ಖಾಸಗಿ ಫೋಟೋ ಇಟ್ಕೊಂಡು ಆಡಿಸ್ತಿದ್ದ, ಪೊಲೀಸ್ ಠಾಣೆಗೆ ಆಕೆ ಬಂದಾಗ... ಅಂದಿನ ಘಟನೆ ವಿವರಿಸಿದ ಡಿವೈಎಸ್ಪಿ ರಾಜೇಶ್
ಯುವಕನ ಜೊತೆ ದೈಹಿಕ ಸಂಪರ್ಕ ಬೆಳೆಸಿ ಪಡಬಾರದ ಪಾಡು ಪಟ್ಟ ಯುವತಿಯೊಬ್ಬಳ ಕಥೆಯನ್ನು ವಿವರಿಸುತ್ತಲೇ ಮಹಿಳಾ ಪೊಲೀಸ್ ಅಧಿಕಾರಿಗಳ ಕುರಿತು ಮಾಹಿತಿ ನೀಡಿದ್ದಾರೆ ಡಿವೈಎಸ್‌ಪಿ ರಾಜೇಶ್.
ಯೌವನ ಇದ್ದಾಗ ಆಕರ್ಷಣೆಗೆ ಒಳಗಾಗಿ ಎಷ್ಟೋ ಯುವಕ-ಯುವತಿಯರು ಹಾದಿ ತಪ್ಪುತ್ತಿದ್ದಾರೆ. ಆಕರ್ಷಣೆ ಎನ್ನುವುದು ದೈಹಿಕ ಸಂಬಂಧದವರೆಗೂ ಹೋಗಿಬಿಡುತ್ತದೆ. ಮುಳ್ಳು ಬಟ್ಟೆಯ ಮೇಲೆ ಬಿದ್ದರೂ, ಬಟ್ಟೆ ಮುಳ್ಳಿನ ಮೇಲೆ ಬಿದ್ದರೂ ಹರಿಯುವುದು ಬಟ್ಟೆಯೇ ಎನ್ನುವ ಮಾತಿನಂತೆ, ತಪ್ಪು ಯಾರದ್ದೇ ಇದ್ದರೂ ಸಂಬಂಧ ಮಿತಿಮೀರಿದಾಗ ಅನುಭವಿಸುವವಳು ಹೆಣ್ಣೇ. ಆದರೆ ಇದನ್ನು ತಿಳಿಯದೇ ಅದೆಷ್ಟೋ ಹೆಣ್ಣುಮಕ್ಕಳು ಕೊನೆಗೆ ಆತ್ಮಹತ್ಯೆಯ ಮಾರ್ಗವನ್ನೂ ತುಳಿಯುವುದು ಇದೆ. ಈಗಂತೂ ಗಂಡು ಮಕ್ಕಳು ಮೊಬೈಲ್‌ನಿಂದಲೋ ಅಥವಾ ಇನ್ನಾವುದೋ ಡಿವೈಸ್‌ಗಳಿಗೆ ಸುಲಭದಲ್ಲಿ ತಿಳಿಯದೇ ವಿಡಿಯೋ ಮಾಡಿಕೊಂಡು ಆಟ ಆಡಿಸುವುದು ದಿನನಿತ್ಯ ವರದಿ ಆಗುತ್ತಲೇ ಇರುತ್ತದೆ. ಇಂಥ ಘಟನೆಗಳ ಬಗ್ಗೆ ತಿಳಿವಳಿಕೆ ನೀಡುತ್ತಲೇ, ಒಂದು ವೇಳೆ ಹೀಗೆ ಆದರೆ ಏನು ಮಾಡಬೇಕು, ಮಹಿಳಾ ಪೊಲೀಸರು ಹೇಗೆ ಸಹಾಯ ಮಾಡುತ್ತಾರೆ ಎನ್ನುವ ಬಗ್ಗೆ ಡಿವೈಎಸ್ಪಿ ರಾಜೇಶ್ ಅವರು, ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್‌ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಅದೊಂದು ಘಟನೆ. ಯುವತಿಯೊಬ್ಬಳು ಸಂಬಂಧಿಕರ ಹುಡುಗನ ಜೊತೆ ಪ್ರೀತಿ ಬೆಳೆಸಿಕೊಂಡಳು. ಅದು ಆಕರ್ಷಣೆಯಾಗಿತ್ತು. ಅದ್ಯಾವುದೋ ಕೆಟ್ಟ ಘಳಿಗೆಯಲ್ಲಿ ಇಬ್ಬರೂ ದೈಹಿಕ ಕ್ರಿಯೆಯನ್ನೂ ನಡೆಸಿಬಿಟ್ಟರು. ಅದಾದ ಬಳಿಕ ಹುಡುಗಿಗೆ ತಾನು ಮಾಡಿದ್ದು ತಪ್ಪು ಎಂದು ಗೊತ್ತಾಗತ್ತೆ. ಯಾವುದೋ ಕೆಟ್ಟ ಕ್ಷಣದಲ್ಲಿ ಇದೆಲ್ಲಾ ಆಗೋಯ್ತು, ಇಲ್ಲಿಗೆ ಮರೆತು ಬಿಡಿ ಅಂದಳು. ಅವಳಿಗೆ ಒಳ್ಳೆ ಸಂಬಂಧ ಬಂದು ಎಂಗೇಜ್‌ಮೆಂಟ್ ವರೆಗೂ ಹೋದಾಗ, ಅವಳ ಪ್ರಿಯಕರ ಬಿಡಲಿಲ್ಲ. ಅವರಿಬ್ಬರೂ ಒಟ್ಟಿಗೇ ಇದ್ದ ಫೋಟೋ ಕ್ಲಿಕ್ಕಿಸಿಕೊಂಡಿದ್ದ ಆತ. ಅದನ್ನು ಎಲ್ಲರಿಗೂ ತೋರಿಸುವುದಾಗಿ ಭಯ ಪಡಿಸಿ ಮದುವೆಯಾಗಬೇಡ ಎಂದ. ಕೊನೆಗೆ ಆಕೆ ಹೆದರಿ ಏನು ಮಾಡಬೇಕು ಎಂದು ತಿಳಿಯದೇ ಆತ್ಮಹತ್ಯೆಯ ವರೆಗೂ ಹೋದಳು ಎಂದು ಅಂದು ನಡೆದ ಘಟನೆಯನ್ನು ವಿವರಿಸಿದ್ದಾರೆ ರಾಜೇಶ್.
