Types of Love: ಪ್ರೀತಿ ಅಂದ್ರೆ ಒಂದೇ ಅಲ್ಲ, ನಮ್ಮಲ್ಲಿವೆ ಎಂಟು ವಿಧಗಳ ಪ್ರೀತಿ
ನಾವು ನಮ್ಮ ಕುಟುಂಬ, ಸ್ನೇಹಿತರು, ಸಹೋದ್ಯೋಗಿಗಳನ್ನು ಬೇರೆ ಬೇರೆ ಭಾವದಲ್ಲಿ ಪ್ರೀತಿಸುತ್ತೇವೆ. ಎಲ್ಲವೂ ಪ್ರೀತಿಯೇ ಆದರೂ ಅವುಗಳಿಗೆ ವಿವಿಧ ಮುಖಗಳಿವೆ. ಎಲ್ಲವೂ ಒಂದೇ ರೀತಿಯ ಪ್ರೀತಿಯಲ್ಲ. ಹೀಗಾಗಿ, ಪ್ರೀತಿಯ ಎಂಟು ಭಾವನೆಗಳನ್ನು ಪ್ರಧಾನವಾಗಿಟ್ಟುಕೊಂಡು ಎಂಟು ವಿಧಗಳ ಪ್ರೀತಿಯನ್ನು ಗುರುತಿಸಲಾಗಿದೆ.
ಪ್ರೀತಿ ಎನ್ನುವುದು ಸಿಕ್ಕಾಪಟ್ಟೆ ಕ್ಲಿಷ್ಟಕರ ಸಂಗತಿ. ಯಾರನ್ನಾದರೂ ನಿಜವಾಗಿಯೂ ಇಷ್ಟಪಡುವುದು, ಪ್ರೀತಿಸುವುದು ಸುಲಭವಲ್ಲ. ಪ್ರೀತಿಯಲ್ಲೂ ನೋವಿದೆ, ಸಂಕಟವಿದೆ, ನಾಟಕವಿದೆ, ಮೋಸವಿದೆ ಎಲ್ಲವೂ ಇದೆ. ಆದರೂ ಮನುಷ್ಯನಿಗೆ ಪ್ರೀತಿ ಬೇಕೇ ಬೇಕು. ಪ್ರೀತಿಯಿಲ್ಲದೆ ಮನುಷ್ಯನ ಬಾಳ್ವೆಯಿಲ್ಲ. ಪ್ರೀತಿಯಲ್ಲೂ ಎಷ್ಟೊಂದು ವಿಧ. ತಂದೆ-ತಾಯಿ, ಸಹೋದರ-ಸಹೋದರಿ, ಸ್ನೇಹಿತರು, ಬಂಧು-ಬಳಗ, ಪತಿ-ಪತ್ನಿ, ಮಕ್ಕಳ ಮೇಲಿನ ಪ್ರೀತಿ ಎಲ್ಲವೂ ಒಂದಕ್ಕಿಂತ ಒಂದು ಭಿನ್ನ. ಯಾವ ಪ್ರೀತಿ ಹೆಚ್ಚು ಎಂದರೆ ನಿಖರ ಉತ್ತರ ಸಿಗಲು ಸಾಧ್ಯವಿಲ್ಲ. ಈ ಮೇಲಿನ ಪ್ರತಿಯೊಬ್ಬರ ಬಳಿಯೂ ವಿಭಿನ್ನವಾದ ಪ್ರೀತಿಯನ್ನು ನಾವು ಅನುಭವಿಸುತ್ತೇವೆ. ಹೀಗಾಗಿ, ಪ್ರೀತಿಗೆ ಯಾವುದೇ ಏಕ ಪದ್ಧತಿಯೂ ಇಲ್ಲ, ಭಾಷ್ಯವೂ ಇಲ್ಲ. ಪ್ರೀತಿ ಎಂದರೆ ಕೇವಲ ಪ್ರೀತಿ ಮಾತ್ರ. ತಜ್ಞರ ಪ್ರಕಾರ, ಇಬ್ಬರು ವ್ಯಕ್ತಿಗಳ ನಡುವೆ ಏರ್ಪಡುವ ಪ್ರೀತಿ ಮುಖ್ಯವಾಗಿ ಎರಡು ರೀತಿಯಲ್ಲಿರುತ್ತದೆ. ಮೋಹ-ಕಾಮದಿಂದ ಕೂಡಿರುವ ಪ್ರೀತಿ ಹಾಗೂ ಇತರ ಆಳವಾದ ಸಂಬಂಧಗಳು. ಆದರೂ ನಾವು ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾದ ಪ್ರೀತಿಯನ್ನೇ ಸ್ವೀಕಾರ ಮಾಡುತ್ತೇವೆ, ನೀಡುತ್ತೇವೆ. ಈ ನಿಟ್ಟಿನಲ್ಲಿ ಗ್ರೀಕ್ ಶಾಸ್ತ್ರಜ್ಞರು ಪ್ರೀತಿಯಲ್ಲಿ 8 ವಿಧವನ್ನು ಗುರುತಿಸಿದ್ದಾರೆ. ಈ ಎಂಟು ವಿಭಿನ್ನವಾದ ಪ್ರೀತಿಯ ವಿಧಗಳು ನಮ್ಮನ್ನು ಆಳುತ್ತವೆ ಎಂದರೆ ತಪ್ಪಿಲ್ಲ.
