ಪ್ರೀತಿಸಿದ ಹುಡುಗಿ ಬೇರೆಯವನನ್ನು ಮದ್ವೆಯಾಗ್ತಿದ್ದಾಳೆ, ಖಿನ್ನತೆಗೆ ಒಳಗಾಗಿದ್ದೇನೆ ಏನ್ಮಾಡ್ಲಿ ?
ಪ್ರೀತಿಯೆಂಬುದು ಒಂದು ಮಧುರ ಭಾವನೆ. ಅದು ಯಾರ ಮೇಲಾದರೂ, ಯಾವ ಕ್ಷಣದಲ್ಲಾದರೂ ಮೂಡಬಹುದು. ಆದರೆ ಪ್ರೀತಿ ಮಾಡಿ, ಜೊತೆಯಲ್ಲಿ ಸಮಯ ಕಳೆದು, ಪ್ರೀತಿಸಿದ ಹುಡುಗಿ ಇನ್ನೊಬ್ಬನನ್ನು ಮದ್ವೆಯಾಗ್ತಾಳೆ ಅಂದ್ರೆ ? ಆತನ ಜೀವನದಲ್ಲೂ ಆಗಿದ್ದು ಅದೇ. ಖಿನ್ನತೆಗೆ ಒಳಗಾದ ವ್ಯಕ್ತಿಯ ಸಮಸ್ಯೆ ತಜ್ಞರು ಏನ್ ಉತ್ತರ ಹೇಳಿದ್ದಾರೆ ತಿಳಿಯೋಣ.
ಪ್ರೀತಿ ಎಂಬುದು ಎಷ್ಟು ಸುಂದರ ಅನುಭೂತಿ. ಪದಗಳಲ್ಲಿ ಬಣ್ಣಿಸಲಾಗದ ಅದ್ಭುತ ಅನುಭವ. ಮತ್ತೊಂದು ಜೀವವನ್ನು ತನ್ನ ಜೀವದಂತೆಯೇ ಪ್ರೀತಿಸುವ ಪ್ರಕ್ರಿಯೆ. ಪ್ರೀತಿಯಲ್ಲಿದ್ದಾಗ ಲೋಕವೇ ಸುಂದರ ಎನ್ನುತ್ತಾರೆ. ಪ್ರೀತಿಗೆ ಬದುಕಿಗೆ ಅಷ್ಟು ಸುಂದರ ಬಣ್ಣಗಳನ್ನು ತುಂಬುತ್ತದೆ. ಆದ್ರೆ ಈ ಪ್ರೀತಿ ಯಾವಾಗಳು ಹಿತವಾಗಿರಬೇಕೆಂದೇನೂ ಇಲ್ಲ. ಪ್ರೀತಿ, ಕೆಲವೊಮ್ಮೆ ಇಡೀ ಜೀವನಕ್ಕೇ ಸಾಕಾಗುವ ನೋವನ್ನು ತಂದುಕೊಡುವ ವಿಚಾರವೂ ಹೌದು. ಯಾರ ಮೇಲಾದರೂ, ಯಾವ ಕ್ಷಣದಲ್ಲಾದರೂ ಮೂಡಬಹುದು. ಪ್ರೀತಿ ಮಾಡುವುದು ಚೆನ್ನಾಗಿರುತ್ತದೆ, ಪ್ರೀತಿಯಲ್ಲಿರುವುದು ಚೆನ್ನಾಗಿರುತ್ತದೆ. ಆದ್ರೆ ಪ್ರೀತಿಯಿಂದ ದೂರವಾಗುವುದು ಅಂದ್ರೆ ? ಪ್ರೀತಿಸುವುದನ್ನು ನಿಲ್ಲಿಸಲಾಗದೆ, ಪ್ರೀತಿಯನ್ನು ಗಳಿಸಲಾಗದೆ ಒದ್ದಾಡುವಂತಾಗುತ್ತದೆ. ಅಂಥಾ ಮನಸ್ಥಿತಿಯಲ್ಲಿರುವ ವ್ಯಕ್ತಿಯೊಬ್ಬರು ಏಷ್ಯಾನೆಸ್ ಸುವರ್ಣ ನ್ಯೂಸ್ ಜೊತೆ ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ.
