ತಮ್ಮ ಹಾಡಿನ ಮೂಲಕವೇ ಮೋಡಿ ಮಾಡಿದವರು ಆಶಾ ಭೋಂಸ್ಲೆ. ಸಿಂಗರ್ ಆಶಾ ಭೋಂಸ್ಲೆ ವೃತ್ತಿಯಲ್ಲಿ ಉತ್ತುಂಗದಲ್ಲಿದ್ರೂ ಅವರ ವೈಯಕ್ತಿಕ ಜೀವನ ಸುಖಕರವಾಗಿರಲಿಲ್ಲ.
ಇಂಡಿಪಾಪ್ ರಾಣಿ ಆಶಾ ಭೋಂಸ್ಲೆ (Indipop Queen Asha Bhosle), ತಮ್ಮ ಮಧುರ ಕಂಠದಿಂದಲೇ ಕೋಟ್ಯಾಂತರ ಅಭಿಮಾನಿಗಳನ್ನ ಗಳಿಸಿದ್ದಾರೆ. ಅವರ ಹಾಡಿಗೆ ಸೋಲದವರಿಲ್ಲ. 91 ವರ್ಷದ ಆಶಾ ಭೋಂಸ್ಲೆ ಬರೀ ಹಾಡಿನಿಂದ ಮಾತ್ರವಲ್ಲ ತಮ್ಮ ವೈಯಕ್ತಿಕ ಜೀವನದಿಂದಲೂ ಸಾಕಷ್ಟು ಸುದ್ದಿ ಮಾಡಿದ್ದಾರೆ. ವೃತ್ತಿಜೀವನದಲ್ಲಿ ಯಶಸ್ಸಿನ ಉತ್ತುಂಗದಲ್ಲಿದ್ರೆ ವೈವಾಹಿಕ ಜೀವನ ವಿರುದ್ಧ ದಿಕ್ಕಿನಲ್ಲಿತ್ತು. ಆಶಾ ಭೋಂಸ್ಲೆ ಆರ್ಡಿ ಬರ್ಮನ್ ಅವರನ್ನು ವಿವಾಹವಾಗಿದ್ದು ಎಲ್ಲರಿಗು ತಿಳಿದಿದೆ. ಆದ್ರೆ ಇದು ಆಶಾ ಭೋಂಸ್ಲೆಗೆ ಎರಡನೇ ಮದುವೆ. 16ನೇ ವಯಸ್ಸಿನಲ್ಲಿಯೇ ಓಡಿ ಹೋಗಿ ಮದುವೆ ಆದವರು ಆಶಾ ಬೋಂಸ್ಲೆ. ಲತಾ ಮಂಗೇಶ್ಕರ್ (Lata Mangeshkar) ಅವರ ಸೆಕ್ರೇಟರಿ ಗಣಪತ್ರಾವ್ ಭೋಸಲೆ ಅವರನ್ನು ಆಶಾ ಬೋಂಸ್ಲೆ ಮೊದಲು ಮದುವೆ ಆಗಿದ್ದರು.
ಯಸ್, ಆಶಾ ಭೋಂಸ್ಲೆ ತಮ್ಮ 16ನೇ ವಯಸ್ಸಿನಲ್ಲಿ ಲತಾ ಮಂಗೇಶ್ಕರ್ ಅವರ ಕಾರ್ಯದರ್ಶಿಯಾಗಿದ್ದ 31 ವರ್ಷದ ಗಣಪತ್ರಾವ್ ಕೈ ಹಿಡಿದಿದ್ದರು.1949ರಲ್ಲಿ, ಇಬ್ಬರೂ ಓಡಿಹೋಗಿ ಮದುವೆಯಾಗಿದ್ರು. ಇದರಿಂದ ಲತಾ ಮಂಗೇಶ್ಕರ್ ತುಂಬಾ ದುಃಖಿತರಾಗಿದ್ರು. ಇದೇ ಕಾರಣಕ್ಕೆ ಲತಾ ಮಂಗೇಶ್ಕರ್, ತಮ್ಮ ತಂಗಿ ಆಶಾ ಭೋಂಸ್ಲೆಯಿಂದ ದೂರವಾಗಿದ್ರು. ಆಶಾ ಭೋಂಸ್ಲೆ ತಮ್ಮ ಮೊದಲ ಮಗುವಿನ ತಾಯಿಯಾದಾಗ, ಮಂಗೇಶ್ಕರ್ ಕುಟುಂಬ ಅವರನ್ನು ದತ್ತು ತೆಗೆದುಕೊಂಡಿತ್ತು. ಆದ್ರೆ ಗಣಪತ್ರಾವ್ ಗೆ ಅದು ಇಷ್ಟವಾಗಲಿಲ್ಲ.
