ಅನಾಥ, ಡೌನ್‌ ಸಿಂಡ್ರೋಮ್‌ ಮಗುವನ್ನು ಕವಿತಾ, ಹಿಮೇಶ್‌ ದತ್ತು ತೆಗೆದುಕೊಂಡು ನಾಲ್ಕು ವರ್ಷಗಳಾಗಿವೆ. ಮಗುವನ್ನು ಹೆರುವ ಸಾಮರ್ಥ್ಯವಿದ್ದೂ ಪ್ರಜ್ಞಾಪೂರ್ವಕವಾಗಿ ವಿಶೇಷ ಮಗುವನ್ನು ದತ್ತು ಪಡೆದವರು ಈ ದಂಪತಿ. ಚೂಟಿ ಪುಟಾಣಿ ವೇದಾಳ ತಂದೆ ತಾಯಿಯಾಗಿ ಕಷ್ಟಸುಖ ಹಂಚಿಕೊಂಡಿದ್ದಾರೆ.

- ಪ್ರಿಯಾ ಕೆರ್ವಾಶೆ

‘ಡಿಫರೆಂಟ್‌ ಈಸ್‌ ಬ್ಯೂಟಿಫುಲ್‌’

ಕಳೆದ ನಾಲ್ಕು ವರ್ಷಗಳಿಂದ ಈ ಅಕ್ಷರಶಃ ಈ ಮಾತನ್ನು ನಿಜವಾಗಿಸಿ ಬದುಕುತ್ತಿರುವ ದಂಪತಿ ಕವಿತಾ, ಹಿಮೇಶ್‌. ಇವರು ದೇಶದಲ್ಲೇ ಮೊದಲು ಡೌನ್‌ ಸಿಂಡ್ರೋಮ್‌ ಮಗುವನ್ನು ದತ್ತು ಪಡೆದವರು. ವೇದಾ ಅಂತ ಈ ಮಗುವಿನ ಹೆಸರು. ಕವಿತಾ ಈ ಮಗುವಿಗೋಸ್ಕರ ಒಂದು ಇನ್‌ಸ್ಟಾಗ್ರಾಂ ಅಕೌಂಟ್‌ ತೆರೆದು ಈಕೆಯ ಚಟುವಟಿಕೆಗಳನ್ನೆಲ್ಲ ದಾಖಲಿಸುತ್ತಿದ್ದಾರೆ. ಆ ಮೂಲಕ ವೇದಾ ಅನೇಕ ಜನರಿಗೆ ಪರಿಚಿತಳಾಗಿದ್ದಾಳೆ.

View post on Instagram

ಕಲಿಸದೇ ಇದ್ದದ್ದೂ ಕಲೀತಾಳೆ!

ಇನ್‌ಸ್ಟಾಗ್ರಾಮ್‌ನಲ್ಲಿ ‘ಎಕ್ಸ್‌ಟ್ರಾಕ್ರೋಮಿವೇದಾ’ ಅನ್ನೋ ಅಕೌಂಟ್‌ನಲ್ಲಿ ಹೀಗೊಂದು ಪುಟ್ಟಬರಹ ಜೊತೆಗೆ ಕ್ಯೂಟ್‌ ಆಗಿ ಪೋಸ್‌ ಕೊಡ್ತಿರೋ ಮಗುವಿನ ಫೋಟೋ. ಈ ಕೂಸೇ ವೇದಾ.

ಕವಿತಾ: ವೇದೂ ನಿಂದೊಂದು ಫೋಟೋ ತೆಗೀಲಾ?

ವೇದಾ- ಯೆಸ್‌

(ಫೋಸ್‌ ಕೊಡಲಿಕ್ಕೆ ಶುರು ಮಾಡಿದಳು)

ಕವಿತಾ - (ಸ್ವಗತ) ಇದನ್ನೆಲ್ಲ ನಾನು ಹೇಳಿಕೊಟ್ಟೇ ಇಲ್ವಲ್ಲಾ. ಎಲ್ಲಿಂದ ಕಲಿತಳಪ್ಪಾ..

View post on Instagram

ಜುಟ್ಟು ಮತ್ತು ಅಪ್ಪ

ಪೋಸ್ಟ್‌ 2 : ಹಿಮೇಶ್‌ ವೇದಾಳ ಚೋಟುದ್ದ ಕೂದಲು ಬಾಚುವ ವೀಡಿಯೋ.

ಹಿಮೇಶ್‌ ವೇದಾಳ ಬೇರೆಲ್ಲ ಆರೈಕೆ ಕಲಿತರು. ಆದರೆ ತಲೆ ಬಾಜೋದು ಮಾತ್ರ ಗೊತ್ತಿಲ್ಲ. ಈಗ ಕಲೀತಾ ಇದ್ದಾರೆ..

