ಅತ್ತೆ ಎಂದರೆ ಮಾರು ದೂರ ಓಡುವ ಕಾಲ ಇದಲ್ಲ. ಅತ್ತೆಯೊಂದಿಗೆ ಸಂಬಂಧವನ್ನು ಚೆನ್ನಾಗಿಟ್ಟುಕೊಳ್ಳುವುದು ಹೊಸ ಟ್ರೆಂಡ್. ನಿಮಗೂ ಆಲಿಯಾ ಭಟ್‌ ತನ್ನ ಅತ್ತೆ ನೀತೂ ಕಪೂರ್‌ ಜತೆಗಿನ ಒಡನಾಟದಂತೆಯೇ  ಇರಬೇಕು ಎಂಬಾಸೆಯೇ? ಹಾಗಾದರೆ ಯಾವುದೇ ಒತ್ತಡವಿಲ್ಲದೆ ಸುಲಭವಾಗಿ ಅತ್ತೆಯೊಂದಿಗೆ ಸಂಬಂಧವನ್ನು ಸುಧಾರಿಸಿಕೊಳ್ಳಬಹುದು. ಈ  ಮೂರು ಟಿಪ್ಸ್‌ ಅನುಸರಿಸಿದರೆ ಸಾಕು. 

ಅತ್ತೆ-ಸೊಸೆಯ (Mother-in-law and Daughter-in-law) ಸಂಬಂಧ ಯಾವತ್ತೂ ಸ್ವಲ್ಪ ನಾಜೂಕಿನದ್ದು. ಅದರಲ್ಲೂ ಮೆಗಾ ಧಾರಾವಾಹಿಗಳಲ್ಲಿ ಅತ್ತೆ-ಸೊಸೆಯ ಸಂಬಂಧ ನೋಡಿದವರು ಈ ಸಂಬಂಧವೆಂದರೆ ಎಣ್ಣೆ-ಸೀಗೆಕಾಯಿ ಸಂಬಂಧವೇ ಸರಿ ಎನ್ನುವ ನಿರ್ಣಯಕ್ಕೆ ಬರುವುದರಲ್ಲಿ ಅಚ್ಚರಿಯಿಲ್ಲ. ಆದರೆ, ಇದು ಸ್ಮಾರ್ಟ್‌ ಕಾಲ. ಅತ್ತೆಯೊಂದಿಗೆ ಸಂಬಂಧ ಕೆಡಿಸಿಕೊಂಡು ಮುನಿಸು ಮಾಡುತ್ತಿರುವ ಕಾಲವಲ್ಲ. ಜನರೇಷನ್‌ ಗ್ಯಾಪ್‌ ಇದ್ದಿದ್ದೇ. ಆದರೆ, ಸಂಬಂಧ ಚೆನ್ನಾಗಿರಲು ಸಾಧ್ಯ ಎಂದು ಹಲವಾರು ಸೊಸೆಯಂದಿರು ತೋರಿಸಿಕೊಟ್ಟಿದ್ದಾರೆ. 

ನಿನ್ನೆಯಷ್ಟೇ ಮದುವೆಯಾದ ಆಲಿಯಾ ಭಟ್-ರಣಬೀರ್‌ ಕಪೂರ್‌ (Alia Bhat-Ranbeer Kapoor) ಇಡೀ ದೇಶದ ಗಮನ ಸೆಳೆದಿದ್ದಾರೆ. ಅವರು ಕಳೆದ ಐದು ವರ್ಷಗಳಿಂದಲೂ ರಿಲೇಷನ್‌‌ಶಿಪ್‌ನಲ್ಲಿ ಇದ್ದರು ಎನ್ನುವುದೂ ಜಗಜ್ಜಾಹೀರು. ಈ ಅವಧಿಯಲ್ಲಿ ಆಲಿಯಾ ರಣಬೀರ್‌ ಅಮ್ಮ ನೀತು ಸಿಂಗ್‌ (Neetu Singh) ಜತೆಗೆ ಉತ್ತಮ ಸಂಬಂಧ ಬೆಳೆಸಿಕೊಂಡಿದ್ದಾರೆ ಹಾಗೂ ಕಾಯ್ದುಕೊಂಡಿದ್ದಾರೆ. ಅವರಂತೆಯೇ ಅತ್ತೆಯೊಂದಿಗೆ ನಿಮ್ಮ ಸಂಬಂಧವೂ ಚೆನ್ನಾಗಿರಬೇಕೇ? ಹೆಚ್ಚಿನ ತಲೆನೋವಿಲ್ಲದೆ ಅತ್ತೆಯೊಂದಿಗಿನ ಸಂಬಂಧವನ್ನು ಸುಧಾರಿಸಿಕೊಳ್ಳಬೇಕೆ? ಹಾಗಾದರೆ ಈ ಮೂರೇ ಮೂರು ಟಿಪ್ಸ್‌ ಅನುಸರಿಸಿ ನೋಡಿ, ಮ್ಯಾಜಿಕ್‌ ಮಾಡಿ.