ಪ್ರಶ್ನೆ: ನಾನು ಕಳೆದ 5 ವರ್ಷಗಳಿಂದ ಒಬ್ಬ ಹುಡುಗಿಯನ್ನು ಪ್ರೀತಿಸುತ್ತಿದ್ದೇನೆ. ಆದರೆ ಈಗ ಅವಳು ನನ್ನನ್ನು ಮದುವೆಯಾಗಲು ನಿರಾಕರಿಸುತ್ತಿದ್ದಾಳೆ. ಅವರ ಪೋಷಕರು ಪ್ರೀತಿಯನ್ನು ಒಪ್ಪಿಕೊಳ್ಳುವುದಿಲ್ಲ ಎಂಬ ಭಯದಿಂದ ಎಲ್ಲವನ್ನೂ ಮರೆತು ಬಿಡುತ್ತೇನೆ ಎನ್ನುತ್ತಾಳೆ. ಹೆತ್ತವರು ಹೇಳುವ ಹುಡುಗನನ್ನು ಮದುವೆಯಾಗುವುದಾಗಿ ಹೇಳುತ್ತಾಳೆ. ಅವಳು ನನ್ನನ್ನು ಮರೆತುಬಿಡಿ ಎಂದಿದ್ದಾಳೆ. ಆದರೆ, ನನಗೆ ಅವಳನ್ನು ಮರೆಯಲು ಸಾಧ್ಯವಿಲ್ಲ, ನನ್ನ ವೃತ್ತಿಯತ್ತ ಗಮನಹರಿಸಲು ನನಗೆ ಸಾಧ್ಯವಾಗುತ್ತಿಲ್ಲ, ಈಗ ಅವಳು ಮದುವೆಯಾಗುತ್ತಿದ್ದಾಳೆ, ನಾನು ಖಿನ್ನತೆಗೆ ಒಳಗಾಗಿದ್ದೇನೆ, ನಾನು ಏನು ಮಾಡಬೇಕೆಂದು ಅರ್ಥವಾಗುತ್ತಿಲ್ಲ. ಪರಿಹಾರ ತಿಳಿಸಿ.
ಗಂಡಸರು ಮದ್ವೆಯಾಗಿ ಹೆಂಡ್ತಿಗೆ ಮೋಸ ಮಾಡೋದ್ಯಾಕೆ ?
ತಜ್ಞರ ಉತ್ತರ: ಪ್ರೀತಿ (Love)ಯಲ್ಲಿರುವುದು ತುಂಬಾ ಸುಂದರವಾದ ಭಾವನೆ (Feelings) ಹೌದು. ಆದರೆ ಪ್ರೀತಿ ದಾಂಪತ್ಯದಲ್ಲಿ ಕೊನೆಯಾಗುವುದಿಲ್ಲ ಎಂದು ತಿಳಿದಾಗ ಮನಸ್ಸಿಗೆ ತುಂಬಾ ದುಃಖ ನೀಡುತ್ತದೆ. ನೀವು ಪ್ರೀತಿಸಲು ಸಿದ್ಧವಾದರೆ ಆ ಪ್ರೀತಿಯನ್ನು ಮದುವೆಯಲ್ಲಿ ಸುಖಾಂತ್ಯಗೊಳಿಸಲು ಸಾಧ್ಯವೇ ಎಂಬುದನ್ನು ಮೊದಲೇ ಯೋಚಿಸಬೇಕು. ಮದುವೆ, ಪೋಷಕರ (Parents) ಬಗ್ಗೆ ನೀವು ಈ ಮೊದಲೇ ಚರ್ಚೆ ನಡೆಸಬೇಕಿತ್ತು. ಹೀಗಿದ್ದೂ ನೀವೇನು ಮಾಡಬಹುದು ಎಂದು ನಾವು ಕೆಲ ಸಲಹೆಗಳನ್ನು ನೀಡುತ್ತೇವೆ.