• ಕಾಮ-ಮೋಹದ ಪ್ರೀತಿ ಎರೋಸ್ (Eros)
ಆಕರ್ಷಣೆಯಿಂದ (Attraction) ಉಂಟಾಗುವ, ಲೈಂಗಿಕ (Sex) ಕಾಮನೆಗಳನ್ನು ಉದ್ದೀಪಿಸುವ ಪ್ರೀತಿ ಇದು. ಸಂಬಂಧವೊಂದರ (Relationship) ಆರಂಭದಲ್ಲಿ ವ್ಯಕ್ತಿಗಳ ನಡುವೆ ಉಂಟಾಗುವುದು ಇದೇ ಪ್ರೀತಿ. ಎರೋಸ್ ನಿಂದ ಆರಂಭವಾಗುವ ಪ್ರೀತಿಯಲ್ಲಿ ವ್ಯಾಮೋಹ ಮತ್ತು ಆಕರ್ಷಣೆಯ ಭಾವಗಳೇ ಪ್ರಧಾನವಾಗಿರುತ್ತವೆ. ಕಾಲಾಂತರದಲ್ಲಿ ಈ ಪ್ರೀತಿ ಬೇರೊಂದು ಮಾದರಿಗೆ ಹೊರಳಬಹುದು ಅಥವಾ ನಾಶವಾಗಬಹುದು.
• ಪ್ರಾಗ್ಮಾ (Pragma)
ಇದು ಪ್ರಾಯೋಗಿಕ (Practical) ಪ್ರೀತಿ ಎಂದು ಪರಿಗಣಿಸಲ್ಪಟ್ಟಿದೆ. ಜವಾಬ್ದಾರಿ (Responsibility), ಬದ್ಧತೆ (Commitment), ವಾಸ್ತವಾಂಶವನ್ನು ಹೊಂದಿರುತ್ತದೆ. ಈ ಪ್ರೀತಿ (Love) ಅನುಭವಿಸಲು ಸಂಗಾತಿಗಳಲ್ಲಿ ಪರಸ್ಪರ ಆಳವಾದ ಬದ್ಧತೆ ಬೇಕಾಗುತ್ತದೆ. ಜೀವನದಲ್ಲಿ ಎದುರಾಗುವ ಅನುಭವಗಳು ಕಾಲಕಳೆದಂತೆಲ್ಲ ಇಬ್ಬರ ನಡುವೆ ಪ್ರಾಗ್ಮಾ ಭಾವನೆಯನ್ನು ಹೆಚ್ಚಿಸುತ್ತವೆ. ಹಿರಿಯರು ನೋಡಿ ನಿಶ್ಚಯಿಸಿದ ಮದುವೆಯ (Marriage) ಬಂಧ ಈ ಪ್ರೀತಿಗೆ ನೇರವಾದ ಉದಾಹರಣೆ.
• ಲುಡುಸ್ (Ludus)
ಇದೊಂಥರ ಬದ್ಧತೆಯಿಲ್ಲದ ಪ್ರಾಥಮಿಕ ಪ್ರೀತಿ. ಇಲ್ಲಿ ವ್ಯಕ್ತಿಗಳ ನಡುವೆ ಯಾವುದೇ ಆಳವಾದ ಬಾಂಧವ್ಯ ಕಂಡುಬರುವುದಿಲ್ಲ. ಇಂಥವರ ಪಾಲಿಗೆ ಪ್ರೀತಿ ಎಂದರೆ ಈಸಿ ಗೋಯಿಂಗ್ (Easy Going). ಸಂಬಂಧವೊಂದರ ಆರಂಭದ ಮೊದಲ ಹಂತದಲ್ಲಿ ಇದನ್ನು ಕಾಣಬಹುದು. ಇಲ್ಲಿ ಫ್ಲರ್ಟಿಂಗ್ (Flirting) ಒಂದೇ ಕೆಲಸ ಮಾಡುತ್ತಿರುತ್ತದೆ.
• ಅಗಾಪೆ (Agape)
ಇದನ್ನು ಅತ್ಯಂತ ಮೌಲ್ಯಯುತ (Value) ಪ್ರೀತಿಯನ್ನಾಗಿ ಪರಿಗಣಿಸಲಾಗಿದೆ. ಸ್ವಾರ್ಥವಿಲ್ಲದ ಪ್ರೀತಿ ಇದು. ಸೀಮಿತ ವ್ಯಾಪ್ತಿಯನ್ನು ಮೀರಿ ಇಡೀ ಪ್ರಪಂಚವನ್ನು ಪ್ರೀತಿಯಿಂದ ಸೇವೆಗೈಯ್ಯುವ ಭಾವ ಕಂಡುಬರುತ್ತದೆ. ಮದರ್ ಥೆರೇಸಾ ಅಂಥವರು ಇದಕ್ಕೆ ಅತ್ಯುತ್ತಮ ಉದಾಹರಣೆ.
