Asianet Suvarna News Asianet Suvarna News

ಮಕ್ಕಳಿಗಾಗಿ ಮೀಸಲಿಡುವ ಹಿರಿಜೀವಗಳ ಕೊನೆಗಾಲದಲ್ಲಿ ನಾವೆಷ್ಟುಆಸರೆಯಾಗುತ್ತೇವೆ?

ಸಮಯ ಕೊಡಬೇಕಾದಾಗ ಹೊತ್ತಲ್ಲಿ ಕೊಡದೇ ಇದ್ದರೆ ಆಮೇಲೆ ಬೇಕೆಂದರೂ ಕೊಡಲಾಗುವುದಿಲ್ಲ. ಅವನ ಇರುವು ನನ್ನನ್ನೆಂದೂ ಕಾಡಿಲ್ಲ, ಇಟ್‌ ವಾಸ್‌ ನಾಟ್‌ ಅ ಮ್ಯಾಟರ್‌ ಅಟ್‌ಆಲ್‌. ಆದರೆ ಈಗ ಅವನ ಇಲ್ಲದಿರುವಿಕೆ ಬಹುವಾಗಿ ಕಾಡುತ್ತೆ. ಜೀವನ ಮುಗಿಸಿದ ಅಜ್ಜನ ನೆನಪು ಕಾಡಿದಾಗ...

How younger generation is taking care of older ones
Author
Bengaluru, First Published Jan 29, 2020, 5:13 PM IST

-ವಿಭಾ ಡೋಂಗ್ರೆ

ಏ ಪುಟ್ಟೀ... ಒಂದ್‌ ಬೀಡಿ ಹಚ್‌ಕೊಡೆ.. ಅಜ್ಜ ಕಫ ತುಂಬಿದ ಕೊರಕು ಧ್ವನಿಯಲ್ಲಿ ಕೂಗುತ್ತಿದ್ದ. ಈ ಪುಟ್ಟಿನಾನೋ-ಅಕ್ಕನೋ ಎನ್ನುವ ಡಿಸಿಷನ್‌ನಲ್ಲೇ ಒಂದರ್ಧ ನಿಮಿಷ ಕಳೀತಿತ್ತು. ಅಷ್ಟರಲ್ಲಿ ಅಜ್ಜ ಇನ್ನೊಮ್ಮೆ ಕ್ಯಾಕರಿಸಿ ಕೆಮ್ಮಿ ಪುಟ್ಟೀೕೕೕೕ ಎಂದಿರುತ್ತಿದ್ದ. ಈಗ ಇಬ್ಬರೂ ಓಡಿ, ಬೀಡಿ ಹಚ್ಚಿ ಅವನ ಬಾಯಿಗಿಟ್ಟು ಕೆಮ್ಮು ನಿಲ್ಲಿಸುತ್ತಿದ್ದೆವು. ಅವನೋ ಹಾ...ಇದು ಕೊನೇ ಬೀಡಿ ಕಣ್ರೇ ಎನ್ನುವ ಮೋಸ್ಟ್‌ ಕಾಮನ್‌ ಡೈಲಾಗ್‌ನೊಂದಿಗೆ ಹೊಗೆ ಉಗುಳುತ್ತಿದ್ದ.

ನನ್ನ ಪಾಲಿಗೆ ಅಜ್ಜ ಒಬ್ಬ ಮಿಸ್ಟೀರಿಯಸ್‌ ಮ್ಯಾನ್‌. ಇವನ್ಯಾಕೆ ಹೀಗೆ ನಡಿತಾನೆ, ಅಪ್ಪ ಯಾಕೆ ಇವನೆದುರು ಇಷ್ಟುನಿಧಾನ ಮಾತಾಡ್ತಾನೆ, ಇವನಿಗ್ಯಾಕೆ ಸ್ಪೆಷಲ್‌ ಊಟ, ಇವನಿಗ್ಯಾಕೆ ಬಿಳಿಯ ಕೂದಲು ಹೀಗೆ ಚಿಕ್ಕಂದಿನಲ್ಲಿ ಅಜ್ಜ ಪ್ರಶ್ನೆಗಳ ಮೂಟೆಯಂತೆ ಭಾಸವಾಗ್ತಿದ್ದ. ನಿಧಾನವಾಗಿ ಅವನು ಅತ್ಯಗತ್ಯ ಅನಿಸೋಕೆ ಶುರುವಾದ.

