ತನ್ನ ಮಾಜಿ ಪ್ರೇಯಸಿಯ ಇನ್‌ಸ್ಟಾಗ್ರಾಮ್ ಫೋಟೋಗೆ ಲೈಕ್ ಮಾಡಿದ್ದಕ್ಕೆ ಕೋಪಗೊಂಡ ಯುವತಿಯೊಬ್ಬಳು, ತನ್ನ ಹಾಲಿ ಪ್ರಿಯಕರನಿಗೆ ಸೇರಿದ ನಾಲ್ಕು ಲಕ್ಷ ರೂಪಾಯಿ ಮೌಲ್ಯದ ರಾಯಲ್ ಎನ್‌ಫೀಲ್ಡ್ ಬೈಕನ್ನು ಮಾರಾಟ ಮಾಡಿದ್ದಾಳೆ. ಈ ಘಟನೆಯಿಂದ ಆಘಾತಕ್ಕೊಳಗಾದ ಯುವಕ, ಪ್ರೇಯಸಿಯ ಭಯದಿಂದ ಪೊಲೀಸ್ ದೂರು ನೀಡಲೂ ಸಾಧ್ಯವಾಗದೆ ಅಸಹಾಯಕನಾಗಿದ್ದಾನೆ.

ಲವ್​, ಬ್ರೇಕ್​ ಅಪ್​ ಅನ್ನೋದು ಈಗಿನ ಮಾತಲ್ಲ. ತಲೆತಲಾಂತರಗಳಿಂದಲೂ ಇದು ನಡೆದೇ ಇದೆ. ಗಂಡು ಹೆಣ್ಣಿನ ನಡುವೆ ಆಕರ್ಷಣೆ, ಅದು ಪ್ರೀತಿ ಎಂದು ಮೊದಲು ತಿಳಿಯುವುದು, ಆಮೇಲೆ ಬೋರ್​ ಆದ್ಮೇಲೆ ಬಿಡುವುದು, ಇನ್ನೊಬ್ಬರ ಜೊತೆ ಹೋಗುವುದು, ಹೀಗೆ ಹೋದ ಸಿಟ್ಟಿಗೆ ಸೇಡಿನ ಭರದಲ್ಲಿ ಅನಾಹುತ ಸೃಷ್ಟಿಸುವುದು, ಜೈಲಿಗೆ ಹೋಗುವುದು ಇಲ್ಲವೇ ಪರಾರಿಯಾಗಿ ತಲೆ ಮರೆಸಿಕೊಳ್ಳುವುದು... ಇವೆಲ್ಲವೂ ಹಿಂದಿನಿಂದಲೂ ನಡೆಯುತ್ತಿದ್ದು, ಇದಕ್ಕೆ ಕೊನೆಯೇ ಇಲ್ಲ ಎನ್ನಿ. ಪ್ರೀತಿ, ಪ್ರೇಮ, ಬ್ರೇಕಪ್ ವಿಷ್ಯ ಬಂದಾಗ ಇವತ್ತಿನ ಮಕ್ಕಳೇ ಸರಿಯಿಲ್ಲ ಎನ್ನುವುದು ಆ ಕಾಲದಿಂದಲೂ ಹೇಳಿಕೊಂಡು ಬರಲಾಗಿದೆ.

ಸೋಷಿಯಲ್​ ಮೀಡಿಯಾ ಯುಗ

ಆದರೆ, ಸೋಷಿಯಲ್​​ ಮೀಡಿಯಾ ಯುಗ ಇದಾಗಿರುವ ಕಾರಣ, ಹಿಂದಿನ ಪ್ರೇಮಿಯ ಮೇಲೆ ಇನ್ನೂ ಆಕೆನೋ, ಆತನೋ ಲವ್​ ಇಟ್ಟುಕೊಂಡಿದ್ದಾನಾ ಎನ್ನುವುದು ತಿಳಿಯುವುದು ಹಾಲಿ ಪ್ರೇಮಿಗಳಿಗೆ ಸ್ವಲ್ಪ ಸಲೀಸಾಗಿದೆ ಅಷ್ಟೇ. ಮಾಜಿ ಪ್ರಿಯತಮನೋ, ಪ್ರೇಯಸಿಯೋ ಯಾವುದಾದರೂ ಫೋಟೋ ಶೇರ್​ ಮಾಡಿದಾಗ, ಮನಸ್ಸು ನಿಲ್ಲದೇ ಒಂದೇ ಒಂದು ಲೈಕ್​ ಒತ್ತಿದರೆ ಎಷ್ಟೋ ಬಾರಿ ಅದೇ ಭಯಾನಕ ಘಟನೆಗಳಿಗೂ ಕಾರಣ ಆಗಬಹುದು. ಆದ್ದರಿಂದ ಎಕ್ಸ್​ಗಳ ಜಾಲತಾಣದಲ್ಲಿ ಲೈಕ್​ ಒತ್ತುವ ಮುನ್ನ ತುಂಬಾ ಎಚ್ಚರಿಕೆಯಿಂದ ಇರಬೇಕು ಎಂದು ಈ ಘಟನೆ ತೋರಿಸಿದೆ.