• ಅತ್ತೆಯೊಂದಿಗೆ ಸಮಯ (Spend Time) ಕಳೆಯಿರಿ
ಎಷ್ಟೆಂದರೂ ಅತ್ತೆ ನಿಮಗಿಂತ ಹಿರಿಯ ತಲೆಮಾರಿನವರು. ಅವರೊಂದಿಗೆ ಸ್ವಲ್ಪ ಸಮಯ ಕಳೆಯುವುದು ನಿಮ್ಮಿಬ್ಬರ ಸಂಬಂಧ ಸುಧಾರಣೆಗೆ ಇರುವ ಅತ್ಯುತ್ತಮ ಮಾರ್ಗ. ಒಂದೊಮ್ಮೆ ನಿಮ್ಮ ವಿವಾಹ ಇನ್ನೂ ಲೇಟ್‌ ಇದ್ದರೂ ಸಹ ಈಗಿನಿಂದಲೇ ಅವರೊಂದಿಗೆ ಸ್ವಲ್ಪ ಸಮಯ ಕಳೆಯಲು ಅಡ್ಡಿಯಿಲ್ಲ. ಆಲಿಯಾ ಕೂಡ ವಿವಾಹಕ್ಕೂ ಮುನ್ನವೇ ಹಲವಾರು ಪಾರ್ಟಿ, ಹುಟ್ಟುಹಬ್ಬದ ಸಮಾರಂಭಗಳಲ್ಲಿ ನೀತೂ ಅವರೊಂದಿಗೆ ಕಾಣಿಸಿಕೊಂಡಿದ್ದರು. ಸಾಕಷ್ಟು ಫೋಟೋಗಳಿಗೂ ಅವರಿಬ್ಬರು ಪೋಸ್‌ ಕೊಟ್ಟಿದ್ದುದು ಹಿಂದೆ ಸುದ್ದಿಯಾಗಿತ್ತು. ಇನ್ನು, ನಿಮ್ಮ ವಿವಾಹವಾಗಿದ್ದರಂತೂ ಅವರೊಂದಿಗೆ ಸಮಯ ಕಳೆಯಲು ಯಾವುದೇ ಅಡ್ಡಿ ಇರುವುದಿಲ್ಲ. ಆ ಸಮಯದಲ್ಲಿ ಅವರ ವಿಚಾರಗಳನ್ನು ಕೇಳಿಕೊಳ್ಳಿ. ಅವರ ಅನಿಸಿಕೆಗಳಿಗೆ ತಕ್ಕ ಹಾಗೆ ಇರಲು ಪ್ರಯತ್ನಿಸಬೇಕೆಂದಿಲ್ಲ. ಆದರೆ, ಅವರ ವಿಚಾರಗಳನ್ನು ಅರಿಯಲು ಯತ್ನಿಸಿ. ಇದರಿಂದ ಸಂಘರ್ಷ (Conflict) ಉಂಟಾಗುವುದನ್ನು ತಪ್ಪಿಸಿಕೊಳ್ಳಬಹುದು.

Parenting Tips : ಫೋನ್‌ನಿಂದ ಮಕ್ಕಳನ್ನು ದೂರವಿಡಲು ಇಲ್ಲಿದೆ ಉಪಾಯ

• ಪರಸ್ಪರ ಮೆಚ್ಚಿಕೊಳ್ಳುವುದನ್ನು (Appreciate Each Other) ಕಲಿತುಕೊಳ್ಳಿ
ಅತ್ತೆ ವಯಸ್ಸಿನಲ್ಲಿ ಹಿರಿಯರಾದರೂ ಅವರನ್ನು ಕೆಲವು ವಿಚಾರಗಳಲ್ಲಿ ಮೆಚ್ಚಿಕೊಳ್ಳಬೇಕು. ಹಾಗೆಯೇ ಅವರೂ ಸಹ ಸೊಸೆಯನ್ನು ಮೆಚ್ಚಿಕೊಳ್ಳಬಹುದು. ಪರಸ್ಪರ ಮೆಚ್ಚುಗೆ ವ್ಯಕ್ತಪಡಿಸುವುದು, ಅತ್ತೆಯನ್ನು ಸ್ವಲ್ಪ ಹೊಗಳುವುದು, ಅವರ ವಯಸ್ಸಿಗೆ ಗೌರವ ನೀಡಿ ಮಾತನಾಡುವುದರಿಂದ ಅವರಿಗೂ ಸಂತಸವಾಗುತ್ತದೆ. ಇದರಿಂದ ಸೊಸೆಯ ಬಗ್ಗೆ ಮೃದುವಾದ ಧೋರಣೆ ಹೊಂದುವುದು ಸಹಜ. ಅತ್ತೆ-ಸೊಸೆಯ ಸಂಬಂಧ ಹದಗೆಟ್ಟು ಆಪ್ತಸಮಾಲೋಚನೆಗೆ ಬರುವ ಜನರಿಗೆ ಇದೇ ಐಡಿಯಾ ಹೇಳಿಕೊಡಲಾಗುತ್ತದೆ. ಹೊಗಳುವ ಮೂಲಕ ಅವರನ್ನು ಮೆತ್ತಗಾಗಿಸಬಹುದು. ಅಲ್ಲದೆ, ಯಾವುದೋ ನೈಜವಾದ ಕಾರಣಕ್ಕೆ ಹೊಗಳುವುದರಲ್ಲಿ ತಪ್ಪೇನಿಲ್ಲ, ಸುಮ್ಮನೆ ಮುಖಸ್ತುತಿ ಮಾಡಬೇಕೆಂದಿಲ್ಲ. 'ಗಂಗೂಬಾಯಿ ಕಥೈವಾಡಿʼ ಚಿತ್ರದ ಟ್ರೇಲರ್‌ ಬಿಡುಗಡೆಯಾದಾಗ ನೀತೂ ಮೊಟ್ಟಮೊದಲನೆಯದಾಗಿ ಆಲಿಯಾರಿಗೆ ಅಭಿನಂದನೆ ಮಾಡಿದ್ದುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ದೂರದಲ್ಲಿರುವ ಸಂಗಾತಿಯ ಮನವೊಲಿಸಲು ಹೀಗೆ ಮಾಡಿ

