Asianet Suvarna News Asianet Suvarna News

ಮಕ್ಕಳಲ್ಲಿ ಕೀಳರಿಮೆ ಮೂಡಲು ಹೆತ್ತವರೇ ಕಾರಣ: ಈ ತಪ್ಪು ಮಾಡದಿರಿ

ಕೆಲವು ಹೆತ್ತವರು ಮಕ್ಕಳನ್ನು ತುಂಬಾ ಮುದ್ದಿನಿಂದ, ಇನ್ನು ಕೆಲವರು ತುಂಬಾ ಕಠೋರವಾಗಿ ಬೆಳೆಸುತ್ತಾರೆ. ಇವೆರಡೂ ತಪ್ಪು. ಮಕ್ಕಳು ಉತ್ತಮ ಆತ್ಮವಿಶ್ವಾಸ ಹೊಂದಿದ, ಕೀಳರಿಮೆ ಇಲ್ಲದ ವ್ಯಕ್ತಿಗಳಾಗಿ ಬೆಳೆಯಲು ಪೋಷಕರು ಅನುಸರಿಸಬೇಕಾದ ರೂಢಿಗಳೇನು?

Dont make these mistakes while parenting this will make children inferior
Author
Bengaluru, First Published Sep 9, 2021, 1:57 PM IST

ಮಕ್ಕಳ ಸಂಪೂರ್ಣ ವ್ಯಕ್ತಿತ್ವ ಬೆಳೆಯುವುದು ಅವರ ಹೆತ್ತವರು ಅವರನ್ನು ಬೆಳೆಸುವ ರೀತಿಯಲ್ಲಿ. ಮಕ್ಕಳು ಧೀರರಾದರೂ, ಹೇಡಿಗಳಾದರೂ, ಆತ್ಮವಿಶ್ವಾಸ ಇರುವವರಾದರೂ, ಕೀಳರಿಮೆ ಹೊಂದಿದವರಾದರೂ ಅದಕ್ಕೆಲ್ಲ ಹೆತ್ತವರೇ ಕಾರಣರಾಗಿರುತ್ತಾರೆ. ಹಲವಾರು ಬಾಲ್ಯದಲ್ಲಿ ಮಕ್ಕಳಿಗೆ ಏನೇ ಕಲಿಸಿದರೂ ಆ ವಿಷಯಗಳು ಅವರ ಮನಸ್ಸಿನಲ್ಲಿ ಹಾಗೇ ಅಚ್ಚೊತ್ತಿಬಿಡುತ್ತವೆ. ಮುಂದೆ ಅವರು ಬೆಳೆದು ದೊಡ್ಡವರಾದಾಗ ಈ ಅನುಭವಗಳೇ ಅವರ ವ್ಯಕ್ತಿತ್ವ ಬೆಳವಣಿಗೆಗೆ ಕಾರಣವಾಗಿರುತ್ತವೆ.

ಕೆಲವು ಮಕ್ಕಳಲ್ಲಿ ಪ್ರತಿಭೆಯಿದ್ದರೂ ಅವರಲ್ಲಿ ಆತ್ಮವಿಶ್ವಾಸದ ಕೊರತೆಯಿರುವುದನ್ನು ನೀವು ನೋಡಿರಬಹುದು. ಇದಕ್ಕೆ ಹಲವು ಕಾರಣಗಳಿರಬಹುದು. ಆದ್ದರಿಂದ ಪ್ರತಿಯೊಬ್ಬ ಪೋಷಕರು ಮಕ್ಕಳನ್ನು ಬೆಳೆಸುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಇದು ಮಕ್ಕಳ ಆತ್ಮವಿಶ್ವಾಸದ ಮೇಲೆ ಪರಿಣಾಮ ಬೀರುವುದು.