ನಲ್ಮೆಯ ಮಾತಿಗೆ ಹಿರಿ ಹಿರಿ ಹಿಗ್ಗುವ ಜೀವಗಳು

ಅಜ್ಜ ನನ್ನ ಜೊತೆ ಕೆಲವೇ ವರ್ಷಗಳಿದ್ದರೂ, ಅದೆಷ್ಟೋ ನೆನಪಿನ ಸಸಿಗಳನ್ನ ಮನದೊಳಗೆ ನೆಟ್ಟು ಹೋದ. ಮನೆಯಲ್ಲಿ ಅವನಿಗಾಗಿಯೇ ಒಂದು ಕೋಣೆಯಿತ್ತು, ವಿಶೇಷ ಮಂಚವಿತ್ತು, ಒಂದು ಮೇಜು ಅದರ ಮೇಲೆ ಗೀತೆ, ಅಷ್ಟೋತ್ತರಗಳ ಕೆಲವು ಪುಸ್ತಕಗಳು ಹಾಗೂ ಆತನ ಅಸ್ತಿತ್ವವನ್ನೇ ಅವಿತುಕೊಂಡಂತಿದ್ದ ಊರಗಲ ತಾಂಬೂಲದ ತಟ್ಟೆ. ಆ ಕೋಣೆಯ ಹತ್ತಿರ ಸುಳಿದರೆ ಅವನ ಕಮಟು ಘಮಲು, ನೋವಿನೆಣ್ಣೆ-ದಾಲ್ಚಿನ್ನಿ ಎಣ್ಣೆಗಳ ವಾಸನೆಗಳ ಜೊತೆ ಮಿಳಿತಗೊಂಡು ಅದೇನೋ ಮೂಗಿಗೆ ಒಪ್ಪಿಯೂ ಒಪ್ಪದ ವಿಶೇಷ ಹವೆಯೊಂದನ್ನು ಸೃಷ್ಟಿಸುತ್ತಿದ್ದವು.

How younger generation is taking care of older ones

ಮಳೆಯಿರಲಿ ಬಿಸಿಲಿರಲಿ ಅಜ್ಜನದು ಒಂದೇ ಕಂಬಳಿ. ಅವನದೊಂದೇ ದಿನಚರಿ, ಆ ದಿನಚರಿಗೆ ಸಂಬಂಧ ಪಡದ ಯಾವ ಹೆಚ್ಚಿಗೆ ಕೆಲಸಗಳನ್ನು ಅಜ್ಜ ಮಾಡಿದ ಇತಿಹಾಸವಿಲ್ಲ. ಶಾಲೆಗೆ ಹೋಗುತ್ತಿದ್ದ ಎಲ್ಲಾ ಹೆಣ್ಣು ಮಕ್ಕಳಿಗೂ ಅಜ್ಜ ಡಿಸೈನ್‌ ಡಿಸೈನ್‌ ಗೊರಟೆ ಹೂವಿನ ಮಾಲೆಕಟ್ಟಿಮುಡಿಸಿಯೇ ಕಳಿಸುತ್ತಿದ್ದ. ಶಾಲೆಯಿಂದ ಬಂದು ಮೊಮ್ಮಕ್ಕಳು ಎಲ್ಲರೂ ಅಂಗಳದಲ್ಲಿ ಆಟವಾಡುವಾಗ, ಅಜ್ಜ ಎಲ್ಲರನ್ನೂ ಕಾಯುತ್ತಾ ಮರಿ ಹಾಕಿದ ಬೆಕ್ಕಿನಂತೆ ಜಗಲಿಯಲ್ಲಿ ಶತಪಥ ಸುತ್ತುತ್ತಿರುತ್ತಿದ್ದ. ಗಂಟೆ ಆರು ಆಯಿತೆಂದರೆ ಅಜ್ಜನದೊಂದು ಕೂಗು ‘ಹಾ... ಕೈಕಾಲ್‌ಮುಖ’... ಎಲ್ಲರೂ ತೆಪ್ಪಗೆ ಕೈ ಕಾಲ್ಮುಖ ತೊಳೆದು ದೇವರ ಮನೆಯೆದುರು ಕೂತು ಅಜ್ಜನಿಗೆ ಬಾಯಿಪಾಠ ಒಪ್ಪಿಸಬೇಕಾಗಿತ್ತು. ಎಲ್ಲರ ಹೋಮ್‌ ವರ್ಕ್ ಕೂಡ ಆತನೇ ಖುದ್ದಾಗಿ ಕೂತು ಮಾಡಿಸುತ್ತಿದ್ದ. ಅಜ್ಜ ಎಂದಿಗೂ ಬೈದವನಲ್ಲ, ಹೊಡೆದೂ ಇಲ್ಲ. ಆದರೂ ಅದ್ಯಾವುದೋಅಜ್ಞಾತ ಭಯ ಬಾಯಿಪಾಠ ಹೇಳುವಾಗ ಅಜ್ಜನೆದುರು ನಡುಗುವಂತೆ ಮಾಡುತ್ತಿದ್ದವು. ಮನೆಯ ಗಂಡು ಮಕ್ಕಳಂತೂ ಅಜ್ಜನ ದೆಸೆಯಿಂದ ಸ್ನಾನ ಸಂಧ್ಯಾವಂದನೆ ವಿಷಯಗಳಲ್ಲಿ ಸೋಂಬೆರಿತನ ತೋರಿಸುವಂತೆಯೇಇರಲಿಲ್ಲ. ಎಲ್ಲ ಆಚಾರಗಳೂ ಕಟ್ಟು ನಿಟ್ಟಾಗಿ ನಡೆಯುತ್ತಿದ್ದವು. ಆ ಮುಪ್ಪಿನಲ್ಲಿಯೂ ಗಂಟೆಗಟ್ಟಲೆ ಪದ್ಮಾಸನದಲ್ಲಿ ಕೂತುಅಜ್ಜ ಪ್ರವಚನ ಹೇಳುತ್ತಿದ್ದ.

