26 ವರ್ಷದ ಯುವತಿಯೊಬ್ಬರು ಅಜ್ಜ ಅಜ್ಜಿ ಪ್ರೀತಿಯನ್ನು ತೋರಿಸುವ ವೀಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ಈ ವೀಡಿಯೋ ಈಗ ಸಖತ್ ವೈರಲ್ ಆಗಿದ್ದು, ನೆಟ್ಟಿಗರನ್ನು ಭಾವುಕರನನ್ನಾಗಿಸಿದೆ.
ಪೋಷಕರಿಗೆ ಅಜ್ಜ ಅಜ್ಜಿಗೆ ಮಕ್ಕಳು ಎಷ್ಟು ದೊಡ್ಡವರಾದರೂ ಅವರಿನ್ನೂ ಸಣ್ಣವರೇ ಅಜ್ಜ ಅಜ್ಜಿಯಂತೂ ಮೊಮ್ಮಕ್ಕಳು ಬೆಳೆದು ದೊಡಡವರಾಗಿ ದುಡಿಮೆ ಶುರು ಮಾಡಿದ್ದರೂ ಅವರನ್ನು ಪುಟ್ಟ ಮಕ್ಕಳಂತೆ ಕೇರ್ ಮಾಡುತ್ತಾರೆ. ಮೊಮ್ಮಕ್ಕಳು ಲಕ್ಷದಲ್ಲಿ ಸಂಪಾದನೆ ಮಾಡುತ್ತಿದ್ದರೂ ಅಜ್ಜಿ ಮನೆಗೆಂದು ಮಕ್ಕಳು ಬಂದಾಗ ಅವರ ಕೈನಲ್ಲಿ ತಮ್ಮ ಬಳಿ ಇದ್ದ 100, 200 500 ನೋಟುಗಳನ್ನು ಅವರ ಕೈಗೆ ಯಾರಿಗೂ ಕಾಣದಂತೆ ಮೆಲ್ಲನೆ ಕೈಗೆ ಇಟ್ಟು ತಿಂಡಿ ತಿನ್ಕೊ ಜೋಪಾನವಾಗಿ ತೆಗೆದಿಟ್ಟುಕೋ ಎಂದು ಹೇಳುತ್ತಾರೆ. ಬೇಸಗೆ ರಜೆಯಲ್ಲಿ ಅಜ್ಜಿ ಮನೆಗಳಿಗೆ ಹೋಗುತ್ತಿದ್ದರೆ ನಿಮಗಿದರ ಅನುಭವ ಆಗಿರಬಹುದು. ಅದೇ ರೀತಿ ಇಲ್ಲೊಬ್ಬರು 26 ವರ್ಷದ ಯುವತಿಯೊಬ್ಬರು ತಾನು ಇಷ್ಟು ದೊಡ್ಡವಳಾದ ಮೇಲೂ ತನ್ನನ್ನು ತನ್ನ ಅಜ್ಜ ಅಜ್ಜಿ ಪುಟ್ಟ ಹುಡುಗಿಯಂತೆ ಹೇಗೆ ನೋಡುತ್ತಿದ್ದಾರೆ ಎಂಬುದನ್ನು ತೋರಿಸುವ ವೀಡಿಯೋವೊಂದನ್ನು ಹಂಚಿಕೊಂಡಿದ್ದು, ಆ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಅಂದಹಾಗೆ ಇನ್ಸ್ಟಾಗ್ರಾಮ್‌ನಲ್ಲಿ ಅದ್ವಾನ್ ಕಪೂರ್ ಎಂಬ ಯುವತಿ ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದು, ನಿಜವಾಗಿಯೂ ಅಜ್ಜ ಅಜ್ಜಿ(grand parents) ತುಂಬಾ ಕ್ಯೂಟ್ ಎಂದು ಬರೆದುಕೊಂಡಿದ್ದಾರೆ. ವೀಡಿಯೋದಲ್ಲಿ ಅವರ ಅಜ್ಜಿ ತಾತ ಅವರನ್ನು ನೋಡಲು ಬಂದ ಮೊಮ್ಮಗಳಿಗಾಗಿ ಹತ್ತಿರ ಬೇಕರಿಯಲ್ಲಿ ತಿಂಡಿ ತಿನಿಸುಗಳನ್ನು ಖರೀದಿಸಿ ಆಕೆಯ ಕೈಗೆ ನೀಡುವುದನ್ನು ಕಾಣಬಹುದಾಗಿದೆ. ಜೊತೆಗೆ ವೀಡಿಯೋದ ಮೇಲೆ ಅವರು ಹೀಗೆ ಬರೆದಿದ್ದಾರೆ. ಅವರನ್ನು ನೋಡಲು ಹೋದ ವೇಳೆ ನನ್ನ ಅಜ್ಜ ಅಜ್ಜಿ ನನ್ನನ್ನು ಸಮೀಪದ ದಿನಸಿ ಅಂಗಡಿಗೆ ಕರೆದೊಯ್ಯುತ್ತಿದ್ದಾರೆ. ಸ್ನ್ಯಾಕ್ಸ್ ಕೊಡಿಸುವುದಕ್ಕಾಗಿ... ಎಂದು ಬರೆದು ಬ್ರಕೆಟ್‌ನಲ್ಲಿ (ತಾನು 26 ವರ್ಷದ ಕೆಲಸ ಮಾಡುವ ಮಹಿಳೆ ಎಂದು ಅವರು ಮಾಹಿತಿ ನೀಡಿದ್ದಾರೆ.)
