ಸಹಪಾಠಿಯ ಫೋಟೋಗೆ 'ಸುಂದರಿ' ಎಂದು ಕಮೆಂಟ್ ಮಾಡಿದ್ದಕ್ಕೆ ಯುವಕನೊಬ್ಬನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ಇದು 'ಜೆನ್‌ಜಿ' ಶೈಲಿಯ ಖಾಸಗಿ ಸಂಭಾಷಣೆಯಷ್ಟೇ, ಅಪರಾಧವಲ್ಲ ಎಂದು ಹೇಳಿ ಎಫ್‌ಐಆರ್ ರದ್ದುಗೊಳಿಸಿ ಯುವಕನಿಗೆ ರಿಲೀಫ್ ನೀಡಿದೆ.

ಕೆಲವೊಮ್ಮೆ ಗ್ರಹಚಾರ ಕೆಟ್ಟರೆ ಚಿಕ್ಕ ವಿಷಯವೇ ದೊಡ್ಡದಾಗಿ ಬಿಡುತ್ತದೆ. ಗ್ರಹಗತಿ ನೆಟ್ಟಗಿದ್ದರೆ ದೊಡ್ಡ ತಪ್ಪು ಮಾಡಿದ್ರೂ ಬಚಾವಾಗ್ತಾರೆ. ಇಲ್ಲೊಬ್ಬ ಯುವಕ ತನ್ನ ಸಹಪಾಠಿಗೆ ಸುಂದರಿ ಎಂದಷ್ಟೇ ಮೆಸೇಜ್​ ಕಳುಹಿಸಿ ತಗ್ಲೊಕ್ಕೊಂಡಿದ್ದಾನೆ. ಹೋಗಿ ಹೋಗಿ ಪೊಲೀಸ್​ ಒಬ್ಬರ ಮಗಳಿಗೆ ಹೀಗೆ ಮೆಸೇಜ್​ ಕಳಿಸಿದ್ರೆ ಅಪ್ಪ ಸುಮ್ಮನೆ ಇರ್ತಾರಾ? ಯುವಕನ ವಿರುದ್ಧ ಕೇಸ್​ ದಾಖಲಾಗಿದೆ. ಅದೂ ಕ್ರಿಮಿನಲ್​ ಪ್ರಕರಣ. ಕೊನೆಗೆ ಕೋರ್ಟ್​ ಅಲೆಯುವ ಸ್ಥಿತಿ ಈ ಯುವಕನಿಗೆ. ಈ ಕೇಸ್​ ಹೈಕೋರ್ಟ್​ ಮೆಟ್ಟಿಲು ಕೂಡ ಏರಿದ್ದು, ನ್ಯಾಯಮೂರ್ತಿಗಳು ಈ ಕೇಸ್​​ನಲ್ಲಿ ಸದ್ಯ, ಯುವಕ ನಿರಾಳ ಆಗುವಂಥ ತೀರ್ಪನ್ನು ಕೊಟ್ಟಿದ್ದಾರೆ. ಇಷ್ಟಾದ ಮೇಲೆ ಜನ್ಮದಲ್ಲಿ ಈ ವಿದ್ಯಾರ್ಥಿ ಯಾರನ್ನೂ ಸುಂದರಿ ಎಂದು ಕರೆಯುವ ಗೋಜಿಗೆ ಹೋಗಲ್ಲ.

ಆಗಿದ್ದೇನು?

ಅಷ್ಟಕ್ಕೂ ಆಗಿದ್ದೇನೆಂದರೆ, ಯುವತಿ ಒಂದು ಚಿತ್ರವನ್ನು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್‌ ಮಾಡಿದ್ದಳು. ಅದಕ್ಕೆ ಥಾಮಸ್‌ ಜಡನ್‌ ಪಾಲ್ಡಾನೊ ಜಿ ಎಂಬ ಯುವಕ ಸೋ ಪ್ರೆಟಿ, ಬ್ಯೂಟಿಫುಲ್​ ಎಂದು ಕಮೆಂಟ್​ ಹಾಕಿದ್ದಾನೆ. ಅದಕ್ಕೆ ಯುವತಿ ಕೂಡ ಥ್ಯಾಂಕ್ಯೂ ಎಂದಿದ್ದಾಳೆ. ಇದಕ್ಕೆ ಕೋಪಗೊಂಡ ಅಪ್ಪ, ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್‌ 66 'ಇ' ಅಡಿ ಲೈಂಗಿಕ ಕಿರುಕುಳ, ಹಿಂಬಾಲಿಸುವುದು, ಮಹಿಳೆಯ ಅವಮಾನ ಮತ್ತು ಗೌಪ್ಯತೆಯ ಉಲ್ಲಂಘನೆಯ ಅಪರಾಧಗಳನ್ನು ಉಲ್ಲೇಖಿಸಿ ಪ್ರಕರಣವನ್ನು ದಾಖಲಿಸಿದ್ದರು.