ಹೂಳಲು ಸ್ಮಶಾನವಿಲ್ಲದೇ ವೃದ್ಧೆಯ ದೇಹದಾನ

ಇದಲ್ಲದೆ ಅಜ್ಜನಿಗೆ ಕಲೆ, ವಿನ್ಯಾಸಗಳ ಬಗ್ಗೆ ವಿಪರೀತ ಹುಚ್ಚಿತ್ತು. ನಮ್ಮಲ್ಲಿಯೂ ಅದನ್ನು ಬಿತ್ತುವ ಪ್ರಯತ್ನ ಮಾಡಿದ. ನಮ್ಮ ಅಡುಗೆ ಮನೆ ಆಟಕ್ಕಾಗಿಯೇ ಆತ ಅದೆಷ್ಟೋ ದಿನದ ಸಮಯ, ತಾಳ್ಮೆ ವ್ಯಯಿಸಿ ತಟ್ಟೆ, ಲೋಟ, ಸೌಟು, ಚಮಚ, ಡೈನಿಂಗ್‌ ಟೇಬಲ್‌, ಸೋಫಾ, ಕುರ್ಚಿ ಹೀಗೆ ಇಡೀ ಒಂದು ಮನೆಯ ಅಗತ್ಯ ವಸ್ತುಗಳನ್ನು ಬಳಪದ ಕಲ್ಲಿನಲ್ಲಿನಲ್ಲಿ ಕೊರೆದು ಮಿನಿಯೇಚರ್‌ ಮಾಡಿಕೊಟ್ಟಿದ್ದ. ಅದೆಷ್ಟುವರ್ಷ ಆತನಿಗೆ ಜಯಕಾರ ಹಾಕಿ ಅದರಲ್ಲಿ ಆಟ ಆಡಿದ್ದೇವೆಯೋ. ಆತ ಅದೆಷ್ಟೋ ಕತೆ ಹೇಳಿದ, ನಮ್ಮದದೆಷ್ಟೋ ವ್ಯಥೆ ಕೇಳಿದ.

