ಮಗನಿಗೆ ತನ್ನ ಮನೆತನದ ಹೆಸರಿಟ್ಟ ಪತ್ನಿ, ಡಿವೋರ್ಸ್ ಕೊಟ್ಟು ಕಳಿಸಿದ ಗಂಡ! ಆದ್ರೆ ಕೋರ್ಟ್ ಕೊಡ್ತು ಬಿಗ್ ಟ್ವಿಸ್ಟ್
ಮಗುವಿಗೆ ತನ್ನ ಮನೆತನದ ಹೆಸರಿಟ್ಟಿದ್ದಕ್ಕೆ ಪತ್ನಿಗೆ ವಿಚ್ಛೇದನ ನೀಡಿದ ಪತಿ. ಚೀನಾದಲ್ಲಿ ಪಿತೃಪರಂಪರೆಯ ಮನೆತನದ ಹೆಸರಿನ ಬಗ್ಗೆ ಚರ್ಚೆ ಹುಟ್ಟುಹಾಕಿದೆ. ಆದರೆ, ಕೋರ್ಟ್ ಕೊಟ್ಟ ತೀರ್ಪಿನಿಂದ ಬಿಗ್ ಟ್ವಿಸ್ಟ್ ಉಂಟಾಗಿದೆ.

ಇವರಿಬ್ಬರೂ ಮನಮೆಚ್ಚಿದ ಜೋಡಿ. ಈ ದಂಪತಿ ನೋಡಿದರೆ ದೃಷ್ಟಿ ಆಗಬೇಕು ಎನ್ನುವಂತಿದ್ದರು. ಆದರೆ, ಈ ದಂಪತಿಗೆ ಜನಿಸಿದ 2ನೇ ಮಗುವಿಗೆ ಹೆಂಡತಿ ತನ್ನ ಮನೆತನದ ಹೆಸರು ಇಟ್ಟಿದ್ದಾಳೆ ಎಂಬ ಒಂದೇ ಒಂದು ಕಾರಣಕ್ಕೆ ಗಂಡ ಆಕೆಗೆ ವಿಚ್ಛೇದನ ಕೊಟ್ಟು ಮನೆಯಿಂದ ಆಚೆ ಹಾಕಿದ್ದಾನೆ. ಆದರೆ, ನ್ಯಾಯಾಲಯ ಮಕ್ಕಳ ಪಾಲನೆಯ ಜವಾಬ್ದಾರಿಯನ್ನು ಪತ್ನಿಗೆ ನೀಡಿದೆ. ಈ ಸುದ್ದಿ ಹೊರಬಿದ್ದ ನಂತರ ಚೀನಾದಲ್ಲಿ ಪಿತೃಪರಂಪರೆಯ ಮನೆತನದ ಹೆಸರಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ನಡೆಯುತ್ತಿವೆ.
ಚೀನಾದ ಶಾಂಘೈನ ಷಾವೋ ಎಂಬ ವ್ಯಕ್ತಿ ಮನೆತನದ ಹೆಸರಿನ ವಿವಾದದಲ್ಲಿ ಪತ್ನಿಯಿಂದ ವಿಚ್ಛೇದನ ಪಡೆದಿದ್ದಾನೆ. ಗಂಡನ ಹೆಸರು ಷಾವೋ ಮತ್ತು ಹೆಂಡತಿ ಹೆಸರು ಜೀ. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. 2019ರಲ್ಲಿ ಹುಟ್ಟಿದ ಮಗಳಿಗೆ ಷಾವೋನ ಮನೆತನದ ಹೆಸರಿಡಲಾಗಿತ್ತು. ಆದರೆ, 2021ರಲ್ಲಿ ಹುಟ್ಟಿದ ಮಗನಿಗೆ ಹೆಂಡತಿ ಜೀ ತನ್ನ ಮನೆತನದ ಹೆಸರಿಟ್ಟಿದ್ದಾಳೆ. ಇದರಿಂದ ಇಬ್ಬರ ನಡುವೆ ಕೌಟುಂಬಿಕ ಸಮಸ್ಯೆಗೆ ಕಾರಣವಾಯಿತು. ಮಗನಿಗೆ ತನ್ನ ಮನೆತನದ ಹೆಸರಿಡಬೇಕೆಂದು ಷಾವೋ ಪಟ್ಟು ಹಿಡಿದಿದ್ದ ಎಂದು ಚೀನಾದ ಸುದ್ದಿ ಸಂಸ್ಥೆ ಹೆನಾನ್ ಟೆಲಿವಿಷನ್ ವರದಿ ಮಾಡಿದೆ.