ಹೈಕೋರ್ಟ್​ ಹೇಳಿದ್ದೇನು?

ಈ ಕೇಸ್​ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠದ ಮುಂದೆ ಬಂದಿತ್ತು. ಆದರೆ, ವಿದ್ಯಾರ್ಥಿಯ ಪರವಾಗಿ ತೀರ್ಪು ಕೊಟ್ಟರು ಜಡ್ಜ್​. ಇದು ಕೇವಲ ಸಹಪಾಠಿಗಳ ನಡುವಿನ ಖಾಸಗಿ ಸಂಭಾಷಣೆಯಷ್ಟೇ. ಯುವಜನರ 'ಜೆನ್‌ಜಿ' ಶೈಲಿಯ ಮಾತನ್ನು ಅಪರಾಧವೆನ್ನಲು ಸಾಧ್ಯವಿಲ್ಲ ಎಂದ ನ್ಯಾಯಮೂರ್ತಿಗಳು ಎಫ್​ಐಆರ್​ ರದ್ದುಗೊಳಿಸಿದರು. 'ಇಬ್ಬರ ನಡುವೆ ನಡೆದಿರುವ ಸಂಭಾಷಣೆ ಸಾರ್ವಜನಿಕ ವೇದಿಕೆಯಲ್ಲಲ್ಲ. ಬದಲಿಗೆ ಇಬ್ಬರು ವ್ಯಕ್ತಿಗಳ ನಡುವಿನ ಖಾಸಗಿ ಸಂದೇಶಗಳಾಗಿದೆ. ಇದು ಸಾರ್ವಜನಿಕ ಚಾಟ್‌ ಅಲ್ಲ. ಇಬ್ಬರ ನಡುವಿನ ವೈಯಕ್ತಿಕ ಸಂಭಾಷಣೆ. ಇಂದಿನ ವಿದ್ಯಾರ್ಥಿಗಳು ಬಳಸುವ ಭಾಷೆಯಿದು. ಇದು ಹೇಗೆ ಅಪರಾಧವಾಗುತ್ತದೆ? ಇಂದಿನ ಕಾಲದ ಯುವ ಜನರು ಬಳಸುವ ಆಡುಭಾಷೆ ಮತ್ತು ಶೈಲಿಯನ್ನು ಅಪರಾಧ ಕೃತ್ಯವೆಂದು ಪರಿಗಣಿಸಲು ಬರುವುದಿಲ್ಲ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯ ಪಟ್ಟರು.

ಕೇವಲ ಒಂದು ಖಾಸಗಿ ಸಂಭಾಷಣೆಯ ಆಧಾರದ ಮೇಲೆ ಕ್ರಿಮಿನಲ್‌ ಮೊಕದ್ದಮೆ ಮುಂದುವರಿಸಲು ಅವಕಾಶ ನೀಡಿದರೆ, ಅದು ಕಾನೂನು ಪ್ರಕ್ರಿಯೆಯ ದುರ್ಬಳಕೆಯಾಗುತ್ತದೆ ಮತ್ತು ವಿದ್ಯಾರ್ಥಿಯ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇದು ಕೇವಲ ಜೆನ್​ ಜೀ ಶೈಲಿನ ಮಾತುಕತೆಗೆಳು ಅಷ್ಟೇ. ಅದನ್ನೇ ಮಾನಸಿಕ ತೊಂದರೆ ಅಥವಾ ಮಹಿಳೆಯರ ಮೇಲೆ ದೌರ್ಜನ್ಯ ಎಂದು ಆಪಾದಿಸುವುದು ಸರಿಯಲ್ಲ ಎಂದ ನ್ಯಾಯಮೂರ್ತಿಗಳು, ಯುವಕನಿಂದ ವಶಪಡಿಸಿಕೊಂಡಿದ್ದ ಮೊಬೈಲ್ ಹಾಗೂ ಲ್ಯಾಪ್‌ಟಾಪ್‌ಗಳನ್ನು ತಕ್ಷಣವೇ ವಾಪಸ್ ನೀಡಲು ಆದೇಶಿದರು.