ಹಿಮೇಶ್‌ : ನಿನ್ನ ಪುಟಾಣಿ ಕೂದಲನ್ನು ಒಟ್ಟು ಮಾಡಿ ಹೀಗೆ ಜುಟ್ಟು ಹಾಕ್ತೀನಿ. ಚೆನ್ನಾಗಿದೆಯಲ್ಲಾ..

ವೇದಾ : ಚಂದ.. ಚಂದ..

ರೈಲ್ವೇ ಸ್ಟೇಶನ್‌ನಲ್ಲಿ ಸಿಕ್ಕ ಅನಾಥ ಹಸುಳೆ

ಕವಿತಾ ಅವರಿಗೆ ಟೀನೇಜ್‌ನಲ್ಲೇ ತಾನೊಂದು ಮಗುವನ್ನು ದತ್ತು ಪಡೆಯಬೇಕು ಅನ್ನುವ ಆಸೆಯಿತ್ತು. ತಾನು ಹೆತ್ತದ್ದು ಮಾತ್ರ ತನ್ನ ಮಗು ಅನ್ನೋದರಲ್ಲಿ ನಂಬಿಕೆ ಇರಲಿಲ್ಲ, ಹಾಗೆ ಮಗು ಹೆರುವ ಮನಸ್ಸೂ ಇರಲಿಲ್ಲ. ಮದುವೆಯಾಗ್ತಿರುವ ಹುಡುಗನ ಬಳಿಗೂ ಅವರ ಷರತ್ತು ಇದೇ ಆಗಿತ್ತು, ಆ ಷರತ್ತಿಗೆ ಒಪ್ಪಿ ಕವಿತಾ ಆಸೆ ಇವರ ಆಸೆಯೂ ಆಗಿ ಪರಿವರ್ತನೆಯಾದ ಮೇಲೆ ಕವಿತಾ ಅವರು ಹಿಮೇಶ್‌ ಅವರನ್ನು ಮದುವೆಯಾದದ್ದು.

ಡೌನ್‌ ಸಿಂಡ್ರೋಮ್‌ ಮಗು ತೋರಿಸೋ ಪ್ರೀತಿ ಮುಂದೆ ಬೇರೇನೂ ಇಲ್ಲ! 

ಆಗ ಕವಿತಾ- ಹಿಮೇಶ್‌ ಮದುವೆಯಾಗಿ ಎರಡು ವರ್ಷ. ದಂಪತಿಗಳ ನಿರ್ಧಾರ ಅಚಲವಾಗಿತ್ತು, ಆದರೆ ಅದರಲ್ಲೊಂದು ದೊಡ್ಡ ಬದಲಾವಣೆಯಾಗಿತ್ತು. ಡಿಫರೆಂಟ್‌ ಆಗಿರುವ ಮಗುವನ್ನು ದತ್ತು ಪಡೆಯಬೇಕು ಅನ್ನುವ ಬದಲಾವಣೆಯದು. ಹಾಗೆ ಅವರು ಮೊದಲು ನೋಡಿದ ಮಗುವೇ ವೇದಾ. ಹದಿನೈದು ತಿಂಗಳ ಹಸುಳೆಯದು. ರೈಲ್ವೇ ಸ್ಟೇಶನ್‌ನಲ್ಲಿ ಯಾರೋ ಬಿಟ್ಟು ಹೋಗ ಅನಾಥ ಕಂದಮ್ಮ ಆಮೇಲೆ ಅನಾಥಾಶ್ರಮ ಸೇರಿತು. ವಿಶೇಷ ಮಗುವನ್ನು ದತ್ತು ಪಡೆಯುವ ಇಂಗಿತದಲ್ಲಿ ಕವಿತಾ ದಂಪತಿಗಳು ಮೊದಲು ನೋಡಿದ್ದು ಈ ಮಗುವನ್ನು. ಆಯ್ಕೆಯ ಗೊಂದಲವಿಲ್ಲದೇ ಪಾಪು ಈ ದಂಪತಿಗಳ ಮಗಳಾದಳು.

