Asianet Suvarna News Asianet Suvarna News

'ವೃದ್ಧಾಪ್ಯ ವೇತನಕ್ಕೆ ಆಧಾರ್‌ ಲಿಂಕ್‌, ಅನರ್ಹರ ಹೆಸರು ರದ್ದು'

ವೃದ್ಧಾಪ್ಯ ವೇತನಕ್ಕೆ ಆಧಾರ್‌ ಲಿಂಕ್‌, ಅನರ್ಹರ ಹೆಸರು ರದ್ದು| ನಕಲಿ ಫಲಾನುಭವಿಗಳ ಪತ್ತೆಗೆ ಕ್ರಮ| ಅರ್ಹರಿಗೆ ಸರ್ಕಾರದಿಂದಲೇ ನೆರವು

Aadhar Card Link To Old age pension in order to find the fake Beneficiaries says state revenue minister R Ashok
Author
Bangalore, First Published Dec 18, 2019, 7:25 AM IST

ಬೆಂಗಳೂರು[ಡಿ.18]: ವೃದ್ಧಾಪ್ಯ ವೇತನ ಯೋಜನೆಯಲ್ಲಿ ಸಾಕಷ್ಟುನಕಲಿ ಫಲಾನುಭವಿಗಳಿರುವ ಬಗ್ಗೆ ದೂರುಗಳಿವೆ. ಅಂತಹವರನ್ನು ಪತ್ತೆಹಚ್ಚಲು ಯೋಜನೆಯ ಎಲ್ಲ ಫಲಾನುಭವಿಗಳ ಖಾತೆಗೆ ಆಧಾರ್‌ ಜೋಡಣೆ ಮಾಡಲು ನಿರ್ಧರಿಸಲಾಗಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 60 ವರ್ಷ ವಯಸ್ಸಾಗದವರೂ ಕೂಡ ಸುಳ್ಳು ದಾಖಲೆಗಳನ್ನು ನೀಡಿ ವೃದ್ಧಾಪ್ಯ ಯೋಜನೆ ಪಡೆಯುತ್ತಿದ್ದಾರೆ. ಇಂತಹ ನಕಲಿ ಫಲಾನುಭವಿಗಳು ಲಕ್ಷಾಂತರ ಸಂಖ್ಯೆಯಲ್ಲಿದ್ದಾರೆ. ಇದರಿಂದ ಸರ್ಕಾರಕ್ಕೆ ಕೋಟ್ಯಂತರ ಹಣ ನಷ್ಟವಾಗುತ್ತಿದೆ ಎಂಬ ದೂರುಗಳಿವೆ. ಹೀಗಾಗಿ ವೃದ್ಧಾಪ್ಯ ವೇತನ ಫಲಾನುಭವಿಗಳ ಖಾತೆಗಳಿಗೆ ಆಧಾರ್‌ ಜೋಡಣೆ ಮಾಡಿ ನಕಲಿ ಫಲಾನುಭವಿಗಳನ್ನು ಪತ್ತೆಹಚ್ಚಿ ಯೋಜನೆಯಿಂದ ಕೈಬಿಡಲಾಗುವುದು ಎಂದರು.

ಕಂದಾಯ ಇಲಾಖೆಯ ಯೋಜನೆಗಳಲ್ಲಿ ಸಾಕಷ್ಟುಸುಧಾರಣಾ ಕ್ರಮಗಳನ್ನು ತರಲು ಕ್ರಮ ವಹಿಸಲಾಗುತ್ತಿದೆ. ಇದರ ಅಂಗವಾಗಿ ಮುಂದಿನ ದಿನಗಳಲ್ಲಿ ವೃದ್ಧಾಪ್ಯ ವೇತನಕ್ಕೆ ಅರ್ಜಿ ಆಹ್ವಾನಿಸದೆ, ಆಧಾರ್‌ ಮಾಹಿತಿ ಆಧರಿಸಿ 60 ವರ್ಷ ಮೀರಿದ ಅರ್ಹ ಫಲಾನುಭವಿಗಳಿಗೆ ಇಲಾಖೆಯಿಂದಲೇ ಪತ್ರ ಬರೆದು ತಾವು ವೃದ್ಧಾಪ್ಯ ವೇತನಕ್ಕೆ ಅರ್ಹರಾಗಿದ್ದೀರಿ ಎಂದು ಮಾಹಿತಿ ನೀಡಲಾಗುವುದು. ಅವರು ಯೋಜನೆಯ ಫಲಾನುಭವಿಯಾಗಲು ಒಪ್ಪಿದರೆ ಸೇರ್ಪಡೆಗೊಳಿಸಲಾಗುತ್ತದೆ. ಈ ಸಂಬಂಧ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಇದಕ್ಕೆ ಅವರು ಒಪ್ಪಿದ್ದಾರೆ ಎಂದರು.

