-ಸುವರ್ಚಲಾ ಅಂಬೇಕರ್‌ ಬಿ.ಎಸ್‌.

ದೀಪ ಯಾವತ್ತೂ ಬೆಳಗುತ್ತಲೇ ಇರಬೇಕು, ತನ್ನ ಪ್ರಭೆಯಿಂದ ಇಡೀ ಜಗತ್ತಿಗೇ ಬೆಳಕನ್ನು ಕೊಡಬೇಕು ಅಂದ್ರೆ ನಾವು ಸದಾ ದೀಪಕ್ಕೆ ಎಣ್ಣೆ ಹಾಕ್ತಿರಬೇಕು. ಎಣ್ಣೆ ಕಡಿಮೆ ಆದರೆ ದೀಪ ಕೂಡಾ ಆಯಸ್ಸು ಕಳೆದುಕೊಂಡು ಇಡೀ ಜಗತ್ತನ್ನೇ ಕತ್ತಲೆಯಲ್ಲಿ ಮುಳುಗಿಸುತ್ತದೆ. ಹಾಗೇ ನಾವಿಬ್ರೂ ಕೂಡಾ ಒಬ್ಬರಿಗೊಬ್ಬರು ಎಣ್ಣೆಯಾಗಿ ನಮ್ಮೊಳಗಿನ ಸ್ಫೂರ್ತಿಯ ದೀಪ ಎಂದೂ ಆರಿಹೋಗದಂತೆ ಪರಸ್ಪರ ಬೆಳಗುತ್ತಾ ಹೋಗ್ಬೇಕು. ‘ನೀನು ಬೆಳೆದರೆ ನಾನು ಬೆಳೆವೆನು, ನೀನು ಹೊಳೆದರೆ ನಾನು ಹೊಳೆವೆನು...’ ಎಂದು ಕುವೆಂಪು ಕವನ ಹೇಳುತ್ತಾ ಆತ ಹುಣ್ಣಿಮೆಯ ರಾತ್ರಿಯಲ್ಲಿ ಕತ್ತಲಿನೂರಿನ ಬೆಳಕಿನ ಮನೆಯಲ್ಲಿ ಕುಳಿತು, ವಿಶಾಲ ಆಗಸದಲ್ಲಿ ಹೊಳೆವ ನಕ್ಷತ್ರಗಳನ್ನೇ ದಿಟ್ಟಿಸುತ್ತಾ ನಾವು ಕೂತಿದ್ದ ಕಲ್ಲೂ ಕೂಡಾ ಕಿವಿಯಾನಿಸಿ ಕೇಳುವಂತೆ ಹೇಳುತ್ತಿದ್ದ.

ಅಷ್ಟಕ್ಕೂ ಲವ್ ಎಂದರೇನು?

ಆಗಷ್ಟೇ ಧರೆಗಿಳಿಯುತ್ತಿದ್ದ ಚಳಿಯ ಖುಷಿಯನ್ನು ಅನುಭವಿಸಲಾರದೇ ಅನುಭವಿಸುತ್ತಾ, ಚುಕ್ಕಿ ರಾತ್ರಿಯಲ್ಲಿ ಕುಳಿತು ಕಣ್ಣಂಚಿನಲ್ಲಿರುವ ಕನಸನ್ನು ಧೇನಿಸುತ್ತಾ ಆ ಕನಸುಗಳೆಲ್ಲಾ ಹೂಮಳೆಯಲ್ಲೇ ತೊಯ್ದು ತೊಪ್ಪೆಯಾದಂತೆ, ಬದುಕಿನ ಯಾವುದೋ ಜಂಜಡದ ಕ್ಷಣಗಳಲ್ಲಿ ಕೊಚ್ಚಿ ಹೋಗುತ್ತಿದ್ದೇನೇನೋ ಎಂದೇ ಗಾಢವಾಗಿ ಅನ್ನಿಸುತ್ತಿರುವಾಗ, ಕಾರೊಂದು ಕಾಡಂಚಿನ ನಡುರಸ್ತೆಯಲ್ಲಿ ಪೆಟ್ರೋಲ್‌ ಖಾಲಿಯಾಗಿ ನಿಂತಂತೆ ಶೂನ್ಯವಾಗಿ ಸ್ಫೂರ್ತಿ ಕಳೆದುಕೊಂಡಂತಾಗಿದ್ದ ನನ್ನ ಮನಸ್ಸಿಗೆ ರಾಮಬಾಣದಂತೆ, ಆತನ ಒಂದೊಂದು ಮಾತಿನ ಬಾಣಗಳೂ ಕೂಡಾ ಸ್ಫೂರ್ತಿಯ ಕಡಲನ್ನು ಬಡಿದೆಬ್ಬಿಸುತ್ತಿತ್ತು. ಅಲ್ಲೋಲ ಕಲ್ಲೋಲವಾಗಿದ್ದ ಅಲೆಗಳನ್ನು ಶಾಂತಿಯ ಸಮುದ್ರಕ್ಕೆ ಸೇರಿಸಲು ಹವಣಿಸುತ್ತಿತ್ತು.