ತಪ್ಪಿಸಿಕೊಂಡು ಹೋಗ್ತಿದ್ದವನ ಪೊಲೀಸರಿಗೆ ಒಪ್ಪಿಸಿತ್ತು ಸತ್ತವಳ ಆತ್ಮ: ರೋಚಕ ಘಟನೆ ವಿವರಿಸಿದ ಡಿವೈಎಸ್ಪಿ ರಾಜೇಶ್!
ಬಳಿಕ ಧೈರ್ಯ ಮಾಡಿ ಆ ಹುಡುಗನ ವಿರುದ್ಧ ದೂರು ಕೊಡಲು ಬಂದಳು. ಆದರೆ ಮರ್ಯಾದೆಗೆ ಅಂಜಿ ಅಸಲಿ ವಿಷಯವನ್ನು ಹೇಳಲೇ ಇಲ್ಲ. ಕೊನೆಗೆ ಆಕೆಗೆ ಸಮಾಧಾನ ಪಡಿಸಿ ಮಹಿಳಾ ಪೊಲೀಸರ ಬಳಿ ಕರೆದುಕೊಂಡು ಹೋದಾಗ, ನಡೆದ ಎಲ್ಲಾ ಘಟನೆ ಹೇಳಿದಳು. ನಂತರ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಹುಡುಗನನ್ನು ಕರೆಯಿಸಿ ಪೊಲೀಸರ ಭಾಷೆಯಲ್ಲಿ ಅವನಿಗೆ ಬುದ್ಧಿ ಹೇಳಿ ಗದರಿಸಿದಾಗ, ಅವನ ಬಳಿ ಇದ್ದ ಎಲ್ಲಾ ಫೋಟೋಗಳನ್ನೂ ಡಿಲೀಟ್ ಮಾಡಿ ಹುಡುಗಿಯ ಕಾಲು ಹಿಡಿದು ಕ್ಷಮೆ ಕೋರಿದ. ತಪ್ಪಾಯ್ತು ಎಂದ. ಬಳಿಕ, ಆ ಹುಡುಗಿಯ ಮದುವೆಯಾಯ್ತು, ಇನ್‌ವಿಟೇಷನ್ ಕೊಟ್ಟು ಹೋದಳು ಎಂದರು. ಬಳಿಕ ಹೆಣ್ಣುಮಕ್ಕಳು ಯಾವುದೇ ಕಾರಣಕ್ಕೂ ತಪ್ಪು ಹೆಜ್ಜೆ ಇಡಬಾರದು. ಪೊಲೀಸ್ ಠಾಣೆಗಳಿಗೆ ಮಹಿಳೆಯರೂ ಇರುತ್ತಾರೆ. ಅವರ ಬಳಿ ಬಂದು ಧೈರ್ಯವಾಗಿ ಹೇಳಿಕೊಂಡರೆ ಸಮಸ್ಯೆ ಪರಿಹಾರ ಆಗುತ್ತದೆ. ಪ್ರತಿ ಠಾಣೆಯಲ್ಲಿ ಮಹಿಳಾ ಅಧಿಕಾರಿಗಳ ಬಗ್ಗೆ ಹೋಗಲು ಹಿಂಜರಿಗೆ ಬೇಡ. ಧೈರ್ಯಮಾಡಿ ನಡೆದ ಘಟನೆ ಹೇಳಬೇಕು ಎಂದು ಕಿವಿಮಾತನ್ನೂ ಹೇಳಿದ್ದಾರೆ.
ನಿವೇದಿತಾ ಜೊತೆ ಸಂಬಂಧ ಹೀಗಿತ್ತಾ? ದಾಂಪತ್ಯದ ನೋವು ತೋಡಿಕೊಂಡಿದ್ದ ಚಂದನ್ ಶೆಟ್ಟಿ ವಿಡಿಯೋ ವೈರಲ್!