ಮದುವೆಯ ಮಂಟಪದಲ್ಲಿ ವಧುವೊಬ್ಬಳು 'ಒಲ್ಲೆ' ಎಂದು ಹಠ ಹಿಡಿದು ಪ್ರೀತಿಸುತ್ತಿದ್ದವನೊಂದಿಗೆ ಹೋದ ಘಟನೆಯನ್ನು ವಿಶ್ಲೇಷಿಸುತ್ತಾ, ವಧುವಿನ ಆಯ್ಕೆಯನ್ನು ಶ್ಲಾಘಿಸುವ ಜೊತೆಗೆ ವರನ ಮನಃಸ್ಥಿತಿ ಮತ್ತು ಸಮಾಜದಲ್ಲಿ ಅವನು ಎದುರಿಸಬೇಕಾದ ಸವಾಲುಗಳ ಬಗ್ಗೆಯೂ ಚಿಂತಿಸಬೇಕು ಎಂದು ಲೇಖನ ಒತ್ತಿ ಹೇಳುತ್ತದೆ. 

ಪ್ರೀತಿ ಎಂದಿಗೂ ತಪ್ಪಲ್ಲ, ಅದು ನಮ್ಮ ಹಕ್ಕು ಮತ್ತು ಆಯ್ಕೆಯಾಗಿದೆ. ಗಂಡು, ಹೆಣ್ಣು ಇತರೇ ಯಾವುದೇ ಜಂಡರ್ ಆಗಲಿ, ಅವರೆಲ್ಲರಿಗೂ ಇದು ಸಾರ್ವತ್ರಿಕವಾಗಿ ಅನ್ವಯವಾಗುತ್ತದೆ. ಆದರೆ ಈ ಹಕ್ಕು ಮತ್ತು ಆಯ್ಕೆ ಪರಮ ಸ್ವಾರ್ಥ ಮತ್ತು ದುಷ್ಟತನದಿಂದ ಕೂಡಿರಬಾರದು. ತನ್ನ ಪ್ರೀತಿಗಾಗಿ ಮತ್ತೊಬ್ಬರ ಬಲಿ ಪಡೆಯುವುದು ಕ್ರೌರ್ಯವಲ್ಲದೇ ಪ್ರೇಮವಾಗಲಾರದು.

ಇತ್ತೀಚೆಗೆ ಹಾಸನದಲ್ಲಿ ನಡೆಯಬೇಕಿದ್ದ ಮದುವೆಯಲ್ಲಿ ಮದುವೆಯ ಹೆಣ್ಣು, ಗಂಡು ತಾಳಿ ಕಟ್ಟುವ ಹೊತ್ತಿನಲ್ಲಿ 'ಒಲ್ಲೆ' ಎಂದು ಹಠವಿಡಿದು ನಂತರ ಫೋಲಿಸರ ಮಧ್ಯಸ್ಥಿಕೆಯಲ್ಲಿ ತಾನು ಪ್ರೀತಿಸುತ್ತಿದ್ದ ಹುಡುಗನನ್ನ ಮದುವೆಯಾಗಿದ್ದಾಳೆ. ಇದು ಸಂತೋಷದ ವಿಚಾರ. ಆಕೆ ತನ್ನ ಮುಂದಿನ ಬದುಕನ್ನ ತನ್ನಿಚ್ಛೆಯಂತಯೇ ಆಯ್ಕೆ ಮಾಡಿಕೊಂಡಿದ್ದಾಳೆ. ಅದನ್ನು ನಾವೆಲ್ಲಾ ಶ್ಲಾಘಿಸುತ್ತಿದ್ದೇವೆ, ಸರಿ. ಆದ್ರೆ ಆ ಮದುವೆಯ ಗಂಡು ಇದ್ದನಲ್ಲ? ಅವನದೇನು ತಪ್ಪು?!

ಈ ಹೊತ್ತಿನಲ್ಲಿ ಬರೀ ಹೆಣ್ಣಿನ ಚರ್ಚೆ, ಮಾತು, ಬೆಂಬಲಗಳ ಮಹಾಪೂರವೇ ಹರಿದು ಬರುತ್ತಿದೆ.. ಒಂದರಲ್ಲೂ ಆ ಗಂಡಿನ ಬಗ್ಗೆ ಸೊಲ್ಲೇ ಇಲ್ಲ. ಹೊಸ ಬದುಕನ್ನ ಕಟ್ಟಿಕೊಳ್ಳಲು ಕನಸು ಕಾಣುತ್ತಾ ತನ್ನವರೆಲ್ಲರನ್ನು ಕರೆದು ತಂದು ಕಲ್ಯಾಣ ಮಂಟಪದಲ್ಲಿ ನಿಂತಿದ್ದ ಆ ಹುಡುಗ ಮನಃಸ್ಥಿತಿ ಏನಾಗಬೇಕು, ಅವನ ಮುಂದಿನ ಬದುಕಿನ ದಾರಿ ಏನು?! ಅದರಲ್ಲಿಯು ಶಕುನಗಳಲ್ಲಿ ಬಿದ್ದು ಸಾಯುವ ಈ ಸಮಾಜದಲ್ಲಿ ನಿಂತುಹೋದ ಮದುವೆಯ ಕುರಿತಾಗಿ ಅವನೆಷ್ಟು ಮಾತುಗಳನ್ನು, ಸನ್ನಿವೇಶಗಳನ್ನು ಎದುರಿಸಬೇಕು ಯಾರಾದರೂ ವಿಚಾರ ಮಾಡಿದರೇ?! ಅವನ ಯಾವ ತಪ್ಪೂ ಇಲ್ಲದೇ ಯಾಕೆ ಅವಮಾನ, ಅಪಹಾಸ್ಯ, ಮಾನಸಿಕ ಆಘಾತಗಳ ಹೊರೆ ಹೊರಬೇಕು?! ಯಾರಾದರೂ ಕಾಳಜಿವಹಿಸಿದರೇ?!

