ಸೋಶಿಯಲ್ ಮೀಡಿಯಾದಲ್ಲಿ ಸ್ನೇಹಿತೆಯರ ಫೋಟೋ ವೈರಲ್ ಆಗಿದೆ. 50 ವರ್ಷಗಳ ಅವರ ಸ್ನೇಹವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.
ಬಾಲ್ಯದ ಸ್ನೇಹ (friendship)ವನ್ನು ಕೊನೆ ತನಕ ಉಳಿಸಿಕೊಳ್ಳೋದು ಬಹಳ ಅಪರೂಪ. ಶಾಲೆ – ಕಾಲೇಜಿನಲ್ಲಿ ಜೊತೆಗಿರುವ ಸ್ನೇಹಿತರು ನಂತ್ರ ನಿಧಾನವಾಗಿ ದೂರವಾಗ್ತಾರೆ. ಜಾಬ್ ಅಂತ ಬೇರೆ ಊರಿಗೆ ಹೋಗುವ ಸ್ನೇಹಿತರು ಅಪರೂಪಕ್ಕೆ ಸಿಗೋದೂ ಅಪರೂಪವಾಗುತ್ತೆ. ನಂತ್ರ ಮನೆ, ಮದುವೆ, ಮಕ್ಕಳು ಅಂತ ಬ್ಯುಸಿಯಾಗ್ತಾರೆ. ಹೆಣ್ಣು ಮಕ್ಕಳು, ಮದುವೆ (marriage)ಯಾಗಿ ಮನೆ ಜವಾಬ್ದಾರಿ ತೆಗೆದುಕೊಳ್ತಿದ್ದಂತೆ ಸ್ನೇಹಿತರನ್ನು ಸಂಪೂರ್ಣ ಮರೆಯುತ್ತಾರೆ. ಹಾಯ್, ಬಾಯ್ ಅನ್ನೋಕು ಅವರಿಗೆ ಸಮಯ ಇರೋದಿಲ್ಲ. ಇನ್ನು ವಯಸ್ಸಾಗ್ತಿದ್ದಂತೆ ನಿಧಾನವಾಗಿ ಒಬ್ಬೊಬ್ಬರೇ ಕೊಂಡಿ ಕಳಚಿಕೊಂಡು ಶಿವನ ಪಾದ ಸೇರ್ತಾರೆ. ಈಗಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ (Social media), ಸ್ನೇಹಿತರನ್ನು ಹತ್ತಿರ ತರ್ತಿದೆ. ಎಷ್ಟೋ ವರ್ಷಗಳಿಂದ ದೂರವಿದ್ದ ಸ್ನೇಹಿತರು ಈಗ ಮತ್ತೆ ಒಂದಾಗ್ತಿದ್ದಾರೆ.
ಎಷ್ಟೇ ಕೆಲ್ಸ ಇರಲಿ, ಮನೆ, ಮಕ್ಕಳ ಜವಾಬ್ದಾರಿ ಏನೇ ಇರಲಿ, ನಿಮ್ಮ ಖುಷಿ, ನೋವನ್ನು ಹಂಚಿಕೊಳ್ಳಲು ಸ್ನೇಹಿತರು ಬೇಕು. ಎಂದಿಗೂ ಸ್ನೇಹಿತರನ್ನು ಕಳೆದುಕೊಳ್ಬಾರದು ಅಂತ ಹಿರಿಯರು ಹೇಳ್ತಾರೆ. ಬಾಲ್ಯದ ಸ್ನೇಹಿತರಿಗೆ ನಿಮ್ಮ ಬಗ್ಗೆ ಸಾಕಷ್ಟು ವಿಷ್ಯ ಗೊತ್ತಿರುತ್ತೆ. ನಿಮ್ಮ ಸ್ವಭಾವ ತಿಳಿದಿರುತ್ತೆ. ಅವರು ನಿಮ್ಮನ್ನು ಅರ್ಥ ಮಾಡಿಕೊಂಡು, ನಿಮ್ಮ ಜೊತೆ ಹೆಜ್ಜೆ ಹಾಕ್ತಾರೆ. ಇದನ್ನು ಈ ಫಾರೆನ್ ಮಹಿಳೆಯರು ಚೆನ್ನಾಗಿ ತಿಳಿದಿದ್ದಾರೆ. ಎರಡು ಜಡೆ ಸೇರಿದ್ರೆ ಜಗಳ ಗ್ಯಾರಂಟಿ ಎಂಬುದು ತಪ್ಪು ಎಂಬುದನ್ನು ಇವರು ಸಾಭೀತುಪಡಿಸಿದ್ದಾರೆ. ಸ್ನೇಹಕ್ಕಿಂತ ಮಿಗಿಲಾದದ್ದು ಯಾವ್ದು ಇಲ್ಲ ಎಂಬುದನ್ನು ತೋರಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಸ್ನೇಹಿತೆಯರ ಫೋಟೋ ಒಂದು ವೈರಲ್ ಆಗಿದೆ. ಅದ್ರಲ್ಲಿ ನಾಲ್ಕು ಸ್ನೇಹಿತೆಯರನ್ನು ನೀವು ಕಾಣ್ಬಹುದು. ಒಂದು ಫೋಟೋದಲ್ಲಿ ಸ್ನೇಹಿತೆಯರು ಯಂಗ್ ಆಗಿರೋದನ್ನು ನೀವು ಕಾಣ್ಬಹುದು. ಇನ್ನೊಂದು ಫೋಟೋದಲ್ಲಿ ವಯಸ್ಸಾದ ಮಹಿಳೆಯರು ಕಾಣ್ತಾರೆ. ಮೇಲಿರುವ ಹುಡುಗಿಯರೇ ಕೆಳಗಿರುವ ಮಹಿಳೆಯರು. ಮೊದಲ ಫೋಟೋ 1972ರಲ್ಲಿ ತೆಗೆದಿದ್ದು. ಕೆಳಗಿನ ಫೋಟೋ 50 ವರ್ಷದ ನಂತ್ರ ತೆಗೆದಿದ್ದು. ಅದೇ ಜಾಗದಲ್ಲಿ ಅದೇ ನಾಲ್ವರು ಸ್ನೇಹಿತೆಯರು ಫೋಟೋಕ್ಕೆ ಫೋಸ್ ನೀಡಿದ್ದಾರೆ.