‘ನಿನಗೆ ನನ್ನ ಮೈವಾಸನೆ ಗೊತ್ತಿಲ್ಲ, ನನ್ನ ದನಿ, ನನ್ನ ಸ್ಪರ್ಶ.. ಊಹೂಂ, ಯಾವುದೂ ಪರಿಚಿತವಾಗಿರಲಿಲ್ಲ. ನಾನು ನಿನ್ನನ್ನು ಒಂಭತ್ತು ತಿಂಗಳು ಗರ್ಭದಲ್ಲಿಟ್ಟು ಪೋಷಿಸಲಿಲ್ಲ. ಆದರೆ ಮೊದಲ ಸಲ ನಿನ್ನ ನೋಡಿದಾಗ, ನೀನು ಹೊಸಬಳು ಅಂತ ಅನಿಸಲೇ ಇಲ್ಲ. ನಾನು ನಿನ್ನ ಅಮ್ಮ, ನೀ ನನ್ನ ಮಗಳು ಅಂತಲೇ ಅನಿಸಿದ್ದು. ಆದರೆ ನಮ್ಮಿಬ್ಬರನ್ನು ತಾಯಿ ತಂದೆಯಾಗಿಸಿದ ಆ ಗಳಿಗೆಯನ್ನು ಯಾವತ್ತೂ ಮರೆಯಲಾರೆ. ನಿನ್ನನ್ನು ಮಗುವಾಗಿ ಪಡೆದದ್ದಕ್ಕೆ ಹೆಮ್ಮೆ ಇದೆ’ ಅಂತ ಭಾವನಾತ್ಮಕವಾಗಿ ಬರೀತಾರೆ ಕವಿತಾ.

ಈಗ ಮಾತ್ರ ಕೆಲವೊಂದು ಸಲ ಟೀನೇಜರ್‌ ಥರ ಆಡ್ತಾಳಂತೆ. ಅವಳ ಪ್ರೌಢತೆ, ತಾಳ್ಮೆ, ಪ್ರಶಾಂತ ಮನಸ್ಥಿತಿ ಅವಳು ಪಾಪು ಅನ್ನೋದನ್ನೂ ಮರೆಸುತ್ತದೆ ಅನ್ನುತ್ತಾ ಅವಳು ಮೊದಲ ಸಲ ಸ್ವತಂತ್ರವಾಗಿ ತಿಂಡಿ ತಿಂದ, ನಡೆದಾಡಿದ, ಅಮ್ಮಾ ಅಂತ ಕರೆದ ಕ್ಷಣಗಳನ್ನು ನೆನೆಯುತ್ತಾರೆ ಕವಿತಾ.

ವೇದಾ ದಿನ ಹೀಗಿರುತ್ತೆ..

- ಬೆಳಗ್ಗೆ ಏಳುವಾಗಲೇ ವೇದಾಗೆ ಏನು ತಿಂಡಿ ಮಾಡಲಿ, ಇವತ್ತು ಹೊಸತೇನನ್ನು ಕಲಿಸಲಿ ಅಂತ ಕವಿತಾ ಯೋಚಿಸುತ್ತಿರುತ್ತಾರೆ.

- ಅವಳಿಗೆ ಗಿಡಗಳಿಗೆ ನೀರು ಹಾಕೋದು, ಪೈಂಟಿಂಗ್‌ ಮಾಡೋದು ಇಷ್ಟ.

- ಸ್ಪೀಚ್‌ ಥೆರಪಿ, ಅವಳ ಕೆಲಸವನ್ನು ಅವಳೇ ಮಾಡಿಕೊಳ್ಳುವಂತೆ ಮಾಡುವ ಥೆರಪಿಗಳು ಅವಳಿಗಾಗಿ ರೂಪಿಸುವ ಚಟುವಟಿಕೆಯ ಭಾಗವಾಗಿರುತ್ತದೆ.

ಬೆಸ್ಟ್ ಅಮ್ಮ ಪ್ರಶಸ್ತಿ ಅಪ್ಪನಿಗೆ ಬಂದದ್ದು ಯಾಕೆ ಗೊತ್ತಾ?

- ಅವಳ ಸ್ನಾಯು ಬಲಗೊಳ್ಳಲು ಮೆಟ್ಟಿಲು ಹತ್ತಿಳಿಸುತ್ತಾರೆ ಹಿಮೇಶ್‌.

- ಗಾರ್ಡನ್‌ನಲ್ಲಿ ಆಟ, ಊಟ, ತರಲೆ, ತುಂಟಾಟ ಹೀಗೆ ದಿನ ಮುಗಿದದ್ದೇ ಗೊತ್ತಾಗೋದಿಲ್ಲ.

ಡೌನ್‌ ಸಿಂಡ್ರೋಮ್‌ ಮಗುವನ್ನು ಬೆಳೆಸುವ ಚಾಲೆಂಜ್‌ಗಳು

- ಮೊತ್ತಮೊದಲನೆಯದಾಗಿ ಕುಟುಂಬದವರ ಸಪೋರ್ಟ್‌ ಸಿಗಲ್ಲ. ದತ್ತು ಪಡೆಯೋದನ್ನೇ ಅವರು ಒಪ್ಪಲ್ಲ. ಇನ್ನು ಡೌನ್‌ ಸಿಂಡ್ರೋಮ್‌ ಮಗು ಅಂದ್ರೆ ಈ ಕಡೆ ತಲೆನೇ ಹಾಕಲ್ಲ. ವೇದಾ ಮನೆಗೆ ಬಂದಾಗಲೂ ಅವಳನ್ನು ಸ್ವಾಗತಿಸಲು ಯಾರೋ ಇರಲಿಲ್ಲ. ಆದರೆ ಈ ಪುಟ್ಟಕೂಸು ಆಮೇಲೆ ಕುಟುಂಬದವರಿಗೆ ಎಷ್ಟುಹತ್ತಿರವಾದಳು ಅಂದರೆ ಇಂದು ಇವಳಿಲ್ಲದ ದಿನವನ್ನು ಕಲ್ಪಿಸಿಕೊಳ್ಳಲೂ ಅವರಿಂದ ಸಾಧ್ಯವಿಲ್ಲ.

