Asianet Suvarna News Asianet Suvarna News

Inter Caste Marraige: ಅಂತರ್ಜಾತಿ ವಿವಾಹವಾಗ್ಬೇಕಾ? ಮೊದ್ಲು ಪಾಲಕರ ಮನವೊಲಿಸಿ

ಪಾಲಕರನ್ನು ಒಪ್ಪಿಸಿ ಅಂತರ್ಜಾತಿ ಮದುವೆಯಾಗುವುದು ಸಾಧ್ಯವೇ ಇಲ್ಲ ಎನ್ನುವ ಸ್ಥಿತಿ ಇದೆ ಎನ್ನಲಾಗುತ್ತದೆ. ಆದರೆ, ಬಹಳಷ್ಟು ಪ್ರಕರಣಗಳಲ್ಲಿ ಸೂಕ್ತ ಮಾತುಕತೆಯ ಕೊರತೆಯಿಂದಾಗಿ ಗೊಂದಲ, ಗಲಾಟೆ ಆಗುವುದನ್ನು ಕಾಣುತ್ತೇವೆ. ಹಾಗಾಗಲು ಆಸ್ಪದ ನೀಡದೆ ಅವರೊಂದಿಗೆ ಶಾಂತಿಯುತ ಮಾತುಕತೆ ನಡೆಸಿ ನಿಮ್ಮ ಅಂತರ್ಜಾತಿ ವಿವಾಹಕ್ಕೆ ಅವರ ಮನವೊಲಿಸಿ. ಅವರ ಹಿಂಜರಿಕೆ ದೂರಮಾಡಿ.
 

How to deal with inter caste marriage situation with parents
Author
First Published Sep 30, 2022, 5:22 PM IST

ಭಾರತದ ಸಮಾಜದಲ್ಲಿ ಜಾತಿ ಪದ್ಧತಿ ಸಾಕಷ್ಟು ಆಳವಾಗಿ ಬೇರೂರಿದೆ. ಜೀವನದ ಬೇರೆ ಹಂತಗಳಲ್ಲಿ ಹೆಚ್ಚು ಸಮಸ್ಯೆ ಸೃಷ್ಟಿಸದ ಈ ಪದ್ಧತಿ ಪ್ರೀತಿ-ಪ್ರೇಮದ ವಿಚಾರದಲ್ಲಿ ಕೋಲಾಹಲ ಸೃಷ್ಟಿಸಿಬಿಡುತ್ತದೆ. ಅಂತರ್ಜಾತಿ ವಿವಾಹ ನಮ್ಮ ಸಮಾಜದಲ್ಲಿ ಈಗ ಸಾಮಾನ್ಯವಾಗಿದ್ದರೂ ಕುಟುಂಬಗಳು ಅದನ್ನು ಸಹಜವಾಗಿ ಒಪ್ಪಿಕೊಂಡಿಲ್ಲ. ಅದನ್ನೊಂದು ಕುಟುಂಬದ ಮರ್ಯಾದೆ ಪ್ರಶ್ನೆಯಾಗಿ ನೋಡುತ್ತವೆ. ಅಷ್ಟೇ ಏಕೆ? ಅದು ಹಲವು ರೀತಿಯ ಅಪರಾಧ ಪ್ರಕರಣಗಳಿಗೂ ಕಾರಣವಾಗುತ್ತಿದೆ. ಕೆಲವು ಕುಟುಂಬಗಳು ಬಿಲ್ಕುಲ್‌ ಅಂತರ್ಜಾತಿ ವಿವಾಹವನ್ನು ಒಪ್ಪಿಕೊಳ್ಳುವುದಿಲ್ಲ. ಮನೆಯ ಮಗನೋ, ಮಗಳೋ ತಮ್ಮ ಜಾತಿ ಹೊರತುಪಡಿಸಿ ಬೇರೆ ಜಾತಿಯವರನ್ನು ಇಷ್ಟಪಟ್ಟರೆ ಅದನ್ನು ವಿರೋಧಿಸುತ್ತಾರೆ. ಭಾವನಾತ್ಮಕವಾಗಿ ಬ್ಲ್ಯಾಕ್‌ ಮೇಲ್‌ ಮಾಡಿ ಅವರ ಸಂಬಂಧ ಮುರಿಯಲು ಯತ್ನಿಸುತ್ತಾರೆ. ಅಂತಹ ಸಮಯದಲ್ಲಿ ಅವರನ್ನು ಕನ್ವಿನ್ಸ್‌ ಮಾಡುವುದು ಸುಲಭವಲ್ಲ. ಪಾಲಕರ ಆಶೀರ್ವಾದದೊಂದಿಗೇ ಮದುವೆಯಾಗಿ ಜೀವನ ನಡೆಸಬೇಕೆಂದು ಆಸೆಪಡುವ ಎಷ್ಟೋ ಯುವಜನರ ಕನಸುಗಳು ಪಾಲಕರ ಈ ಧೋರಣೆಯಿಂದ ಮುರಿದುಬೀಳುತ್ತವೆ. ಒಂದೋ ಅವರನ್ನು ಎದುರಿಸಿ ಮದುವೆಯಾಗಬೇಕು, ಇಲ್ಲವೇ ಪರಸ್ಪರ ದೂರವಾಗಿ ಹಿಂಸೆ ಅನುಭವಿಸಬೇಕು ಎನ್ನುವ ಸ್ಥಿತಿ ನಿರ್ಮಾಣವಾಗುತ್ತದೆ. ಇದು ಜೀವನವಿಡೀ ಅವರನ್ನು ಹಲವು ವಿಧದಲ್ಲಿ ಕಾಡುತ್ತದೆ. ಪಾಲಕರಿಂದ ದೂರವಾಗುವುದೂ ಕಷ್ಟ, ಒಬ್ಬರನ್ನೊಬ್ಬರು ಬಿಟ್ಟು ಬಾಳುವುದೂ ಕಷ್ಟವಾಗಬಹುದು. 

