ನೀಟ್ ಮರುಪರೀಕ್ಷೆ ಕುರಿತ ಪ್ರತಿಭಟನೆಗಳ ನಡುವೆ, ಟಾಪರ್ ಪನ್ಶುಲ್ ಬನ್ಸಲ್ ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮರುಪರೀಕ್ಷೆಯನ್ನು ಸಕಾರಾತ್ಮಕವಾಗಿ ಸ್ವೀಕರಿಸಿ, ಹೆಚ್ಚು ಅಧ್ಯಯನಕ್ಕೆ ಸಿಕ್ಕ ಅವಕಾಶವೆಂದು ಪರಿಗಣಿಸಿ, ತಮ್ಮ ಅಂಕಗಳನ್ನು 706 ರಿಂದ 715ಕ್ಕೆ ಸುಧಾರಿಸಿಕೊಂಡಿದ್ದಾಗಿ ಅವರು ಹೇಳಿದ್ದಾರೆ. ಪ್ರತಿಭಟನೆಯಲ್ಲಿ ಸಮಯ ವ್ಯರ್ಥ ಮಾಡುವ ಬದಲು ಓದುವುದೇ ಲೇಸು ಎಂಬುದು ಅವರ ನಿಲುವಾಗಿದೆ.
ನೀಟ್ ಪರೀಕ್ಷೆಯಲ್ಲಿ ನಡೆದ ಅಕ್ರಮದಿಂದ ಮರುಪರೀಕ್ಷೆ ನಡೆಸಿರುವುದನ್ನು ವಿರೋಧಿಸಿ ಕಾಕ್ರೋಚ್ ಜನತಾ ಪಕ್ಷ ನಡೆಸಿದ್ದ ಪ್ರತಿಭಟನೆಗೆ ದೇಶಾದ್ಯಂತ ವಿಭಿನ್ನ ಪ್ರತಿಕ್ರಿಯೆಗಳು ಬರುತ್ತಿವೆ. ಇದು ನಿಜಕ್ಕೂ ವಿದ್ಯಾರ್ಥಿಗಳ ಮೇಲಿನ ಕಾಳಜಿಯೇ ಅಥವಾ ಇದರ ಹಿಂದೆ ಇನ್ನಾವುದೋ ಹುನ್ನಾರ ಇದೆಯೇ ಎನ್ನುವ ಬಗ್ಗೆ ಸಾಕಷ್ಟು ಪರ-ವಿರೋಧಗಳ ಚರ್ಚೆ ನಡೆಯುತ್ತಲೇ ಇದೆ. ಇದರಲ್ಲಿ ಭಾಗವಹಿಸಿದವರ ಪೈಕಿ ಕೆಲವರು ಬೇರೆ ದೇಶದ ಬಾವುಟ ಹಿಡಿದು ಬಂದಿದ್ದರು ಎಂದು ಕೂಡ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಪ್ರತಿಭಟನೆಯಲ್ಲಿ ನೀಟ್ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಬದಲು ಇದ್ದದ್ದೇ ಬೇರೆಯವರು ಎನ್ನುವ ಮಾತುಗಳು ಕೇಳಿಬರುತ್ತಿವೆ.
ಜಾಲತಾಣದಲ್ಲಿ ಭಾರಿ ವೈರಲ್
ಇದರ ನಡುವೆಯೇ, ಇದೀಗ ನೀಟ್ ಟಾಪರ್ ಹರಿಯಾಣದ ಪನ್ಶುಲ್ ಬನ್ಸಲ್ ಎಂಬ ಯುವಕ ಆಡಿದ ಮಾತುಗಳು ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿವೆ. ನೀಟ್ ಯುಜಿ ಮರು ಪರೀಕ್ಷೆಯಲ್ಲಿ 720 ರಲ್ಲಿ 715 ಅಂಕಗಳನ್ನು ಗಳಿಸುವ ಮೂಲಕ ದೇಶದಲ್ಲಿ ಎರಡನೇ ಸ್ಥಾನ (ನೀಟ್ ಯುಜಿ ಎಐಆರ್-2) ಗಳಿಸಿರೋ ಪನ್ಶುಲ್, ನೀಟ್ ಪತ್ರಿಕೆ ಸೋರಿಕೆಯಿಂದ ತಾನು ನಿರಾಶೆಗೊಂಡಿದ್ದು ನಿಜ. , ಒಮ್ಮೆ ಬರೆದ ಪರೀಕ್ಷೆಯನ್ನು ಮತ್ತೊಮ್ಮೆ ಬರೆಯಬೇಕಾದರೆ ಸಹಜವಾಗಿ ಎಲ್ಲರಿಗೂ ಬೇಸರ ಆಗುವುದೂ ನಿಜ. ಆದರೆ ಇನ್ನೊಮ್ಮೆ ನನಗೆ ಇನ್ನಷ್ಟು ಸ್ಟಡಿ ಮಾಡಲು ಅವಕಾಶ ಸಿಕ್ಕಿತು ಎಂದು ಎನ್ನಿಸಿ ಖುಷಿಪಟ್ಟುಕೊಂಡೆ. ಲೀಕ್ ಆಗಿರೋ ಪೇಪರ್ ಸಿಗದೇ ಸ್ವಂತ ಪ್ರಯತ್ನದಿಂದ ಒಮ್ಮೆ ಪರೀಕ್ಷೆಗೆ ತಯಾರಿ ನಡೆಸಿದವರಿಗೆ, ಮತ್ತೊಮ್ಮೆ ಅದನ್ನೇ ರಿಪೀಟ್ ಬರೆಯಬೇಕು ಎಂದರೆ, ಮತ್ತಷ್ಟು ಕಾಲಾವಕಾಶ ಸಿಕ್ಕಂತೆ ಆಗುತ್ತದೆ. ಇದು ಒಂದು ರೀತಿಯಲ್ಲಿ ಒಳ್ಳೆಯದೇ ಆಯಿತು. ಇದರಿಂದ ಇನ್ನೂ ಹೆಚ್ಚು ಸ್ಕೋರ್ ಮಾಡಲು ನನ್ನಂಥ ವಿದ್ಯಾರ್ಥಿಗಳಿಗೆ ಅವಕಾಶ ಸಿಕ್ಕಿತು ಎಂದಿದ್ದಾನೆ.