ಕೇಂದ್ರಕ್ಕೆ ನೆರೆ ಪರಿಹಾರಕ್ಕಾಗಿ ಮನವಿ:

ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ 2ನೇ ಕಂತಿನ ನೆರೆ ಪರಿಹಾರ ಹಣವನ್ನು ಶೀಘ್ರ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗುವುದು ಎಂದು ಇದೇ ವೇಳೆ ಸಚಿವ ಅಶೋಕ್‌ ತಿಳಿಸಿದರು.

ಮುಖ್ಯಮಂತ್ರಿ ಅವರು ಇಷ್ಟರಲ್ಲೇ ದಿಲ್ಲಿಗೆ ಹೋಗಲಿದ್ದು, ಆ ವೇಳೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಿ ಎರಡನೇ ಕಂತಿನ ನೆರೆ ಪರಿಹಾರ ನೀಡುವಂತೆ ಮನವಿ ಮಾಡಲಿದ್ದಾರೆ. ಇದೇ ವೇಳೆ, ಅಕ್ಟೋಬರ್‌ ತಿಂಗಳಲ್ಲಿ ಅತಿವೃಷ್ಟಿ, ನೆರೆಯಿಂದ ಆದ ನಷ್ಟದ ಬಗ್ಗೆಯೂ ಕೇಂದ್ರಕ್ಕೆ ವರದಿ ಸಲ್ಲಿಸಲಿದ್ದಾರೆ ಎಂದರು.

ಸರ್ಕಾರ ಸಮರೋಪಾದಿಯಲ್ಲಿ ನೆರೆ ಸಂತ್ರಸ್ತರಿಗೆ ಮನೆ ಕಟ್ಟಿಕೊಡಲು ನಿರ್ಧರಿಸಿದೆ. ಈಗಾಗಲೇ ಮನೆ ಕಳೆದುಕೊಂಡವರಿಗೆ ತಲಾ ಒಂದು ಲಕ್ಷ ರು. ಬಿಡುಗಡೆ ಮಾಡಿದ್ದು, 2ನೇ ಕಂತಿನ ಹಣ ಬಿಡುಗಡೆಗೆ ಸಿದ್ಧವಾಗಿದೆ. ಹಾಗಾಗಿ ಸಂತ್ರಸ್ತರಿಗೆ ಮುಖ್ಯಮಂತ್ರಿ ಅವರ ಹೆಸರಲ್ಲೇ ಪತ್ರ ಬರೆದು ಆದಷ್ಟುಬೇಗ ಮನೆ ಕಟ್ಟಿಕೊಳ್ಳುವ ಕಾರ್ಯ ಆರಂಭಿಸುವಂತೆ ತಿಳಿಸಲಿದೆ ಎಂದು ಸ್ಪಷ್ಟಪಡಿಸಿದರು.

ಸಾರ್ವಜನಿಕರ ಅದರಲ್ಲೂ ನೆರೆ ಸಂತ್ರಸ್ತ ಕುಟುಂಬಗಳ ಹಿತದೃಷ್ಟಿಯಿಂದ ಪೌತಿದಾರರ (ಮೃತಪಟ್ಟಿರುವ ಆಸ್ತಿಯ ಒಡೆಯ) ಹೆಸರಲ್ಲಿರುವ ಖಾತೆಗಳನ್ನು ಅವರ ಮಕ್ಕಳ ಹೆಸರಿಗೆ ಅಥವಾ ಸಂಬಂಧಿಸಿದವರ ಹೆಸರಿಗೆ ಖಾತೆ ಮಾಡುವ ಕಾರ್ಯವನ್ನು ಆಂದೋಲನದ ರೀತಿಯಲ್ಲಿ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

- ಆರ್‌.ಅಶೋಕ್‌, ಕಂದಾಯ ಸಚಿವ

Follow Us:
Download App:
  • android
  • ios