1972 ರಲ್ಲಿ, ಡೆವೊನ್ನ ಟೋರ್ಕ್ವೇಯಕ್ಕೆ ವಾಕಿಂಗಬ್ ಬಂದಿದ್ದ ನಾಲ್ಕು ಹದಿಹರೆಯದ ಹುಡುಗಿಯರು ಫೋಟೋಕ್ಕೆ ನಕ್ಕಿದ್ದರು. ಐವತ್ತು ವರ್ಷಗಳ ನಂತ್ರ, ಮೇರಿಯನ್, ಸ್ಯೂ, ಕ್ಯಾರಲ್ ಮತ್ತು ಮೇರಿ ತಮ್ಮ 70 ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲು ಅದೇ ಸ್ಥಳಕ್ಕೆ ಬಂದಿದ್ದರು. ಅದೇ ಸ್ಥಳ. ಅದೇ ಸ್ನೇಹ. ಅದೇ ಪ್ರೀತಿಯನ್ನು ನೀವು ಈ ಫೋಟೋದಿಂದಲೇ ಅರ್ಥ ಮಾಡಿಕೊಳ್ಬಹುದು. ಆದರೆ ಈ ಬಾರಿ, ಸುಕ್ಕುಗಟ್ಟಿದ ಕೈಗಳು, ಬಿಳಿ ಕೂದಲು ಮತ್ತು ಐದು ದಶಕಗಳ ಜೀವನದ ನೆನಪು ಅವರಲ್ಲಿತ್ತು. ಹೋಟೆಲ್ ಸಿಬ್ಬಂದಿ ಅವರಿಗೆ ನಿಖರವಾದ ಸ್ಥಳವನ್ನು ಕಂಡುಹಿಡಿಯಲು ಸಹಾಯ ಮಾಡಿದ್ದರು. ಫೋಟೋ ಕ್ಲಿಕ್ಕಿಸಿದ ನಂತ್ರ ಮೇರಿಯನ್
ಇದು ಜೀವನದ ಅತ್ಯಂತ ಭಾವನಾತ್ಮಕ ಕ್ಷಣಗಳಲ್ಲಿ ಒಂದು ಎಂದಿದ್ದಾರೆ. ಮದುವೆ, ಮಕ್ಕಳು, ಮೊಮ್ಮಕ್ಕಳು, ಕಷ್ಟ, ನೋವುಗಳ ಮಧ್ಯೆಯೂ ಈ ಬಂಧವನ್ನು ಮುರಿಯಲು ಎಂದಿಗೂ ಅವರು ಬಿಡಲಿಲ್ಲ. 50 ವರ್ಷಗಳಿಂದ ಸ್ನೇಹವನ್ನು ಉಳಿಸಿಕೊಂಡು ಬಂದಿದ್ದಾರೆ. ಈ ಫೋಟೋ ನೋಡಿದ ಬಳಕೆದಾರರು ಖುಷಿಯಾಗಿದ್ದಾರೆ. ಇಂಥ ಸ್ನೇಹ ನೋಡೋಕೆ ಸಿಗೋದು ಬಹಳ ಅಪರೂಪ ಎಂದಿದ್ದಾರೆ. ಎಂಥ ಅದ್ಭುತ ಸ್ನೇಹ ಇವರದ್ದು. ಇವರ ನಗುವಿನಲ್ಲಿ ಸ್ವಲ್ಪವೂ ಬದಲಾವಣೆ ಆಗಿಲ್ಲ ಎಂದು ಕಮೆಂಟ್ ಮಾಡಿದ್ದಾರೆ.