• ನಂಬಿಕೆ, ಮುಕ್ತವಾದ ಮಾತುಕತೆ, ಸೂಕ್ತ ಸಂವಹನ (Trust, Openness, Best Communication)
ಯಾವುದೇ ಸಂಬಂಧ ದೃಢವಾಗಿ ಇರಬೇಕಾದರೂ ಈ ಮೇಲಿನ ಅಂಶಗಳು ಮುಖ್ಯವಾಗುತ್ತವೆ. ಹಾಗೆಯೇ, ಅತ್ತೆ-ಸೊಸೆ ಸಂಬಂಧಕ್ಕೂ ಸಹ ಇವು ಮುಖ್ಯ. ಅತ್ತೆಯೊಂದಿಗೆ ಪದೇ ಪದೆ ಸುಳ್ಳು ಹೇಳುವ ಸೊಸೆಯಂದಿರಿದ್ದಾರೆ. ಇದು ಅವರಿಗೆ ತಿಳಿಯುವುದಿಲ್ಲವೆಂದಲ್ಲ. ಆದರೆ, ಬೇಸರ ಮಾಡಿಕೊಂಡು ಸುಮ್ಮನಿರುತ್ತಾರೆ. ಜತೆಗೆ, ಅವರು ನಿಜವಾದುದನ್ನೇ ಹೇಳಿದರೂ ಅನುಮಾನಿಸುತ್ತಾರೆ. ಅದರ ಬದಲು ನಂಬಿಕೆ ಉಳಿಸಿಕೊಳ್ಳುವುದು ಮುಖ್ಯ. ಮುಕ್ತವಾಗಿ ಅವರೊಂದಿಗೆ ವ್ಯವಹರಿಸುವುದರಿಂದ ಅವರಿಗೂ ನಿಮ್ಮ ಬಗ್ಗೆ ಅರಿಯಲು ಸಾಧ್ಯವಾಗುತ್ತದೆ. ನೀತೂ ಸಿಂಗ್‌ ಹಾಗೂ ಆಲಿಯಾ ಕೂಡ ಇದೇ ರೀತಿಯ ಸಂಬಂಧ ಹೊಂದಿದ್ದಾರೆ ಎನ್ನುವುದು ಅನೇಕ ಸನ್ನಿವೇಶಗಳಲ್ಲಿ ಬಹಿರಂಗವಾಗಿದೆ. ನೀತೂ ಸಿಂಗ್‌ ಅವರು ಒಮ್ಮೆ ಆಲಿಯಾರನ್ನು “ಆಂತರಿಕವಾಗಿ ಅತ್ಯಂತ ಸುಂದರ ವ್ಯಕ್ತಿʼ ಎಂಬುದಾಗಿ ಬಣ್ಣಿಸಿದ್ದರು. ಮುಕ್ತ ಮನಸ್ಸಿಗೆ ಇದೊಂದು ಉದಾಹರಣೆ.

ಪ್ರತಿಯೊಬ್ಬ ಸೊಸೆಯೂ ಅತ್ತೆಯೊಂದಿಗೆ ವಿಭಿನ್ನವಾದ ಸಂಬಂಧ ಹೊಂದಿರುತ್ತಾರೆ. ತೀರ ಆತ್ಮೀಯತೆ ಇಲ್ಲದಿದ್ದರೂ ಉತ್ತಮ ಭಾವನೆಯನ್ನು ಹೊಂದುವ ಮೂಲಕ ಸಂಬಂಧವನ್ನು ದೃಢವಾಗಿ ಇಟ್ಟುಕೊಳ್ಳಬಹುದು.