ವೀಡಿಯೋದಲ್ಲಿ ಆಕೆಯ ಅಜ್ಜ ಹಾಗೂ ಅಜ್ಜಿ ಮೊಮ್ಮಗಳಿಗಾಗಿ ಶಾಪೊಂದರಲ್ಲಿ ತಿನಿಸುಗಳನ್ನು ಖರೀದಿಸಿ ತೊಟ್ಟೆಯೊಂದರಲ್ಲಿ ತುಂಬಿಸಿ ಆಕೆಯ ಕೈಗೆ ನೀಡುತ್ತಾರೆ. ಜೊತೆಗೆ ನಡುಗುವ ಕೈಗಳಿಂದ ಅವರು ಮೊಮ್ಮಗಳ ಕೈ ಹಿಡಿದುಕೊಂಡು ನಡೆಯುತ್ತಿರುವುದು ವೀಡಿಯೋದಲ್ಲಿ ಸೇರೆ ಆಗಿದೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ವೀಡಿಯೋ ನೋಡಿದ ಅನೇಕರು ಭಾವುಕರಾಗಿದ್ದಾರೆ. ಅನೇಕರು ಅಜ್ಜ ಅಜ್ಜಿಯ ಜೊತೆ ತಾವು ಕಳೆದ ಸಮಯವನ್ನು ನೆನೆದು ಭಾವುಕರಾಗಿದ್ದಾರೆ. ಮತ್ತೆ ಕೆಲವರು ತಮ್ಮ ಅನುಭವವನ್ನು ಹೇಳಿಕೊಂಡಿದ್ದಾರೆ.
ನನಗೀಗ 26 ವರ್ಷ ಕಳೆದ ಫೆಬ್ರವರಿಯಲ್ಲಿ ಅಜ್ಜಿಯನ್ನು ಕಳೆದುಕೊಂಡೆ, ನಾನು ಅಜ್ಜಿ ಮನೆಗೆ ಹೋದಾಗ ಏನಾದರೂ ತಗೋ ಅಂತ ಅಜ್ಜಿ ನನಗೆ ದುಡ್ಡು ಕೊಡುತ್ತಿದ್ದರೂ ಈಗ ಅಜ್ಜಿ ಇಲ್ಲದೇ ಎಲ್ಲವೂ ಖಾಲಿ ಖಾಲಿ ಎನಿಸುತ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ನನ್ನ ಅಜ್ಜನೂ ಹೀಗೆ ಮಾಡುತ್ತಿದ್ದರೂ ಅವರು ತುಂಬಾ ಶ್ರೇಷ್ಟರೂ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಅವರ ಪಾಲಿಗೆ ನಾವಿನ್ನೂ ಚಿಕ್ಕವರೇ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ನಾನು ಬರುತ್ತಿದ್ದೇನೆ ಎಂದು ಅಜ್ಜಿಗೆ ಗೊತ್ತಾಗುತ್ತಿದ್ದಂತೆ ಅವರು ಮನೆಯಲ್ಲಿರುವ ತಿಂಡಿಗಳು ಹಣ್ಣುಗಳನ್ನು ತೆಗೆದಿಡಲು ಶುರು ಮಾಡುತ್ತಾರೆ ಎಂದು ಒಬ್ಬರು ತಮ್ಮಜ್ಜಿಯ ಪ್ರೀತಿಯನ್ನು ಸ್ಮರಿಸಿದ್ದಾರೆ. ಮತ್ತೆ ಕೆಲವರು ಅಯ್ಯೋ ನನ ಅಜ್ಜ ಅಜ್ಜಿನೂ ಇರಬೇಕಿತ್ತು. ಅವರೂ ಹೀಗೆ ಮಾಡುತ್ತಿದ್ದರೂ ಎಂದು ತಮ್ಮ ಅಗಲಿದ ಅಜ್ಜ ಅಜ್ಜಿಯ ನೆನಪು ಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋ ಸಖತ್ ವೈರಲ್ ಆಗಿದ್ದು ನೋಡುಗರನ್ನು ಭಾವುಕರನ್ನಾಗಿಸಿದೆ.