ಅಂತರ್ಜಾತಿ (Inter Caste) ವಿವಾಹ (Marriage)ವಾಗುವುದಾದರೆ ಕೆಲವು ರೀತಿಯಲ್ಲಿ ಪ್ರಯತ್ನ (Try) ಪಡಬೇಕಾಗಿ ಬರುತ್ತದೆ. ಪ್ರಕರಣವನ್ನು ಭಾವನಾತ್ಮಕವಾಗಿ ತೆಗೆದುಕೊಂಡು, ಅತ್ತು-ಕರೆದು ಮಾಡದೆ ಜಾಣತನದಿಂದ ನಿಭಾಯಿಸಬೇಕಾಗುತ್ತದೆ. ಜನರ (People) ವಿಚಾರಗಳನ್ನು ಬದಲಿಸುವುದು ಕಷ್ಟದ ಕೆಲಸ. ಹೀಗಾಗಿ, ಕೆಲವು ಮಾರ್ಗೋಪಾಯಗಳನ್ನು ಅನುಸರಿಸಿ ಪಾಲಕರ (Parents) ಮನವೊಲಿಸಲು ಯತ್ನಿಸಬೇಕಾಗುತ್ತದೆ. ಅವರ ವಿಚಾರ (Thought) ಬದಲಿಸಲು ಸಮಯವೂ ಬೇಕಾಗುತ್ತದೆ.

•    ಒಳ್ಳೆಯ ಆರಂಭವಿರಲಿ (Good Start)
ನಿಮ್ಮ ಅಂತರ್ಜಾತಿಯ ವಿವಾಹದ ವಿಚಾರವನ್ನು ಮೊದಲು ಮನೆಯವರೊಂದಿಗೆ ಮಾತನಾಡಿ. ಅವರ ವಿಚಾರ ಏನಿದೆ ಎಂದು ಅರಿತುಕೊಳ್ಳಿ. ನಿಮ್ಮ ಸುತ್ತಮುತ್ತಲ ಅಂತರ್ಜಾತಿ ವಿವಾಹವಾಗಿ ಸಫಲ ಜೀವನ (Life) ನಡೆಸುತ್ತಿರುವವರ ಉದಾಹರಣೆ ನೀಡಿ. 

ಇದನ್ನೂ ಓದಿ: ಪ್ರೀತಿಸಿ ಮದುವೆಯಾದ ಯುವ ಪ್ರೇಮಿಗಳಿಗೆ ಜಾತಿ ಅಡ್ಡಿ: ರಕ್ಷಣೆಗಾಗಿ ಪೊಲೀಸರ ಮೊರೆ

•    ಬೆಂಬಲವಾಗಿ (Support) ನಿಲ್ಲಬಲ್ಲ ಸಂಬಂಧಿಗಳ (Relatives) ಸಹಕಾರ (Help) ಪಡೆದುಕೊಳ್ಳಿ
ಅಪ್ಪನಿಗೋ, ಅಮ್ಮನಿಗೋ ಸಮೀಪವರ್ತಿಗಳೊಂದಿಗೆ ಮೊದಲು ಮಾತನಾಡಿ. ಅವರ ಸಹಕಾರ ಪಡೆದುಕೊಳ್ಳಿ. ಪಾಲಕರೊಂದಿಗೆ ಮಾತನಾಡಲು ಅವರ ಬೆಂಬಲವಿದ್ದರೆ ಅನುಕೂಲ. ಮಾವ, ಚಿಕ್ಕಪ್ಪ, ದೊಡ್ಡಪ್ಪ, ಅಣ್ಣತಮ್ಮಂದಿರ ಸಹಕಾರ ಪಡೆದುಕೊಳ್ಳಿ.