ಇದನ್ನೂ ಓದಿ: ಹುಚ್ಚು ಪ್ರೀತಿ: HIV ಪಾಸಿಟಿವ್ ರಕ್ತ ಇಂಜೆಕ್ಟ್ ಮಾಡಿಕೊಂಡ ಬಾಲಕಿ
• ಫಿಲಿಯಾ (Philia)
ಈ ಬಾಂಧವ್ಯ ಎಂದಿಗೂ ಮಾಸದ ಆಳವಾದ ಪ್ರೀತಿ-ಸ್ನೇಹದಲ್ಲಿ ಕಂಡುಬರುತ್ತದೆ.ಇಲ್ಲಿ ಸಂಬಂಧ ಗೌರವ (Respect) ಮತ್ತು ನಂಬಿಕೆಯ (Trust) ಮೇಲೆ ನಿಂತಿರುತ್ತದೆ. ಇಂತಹ ಸ್ನೇಹದಲ್ಲಿ ಸೂಕ್ತ ಸಂಗಾತಿ ದೊರೆಯುತ್ತಾರೆ, ಅವರು ಜೀವನ ಸಂಗಾತಿ ಆಗಿರುವುದಿಲ್ಲ. ಆಳವಾದ ಹಾಗೂ ತೀವ್ರವಾದ ಭಾವನೆಗಳಿದ್ದರೂ ನೋವು ಮತ್ತು ನಷ್ಟದ ಭಾವನೆಗಳು ಸವಾಲಾಗಿ ಕಾಡುತ್ತವೆ.
• ಫಿಲೌಟಿಯಾ (Philautia)
ನಮ್ಮನ್ನೇ ಕೇಂದ್ರೀಕರಿಸಿಕೊಂಡಿರುವ ಪ್ರೀತಿ ಇದು. ಸ್ವಪ್ರೀತಿ (Self Love) ಮತ್ತು ಸ್ವಕೇಂದ್ರಿತ ಮೋಹದ ಭಾವನೆಗಳು ಇಲ್ಲಿರುತ್ತವೆ. ನಮ್ಮೊಂದಿಗೆ ನಾವು ಉತ್ತಮ ಬಾಂಧವ್ಯ ಹೊಂದಲು ಕಾರಣವಾಗುತ್ತದೆ, ಇದರಿಂದ ಆತ್ಮವಿಶ್ವಾಸ ಹಾಗೂ ಸ್ವ ಗೌರವ ಹೊಂದಬಹುದು. ನಮ್ಮೊಂದಿಗೆ ನಾವು ಆರಾಮಾಗಿ ಇರುವಂತಹ ಸ್ಥಿತಿ ಇದು.
• ಸ್ಟಾರ್ಜ್ (Storge)
ಈ ಪ್ರೀತಿ ನಮ್ಮ ಕುಟುಂಬದ ಸದಸ್ಯರ ನಡುವೆ ಕಂಡುಬರುತ್ತದೆ. ರಕ್ತಸಂಬಂಧದಿಂದ ಇದು ಸದೃಢಗೊಂಡಿರುತ್ತದೆ. ಬಾಲ್ಯಕಾಲದ ನೆನಪುಗಳು ಇಲ್ಲಿರುತ್ತವೆ. ಸಹಾನುಭೂತಿ, ರಕ್ಷಣಾತ್ಮಕ, ತೀವ್ರವಾದ ಭಾವನೆಗಳು ಇಲ್ಲಿರುತ್ತವೆ.
ಇದನ್ನೂ ಓದಿ: ನಿಮ್ಮ ಕೋಪ ಡಬಲ್ ಮಾಡುತ್ತೆ ಈ Foods, ತಿನ್ನೋ ಮುಂಚೆ ಒಮ್ಮೆ ಯೋಚಿಸಿ
• ಮೇನಿಯಾ (Mania)
ವ್ಯಕ್ತಿಗಳ ನಡುವೆ ಇರಬಹುದಾದ ವಿಷಕಾರಿ ಪ್ರೀತಿ ಎಂದರೆ ಮೇನಿಯಾ. ವಾತ್ಸಲ್ಯ ಮತ್ತು ಪ್ರೀತಿಯಲ್ಲಿ ಸಮತೋಲನ ಇರದೆ ಅನಾರೋಗ್ಯಕರ ಭಾವನೆಗಳಿಗೆ ಎಡೆಮಾಡಿಕೊಡುತ್ತವೆ. ಪೊಸೆಸ್ಸಿವ್ ನೆಸ್ (Possessiveness), ಅಭದ್ರತೆ (Insecurity), ಅಂಟಿಕೊಳ್ಳುವ ಮನೋಭಾವ (Clinginess) ಕಂಡುಬರುತ್ತದೆ.