ಇಂತಹದೇ ಸ್ಥಿತಿಯಲ್ಲಿ ಒಬ್ಬ ಹೆಣ್ಣು ಮಗಳಿದ್ದಾಗ 'ಅಯ್ಯೋ..' ಎನ್ನುವ ಮಂದಿ, ಗಂಡು ಇದ್ದಾಗ 'ಅಹ್' ಎಂದು ನಿರ್ಲಕ್ಷ್ಯ ಮಾಡುವುದು ಸರಿಯೇ?!

ಹೌದು! ಇದು ಪಿತೃಪ್ರಧಾನ ಸಮಾಜ, ಇಲ್ಲಿ ಗಂಡಸರದ್ದೇ ಮೇಲುಗೈ ಆಗಬೇಕೆಂದು ಹವಣಿಸಲಾಗುತ್ತದೆ ಎಂಬುದೆಲ್ಲಾ ಒಪ್ಪತಕ್ಕದ್ದೇ?! ಹಾಗಂತ ಗಂಡಸಿಗೆ ನೋವು, ಸಂಕಟ, ದುಗುಡಗಳು ಇಲ್ಲವೇ?! ಹಿಂದೆಲ್ಲಾ ಗಂಡಸರು ಇಂತಹ ಕೆಲಸ ಮಾಡಿಲ್ಲವೇ?! ಅಂತ ಮರುಪ್ರಶ್ನೆಯನ್ನು ಯಾರಾದರೂ ಕೇಳಿದರೆ ''ಅರೆ! ಮುಯ್ಯಿಗೆ ಮುಯ್ಯಿ, ಕಣ್ಣಿಗೆ ಕಣ್ಣು'' ಎನ್ನಲು ನಾವೇನು ಹಮ್ಮುರಬಿಯ ಕಾಲದಲ್ಲಿ ಬದುಕಿದ್ದೇವೇಯೇ?!

ಆಕೆ ಯಾರಾನ್ನಾದರೂ ಪ್ರೀತಿಸುವುದು, ಮದುವೆಯಾಗುವುದು ಆಕೆಯ ಸ್ವಾತಂತ್ರ್ಯಕ್ಕೆ ಬಿಟ್ಟ ವಿಚಾರ, ಅದೇ ಹೊತ್ತಿನಲ್ಲಿ ಮತ್ತೊಬ್ಬರನ್ನು ಮದುವೆಯಾಗಲು ಒಪ್ಪಿ, ಮಂಟಪದಲ್ಲಿ ವಂಚಿಸುವುದು ಅಪರಾಧವಲ್ಲದೇ ಮತ್ತೇನು? ಸದ್ಯ ನೆಪಕ್ಕೆ ಮದುವೆಯಾಗಿ ನಂತರ ಕೊಲ್ಲುವುದಕ್ಕೆ ಮುಂದಾಗಲಿಲ್ಲವೆಂದು ಸಮಾಧಾನಪಟ್ಟುಕೊಳ್ಳಬೇಕಷ್ಟೇ?!

ಹೆಣ್ಣಾಗಲಿ, ಗಂಡಾಗಲಿ ನಿಮಗೆ ಒಪ್ಪಿತವಲ್ಲದ ಮದುವೆಗೆ, ಪ್ರೇಮಕ್ಕೆ, ಸಂಬಂಧಕ್ಕೆ ಮುಂದಾಗಬೇಡಿ. ಬಲವಂತಕ್ಕೆ ಒಪ್ಪಬೇಡಿ. ನಿಮ್ಮ ಸ್ವಾರ್ಥಕ್ಕೆ ಮತ್ತೊಬ್ಬರ ಬದುಕನ್ನು ನಾಶಮಾಡದಿರಿ. ಇದೊಂದು ಕನಿಷ್ಠ ನೈತಿಕತೆಯನ್ನು ಬೆಳೆಸಿಕೊಳ್ಳಿ. ನಿಮ್ಮ ಪ್ರೀತಿ, ಪ್ರೇಮ, ಪ್ರಣಯಗಳಿಗೆ ಒಂದು ಘನತೆ ಇದೆ ಎಂಬುದನ್ನ ಮರೆಯಬೇಡಿ. ಆ ಘನತೆಗೆ ಕುಂದುಂಟು ಮಾಡಬೇಡಿ. ಘನತೆಯೇ ಇಲ್ಲದ ಬದುಕು ನಿರರ್ಥಕ.

'ಒಲವು ಸದಾ ಹರಡಲಿ, ಸ್ವಾರ್ಥ ಸದಾ ಸೋಲಲಿ'