ಕೊನೆಗೆ ಮನೆತನದ ಹೆಸರಿನ ವಿಚಾರದಲ್ಲಿ ಇಬ್ಬರ ನಡುವೆ ಜಗಳ ಉಲ್ಬಣಿಸಿ 2023ರಲ್ಲಿ ವಿಚ್ಛೇದನ ಪಡೆಯಲು ನಿರ್ಧರಿಸಿದರು. ಅದರಂತೆ ಕೋರ್ಟ್ ಮೆಟ್ಟಿಲೇರಿದ ದಂಪತಿ ತಾವು ಎಂದುಕೊಂಡಂತೆ ವಿಚ್ಛೇದನವನ್ನೂ ಪಡೆದುಕೊಂಡರು. ಇದಾದ ನಂತರ ಅವರ ಎರು ಮಕ್ಕಳು ಹೆಂಡತಿ ಜೀ ಜೊತೆಗೆ ಇದ್ದರು. ಆದರೆ, ವಿಚ್ಛೇದನದ ಸಮಯದಲ್ಲಿ ಷಾವೋ ಮಗಳ ಪಾಲನೆ ತನಗೆ ಬೇಕು, ಮಗನ ಪಾಲನೆ ಬಿಟ್ಟುಕೊಡಲು ಸಿದ್ಧ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದನು. ಆದರೆ, ಜೀ ಇಬ್ಬರು ಮಕ್ಕಳ ಪಾಲನೆ ತನಗೆ ಬೇಕೆಂದು ವಾದಿಸಿದಳು. ಕೊನೆಗೆ ನ್ಯಾಯಾಲಯ ಜೀ ಪರವಾಗಿ ತೀರ್ಪು ನೀಡಿತು.
ಇದನ್ನೂ ಓದಿ: ಬುಡಕಟ್ಟು ಸಮುದಾಯದಲ್ಲಿ ಮದುವೆ ಮಾಡಿಕೊಂಡರೆ 3 ದಿನಗಳು ಮಲ ವಿಸರ್ಜನೆ ಮಾಡೊಂಗಿಲ್ಲ; ಮದುಮಕ್ಕಳು ಹೈರಾಣು!
ಚೀನಾದ ನ್ಯಾಯಾಲಯಗಳು ಮಕ್ಕಳ ಹಿತದೃಷ್ಟಿಯಿಂದ ಪಾಲನೆ ನಿರ್ಧರಿಸುತ್ತವೆ. ಸಾಮಾನ್ಯವಾಗಿ ತಾಯಿಗೆ ಪಾಲನೆ ನೀಡಲಾಗುತ್ತದೆ. ಆದರೆ, ಕೆಲವು ಸಂದರ್ಭಗಳಲ್ಲಿ ಪಾಲನೆ ಮಾಡುವ ಪೋಷಕರ ಸಾಮರ್ಥ್ಯವನ್ನೂ ಪರಿಗಣಿಸಲಾಗುತ್ತದೆ. ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಷಾವೋ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದರೂ ಅದನ್ನು ತಿರಸ್ಕರಿಸಲಾಯಿತು. ಮಕ್ಕಳಿಗೆ 18 ವರ್ಷ ತುಂಬುವವರೆಗೆ ಅವರ ಪಾಲನೆಗೆ ಹಣ ನೀಡಬೇಕೆಂದು ಷಾವೋಗೆ ನ್ಯಾಯಾಲಯ ಸೂಚಿಸಿದೆ.
ಜಾಗತಿಕವಾಗಿ ಪುರುಷ ಪ್ರಧಾನ ವ್ಯವಸ್ಥೆಯೇ ಎಲ್ಲೆಡೆ ಜೀವಂತವಾಗಿದೆ. ಇದೀಗ ಪಾವೋ ಮತ್ತಿ ಜೀ ದಾಂಪತ್ಯದ ವಿಚ್ಛೇದನ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕ್ಷುಲ್ಲಕ ಕಾರಣಕ್ಕೆ ಕುಟುಂಬವನ್ನು ಒಡೆದ ಷಾವೋನನ್ನು ಹಲವರು ಟೀಕಿಸಿದ್ದಾರೆ. ಮಕ್ಕಳ ಪಾಲನೆ ತಾಯಿಗೆ ನೀಡಿದ ನ್ಯಾಯಾಲಯದ ತೀರ್ಪನ್ನು ಜನರು ಶ್ಲಾಘಿಸಿದ್ದಾರೆ. ಚೀನಾದಲ್ಲಿ ಪಾರಂಪರಿಕ ಪದ್ಧತಿಯನ್ನು ಮೀರಿ ಮಕ್ಕಳಿಗೆ ತಮ್ಮ ಮನೆತನದ ಹೆಸರಿಡುವ ಮಹಿಳೆಯರ ಸಂಖ್ಯೆ ಹೆಚ್ಚುತ್ತಿದೆ ಎಂದು ವರದಿಗಳು ಹೇಳುತ್ತಿವೆ.
ಇದನ್ನೂ ಓದಿ: ಅಮ್ಮನಿಗೆ ಮಗನ ಮೇಲೆ ಯಾಕಿಷ್ಟು ಪ್ರೀತಿ? ಈ ಗಾಢ ಸಂಬಂಧ ವಿಶೇಷತೆ ಏನು?