ಒಂದಷ್ಟುವರ್ಷದ ಬಳಿಕ ಕುಟುಂಬ ವಿಭಕ್ತವಾಯಿತು. ಅಜ್ಜ ನಮ್ಮ ಜೊತೆ ಬಂದ. ನಾವೂ ದೊಡ್ಡವರಾಗುತ್ತಿದ್ದೆವು. ಅಜ್ಜನ ಹುಮ್ಮಸ್ಸು ದಿನೇ ದಿನೇ ಕ್ಷೀಣಿಸುತ್ತಿತ್ತು. ನಮ್ಮ ಹೊರ ಜಗತ್ತಿನ, ಆಸೆಗಳ ಭ್ರಮೆಯ ಭರದಲ್ಲಿ ಅಜ್ಜ ಬಸವಳಿದದ್ದು ನಮಗೆ ಗೊತ್ತೇ ಆಗಲಿಲ್ಲ. ಆತನ ಬದುಕು, ಆತನ ಸಂತೋಷಗಳು ಎಲ್ಲಕ್ಕೂ ಕಾರಣ ನಾವಾಗಿದ್ದೆವು, ನಮಗದು ತಿಳಿಯಲೇ ಇಲ್ಲ. ಯಾವುದಾದರೂ ಖುಷಿಗೆ ಮನೆಯಲ್ಲಿ ಸಿಹಿ ಮಾಡಿದಾಗ ಬಟ್ಟಲಿಗೆ ಹಾಗಿ ಚಮಚ ಕೊಟ್ಟು ಬಿಡುತ್ತಿದ್ದೆ, ಕೂತು ತಿನ್ನಿಸುವ ಪ್ರಯತ್ನ ಮಾಡಲಿಲ್ಲ.

ಅಜ್ಜ ಬೇಜಾರು ಕಣೇ ಎಂದಾಗ ರೇಡಿಯೋ ಧ್ವನಿಯನ್ನುದೊಡ್ಡ ಮಾಡಿದೆನೇ ಹೊರತು, ಯಾರು ಕಿರುಚಾಡಿ ಮಾತಾಡ್ತಾರೆ ಎನ್ನುವ ದುರಹಂಕಾರದ ಸ್ವಗತದೊಡನೆ ಸುಮ್ಮನಾಗಿ ಬಿಡುತ್ತಿದ್ದೆ.

ವೃದ್ಧರ ವೇತನಕ್ಕೆ ಆಧಾರ್ ಲಿಂಕ್, ಅನರ್ಹರ ಹೆಸರು ಡಿಲೀಟ್

97ರ ತುಂಬು ಜೀವನ ನಡೆಸಿ ಆತ ಹೊರಟುಬಿಟ್ಟ, ಜೊತೆಗೆ ತಾನು ರೂಢಿಸಿಟ್ಟಕೆಲವು ಶಿಸ್ತುಗಳನ್ನೂ ಒಯ್ದ. ಅವನ ಇರುವು ನನ್ನನ್ನೆಂದೂ ಕಾಡಿಲ್ಲ, ಇಟ್‌ ವಾಸ್‌ ನಾಟ್‌ ಅ ಮ್ಯಾಟರ್‌ ಅಟ್‌ಆಲ್‌. ಆದರೆ ಈಗ ಅವನ ಇಲ್ಲದಿರುವಿಕೆ ಬಹುವಾಗಿ ಕಾಡುತ್ತೆ. ಅವನ ಚೇರು, ಕಂಬಳಿ, ಜುಬ್ಬ, ಪಂಚೆ ಇನ್ನೂ ಅವನನ್ನು ಕಾಯುತ್ತವೆ. ಅವನ ಕೋಣೆಯಲ್ಲಿ ಆ ಘಮಲು ಇನ್ನೂ ಹಾಗೆ ಇದೆ. ಇವು ನನ್ನನ್ನು ಅವನ ಕೋಣೆಗೆಳೆದು ಒಮ್ಮೆ ಕೂತು ಹೋಗು ಅನ್ನೋದನ್ನು ಸೂಚಿಸ್ತವೆ. ಅವನ ಮೇಜಿಗೆ ಹಾಗೇ ಆತು ಯೋಚಿಸುವಾಗ, ತಮ್ಮ ಸರ್ವಸ್ವವನ್ನೂ ಮಕ್ಕಳ ಶ್ರೇಯೋಭಿವೃದ್ಧಿಗೆ ಮೀಸಲಿಡುವ ಹಿರಿಜೀವಗಳ ಕೊನೆಗಾಲದಲ್ಲಿ ನಾವೆಷ್ಟುಆಸರೆಯಾಗುತ್ತೇವೆ? ಈ ಪ್ರಶ್ನೆ ನನ್ನನ್ನು ಭಾವುಕಳನ್ನಾಗಿಸುತ್ತದೆ.

Follow Us:
Download App:
  • android
  • ios