ಆತ ಮುಗ್ಧ ಮನಸ್ಸಿನ ಮುದ್ದು ಪ್ರೀತಿಯಿಂದ ಹೇಳುತ್ತಲೇ ಇದ್ದ, ಮುಂಜಾನೆ ನೆಲದ ಮಣ್ಣಿನಲ್ಲಿ ಬೆಳೆದ ಗರಿಕೆ ಹುಲ್ಲಿನ ಮೇಲೆ ಸಾಲಾಗಿ ಮುತ್ತು ಪೋಣಿಸಿದಂತೆ ಹನಿ ಹನಿ ಇಬ್ಬನಿಯನ್ನು ಜೋಡಿಸಿಟ್ಟವರು ಯಾರು, ಹುಟ್ಟಿದಾಗಿನಿಂದ ಒಮ್ಮೆಯೂ ಕಣ್ಣು ಮುಚ್ಚದೇ ಕೆಲಸ ಮಾಡುವ ಪುಟ್ಟಇರುವೆಗೆ ಸಾಲಿನಲ್ಲಿ ಹೋಗುವಂತೆ ಶಿಸ್ತನ್ನು ಹೇಳಿಕೊಟ್ಟವರಾರು, ಅತ್ಯದ್ಭುತ ಸಂವಹನ ಕೌಶಲವನ್ನು ಜೇನುಹುಳುಗಳಿಗೆ ಕಲಿಸಿದವರು ಯಾರು, ಅಲ್ಲಿ ನೋಡು ಮೇಲೆ ಕಾಣುತ್ತಿರುವ ಅಷ್ಟೂನಕ್ಷತ್ರಗಳಿಗೆ ಹೊಳಪನ್ನು ತುಂಬಿ ಸುಂದರಗೊಳಿಸಿದವರಾರ‍ಯರು ನೋಡುವ ಕಣ್ಣು, ತಿಳಿಯುವ ಮನಸ್ಸು ಸ್ವಚ್ಛಂದವಾಗಿದ್ದರೆ ಪ್ರತಿಯೊಂದು ಸ್ವಾರಸ್ಯವೇ ಅನ್ನಿಸುತ್ತದೆ.

ಇಹದ ಪರಿವೆಯೇ ಇಲ್ಲದಂತೆ ಅಮ್ಮನ ಸೆರಗು ಹಿಡಿದು ಕುತೂಹಲದ ಕಣ್ಣಿನಿಂದ ಹೊರಜಗತ್ತನ್ನು ನೋಡುತ್ತಾ ಬಸ್‌ ನಲ್ಲಿ ಹೋಗುವ ಕ್ಷಣ ಕ್ಷಣಕ್ಕೂ ಪ್ರಶ್ನೆಗಳನ್ನು ಕೇಳುವ ಪುಟ್ಟಹುಡುಗನನ್ನೇ ನೋಡು, ಹುಟ್ಟಿದಾಗಿನಿಂದ ಇಂದಿನವರೆಗೂ ನೀ ಆಡಿ ನಲಿದು ಬೆಳೆದ ನಿನ್ನ ಊರೇ ನೋಡು... ಮತ್ತೆ ಮತ್ತೆ ನೋಡಿದಾಗಲೂ, ಪ್ರತಿದಿನವೂ ಪ್ರತಿ ಕ್ಷಣವೂ ನಿನಗೆ ಹೊಸತರಂತೆಯೇ ಕಾಣಿಸುತ್ತದೆ. ನಿನ್ನೂರಿನ ಇಂಚಿಂಚೂ ನಿನಗೆ ಚಿರಪರಿಚಿತ ಎಂದೆನಿಸಿದರೂ ಅಲ್ಲಿ ನೀನು ನೋಡದ ಇನ್ನೇನೋ ನಿನಗೆ ಕಾಣಿಸುತ್ತದೆ. ಮನೆಯಲ್ಲಿ ಇಟ್ಟಸಣ್ಣ ನೀರಿನ ಕಲ್ಲು ಬಾನಿಯಲ್ಲಿ ಆಡಲು ಬರುವ ಪಿಕಳಾರ ಜೋಡಿಗಳನ್ನೇ ನೋಡು, ನಮ್ಮ ಜೀವನದಲ್ಲಿ ಸಿಗುವ ಪ್ರತೀ ನೋಟಗಳನ್ನು ಪಾಠವಾಗಿಸಿಕೊಂಡರೆ ಅದೇ ದೊಡ್ಡ ಸ್ಪೂರ್ತಿ ನಮಗೆ ಜೀವನದಲ್ಲಿ ಎಂದೆನಿಸುವುದಿಲ್ಲವೇ. ಎಲ್ಲಾ ನಮ್ಮೊಳಗೇ ಇದೆ ಆದರೆ ಅದನ್ನು ಕಂಡುಕೊಳ್ಳುವ ಸಾಮರ್ಥ್ಯ ಇರಬೇಕಷ್ಟೆನಮಗೆ.