ಗೇಲಿಯು ಆತ್ಮವಿಶ್ವಾಸ ಕಸಿಯುತ್ತದೆ

ಮಕ್ಕಳ ವಿಷಯಗಳು ದೊಡ್ಡದಾಗಲಿ ಅಥವಾ ಚಿಕ್ಕದಾಗಲಿ, ಇದು ವರ್ತನೆ ಹಾಗೂ ವಯಸ್ಸಿನ ಮೇಲೆ ಅವಲಂಬಿತವಾಗಿರುತ್ತದೆ. ಉದಾಹರಣೆಗೆ, ಹಾಸಿಗೆಯಿಂದ ಜಿಗಿಯುವುದು, ಫುಟ್ಬಾಲ್ ಅನ್ನು ಒದೆಯವಂತಹ ವಿಚಾರಗಳು ನಿಮಗೆ ಚಿಕ್ಕದಾಗಿರಬಹುದು, ಆದರೆ ಮಗುವಿಗೆ ಈ ವಿಷಯಗಳು ಬಹಳ ಮುಖ್ಯ. ಆದ್ದರಿಂದ ಇಂತಹ ವಿಚಾರಗಳ ಕುರಿತು ಮಗುವನ್ನು ಗೇಲಿ ಮಾಡಬಾರದು. ಇದು ಮುಂದೆ ಅವರು ಯಾವುದೇ ಕೆಲಸ ಮಾಡಲು ಹೋದಾಗ, ಆತ್ಮವಿಶ್ವಾಸ ಕುಂದಿಸಲು ಕಾರಣವಾಗುತ್ತದೆ.

ನಿಮ್ಮ ಮೊಬೈಲ್ ಫೋನೇ ನಿಮ್ಮ ಮಗುವಿನ ನೆನಪಿಗೆ ಶತ್ರು!

ಹೋಲಿಕೆಯು ಹಾಳು

ಪ್ರತಿ ಮಗುವೂ ವಿಭಿನ್ನ, ಅಭ್ಯಾಸ, ಹವ್ಯಾಸ, ಅಂದ-ಚಂದವನ್ನು ಹೊಂದಿರುತ್ತಾರೆ. ಆದರೆ ಮಕ್ಕಳು ಚಿಕ್ಕವರಿದ್ದಾಗ ಪೋಷಕರು, ಇತರರೊಂದಿಗೆ ಹೋಲಿಕೆ ಮಾಡಿ ಮಾತನಾಡುತ್ತಾರೆ. ನಿಮ್ಮ ಮಗುವಿನ ಆಸಕ್ತಿಯನ್ನು ಇನ್ನೊಬ್ಬರೊಂದಿಗೆ ಹೋಲಿಕೆ ಮಾಡುವುದು ಸರಿಯಲ್ಲ, ನಿಮ್ಮ ಮಗುವಿಗೆ ಓದಿನಲ್ಲಿ ಆಸಕ್ತಿ ಇಲ್ಲದಿದ್ದರೆ ಚಿಂತೆ ಬೇಡ. ಅವರಿಗೆ ಇಷ್ಟವಿರುವ ಆಸಕ್ತಿಗಳನ್ನು ಪೋಷಿಸಬೇಕೇ ಹೊರತು, ಓದೇ ಎಲ್ಲಾ ಎನ್ನುವ ಮಗುವಿನೊಂದಿಗೆ ಹೋಲಿಕೆ ಬೇಡ. ಏಕೆಂದರೆ ಇಬ್ಬರ ಆಸಕ್ತಿಯೂ ವಿಭಿನ್ನ. ಹೀಗೆ ಮಾಡುವುದರಿಂದ ನಿಮ್ಮ ಮಗುವಿನಲ್ಲಿ ಕೀಳರಿಮೆ ಭಾವನೆ ಮೂಡುತ್ತದೆ.

ಪ್ರತಿ ಕೆಲಸದಲ್ಲೂ ತಪ್ಪು ಕಂಡುಹಿಡಿಯಬೇಡಿ

ಮಕ್ಕಳು ತಪ್ಪು ಮಾಡುವುದು ಸಹಜ. ಆದರೆ ಅವರ ಪ್ರತಿಯೊಂದು ಕೆಲಸದಲ್ಲಿ ಕೇವಲ ತಪ್ಪನ್ನೇ ಹುಡುಕಿದರೆ, ಮಗುವಿನ ಮನಸ್ಥಿತಿ ಮೇಲೆ ನಕಾರಾತ್ಮಕ ಪ್ರಭಾವ ಬೀರುವುದು. ಬಾಲ್ಯದಲ್ಲಿ ಯಾವುದೇ ಕೆಲಸವನ್ನು ಪರಿಪೂರ್ಣವಾಗಿ ಮಾಡುವುದು ಅಸಾಧ್ಯ. ಆದರೆ ಮಾಡುವ ಕೆಲಸದಲ್ಲಿ ತಪ್ಪು ಕಂಡುಹಿಡಿಯುವ ಬದಲು, ಮಾಡಿದ ಕೆಲಸಕ್ಕೆ ಪ್ರೋತ್ಸಾಹ ನೀಡಿ. ಉದಾಹರಣೆಗೆ, ನಿಮ್ಮ ಮಗು ಚಿತ್ರಕಲೆ ಮಾಡುತ್ತಿದ್ದರೆ, ಆತನ ಚಿತ್ರಕಲೆಯಲ್ಲಿನ ದೋಷಗಳನ್ನು ಕಂಡುಕೊಳ್ಳುವ ಬದಲು ಆತನ ಚಿತ್ರಕಲೆಯಲ್ಲಿರುವ ಒಳ್ಳೆಯ ವಿಷಯಗಳನ್ನು ಪ್ರಶಂಸಿಸಿ.

