೆಡೋದು ಗ್ಯಾರಂಟಿ
• ಅವರ ಕುರಿತು ನಿಮ್ಮ ಭಾವನೆಗಳು (Actual Feelings) ಹೇಗಿವೆ?
ಅವರು ಜತೆಗಿಲ್ಲದಿದ್ದಾಗಲೂ ಅವರ ಕುರಿತು ಚಿಂತೆಯಾಗುತ್ತದೆಯೇ? ಅವರ ವರ್ತನೆ ಕಾಡಿಸುತ್ತಿರುತ್ತದೆಯೇ? ಅಥವಾ ಅವರ ಜತೆಗಿದ್ದರೆ ಮಾತ್ರ ಧೈರ್ಯದ ಭಾವನೆ ಬರುತ್ತದೆಯೇ? ಹಾಗಿದ್ದರೆ ಅವರ ಕುರಿತಾದ ಭಾವನೆಗಳ ಬಗ್ಗೆ ಮರುಯೋಚಿಸಿ. ಏಕೆಂದರೆ, ನಿಜವಾದ ಪ್ರೀತಿ ಬೇರೆಯದೇ ಆದ ಅನುಭವ ನೀಡುತ್ತದೆ. ಅವರು ಜತೆಗಿಲ್ಲದಿದ್ದಾಗಲೂ ಸುಭದ್ರ ಭಾವನೆ ಬರುತ್ತದೆ. ಅವರ ನೆನಪು ಸದಾ ಕಾಡುತ್ತಿರಲೇ ಬೇಕೆಂದಿಲ್ಲ. ಆದರೆ, ಅವರ ನೆನಪಾದಾಗ ಖುಷಿಯಾಗುತ್ತದೆ. ಉದ್ವೇಗ, ನರ್ವಸ್ ಭಾವನೆಗಳ ಬದಲಿಗೆ ಶಾಂತ (Calm) ಮನಸ್ಥಿತಿ ನಿಮ್ಮಲ್ಲಿರುತ್ತದೆ. ಅವರೊಂದಿಗೆ ಇರುವಾಗ ನಿಮ್ಮ ಮನಸ್ಸಿನಲ್ಲಿ ಯಾವ ಭಾವನೆಗಳು ಉಂಟಾಗುತ್ತಿವೆ ಎಂದು ಅರಿತುಕೊಳ್ಳಿ. ಅವರ ಬದುಕಿನಲ್ಲಿ ಸಮಸ್ಯೆಗಳಿದ್ದರೂ ಅವರೊಂದಿಗೆ ರಕ್ಷಣಾತ್ಮಕ ಭಾವನೆ ಮೂಡಿದರೆ ನೀವು ಸರಿಯಾದ ವ್ಯಕ್ತಿಯನ್ನೇ ಆಯ್ಕೆ ಮಾಡಿಕೊಂಡಿದ್ದೀರಿ ಎಂದರ್ಥ. ಒಂದೊಮ್ಮೆ ಉದ್ವೇಗ, ಭಯ (Fear), ಮುಂದೆ ಹೇಗೆ ಎನ್ನುವ ಚಿಂತೆ ಮೂಡಿದರೆ ನೀವು ತಪ್ಪು (Wrong) ವ್ಯಕ್ತಿಯನ್ನು ಆಯ್ಕೆ ಮಾಡಿಕೊಂಡಿದ್ದೀರಿ ಎಂದು ತಿಳಿದುಕೊಳ್ಳಬಹುದು.