- ಸಾಮಾನ್ಯ ಮಕ್ಕಳಿಗೆ ಹೋಲಿಸಿದರೆ ಈ ಮಕ್ಕಳಲ್ಲಿ ಅನಾರೋಗ್ಯದ ಸಮಸ್ಯೆ ಹೆಚ್ಚು. ಭಾವನಾತ್ಮಕ ಸಮಸ್ಯೆಗಳೂ ಅಧಿಕ. ಈ ಮಕ್ಕಳಿಗೆ ಹೆಚ್ಚು ಪ್ರೀತಿ ಬೇಕು, ಆತ್ಮೀಯ ಸ್ಪರ್ಶ ಬೇಕು. ಅದು ಸಾಕಷ್ಟು ಸಿಗದಿದ್ದಾಗಲೂ ಪ್ರಾಬ್ಲೆಮ್‌ ಶುರುವಾಗುತ್ತೆ.

- ಆರಂಭದಲ್ಲಿ ಸಮಾಜ ಇಂಥಾ ಮಕ್ಕಳನ್ನು ಪ್ರತ್ಯೇಕತೆಯಿಂದ ನೋಡುತ್ತದೆ. ವೇದಾ ಶುರುವಲ್ಲಿ ಕನ್ನಡ ಧರಿಸಿ ಹೊರಬಂದರೆ ಜನ ವಿಚಿತ್ರವಾಗಿ ನೋಡಿ, ಏನೆಲ್ಲ ಕಮೆಂಟ್‌ ಮಾಡುತ್ತಿದ್ದರು. ಕ್ರಮೇಣ ಅದೇ ಜನ ಅವಳನ್ನು ಹಚ್ಚಿಕೊಂಡರು.

View post on Instagram

- ಒಂದೋ ಇಂಥಾ ಮಕ್ಕಳ ಅತಿಯಾದ ವೈಭವೀಕರಣ, ಇಲ್ಲವಾದರೆ ಅವರನ್ನು ಮೂಲೆ ಗುಂಪು ಮಾಡೋದು ನಡೆಯುತ್ತಿರುತ್ತದೆ. ಜನ ವೇದಾ ಎದುರು ಅವಳನ್ನು ನಾವು ದತ್ತು ತಗೊಂಡಿದ್ದೇವೆ ಅನ್ನೋ ವಿಚಾರ ಹೇಳಿದಾಗ, ಅವಳು ಲಕ್ಕೀ, ನಿಮ್ಮಂಥ ಪೇರೆಂಟ್ಸ್‌ ಸಿಕ್ಕಿದ್ದಕ್ಕೆ ಅಂತೆಲ್ಲ ಹೇಳುವಾಗ ಮನಸ್ಸಿಗೆ ನೋವಾಗುತ್ತೆ.

- ವೇದಾ ಅಥವಾ ಯಾವುದೇ ಡೌನ್‌ ಸಿಂಡ್ರೋಮ್‌ ಅಥವಾ ಇತರ ಸಮಸ್ಯೆಗಳಿರುವ ಮಕ್ಕಳು, ಯಾವ ಮಗುವಿಗಿಂತ ಮೇಲೂ ಅಲ್ಲ, ಕೀಳೂ ಅಲ್ಲ. ಅವರು ಡಿಫರೆಂಟ್‌ ಅಷ್ಟೇ. ಆ ವಿಶೇಷತೆಯನ್ನು ನಾವೆಲ್ಲ ಒಪ್ಪಿಕೊಳ್ಳಬೇಕು.

- ಇಂಥಾ ಮಕ್ಕಳ ಸ್ನಾಯು, ಮೂಳೆಗಳು ಸೂಕ್ಷ್ಮ ಇರುವ ಕಾರಣ ಎತ್ತಿಕೊಳ್ಳಬಾರದು. ಅವರಿಗೆ ನೋವಾಗುತ್ತೆ. ಆದರೆ ಕೆಲವರು ಮುದ್ದು ಮಾಡುತ್ತಾ ಎತ್ತಿಕೊಳ್ಳಲು ಬರುತ್ತಾರೆ. ನಾವು ತಡೆದರೆ ಬೇಸರ ಮಾಡಿಕೊಳ್ಳುತ್ತಾರೆ.