ಆಶಾ ಭೋಂಸ್ಲೆ, ತಮ್ಮ ಕುಟುಂಬ ಅದ್ರಲ್ಲೂ ಲತಾ ಮಂಗೇಶ್ಕರ್ ಅವರೊಂದಿಗೆ ಯಾವುದೇ ಸಂಬಂಧ ಬೆಳೆಸುವುದು ಗಣಪತ್ರಾವ್ ಗೆ ಇಷ್ಟವಿರಲಿಲ್ಲ. ಗಣಪತ್ರಾವ್ ಹಣಕ್ಕಾಗಿ ಆಶಾಳಿಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದರೆನ್ನಲಾಗುತ್ತದೆ. ಲತಾ ಭೇಟಿಯಾಗದಂತೆ ತಡೆಯುತ್ತಿದ್ದ ಗಣಪತ್ರಾವ್, ಆಶಾ ಭೋಂಸ್ಲೆಗೆ ಹೊಡೆಯುತ್ತಿದ್ದರಂತೆ. ಆಶಾ ಭೋಂಸ್ಲೆ ಮತ್ತು ಗಣಪತ್ರಾವ್ ದಂಪತಿಗೆ ಮೂವರು ಮಕ್ಕಳಿದ್ದಾರೆ. ಮೂರನೇ ಬಾರಿ ಗರ್ಭಿಣಿಯಾದಾಗ ಗಣಪತ್ರಾವ್ ಆಶಾರನ್ನು ಮನೆಯಿಂದ ಹೊರ ಹಾಕಿದ್ರು. ಅದೇ ವರ್ಷ ಇಬ್ಬರೂ ದೂರವಾದ್ರು. ಸಂಸಾರದಲ್ಲಿ ನಿರಾಸೆ ಅನುಭವಿಸಿದ್ದ ಆಶಾರಿಗೆ ಇದು ದುಃಖದ ಸಮಯವಾಗಿತ್ತು, ಆದ್ರೆ ಅವರ ಧ್ವನಿ ಅವರನ್ನು ಬಿಡಲಿಲ್ಲ. ಅವ್ರ ವೃತ್ತಿಗೆ ಹೊಸ ತಿರುವು ನೀಡ್ತು.
ನಾನು ತುಂಬಾ ಚಿಕ್ಕ ವಯಸ್ಸಿನಲ್ಲಿಯೇ ನನಗಿಂತ 20 ವರ್ಷ ದೊಡ್ಡವನನ್ನು ಮದುವೆಯಾಗಿದ್ದೆ. ಅದು ಪ್ರೇಮ ವಿವಾಹವಾಗಿತ್ತು. ಇದೇ ಕಾರಣಕ್ಕೆ ಲತಾ ದೀದಿ ನನ್ನೊಂದಿಗೆ ದೀರ್ಘಕಾಲ ಮಾತನಾಡಲಿಲ್ಲ. ಗಣಪತ್ರಾವ್ ಕುಟುಂಬ ತುಂಬಾ ಸಂಪ್ರದಾಯವಾದಿಯಾಗಿತ್ತು. ಗಾಯಕಿಯನ್ನು ಸೊಸೆಯಾಗಿ ಸ್ವೀಕರಿಸಲು ಸಾಧ್ಯವಾಗಲಿಲ್ಲ ಎಂದು ಹಿಂದೆ ಸಂದರ್ಶನವೊಂದರಲ್ಲಿ ಆಶಾ ಹೇಳಿದ್ದರು.
ಆಶಾ ಬೋಂಸ್ಲೆ, ದೌರ್ಜನ್ಯದ ಬಗ್ಗೆಯೂ ಮಾತನಾಡಿದ್ದರು. ನನ್ನನ್ನು ತುಂಬಾ ಕೆಟ್ಟದಾಗಿ ನಡೆಸಿಕೊಂಡರು. ನಾನು ನನ್ನ ಕಿರಿಯ ಮಗ ಆನಂದ್ಗೆ ಜನ್ಮ ನೀಡುವ ಸಮಯದಲ್ಲಿ ನನ್ನನ್ನು ಮನೆಯಿಂದ ಹೊರಗೆ ಹಾಕಿದ್ರು. ನಾನು ತವರಿಗೆ ವಾಪಸ್ ಆಗಿದ್ದೆ. ನಾನು ಯಾರನ್ನೂ ದೂಷಿಸುವುದಿಲ್ಲ. ನಾನು ಶ್ರೀ ಭೋಸಲೆ ಅವರನ್ನು ಭೇಟಿಯಾಗದಿದ್ದರೆ, ನನಗೆ ಈ ಮೂವರು ಮುದ್ದಾದ ಮಕ್ಕಳು ಇರುತ್ತಿರಲಿಲ್ಲ. ನನ್ನ ಜೀವನ ಎಂದಿಗೂ ಪರಿಪೂರ್ಣವಾಗುತ್ತಿರಲಿಲ್ಲ ಎಂದಿದ್ದರು.
ಭೋಸಲೆಯಿಂದ ದೂರವಾದ್ಮೇಲೆ ಆಶಾ ಭೋಂಸ್ಲೆ ಮತ್ತು ಆರ್ಡಿ ಬರ್ಮನ್ ಕೆಲಸದ ಸಂದರ್ಭದಲ್ಲಿ ಆಗಾಗ ಭೇಟಿ ಆಗ್ತಿದ್ದರು. ಇಬ್ಬರೂ ಪ್ರೀತಿಸಲು ಶುರು ಮಾಡಿದ್ದರು. ಆಶಾ ಭೋಂಸ್ಲೆ, ಬರ್ಮನ್ಗಿಂತ 6 ವರ್ಷ ದೊಡ್ಡವರು. ಹಾಗಾಗಿ ಅವರ ಮದುವೆಗೆ ಕುಟುಂಬದ ವಿರೋಧವಿತ್ತು. ಆದ್ರೆ 1980 ರಲ್ಲಿ ಆಶಾ ಹಾಗೂ ಬರ್ಮನ್ ದಾಂಪತ್ಯ ಜೀವನಕ್ಕೆ ಕಾಲಿಟ್ರು. ಮದುವೆಯಾದ 14 ವರ್ಷಗಳ ನಂತ್ರ ಪಂಚಮ್ ದಾ ಎಂದೇ ಜನಪ್ರಿಯರಾದ ಆರ್ಡಿ ಬರ್ಮನ್ ನಿಧನರಾದ್ರು.