ದೆಹಲಿ ಜಂತರ್ ಮಂತರ್ ಪ್ರತಿಭಟನೆ ಕುರಿತು ಹೇಳಿಕೆ ನೀಡಿರುವ ಪನ್ಶುಲ್ ಬನ್ಸಲ್, ಸರಿಯಾಗಿ ಸ್ಟಡಿ ಮಾಡಿದಾಗ ರಿಪೀಟ್ ಪರೀಕ್ಷೆ ಬರೆಯಲು ತೊಂದರೆ ಏನೂ ಇಲ್ಲ. ಇಂಥ ಸ್ಥಿತಿಯಲ್ಲಿ ಪ್ರತಿಭಟನೆ ಮಾಡಲು ನಾನ್ಯಾಕೆ ಹೋಗಲಿ? ಒಮ್ಮೆ ಪರೀಕ್ಷೆಗೆ ತಯಾರಿಸಿ ನಡೆಸಿದ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಇನ್ನೂ ಹೆಚ್ಚು ಓದಲು ಅವಕಾಶ ಸಿಕ್ಕಂತಾಗಿದೆ. ಪ್ರತಿಭಟನೆಗೆ ಹೋಗಿ ಟೈಮ್ ವೇಸ್ಟ್ ಮಾಡುವ ಬದಲು, ನಾನು ಇನ್ನಷ್ಟು ಸ್ಟಡಿ ಮಾಡಲು ಅನುಕೂಲ ಆಗುತ್ತದೆ. ಅದಕ್ಕೆ ಅವಕಾಶ ಸಿಕ್ಕಂತಾಗುತ್ತದೆ ಎಂದಿದ್ದಾನೆ.
ಮುಖ್ಯ ನೀಟ್ ಪರೀಕ್ಷೆಯಲ್ಲಿ 706 ಅಂಕಗಳು
ಮೇ 3 ರಂದು ನಡೆದ ನೀಟ್ ಯುಜಿ ಮುಖ್ಯ ಪರೀಕ್ಷೆಯಲ್ಲಿ ತಾನು 706 ಅಂಕಗಳನ್ನು ಗಳಿಸಿದ್ದೇನೆ. ಮರು ಪರೀಕ್ಷೆಗೆ ಇನ್ನಷ್ಟು ಟೈಮ್ ಸಿಕ್ಕಿತು. ಇದರಿಂದ ಇನ್ನಷ್ಟು ಹೆಚ್ಚು ಅಂಕ ಗಳಿಸಿದೆ. 715 ಅಂಕ ಬಂದು, ದೇಶದಲ್ಲಿ ಎರಡನೇ ಸ್ಥಾನ ಪಡೆದೆ ಎಂದಿದ್ದಾನೆ. ಆರಂಭದಲ್ಲಿ ನೀಟ್ ಅಂಕಗಳು ತುಂಬಾ ಚೆನ್ನಾಗಿ ಬಂದಿತ್ತು. ಆದ್ದರಿಂದ ಮರು ಪರೀಕ್ಷೆ ಎಂದಾಗ ನೋವಾಯಿತು, ಆದರೆ ಅದನ್ನು ಪಾಸಿಟಿವ್ ಆಗಿ ತೆಗೆದುಕೊಂಡೆ. ಮತ್ತಷ್ಟು ಚೆನ್ನಾಗಿ ಬರೆಯಬಹುದು ಎಂದು ಎನ್ನಿಸಿ ಇನ್ನಷ್ಟು ಓದಿದೆ. ಅದು ಸಾರ್ಥಕವಾಯಿತು ಎಂದಿದ್ದಾನೆ.