ಹುಡುಗಿ ನಿಮ್ಮನ್ನು ನಿಜವಾಗಿಯೂ ಪ್ರೀತಿಸುತ್ತಿದ್ದಾಳ ತಿಳಿದುಕೊಳ್ಳಿ: ನೀವು ಪ್ರೀತಿಸಿರುವ ಹುಡುಗಿ ನಿಜವಾಗಿಯೂ ನಿಮ್ಮನ್ನು ಪ್ರೀತಿಸುತ್ತಿದ್ದಾಳ, ನಿಮ್ಮನ್ನು ಮದುವೆಯಾಗಲು ಸಿದ್ಧಳಿದ್ದಾಳ ಎಂಬುದನ್ನು ಮೊದಲು ತಿಳಿದುಕೊಳ್ಳಿ. ಕೆಲವೊಮ್ಮೆ ನಿಮ್ಮನ್ನು ಮದುವೆಯಾಗಲು ಇಷ್ಟವಿಲ್ಲದ ಕಾರಣ ಪೋಷಕರ ನೆಪವನ್ನೂ ಹೇಳುತ್ತಿದ್ದು ಬೇರೆಯವರನ್ನು ಮದುವೆಯಾಗಲು ಸಿದ್ಧವಾಗಿರಬಹುದು. ಹೀಗಾಗಿ ಮೊದಲಿಗೆ ಈ ವಿಷಯದ ಬಗ್ಗೆ ಸ್ಪಷ್ಟತೆ ಪಡೆದುಕೊಳ್ಳಿ.
ಹುಡುಗಿಯ ಮನಸ್ಸು ಗೆಲ್ಲಿ: ಹುಡುಗಿ ನಿಜವಾಗಲೂ ನಿಮ್ಮನ್ನು ಪ್ರೀತಿಸುತ್ತಿದ್ದರೆ ಆಕೆಗೆ ನಿಮ್ಮ ಪ್ರೀತಿಯ ಬಗ್ಗೆ ಮನವರಿಕೆ ಮಾಡಿಕೊಡಿ. ಆಕೆ ನಿಮ್ಮ ಜೀವನದಲ್ಲಿ ಎಷ್ಟು ಮುಖ್ಯ ಎಂಬುದನ್ನು ಬಿಡಿಸಿ ಹೇಳಿ. ಜೊತೆಯಾಗಿ ದಾಂಪತ್ಯ ನಡೆಸಬೇಕೆಂಬ ಆಸೆಯನ್ನು ವ್ಯಕ್ತಪಡಿಸಿ. ಆಕೆಯೂ ನಿಜವಾಗಿ ನಿಮ್ಮನ್ನು ಪ್ರೀತಿಸುತ್ತಿದ್ದರೆ ನಿಮ್ಮ ಮಾತಿಗೆ ಸಹಮತ ಸೂಚಿಸುತ್ತಾಳೆ.
ಬ್ರೇಕಪ್ ನಂತರ ಪ್ಯಾಚಪ್ ಮಾಡ್ಕೊಳ್ಳಲು ಸಿಂಪಲ್ ಟಿಪ್ಸ್ ಇಲ್ಲಿದೆ
ಪೋಷಕರ ಮನವೊಲಿಸಿ: ನಿಮ್ಮ ಪ್ರೀತಿಗೆ ಮುಖ್ಯವಾಗಿ ಅಡ್ಡಿಯಾಗುತ್ತಿರುವುದು ಆಕೆಯ ಪೋಷಕರು ಎಂದು ತಿಳಿಸಿದ್ದೀರಿ. ಆಕೆಯ ಪೋಷಕರು ಈ ಮದುವೆಗೆ ಒಪ್ಪುವುದಿಲ್ಲ ಎಂದಿದ್ದೀರಿ. ಆದರೆ ಎಲ್ಲವನ್ನೂ ನಿರ್ಧರಿಸಿಬೇಡಿ. ಪೋಷಕರು ಏನು ನಿರ್ಧಾರ ಮಾಡುತ್ತಾರೋ ಅವರೇ ಮಾಡಲಿ. ಆದರೆ ನಿಮ್ಮ ನಿಷ್ಕಲ್ಮಶ ಪ್ರೀತಿಯ ಬಗ್ಗೆ ಅವರಿಗೆ ಹೇಳದೇ ಇರಬೇಡಿ. ಅವರು ನಿಮ್ಮ ಪ್ರೀತಿಯನ್ನು ಒಪ್ಪುವ ಸಾಧ್ಯತೆಯೂ ಇರಬಹುದಲ್ಲವಾ ? ಮಾತನಾಡದೆ ಯಾವ ಸಮಸ್ಯೆಯೂ ಬಗೆಹರಿಯಲು ಸಾಧ್ಯವಿಲ್ಲ. ಹೀಗಾಗಿ ಮುಕ್ತವಾಗಿ ಆಕೆ ಪೋಷಕರೊಂದಿಗೆ ಮಾತನಾಡಿ. ಅವರ ಮಗಳನ್ನು ಅವರಿಗಿಂತ ಖುಷಿಯಿಂದ ನೋಡಿಕೊಳ್ಳುತ್ತೇನೆ ಎಂಬ ಭರವಸೆ ನೀಡಿ. ಅವಳ ಮನೆಯವರಿಗೂ ಮಗನಂತೆ ಇರುತ್ತೇನೆ ಎಂಬ ಧೈರ್ಯ ನೀಡಿ.
ಮೂವ್ ಆನ್: ಇಷ್ಟೆಲ್ಲಾ ಆದ ಬಳಿಕವೂ ನಿಮ್ಮ ಹುಡುಗಿ, ಆಕೆಯ ಪೋಷಕರು ಮದುವೆಗೆ ಒಪ್ಪಲು ಸಿದ್ಧವಾಗದಿದ್ದರೆ ಯು ಹ್ಯಾವ್ ಟು ಮೂವ್ ಆನ್. ಯಾಕೆಂದರೆ ಯಾರಿಗಾಗಿಯೂ ಬದುಕು ನಿಲ್ಲುವುದಿಲ್ಲ. ನಿಮ್ಮನ್ನು ಪ್ರೀತಿಸುವ ಅದೆಷ್ಟು ಮಂದಿ ನಿಮ್ಮ ಸುತ್ತಮುತ್ತಲಿದ್ದಾರೆ. ನಿಮ್ಮ ಹೆತ್ತವರು, ಸಂಬಂಧಿಗಳು ಸ್ನೇಹಿತರು ಎಲ್ಲರ ಜೊತೆ ಖುಷಿಯಾಗಿ ಸಮಯ ಕಳೆಯಿರಿ. ಉತ್ತಮ ಅಭ್ಯಾಸದಲ್ಲಿ ತೊಡಗಿಸಿಕೊಳ್ಳಿ. ವೃತ್ತಿಯಲ್ಲಿ ಚೆನ್ನಾಗಿ ಕೆಲಸ ಮಾಡಿ ಒಳ್ಳೆಯ ಹೆಸರು ಗಳಿಸಿ. ಯಾವಾಗಲೂ ಖುಷಿ ಖುಷಿಯಾಗಿರಿ. ನಿಮ್ಮನ್ನು ಅತಿ ಹೆಚ್ಚು ಪ್ರೀತಿಸುವ ಹುಡುಗಿ ಭವಿಷ್ಯದಲ್ಲಿ ಕಾಯುತ್ತಿರಬಹುದು.
ಸೂಚನೆ: ನೀವು ಎಲ್ಲರೊಂದಿಗೆ ಹಂಚಿಕೊಳ್ಳಲು ಬಯಸುವ ಯಾವುದೇ ಸಂಬಂಧ ಸಂಬಂಧಿತ ಕಥೆಯನ್ನು ಹೊಂದಿದ್ದರೆ, ನೀವು ಅದನ್ನು digitalblr@suvarnanews.inಗೆ ಕಳುಹಿಸಬಹುದು. ನಿಮ್ಮ ಹೆಸರನ್ನು ಗೌಪ್ಯವಾಗಿ ಇಡಲಾಗುವುದು.