ಅಪ್ಪಂದಿರಿಗೆ ಕಾಂಗರೂ ಆರೈಕೆ ಟಿಪ್ಸ್: ಮಗುವನ್ನು ಹೀಗ್ ಹಿಡಿಯಿರಿ!

ಇತರರ ಮುಂದೆ ದೂರು

ಅನೇಕ ಪೋಷಕರು ತಮ್ಮ ಮಕ್ಕಳ ಬಗ್ಗೆ ಇತರ ಜನರ ಬಳಿ ಅಥವಾ ನೆರೆಹೊರೆಯವರಿಗೆ ದೂರು ನೀಡುತ್ತಾರೆ. ಕೆಲವೊಮ್ಮೆ ಪೋಷಕರು ಇದನ್ನು ತಮಾಷೆಯಾಗಿ ಅಥವಾ ಗಾಸಿಪ್ ಮಾಡುವ ಉದ್ದೇಶದಿಂದ ಮಾಡುತ್ತಾರೆ. ಆದರೆ ಈ ವಿಷಯಗಳು ಮಗುವಿನ ಮನಸ್ಸಿನಲ್ಲಿ ಹಾಗೆಯೇ ಕುಳಿತುಬಿಡುತ್ತವೆ. ಇದರಿಂದ ಅವರ ಆತ್ಮವಿಶ್ವಾಸ ಕುಸಿಯಲು ಆರಂಭವಾಗುತ್ತದೆ.

ಚಿಕ್ಕಪುಟ್ಟ ವಿಷಯಕ್ಕೆ ಹೊಡೆಯುವುದು

ಬಾಲ್ಯದಲ್ಲಿ ಮಾಡಿದ ಯಾವುದೇ ತಪ್ಪು ತುಂಬಾ ದೊಡ್ಡದಿರುವುದಿಲ್ಲ, ಅದಕ್ಕಾಗಿ ಅವರನ್ನು ಹೊಡೆಯುವುದು ಸರಿಯಲ್ಲ. ಅದರ ಬದಲಾಗಿ, ತಪ್ಪನ್ನು ಅವರಿಗೆ ಅರ್ಥ ಮಾಡಿಸಬೇಕು, ತಿಳಿ ಹೇಳಬೇಕು. ಪ್ರತಿ ಸಣ್ಣ ವಿಷಯಕ್ಕೂ ಮಕ್ಕಳನ್ನು ಹೊಡೆಯುವ ಮೂಲಕ ತಪ್ಪು ಸರಿ ಆಗುವುದಿಲ್ಲ.

ಎದೆ ಹಾಲುಣಿಸುವವರು ಈ ಮಿಥ್‌ಗಳನ್ನು ನಂಬಬೇಡಿ

ಇದರಿಂದ ನಿಮ್ಮನ್ನು ತುಂಬಾ ಕೆಟ್ಟವರು ಎಂದು ಭಾವಿಸುತ್ತಾರೆ. ಅಷ್ಟೇ ಅಲ್ಲ, ನಿಮ್ಮ ಮೇಲಿನ ಪ್ರೀತಿ ಕಡಿಮೆಯಾಗುವುದು. ಅದೇ ಸಮಯದಲ್ಲಿ, ಅವರಲ್ಲಿ ಅಭದ್ರತೆಯ ಭಾವನೆ ಹೆಚ್ಚಾಗುತ್ತದೆ, ಅವರು ಭಯಭೀತರಾಗಲು ಪ್ರಾರಂಭಿಸುತ್ತಾರೆ.

Follow Us:
Download App:
  • android
  • ios