ಎಕ್ಸ್​ ಗರ್ಲ್​ಫ್ರೆಂಡ್​ ಫೋಟೋಗೇ ಲೈಕ್​

ಇದರಲ್ಲಿ ಯುವತಿಯೊಬ್ಬಳು ತನ್ನ ಬಾಯ್​ಫ್ರೆಂಡ್​, ಆತನ ಎಕ್ಸ್​ ಗರ್ಲ್​ಫ್ರೆಂಡ್​ ​ಹಾಕಿದ ಇನ್​ಸ್ಟಾಗ್ರಾಮ್​ ಫೋಟೋಗೆ ಲೈಕ್ ಒತ್ತಿದ್ದರಿಂದ ಅವಾಂತರವಾಗಿದೆ. ಹಾಗೆಂದು ಪುಣ್ಯಕ್ಕೆ ಆತನ ಜೀವ ತೆಗೆದಿಲ್ಲ ಅಷ್ಟೇ. ಆದರೆ ಆತನ ಜೀವವಾಗಿದ್ದ ದುಬಾರಿ ಅಂದರೆ ಸುಮಾರು ನಾಲ್ಕು ಲಕ್ಷ ರೂಪಾಯಿ ಬೆಲೆ ಬಾಳುವ ಬೈಕ್​​ ಅನ್ನು ಮಾರಾಟ ಮಾಡಿದ್ದಾಳೆ! ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ 650 (Royal Enfield Continental GT 650)​ ಬೈಕ್ ಅನ್ನು ಮಾರಿ ಸೇಡು ತೀರಿಸಿಕೊಂಡಿದ್ದಾಳೆ.

ಪೊಲೀಸ್​ ಕಂಪ್ಲೇಂಟ್​

ತನ್ನ ಬೈಕ್​ ಕಾಣೆಯಾಗಿದ್ದನ್ನು ನೋಡಿ ಶಾಕ್​ ಆದ ಯುವಕ ಇನ್ನೇನು ಪೊಲೀಸ್​ ಕಂಪ್ಲೇಂಟ್​ ಕೊಡುವುದರಲ್ಲಿದ್ದ. ಕಂಪ್ಲೇಂಟ್​ ಕೊಟ್ಟರೆ ಕೆಲಸ ಕೆಡುತ್ತದೆ ಎಂದು ಹಾಲಿ ಪ್ರೇಯಸಿ ಇರುವ ವಿಷಯವನ್ನು ತಿಳಿಸಿದ್ದಾಳೆ. ಪಾಪ ಆ ಯುವಕನಿಗೆ ಏನು ಮಾಡಬೇಕು ಎನ್ನೋದೇ ತಿಳಿಯದಾಗಿದೆ. ಏಕೆಂದರೆ ಹಾಲಿಯನ್ನು ಪಕ್ಕದಲ್ಲಿ ಇಟ್ಟುಕೊಂಡು ಮಾಜಿಯ ಫೋಟೋಗೆ ಲೈಕ್​ ಮಾಡುವುದಕ್ಕಿಂತ ದೊಡ್ಡ ಅಪರಾಧ ಬೇರೊಂದಿಲ್ಲವಲ್ಲ. ಅದಕ್ಕೇ ಆತ ಬಾಯಿ ಮುಚ್ಕೊಂಡು ಸುಮ್ಮನಾಗಿದ್ದಾನೆ! ಇದರ ಸುದ್ದಿ ವೈರಲ್​ ಆಗುತ್ತಲೇ, ಮಾಜಿ ಪ್ರೇಮಿಗಳ ಜೊತೆ ಸಂಬಂಧ ಮುಂದುವರಿಸಿದ್ರೆ ಹೀಗೆ ಖುಲ್ಲಂ ಖುಲ್ಲಾ ಲೈಕ್ ಒತ್ತಬೇಡಿ, ಒಂದು ವೇಳೆ ಲೈಕ್ ಇದಾಗಲೇ ಒತ್ತಿದ್ರೆ ಅನ್​ಲೈಕ್​ ಮಾಡಿಬಿಡಿ ಎಂದು ನೆಟ್ಟಿಗರು ಸಲಹೆ ಕೊಡುತ್ತಿದ್ದಾರೆ!