ಚಿಲಿಯ ಯುವಕನೊಬ್ಬನಿಗೆ ತನ್ನ ತಂದೆಯ ಹಳೆಯ ಪೆಟ್ಟಿಗೆಯಲ್ಲಿ 60 ವರ್ಷಗಳ ಹಿಂದಿನ ಪಾಸ್‌ಬುಕ್ ಸಿಕ್ಕಿತು. ಕಾನೂನು ಹೋರಾಟದ ನಂತರ, ಅಂದು ಸಣ್ಣ ಮೊತ್ತವಾಗಿದ್ದ ಆ ಉಳಿತಾಯವು ಬಡ್ಡಿ ಮತ್ತು ಹಣದುಬ್ಬರದಿಂದಾಗಿ ಇಂದು 10 ಕೋಟಿ ರೂಪಾಯಿಗಳ ಬೃಹತ್ ನಿಧಿಯಾಗಿ ಪರಿವರ್ತನೆಯಾಗಿದೆ.

ಬೆಂಗಳೂರು (ಜ.22): ಅದೃಷ್ಟ ಎನ್ನುವುದು ಯಾವಾಗ, ಯಾವ ರೂಪದಲ್ಲಿ ಬರುತ್ತೆ ಅಂತ ಯಾರೊಬ್ಬರೂ ಕೂಡ ಊಹಿಸಲು ಸಾಧ್ಯವಿಲ್ಲ. ಕೆಲವೊಮ್ಮೆ ವಿಧಿ ನಮ್ಮನ್ನು ಕಾಪಾಡಲು ದಶಕಗಳ ಹಿಂದೆಯೇ ಅಡಿಪಾಯ ಹಾಕಿರುತ್ತದೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿ. ಚಿಲಿಯ ಕ್ಸಾಕ್ವೆಲ್ ಹಿನೋಜೋಸಾ ಎಂಬ ಸಾಮಾನ್ಯ ಯುವಕ ಇಂದು ಕೋಟ್ಯಾಧಿಪತಿಯಾಗಿ ಸುಖದ ಸುಪ್ಪತ್ತಿಗೆಯಲ್ಲಿದ್ದಾರೆ. ಆದರೆ ಈ ಶ್ರೀಮಂತಿಕೆ ಆತನಿಗೆ ಲಾಟರಿಯಿಂದ ಬಂದದ್ದಲ್ಲ, ಬದಲಾಗಿ ಆತನ ತಂದೆ 60 ವರ್ಷಗಳ ಹಿಂದೆ ಕೂಡಿಟ್ಟಿದ್ದ ಪುಟ್ಟ ಉಳಿತಾಯದ ಫಲ!

ಏನಿದು ವಿಧಿಯ ಆಟ?

ಅದು 1960-70ರ ದಶಕದಲ್ಲಿ ಹಿನೋಜೋಸಾ ತಂದೆ ಕನಸಿನ ಮನೆ ಕಟ್ಟಬೇಕು ಎನ್ನುವ ಹಂಬಲ ಹೊಂದಿದ್ದರು. ಅದಕ್ಕಾಗಿ 'ಕ್ರೆಡಿಟ್ ಯೂನಿಯನ್' ಬ್ಯಾಂಕ್‌ನಲ್ಲಿ ಅಂದಿನ ಕಾಲದ 1.40 ಲಕ್ಷ ಪೆಸೋಸ್‌ಗಳನ್ನು (ಅಂದಾಜು ₹12,000) ಉಳಿತಾಯ ಮಾಡಿದ್ದರು. ಆದರೆ, ಮನೆ ಕಟ್ಟುವ ಕನಸು ನನಸಾಗುವ ಮೊದಲೇ ಅವರು ಸಾವು ಕಂಡರು. ತಂದೆ ಮಾಡಿದ್ದ ಉಳಿತಾಯದ ವಿಚಾರ ಮಗನಿಗೂ ತಿಳಿದಿರಲಿಲ್ಲ.

