ಬೆಂಗಳೂರಿನ ಜೆಪಿ ನಗರದ ಖಾಸಗಿ ವೃದ್ಧಾಶ್ರಮದಲ್ಲಿ ವೃದ್ಧ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೌಟುಂಬಿಕ ಕಲಹಗಳಿಂದ ಬೇಸತ್ತು ಈ ನಿರ್ಧಾರಕ್ಕೆ ಬಂದಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಬೆಂಗಳೂರು (ಜೂ.25): ರಾಜಧಾನಿ ಬೆಂಗಳೂರಿನಲ್ಲಿ ಸಂವೇದನಾಶೀಲ ಹಾಗೂ ಮನಕಲಕುವ ಘಟನೆ ನಡೆದಿದೆ. ಜೆಪಿ ನಗರ 8ನೇ ಹಂತದಲ್ಲಿರುವ ಖಾಸಗಿ ವೃದ್ದಾಶ್ರಮದಲ್ಲಿ ವಾಸವಿದ್ದ ವೃದ್ಧ ದಂಪತಿ ಆತ್ಮಹ*ತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬುಧವಾರ ಬೆಳಕಿಗೆ ಬಂದಿದೆ.

ಮೃತರಾಗಿರುವವರು ಕೃಷ್ಣಮೂರ್ತಿ (81) ಮತ್ತು ಅವರ ಪತ್ನಿ ರಾಧಾ (74) ಎಂದು ಗುರುತಿಸಲಾಗಿದೆ. ಇಬ್ಬರೂ ಕೆಲವೇ ವಾರಗಳ ಹಿಂದೆ ಆಶ್ರಮಕ್ಕೆ ಸೇರಿಸಲ್ಪಟ್ಟಿದ್ದರು. ಕುಟುಂಬದಲ್ಲಿ ತೊಂದರೆಗಳನ್ನು ಅನುಭವಿಸುತ್ತಿದ್ದರಿಂದ ಮನನೊಂದು ದಂಪತಿಯ ಆತ್ಮಹ*ತ್ಯೆಗೆ ಶರಣಾಗಿದ್ದಾರೆಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ಪೊಲೀಸ್ ಮೂಲಗಳಿಂದ ಲಭ್ಯವಿರುವ ಮಾಹಿತಿ ಪ್ರಕಾರ, ಮನೆಯಲ್ಲಿ ಸೊಸೆ ಮಾಡುವ ಅಡುಗೆ ಚೆನ್ನಾಗಿಲ್ಲವೆಂದು ಹೇಳಿದರೂ ಅದನ್ನು ಸೊಸೆ ತಾತ್ಸಾರ ಮಾಡಿ ಜಗಳ ಮಾಡುತ್ತಿದ್ದಳು. ಇದನ್ನು ಮಗನಿಗೆ ಹೇಳಿದರೆ ಮಗನೂ ಕೂಡ ಜಗಳ ಮಾಡಿ ತಂದೆ-ತಾಯಿಗೆ ಬೈಯುತ್ತಿದ್ದನು.

ಈ ಹಿನ್ನೆಲೆಯಲ್ಲಿ ಕಳೆದ ವಾರ ವೃದ್ಧ ದಂಪತಿಯನ್ನು ಅವರ ಮಗನೇ ಬಂದು ಖಾಸಗಿ ವೃದ್ದಾಶ್ರಮಕ್ಕೆ ಸೇರಿಸಿ ಹೋಗಿದ್ದನು. ಆದರೆ, ಮಂಗಳವಾರ ರಾತ್ರಿ ದಂಪತಿ ಅವರ ಕೋಣೆಯಲ್ಲಿ ನೇಣು ಬಿಗಿದು ಆತ್ಮಹ*ತ್ಯೆಗೆ ಶರಣಾಗಿದ್ದಾರೆ. ಬುಧವಾರ ಬೆಳಗ್ಗೆ ಕೋಣೆಯ ಬಾಗಿಲು ತೆರೆಯದ ಕಾರಣ ಶಂಕೆಗೊಂಡ ಆಶ್ರಮ ಸಿಬ್ಬಂದಿ ಬಾಗಿಲು ತೆರೆಯಲು ಯತ್ನಿಸಿದ್ದಾರೆ. ಬಳಿಕ ಸ್ಥಳೀಯ ಪೊಲೀಸರ ನೆರವಿನಿಂದ ಬಾಗಿಲು ತೆರೆಯಲಾಗಿದ್ದು, ದಂಪತಿಯ ಶವ ಪತ್ತೆಯಾಗಿದೆ.

ಪೊಲೀಸರ ತನಿಖೆ:

ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆತ್ಮಹ*ತ್ಯೆಗೆ ನಿಖರ ಕಾರಣ ತಿಳಿದುಕೊಳ್ಳಲು ತನಿಖೆ ಮುಂದುವರಿಸಲಾಗಿದೆ. ಇದೊಂದು ದಾರುಣ ಹೃದಯವಿದ್ರಾವಕ ಘಟನೆಯಾಗಿದೆ. ಪೋಷಕರಿಗೆ ಕೊನೆಯ ದಿನಗಳಲ್ಲಿ ಮನೆಯೊಳಗಿನ ಪ್ರೀತಿ, ಶ್ರದ್ಧೆ ಮತ್ತು ಗೌರವದ ಅಗತ್ಯವಿದೆ ಎಂಬುದನ್ನು ಮತ್ತೊಮ್ಮೆ ತೋರಿಸುತ್ತದೆ. ತಮ್ಮನ್ನು ಜೀವನಪೂರ್ತಿ ಪೋಷಿಸಿದವರನ್ನು ವೃದ್ದಾಶ್ರಮ ಸೇರಿಸುವಂತಹ ಕೃತ್ಯಗಳು ಸಮಾಜದ ಜವಾಬ್ದಾರಿ, ಮಾನವೀಯತೆ ಕುರಿತ ಚರ್ಚೆಗೆ ಕಾರಣವಾಗುತ್ತಿವೆ.