ಯಶಸ್ಸು ಎನ್ನೋದು ಸುಮ್ ಸುಮ್ಮನೆ ಕೈ ಹಿಡಿಯೋಲ್ಲ

ನಂಗೇ ನೋಡು, ನೀನೇ ಒಂಥರಾ ಸ್ಫೂರ್ತಿ. ಪ್ರತಿದಿನವೂ ಸಂಜೆ ಆ ಶಾಂತಮೂರ್ತಿ ಬಾಹುಬಲಿಯನ್ನೇ ದಿಟ್ಟಿಸುತ್ತಾ ನಿನ್ನೊಂದಿಗೆ ಆಡುವ ಪ್ರತಿಯೊಂದು ಮಾತುಗಳೂ ನನ್ನೊಳಗಿನ ನನ್ನನ್ನು ತೆರೆದಿಡುತ್ತದೆ. ನಾನು ಶೂನ್ಯನಾದಾಗಲೆಲ್ಲಾ ನಿನ್ನನ್ನೇ ನೆನಪಿಸಿಕೊಳ್ಳುತ್ತೇನೆ, ಸ್ಫೂರ್ತಿ ಪಡೆದು ಮುಂದುವರೆಯುತ್ತೇನೆ. ಇದಕ್ಕಿಂತ ದೊಡ್ಡದು ಇನ್ನೇನು ಬೇಕು ಅಲ್ವಾ. ನೋಡು ಈಗ ಚಂದ್ರಮನೂ ನಮ್ಮ ಮಾತನ್ನು ಕೇಳಿಸಿಕೊಳ್ಳುತ್ತಿದ್ದಾನೆ, ನನಗೆ ನೀನು ನಿನಗೆ ನಾನು ಸಣ್ಣಹಕ್ಕಿಯೇ ಎಂಬ ಹಾಡಿನ ಸಾಲುಗಳಂತೇ ಬದುಕಿಬಿಡೋಣ ಅದಮ್ಯ ಪ್ರೀತಿಯಿಂದ ಪ್ರೀತಿಯೇ ಸ್ಫೂರ್ತಿಯ ಹಣತೆ ಹಚ್ಚಲಿ.

ಆತ ಹೇಳುತ್ತಲೇ ಸಾಗಿದ್ದ, ಆತನ ಮಾತಿನ ಓಘಕ್ಕೆ ಕಿವಿ ಕೊಟ್ಟನನ್ನ ಕಂಗಳಲ್ಲಿ ಖುಷಿಯ ಹನಿಗಳೆರಡು ಸ್ಫೂರ್ತಿಯ ಹಣತೆ ಹಚ್ಚಿದ್ದವು. ಹೌದಲ್ವಾ! ಬದುಕುವ ಪ್ರತೀ ಗಳಿಗೆಯೂ ಹೊಸತೆಂದು ಭಾವಿಸುತ್ತಾ ಜೀವನಪ್ರೀತಿಯಿಂದ ಬದುಕಿದರೆ ಬಾಳೆಷ್ಟುಸುಂದರ ಎಂದುಕೊಳ್ಳುತ್ತಲೇ ತುಂಬಿಕೊಂಡಿದ್ದೆ.