ಅಪ್ಪನ ಪೆಟ್ಟಿಗೆಯಲ್ಲಿದ್ದ ಪವಾಡ

ತಂದೆ ತೀರಿಹೋದ ಹಲವು ವರ್ಷಗಳ ಬಳಿಕ, ಹಿನೋಜೋಸಾ ಹಳೆಯ ಪೆಟ್ಟಿಗೆಯೊಂದನ್ನು ಸ್ವಚ್ಛಗೊಳಿಸುವಾಗ ಕಣ್ಣಿಗೆ ಬಿದ್ದಿದ್ದೇ ಆ ಹಳೇ 'ಪಾಸ್ ಬುಕ್'. ಅದರ ಮೇಲೆ 'ಸ್ಟೇಟ್ ಗ್ಯಾರಂಟಿ' ಎಂಬ ಪದವಿತ್ತು. ಹಿನೋಜೋಸಾ ಅದನ್ನು ಕೇವಲ ಕಾಗದದ ತುಂಡು ಎಂದು ಎಸೆಯದೆ, ತನ್ನ ತಂದೆಯ ಶ್ರಮದ ಹಣವನ್ನು ಪಡೆಯಲೇಬೇಕೆಂದು ಹಠಕ್ಕೆ ಬಿದ್ದ. ವಿಧಿಯ ಆಟ ನೋಡಿ, ಆ ಬ್ಯಾಂಕ್ ಮುಚ್ಚಿಹೋಗಿದ್ದರೂ, ಸರ್ಕಾರದ ಗ್ಯಾರಂಟಿ ಇದ್ದ ಕಾರಣ ಕಾನೂನು ಹೋರಾಟ ಶುರುವಾಯಿತು.

ಕೋರ್ಟ್ ಮೆಟ್ಟಿಲೇರಿದ ಅದೃಷ್ಟ

ಹಣದುಬ್ಬರ ಮತ್ತು 60 ವರ್ಷಗಳ ಬಡ್ಡಿಯನ್ನು ಲೆಕ್ಕಾಚಾರ ಹಾಕಿದಾಗ ಆ ಮೊತ್ತ ಕೇಳಿ ಎಲ್ಲರೂ ದಂಗಾಗಿಹೋದರು. ಕೆಳ ಹಂತದ ಕೋರ್ಟ್‌ನಿಂದ ಸುಪ್ರೀಂಕೋರ್ಟ್‌ವರೆಗೆ ನಡೆದ ಸುದೀರ್ಘ ಹೋರಾಟದಲ್ಲಿ ಕೊನೆಗೂ ಜಯ ಹಿನೋಜೋಸಾ ಪಾಲಾಯಿತು. ಅಪ್ಪ ಅಂದು ಕೂಡಿಟ್ಟಿದ್ದ ಸಣ್ಣ ಗಂಟು, ಇಂದು ಮಗನಿಗೆ ಬರೋಬ್ಬರಿ 10 ಕೋಟಿ ರೂಪಾಯಿಗಳ ನಿಧಿಯಾಗಿ ಪರಿವರ್ತನೆಯಾಗಿತ್ತು.

ಈ ಘಟನೆಯಿಂದ ನಾವು ಕಲಿಯಬೇಕಾದ ವಿಚಾರ ಏನೆಂದರೆ, ಹಿರಿಯರು ನಮಗಾಗಿ ಆಸ್ತಿ ಮಾಡಿಲ್ಲ ಎಂದು ದೂರುವ ಮೊದಲು, ಅವರು ನಮಗಾಗಿ ಬಿಟ್ಟುಹೋದ ಸಣ್ಣ ನೆನಪುಗಳನ್ನು ಗೌರವಿಸಬೇಕು. ಎರಡನೆಯದು, ನಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ವಿಧಿಯ ಬೆಂಬಲ ಸಿಕ್ಕರೆ, ರಾತ್ರೋರಾತ್ರಿ ಬದುಕು ಹೇಗೆ ಬದಲಾಗಬಲ್ಲದು ಎಂಬುದಕ್ಕೆ ಇದೊಂದು ದೊಡ್ಡ ಉದಾಹರಣೆ.