•    ಪಾಲಕರ ಚಿಂತೆಯ ಬಗ್ಗೆ ಚರ್ಚೆ (Discuss) ಮಾಡಿ
ಸಹಜವಾಗಿ ಅಂತರ್ಜಾತಿ ವಿವಾಹ ಎಂದಾಕ್ಷಣ ಪಾಲಕರು ಚಿಂತೆಗೆ ಒಳಗಾಗುತ್ತಾರೆ. ಅದರ ಕುರಿತಾಗಿ ಮಾತನಾಡಿ. ಇಲ್ಲಿ ರೋಷಾವೇಶದ ಮಾತುಗಳು ಪ್ರಯೋಜನಕ್ಕೆ ಬರುವುದಿಲ್ಲ. ನಿಮ್ಮ ಆಶೀರ್ವಾದವಿಲ್ಲದೆ (Blessings) ಮದುವೆಯಾಗುವುದಿಲ್ಲ ಎಂದು ತಿಳಿಸಿ. ಪ್ರೇಮ ವಿವಾಹದ (Love Marriage) ಉತ್ತಮ ಅಂಶಗಳ ಕುರಿತು ಅವರಿಗೆ ಹೇಳಿ. ಹಾಗೆಯೇ, ಅವರು ಭವಿಷ್ಯದ (Future) ಬಗ್ಗೆ ಚಿಂತಿತರಾಗಿದ್ದರೆ ಅದರ ಬಗ್ಗೆಯೂ ಮಾತುಕತೆ ನಡೆಸಿ.

•    ಸರಿಯಾದ ಸಮಯದಲ್ಲಿ (Right Time) ವಿಷಯ ಪ್ರಸ್ತಾಪ ಮಾಡಿ
ಪಾಲಕರು ಖುಷಿಯಿಂದ ಇರುವಾಗ ಅಥವಾ ತುಂಬ ರಿಲ್ಯಾಕ್ಸ್‌ ಮೂಡಿನಲ್ಲಿರುವಾಗ ಅವರೊಂದಿಗೆ ಅಂತರ್ಜಾತಿ ವಿವಾಹದ ಬಗ್ಗೆ ಪ್ರಸ್ತಾಪಿಸಿ. 

ಇದನ್ನೂ ಓದಿ: ಅಂತರ್ಜಾತಿ ವಿವಾಹ, ಅಳಿಯನನ್ನೇ ಗುಂಡಿಕ್ಕಿ ಕೊಂದ ಮಾವ!

•    ಸಂಯಮವಿರಲಿ (Keep Cool)
ಈ ಸಮಯದಲ್ಲಿ ಹೆಚ್ಚು ಸಂಯಮ (Restraint) ಅಗತ್ಯ. ಜನರ ವಿಚಾರಧಾರೆ ಬದಲಿಸುವುದು ಸುಲಭವಲ್ಲ ಎನ್ನುವ ಅರಿವಿರಲಿ. ಪಾಲಕರು ಈ ಸಮಯದಲ್ಲಿ ಆಕಾಶ-ಭೂಮಿ ಒಂದು ಮಾಡಬಲ್ಲರು. ಭಾವನಾತ್ಮಕವಾಗಿ ಬ್ಲ್ಯಾಕ್‌ ಮೇಲ್‌ (Emotional Blackmail) ಮಾಡಬಲ್ಲರು. ಅವರ ಮೇಲೆ ನಿಮ್ಮ ವಿಚಾರ ಹೇರಲು ಸಾಧ್ಯವಿಲ್ಲ. ಹೀಗಾಗಿ, ನಿಮ್ಮ ಮಾತು, ನಡತೆ ಮೇಲೆ ಸಂಯಮ ಇರಬೇಕು. ಅವರ ಧೋರಣೆ ಒಪ್ಪಿಕೊಳ್ಳದೆ ಇದ್ದರೂ ಅದನ್ನು ಕೋಪದಿಂದ ತಿಳಿಸಬೇಕಾಗಿಲ್ಲ. ನಿಮ್ಮಲ್ಲಿ ಸ್ಪಷ್ಟತೆ (Clarity) ಇರಲಿ ಹಾಗೂ ಅವರ ತಿರಸ್ಕಾರವನ್ನು (Rejestion) ಸ್ವೀಕಾರ ಮಾಡುವ ಸ್ಥಿರತೆ ಇರಲಿ. ಸಮಾಜ (Society) ಅಂತರ್ಜಾತಿ ವಿವಾಹವನ್ನು ಒಪ್ಪಿಕೊಳ್ಳುತ್ತಿದೆ ಎನ್ನುವುದನ್ನು ಅವರಿಗೆ ಮನದಟ್ಟು ಮಾಡಿಕೊಡಬೇಕು, ಏಕೆಂದರೆ,  “ಸಮಾಜದೆದುರು ಮರ್ಯಾದೆ ಹೋಯಿತುʼ ಎನ್ನುವಂತೆ ಭಾವಿಸುತ್ತಾರೆ. ನೀವು ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದರೆ ಅಂತರ್ಜಾತಿ ವಿವಾಹ ಮಾಡಿಕೊಳ್ಳುವುದು ಕಷ್ಟವೇನಲ್ಲ.

Follow Us:
Download App:
  • android
  • ios